Bill Pending: ಲಕ್ಷಾಂತರ ರೂ. ವಿದ್ಯುತ್ ಬಿಲ್ ಬಾಕಿ: ಕೆಸಿ ಜನರಲ್ ಆಸ್ಪತ್ರೆಗೆ ಬೆಸ್ಕಾಂ ನೋಟಿಸ್
ಬೆಂಗಳೂರಿನ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯೊಂದು ಲಕ್ಷಾಂತರ ರೂಪಾಯಿಗಳ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಳ್ಳುವ ಮೂಲಕ ಬೆಸ್ಕಾಂನಿಂದ ನೋಟಿಸ್ ಸ್ವೀಕರಿಸಿದೆ. ಆಸ್ಪತ್ರೆ ಉಳಿಸಿಕೊಂಡ ಬಿಲ್ ಮೊತ್ತವೆಷ್ಟು, ಯಾವ ಆಸ್ಪತ್ರೆ ತಿಳಿಯಿರಿ.
ಬೆಂಗಳೂರು, ಫೆಬ್ರುವರಿ 02: ಬೆಂಗಳೂರಿನ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯೊಂದು ಲಕ್ಷಾಂತರ ರೂಪಾಯಿಗಳ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಳ್ಳುವ ಮೂಲಕ ಬೆಸ್ಕಾಂನಿಂದ ನೋಟಿಸ್ ಸ್ವೀಕರಿಸಿದೆ.
ಪ್ರತಿನಿತ್ಯ ಸಾವಿರಾರು ಜನರಿಗೆ ವೈದ್ಯಕೀಯ ಸೇವೆ ನೀಡುರತ್ತಿರುವ, ಬಡ ಜನರ ಪಾಲಿಗೆ ಕಡಿಮೆ ಖರ್ಚಿನಲ್ಲಿ ಆಸರೆಯಾಗಿರುವ ಮಲ್ಲೇಶ್ವರಂ ಕೆ.ಸಿ.ಜನರಲ್ ಆಸ್ಪತ್ರೆಯ ಸಮಸ್ಯೆಯೊಂದಕ್ಕೆ ತುತ್ತಾಗಿದೆ. ಈ ಕಾರಣಕ್ಕೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ಈ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಿದೆ.
ಕೆ.ಸಿ. ಜನರಲ್ ಆಸ್ಪತ್ರೆಯು ಒಟ್ಟು ಸುಮಾರು 48ಲಕ್ಷ ರೂಪಾಯಿ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ನೋಟಿಸ್ ನೀಡಿರುವ ಬೆಸ್ಕಾಂ ನಿಗದಿತ ಅವಧಿಯೊಳಗೆ ಬಾಕಿ ಬಿಲ್ ಪೂರ್ತಿ ಪಾವತಿಸದಿದ್ದರೆ ಆಸ್ಪತ್ರೆಗೆ ನೀಡಿರುವ ವಿದ್ಯುತ್ ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.

ಸರ್ಕಾರಿ ಸ್ವಾಮ್ಯದ ಈ ಕೆ.ಸಿ.ಜನರಲ್ ಆಸ್ಪತ್ರೆಗೆ ಒಳರೋಗಿ ಹಾಗೂ ಹೊರ ರೋಗಿಗಳ ಸಂಖ್ಯೆ ಸದಾ ಹೆಚ್ಚಿರುತ್ತದೆ. ಕೆ.ಸಿ ಜನರಲ್ ಆಸ್ಪತ್ರೆಯೂ ಮಾಸಿಕ ಆಧಾರದ ಮೇಲೆ ಆಸ್ಪತ್ರೆ ಬಿಲ್‌ಗಳನ್ನು ತೆರವುಗೊಳಿಸಿಲ್ಲ. ಲಕ್ಷಗಟ್ಟಲೆ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ನೋಟಿಸ್ ಜಾರಿ ಮಾಡಬೇಕಾಗಿದೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದರು.
ನೋಟಿಸ್ ನೀಡಿರುವುದು ಇದೇ ಮೊದಲ್ಲ. ಎರಡು ತಿಂಗಳ ಹಿಂದೆಯೇ ಆಸ್ಪತ್ರೆಗೆ ಮೊದಲ ನೋಟೀಸ್ ಜಾರಿಯಾಗಿತ್ತು. ಅದಾದ ಬಳಿ ಕಳೆದ ಜನವರಿ 17ರಂದು ಮತ್ತೆ ನೋಟಿಸ್ ನೀಡಲಾಗಿದೆ. ಪುನಃ ಜನವರಿ 30ರಂದು ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಎನ್ನಲಾಗಿದೆ.
ಆಸ್ಪತ್ರೆಯು ಕೇವಲ ಬೆಸ್ಕಾಂ ಬಿಲ್ ಮಾತ್ರವಲ್ಲದೇ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB)ಬಿಲ್ ಸಹ ಪಾವತಿಯಾಗಿಲ್ಲ. ಖಾಸಗಿ ಆಸ್ಪತ್ರೆಗಳು ಸಕಾಲಕ್ಕೆ ಬಿಲ್ ಪಾವತಿಸುತ್ತಿವೆ. ಆದರೆ ಸರ್ಕಾರಿ ಸಂಸ್ಥೆಗಳು ಬಿಲ್ ಪಾವತಿ ಮಾಡುತ್ತಿಲ್ಲ. ನಿರ್ಲಕ್ಷ್ಯವಹಿಸಿವೆ.

ಆಸ್ಪತ್ರೆಯ ಮಾಸಿಕ ಬಿಲ್ ತಿಂಗಳಿಗೆ ಸರಾಸರಿ ಸುಮಾರು 8 ಲಕ್ಷ ರೂ.ವರೆಗೆ ಬರುತ್ತದೆ. ಆರೋಗ್ಯ ಇಲಾಖೆಯಿಂದ ಅಗತ್ಯ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ಹಣ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ನೀರು ಮತ್ತು ವಿದ್ಯುತ್ ಬಿಲ್‌ಗಳ ಮೊತ್ತವನ್ನು ಮಾಸಿಕ ನಿರ್ವಹಣೆ ಮೊತ್ತದ ಅಡಿಯಲ್ಲಿ ನಿಗದಿತ ದಿನಾಂಕಗಳಲ್ಲಿ ಪೂರ್ವನಿಯೋಜಿತವಾಗಿ ಬಿಡುಗಡೆ ಮಾಡಬೇಕು. ಪ್ರತಿ ಬಿಲ್ ನಾವು ಇಲಾಖೆಯ ಅನುಮೋದನೆಯನ್ನು ಪಡೆಯುವುದು ಅನಿವಾರ್ಯವಾಗಿದೆ. ಇಲಾಖೆಯಿಂದ ಸಣ್ಣ ಮೊತ್ತದ ಹಣ ಬಿಡುಗಡೆ ಮಾಡುತ್ತಿದ್ದರಿಂದ ಬಿಲ್ ಬಾಕಿ ಉಳಿದಿವೆ ಎನ್ನಲಾಗಿದೆ.












Click it and Unblock the Notifications