ವಿದ್ಯುತ್ ದರ ಪರಿಷ್ಕರಣೆಗೆ ಮುಂದಾದ ಬೆಸ್ಕಾಂ
ಬೆಂಗಳೂರು, ಡಿಸೆಂಬರ್ 11: ಬೆಸ್ಕಾಂ ವಿದ್ಯುತ್ ದರ ಪರಿಷ್ಕರಣೆಗೆ ಮುಂದಾಗಿದ್ದು, ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ ಸಿ) ಗೆ ಪ್ರಸ್ತಾವನೆ ಸಲ್ಲಿಸಿದೆ. ಪ್ರತಿ ಯುನಿಟ್ ಗೆ 1.23 ರಿಂದ 1.50 ರೂಪಾಯಿವರೆಗೆ ಏರಿಕೆ ಮಾಡುವುದಕ್ಕೆ ಬೆಸ್ಕಾಮ್ ಪ್ರಸ್ತಾವನೆ ಹೊಂದಿದ್ದು ಕಳೆದ ವರ್ಷದ ಪ್ರಸ್ತಾವನೆಯೂ ಇದೆ ಮಾದರಿಯಲ್ಲಿತ್ತು ಎಂದು ಹೇಳಿದೆ.
"ಪ್ರಸ್ತಾವನೆಯನ್ನು ಸಾಮಾನ್ಯವಾಗಿ ಕೆಇಆರ್ ಸಿ ಅನುಮೋದಿಸುವುದಿಲ್ಲ. ಆದರೆ ವಾರ್ಷಿಕ ಪರಿಷ್ಕರಣೆಯನ್ನು ಘೋಷಣೆ ಮಾಡಲಿದೆ" ಎಂದು ಬೆಸ್ಕಾಮ್ ನ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಧಿಕಾರಿಗಳ ಪ್ರಕಾರ ಮೂರು ದಿನಗಳ ಹಿಂದೆ ಕೆಇಆರ್‌ಸಿಗೆ ಪ್ರಸ್ತಾವನೆ ಕಳಿಸಲಾಗಿದ್ದು, ಇದನ್ನು ಅನುಮೋದಿಸಬೇಕೆ ಅಥವಾ ತಿರಸ್ಕರಿಸಬೇಕೆ ಎಂಬ ಬಗ್ಗೆ ನಂತರದ ಹಂತಗಳಲ್ಲಿ ನಿರ್ಧಾರ ಮಾಡಲಾಗುತ್ತದೆ ಎಂಬ ಪ್ರತಿಕ್ರಿಯೆ ಕೆಇಆರ್ ಸಿ ಅಧಿಕಾರಿಗಳಿಂದ ಬಂದಿರುವುದಾಗಿ ಹೇಳಿದ್ದಾರೆ.

ವಿದ್ಯುತ್ ದರ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಸುವುದು ವಾರ್ಷಿಕ ಚಟುವಟಿಕೆಯಾಗಿದೆ, ಪ್ರಸ್ತಾವನೆಯ ಬಳಿಕ ಕೆಇಆರ್ ಸಿ ಪ್ರಸ್ತಾವನೆಯನ್ನು ಪರಿಶೀಲಿಸಿ ಅಂತಿಮವಾಗಿ ಬೆಲೆ ಏರಿಕೆಯ ಬಗ್ಗೆ ಘೋಷಣೆ ಮಾಡಲಿದೆ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿ ಹೋಗಿದ್ದು, ಈ ಮಧ್ಯೆ ದಿಢೀರ್ ವಿದ್ಯುತ್ ದರ ಕೂಡ ಹೆಚ್ಚಳ ಮಾಡಿದರೆ ಪರಿಸ್ಥಿತಿ ಹೇಗೆ ಎಂಬ ಚಿಂತೆ ಕಾಡುತ್ತಿದೆ. ಏಕೆಂದರೆ ವಿದ್ಯುತ್ ದರ ಏರಿಕೆಯಾದರೆ ಅದು ಪರೋಕ್ಷವಾಗಿ ಅಗತ್ಯ ವಸ್ತುಗಳ ದರ ಮತ್ತಷ್ಟು ಹೆಚ್ಚಾಗಲು ಕಾರಣವಾಗುತ್ತದೆ. ಹೀಗಾಗಿ ವ್ಯಾಪಾರಿಗಳು ಹಾಗೂ ಉದ್ಯಮಿಗಳಿಗೂ ದೊಡ್ಡ ತಲೆನೋವು ಶುರುವಾಗಿದೆ.
ಬೆಸ್ಕಾಂ ಮಾತ್ರವಲ್ಲದೆ ಮೆಸ್ಕಾಂ, ಚೆಸ್ಕಾಂ ಅಧಿಕಾರಿಗಳು ಕೂಡ ನಷ್ಟದ ನೆಪ ಹೇಳಿ ದರ ಹೆಚ್ಚಳ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ. ಕಳೆದ ಬಾರಿ ಪ್ರತಿ ಯುನಿಟ್ಗೆ 1 ರೂ. 39 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಆದರೆ 30 ಪೈಸೆ ಮಾತ್ರ ದರ ಪರಿಷ್ಕರಣೆ ಮಾಡಲಾಗಿತ್ತು. ಸದ್ಯ ಈಗ KERC ದರ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಾ? ಅನ್ನೋ ಪ್ರಶ್ನೆ ಮೂಡಿದೆ. ಒಂದು ವೇಳೆ ಬೆಸ್ಕಾಂ ಪ್ರಸ್ತಾವನೆಗೆ KERC ಒಪ್ಪಿಗೆ ಕೊಟ್ಟರೆ ಜನರಿಗೆ ದರ ಹೆಚ್ಚಳದ ಬಿಸಿ ತಟ್ಟಲಿದೆ.
| ವರ್ಷ | ದರ ಏರಿಕೆ (ಯುನಿಟ್ಗೆ) |
| 2009 | 34 ಪೈಸೆ |
| 2010 | 30 ಪೈಸೆ |
| 2011 | 28 ಪೈಸೆ |
| 2012 | 13 ಪೈಸೆ |
| 2013 | 13 ಪೈಸೆ |
| 2017 | 48 ಪೈಸೆ |
| 2019 | 35 ಪೈಸೆ |
| 2020 | 30 ಪೈಸೆ |












Click it and Unblock the Notifications