ಆಫೀಸ್‌ನಲ್ಲಿ ಎಲ್ಲವೂ ಸರಿಯಿದ್ದಾಗಲೇ ಕೆಲಸ ಬಿಡಬೇಕಂತೆ! ವೈರಲ್ ಆಗುತ್ತಿದೆ ಈ ಯುವಕನ ಬೆಸ್ಟ್ ಕೆರಿಯರ್ ಅಡ್ವೈಸ್
ಸಾಮಾನ್ಯವಾಗಿ ಉದ್ಯೋಗಿಗಳು ತಮ್ಮ ಕೆಲಸವನ್ನ ಯಾವಾಗ ಬದಲಾಯಿಸಲು ಮುಂದಾಗುತ್ತಾರೆ? ಬಾಸ್ ಜೊತೆ ಜಗಳವಾದಾಗ, ಕೆಲಸದಲ್ಲಿ ಒತ್ತಡ ಹೆಚ್ಚಾದಾಗ, ಸ್ಯಾಲರಿ ಕಮ್ಮಿಯಿದ್ದಾಗ ಅಥವಾ ಕಚೇರಿಯಲ್ಲಿ ಟಾಕ್ಸಿಕ್ ವಾತಾವರಣ ನಿರ್ಮಾಣವಾದಾಗ ಅಲ್ವಾ... ಆದರೆ, ಇನ್‌ಸ್ಟಾಗ್ರಾಮ್‌ನಲ್ಲಿ ಯುವಕನೊಬ್ಬ ಉದ್ಯೋಗ ಬದಲಾವಣೆ ಕುರಿತು ನೀಡಿರುವ ಸಲಹೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ ನೋಡಿ.
ಆಯುಷ್ ಶರ್ಮಾ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ. ಅದರಲ್ಲಿ "ಕೆಲಸ ಬದಲಾಯಿಸಲು ಯಾವುದು ಸರಿಯಾದ ಸಮಯ?" ಎಂಬುದನ್ನ ವಿವರಿಸಿದ್ದಾರೆ. ಅವರ ಪ್ರಕಾರ, ಆಫೀಸ್‌ನಲ್ಲಿ ಸಮಸ್ಯೆಗಳು ಅಥವಾ ಒತ್ತಡ ಹೆಚ್ಚಾಗುವವರೆಗೆ ಕಾಯುವ ಬದಲು, ನಿಮ್ಮ ವೃತ್ತಿಜೀವನದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿರುವಾಗಲೇ ಹೊಸ ಅವಕಾಶಗಳನ್ನ ಹುಡುಕುವುದು ಒಳ್ಳೆಯ ನಿರ್ಧಾರವಂತೆ.

ಕೆಲಸ ಬದಲಾಯಿಸಲು ಅತ್ಯುತ್ತಮ ಸಮಯ ಯಾವುದು?
ವಿಡಿಯೋದಲ್ಲಿ ಮಾತನಾಡಿರುವ ಆಯುಷ್ ಶರ್ಮಾ, "ನಿಮಗೆ ಕೆಲಸವನ್ನ ಬದಲಾಯಿಸುವ ಅನಿವಾರ್ಯತೆ ಇಲ್ಲದಿರುವಾಗಲೇ ಉದ್ಯೋಗವನ್ನ ಬದಲಾಯಿಸುವುದು ಬೆಸ್ಟ್. ಅಂದರೆ, ಆಫೀಸ್‌ನಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿರಬೇಕು, ನಿಮ್ಮ ಮ್ಯಾನೇಜರ್ ನಿಮ್ಮೊಂದಿಗೆ ಉತ್ತಮವಾಗಿ ವರ್ತಿಸುತ್ತಿರಬೇಕು, ನಿಮ್ಮ ಕಾರ್ಯಕ್ಷಮತೆ ಅತ್ಯುತ್ತಮವಾಗಿರಬೇಕು ಮತ್ತು ನಿಮ್ಮ ಮೇಲೆ ಯಾವುದೇ ರೀತಿಯ ಕೆಲಸದ ಒತ್ತಡ ಇರಬಾರದು. ಇದೇ ನೀವು ಹೊಸ ಕೆಲಸ ಹುಡುಕಲು ಆರಂಭಿಸಬೇಕಾದ ಸರಿಯಾದ ಸಮಯ," ಎಂದಿದ್ದಾರೆ.
ಏಕೆಂದರೆ, ಯಾವುದೇ ಒತ್ತಡವಿಲ್ಲದೆ, ಪ್ರಸ್ತುತ ಕೆಲಸದಲ್ಲಿ ಭದ್ರತೆ ಇದ್ದಾಗ ಬೇರೆಯೊಂದು ಹೊಸ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದರಿಂದ ಅಭ್ಯರ್ಥಿಯ ಆತ್ಮವಿಶ್ವಾಸ ದುಪ್ಪಟ್ಟಾಗಿರುತ್ತದೆ. "ಈ ಹಂತದಲ್ಲಿ ನೀವು ಅತ್ಯಂತ ವಿಶ್ವಾಸದಿಂದ ಸಂದರ್ಶನಗಳಿಗೆ ಹಾಜರಾಗಬಹುದು. ಯಾವುದೇ ಅಂಜಿಕೆ ಇಲ್ಲದೆ ಮುಕ್ತವಾಗಿ ನಿಮ್ಮ ಸಂಬಳದ ಚೌಕಾಸಿ ಮಾಡಬಹುದು.
ಎಲ್ಲಕ್ಕಿಂತ ಮುಖ್ಯವಾಗಿ, ಅನಿವಾರ್ಯತೆ ಇಲ್ಲದ ಕಾರಣ ನಿಮಗೆ ಬರುವ ಮೊದಲ ಆಫರ್ ಅನ್ನೇ ಒಪ್ಪಿಕೊಳ್ಳಬೇಕೆಂಬ ಒತ್ತಡವಿರುವುದಿಲ್ಲ. ಅತ್ಯುತ್ತಮ ಅವಕಾಶಗಳಿಗಾಗಿ ನೀವು ಕಾಯಬಹುದು," ಎಂದು ಆಯುಷ್ ಸಲಹೆ ನೀಡಿದ್ದಾರೆ.
ಟಾಕ್ಸಿಕ್ ವರ್ಕ್‌ಪ್ಲೇಸ್ ನಿರ್ಮಾಣವಾಗುವವರೆಗೆ ಏಕೆ ಕಾಯಬಾರದು?
ಹೆಚ್ಚಿನವರು ತಾವು ಕೆಲಸ ಮಾಡುವ ವಾತಾವರಣ ಸಹಿಸಲು ಅಸಾಧ್ಯ ಎಂದಾಗ ಮಾತ್ರ ಹೊಸ ಕೆಲಸ ಹುಡುಕಲು ಶುರು ಮಾಡುತ್ತಾರೆ. ಆದರೆ, ಇದು ಅತ್ಯಂತ ಕೆಟ್ಟ ಸಮಯ ಎನ್ನುತ್ತಾರೆ ಆಯುಷ್.
"ಪರಿಸ್ಥಿತಿಗಳು ಅಸಹನೀಯವಾಗುವವರೆಗೆ, ಉದ್ಯೋಗದಲ್ಲಿ ಅಭದ್ರತೆ ಕಾಡುವವರೆಗೆ ಅಥವಾ ಕಚೇರಿ ಟಾಕ್ಸಿಕ್ ಆಗುವವರೆಗೆ ಕಾಯುವುದು ತಪ್ಪು. ಇಂತಹ ಪರಿಸ್ಥಿತಿಯಲ್ಲಿ ಹೊಸ ಕೆಲಸ ಹುಡುಕುವಾಗ ನಿಮ್ಮ ಆತ್ಮವಿಶ್ವಾಸ ಸಂಪೂರ್ಣವಾಗಿ ಕುಸಿದಿರುತ್ತದೆ. ತಕ್ಷಣವೇ ಈಗಿರುವ ಕೆಲಸದಿಂದ ಹೊರಬಂದರೆ ಸಾಕು ಎಂಬ ಹತಾಶೆ ನಿಮ್ಮಲ್ಲಿರುತ್ತದೆ. ಈ ಹತಾಶೆಯಿಂದಾಗಿ ನೀವು ಸಿಕ್ಕಿದ ಮೊದಲ ಆಫರ್ ಅನ್ನು ಒಪ್ಪಿಕೊಂಡು, ಮತ್ತೊಂದು ಟಾಕ್ಸಿಕ್ ವಾತಾವರಣಕ್ಕೆ ಸಿಲುಕುವ ಸಾಧ್ಯತೆಗಳಿರುತ್ತವೆ," ಎಂದು ಎಚ್ಚರಿಸಿದ್ದಾರೆ.
ವೃತ್ತಿಜೀವನದಲ್ಲಿ ಸರಿಯಾದ ನಿರ್ಧಾರ ಮುಖ್ಯ
ಪರಿಸ್ಥಿತಿಗಳು ಕೈಮೀರಿ ಹೋದ ನಂತರ ಅನಿವಾರ್ಯವಾಗಿ ಕೆಲಸ ಬದಲಾಯಿಸುವ ಮುನ್ನವೇ ಮುಂದಿನ ಹೆಜ್ಜೆಯ ಬಗ್ಗೆ ಯೋಚಿಸುವುದು ಜಾಣರ ಲಕ್ಷಣ. ನಿಮ್ಮ ಪ್ರಸ್ತುತ ಉದ್ಯೋಗ ಸುಗಮವಾಗಿ ಸಾಗುತ್ತಿರುವಾಗಲೇ ಮುಂದಿನ ವೃತ್ತಿಜೀವನದ ಬಗ್ಗೆ ಯೋಜನೆ ರೂಪಿಸಿ. ಆಯುಷ್ ಶರ್ಮಾ ಅವರ ಈ ಪ್ರಾಕ್ಟಿಕಲ್ ಸಲಹೆಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋಗೆ ಕಮೆಂಟ್ ಮಾಡಿರುವ ಹಲವರು, "ಇದು ನಿಜಕ್ಕೂ ಅರ್ಥಪೂರ್ಣವಾಗಿದೆ," "ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಅತ್ಯುತ್ತಮ ಸಲಹೆ," "ರಿಯಲ್ ಲೈಫ್‌ನಲ್ಲಿ ಟೈಮಿಂಗ್ ಬಹಳ ಮುಖ್ಯ" ಎಂದು ಆಯುಷ್ ಅವರ ಈ ವಿಡಿಯೋಗೆ ಬೆಂಬಲ ಸೂಚಿಸಿದ್ದಾರೆ.


Click it and Unblock the Notifications
