BESCOM: ಸ್ವಚ್ಛ ಬೆಂಗಳೂರು ಅಭಿಯಾನಕ್ಕೆ ಕೈಜೋಡಿಸಿದ ಬೆಸ್ಕಾಂ
ಬೆಂಗಳೂರು, ಆಗಸ್ಟ್ 8: ಜಿಬಿಎ ಹಮ್ಮಿಕೊಂಡಿರುವ ಒಂದು ತಿಂಗಳ ಸ್ವಚ್ಛ ಬೆಂಗಳೂರು ಬೃಹತ್ ಅಭಿಯಾನಕ್ಕೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಕೈಜೋಡಿಸಿದೆ. ನಗರದ ಪಾದಚಾರಿ ರಸ್ತೆಗಳ ಅಕ್ಕಪಕ್ಕದಲ್ಲಿ ಸಾರ್ವಜನಿಕರು ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ವಿದ್ಯುತ್ ಮೂಲಸೌಕರ್ಯಗಳನ್ನು ತೆರವುಗೊಳಿಸುವ ಹಾಗೂ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಬೆಸ್ಕಾಂ ಚುರುಕುಗೊಳಿಸಿದೆ.
ಆಗಸ್ಟ್ 1ರಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ ಚಾಲನೆ ನೀಡಿದ್ದ ಈ ಸ್ವಚ್ಛತಾ ಅಭಿಯಾನಕ್ಕೆ ಇದೀಗ ಮತ್ತಷ್ಟು ವೇಗ ಸಿಕ್ಕಿದೆ. ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್. ಶಿವಶಂಕರ ಅವರ ನೇತೃತ್ವದಲ್ಲಿ ಶನಿವಾರ ಬಿಎಂಎಝಡ್ ವ್ಯಾಪ್ತಿಯಲ್ಲಿ ಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಟ್ರಾನ್ಸ್‌ಫಾರ್ಮರ್ ಸುತ್ತಮುತ್ತಲಿನ ಕಸ ತೆರವುಗೊಳಿಸುವುದು, ಜಿಒಎಸ್ ರಾಡ್‌ಗಳನ್ನು ನೆಲಮಟ್ಟದಿಂದ ಕನಿಷ್ಠ 7 ಅಡಿ ಎತ್ತರಕ್ಕೆ ಏರಿಸುವುದು ಹಾಗೂ ಅಡ್ಡಿಯಾಗಿರುವ ಕಂಬಗಳನ್ನು ತೆರವುಗೊಳಿಸುವ ಕಾರ್ಯವನ್ನು ಎಂಡಿ ಸಮ್ಮುಖದಲ್ಲೇ ಮಾಡಲಾಯಿತು.

ಎರಡು ದಿನ ವಿಶೇಷ ಅಭಿಯಾನ
ನಗರದ ಎಲ್ಲಾ ಐದು ಬೆಸ್ಕಾಂ ವೃತ್ತಗಳ ವ್ಯಾಪ್ತಿಯ ಉಪ ವಿಭಾಗಗಳಲ್ಲಿ ಆಗಸ್ಟ್ 8 ಮತ್ತು 9ರಂದು ವಿಶೇಷ ಅಭಿಯಾನ ನಡೆಯಲಿದೆ. ಈ ಕಾರ್ಯಾಚರಣೆಯ ಮೇಲುಸ್ತುವಾರಿಗಾಗಿ ಬೆಸ್ಕಾಂ ನಿಗಮ ಕಚೇರಿಯ ಹಿರಿಯ ಅಧಿಕಾರಿಗಳನ್ನು ವಿಭಾಗೀಯ ಮಟ್ಟದಲ್ಲಿ ನೇಮಕ ಮಾಡಲಾಗಿದೆ.
ಈ ಅಭಿಯಾನದ ಉದ್ದೇಶಕ್ಕಾಗಿ ಬೆಸ್ಕಾಂ ನಗರದ ಸುಮಾರು 908 ರಸ್ತೆಗಳ ಸಮೀಕ್ಷೆಯನ್ನು ಪೂರ್ಣಗೊಳಿಸಿದೆ. ಆಗಸ್ಟ್ 7ರ ವರೆಗೆ 223 ವಿದ್ಯುತ್ ಕಂಬಗಳು, 8 ಟ್ರಾನ್ಸ್‌ಫಾರ್ಮರ್‌ಗಳು, 7 ಆರ್‌ಎಂಯುಗಳನ್ನು ಸ್ಥಳಾಂತರ ಮಾಡಲಾಗಿದೆ. 694 ಡಿಟಿಸಿ ಯಾರ್ಡ್‌ಗಳು, 107 ಆರ್‌ಎಂಯು, 110 ಸ್ಪನ್ ಪೊಲ್ ಸ್ವಚ್ಛತಾ ಕಾರ್ಯವನ್ನು ಒಂದು ವಾರದಲ್ಲಿ ಮಾಡಲಾಗಿದೆ.
ಬೆಸ್ಕಾಂ ಎಂಡಿ ಡಾ.ಎನ್.ಶಿವಶಂಕರ ಮಹತ್ವದ ಮಾಹಿತಿ
'ಜಿಬಿಎಯ ಈ ಅಭಿಯಾನದಲ್ಲಿ ಬೆಸ್ಕಾಂ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದೆ. ಸಚಿವ ಕೆ.ಜೆ.ಜಾರ್ಜ್ ಅವರ ಸೂಚನೆಯಂತೆ ನಿಷ್ಕ್ರಿಯಗೊಂಡ ಉಪಕರಣಗಳ ತೆರವು, ಜಿಒಎಸ್ ರಾಡ್ ಎತ್ತರಿಸುವುದು ಹಾಗೂ ಡಬಲ್ ಪೋಲ್ ಸ್ಟ್ರಕ್ಚರ್ ಟಿಸಿಗಳನ್ನು ಆಧುನಿಕ ಹಾಗೂ ಸುಬಂಧಿತ ವಿಶೇಷ ವಿನ್ಯಾಸದ ಟಿಸಿಗಳಾಗಿ ಪರಿವರ್ತಿಸುವ ಕೆಲಸ ನಡೆಯುತ್ತಿದೆ. ಟ್ರಾನ್ಸ್‌ಫಾರ್ಮರ್ ಸುತ್ತಮುತ್ತಲ ಜಾಗವನ್ನು ಸ್ವಚ್ಛವಾಗಿಡುವುದು ನಮ್ಮ ಆದ್ಯತೆಯಾಗಿದ್ದು, ಈ ತಿಂಗಳು ಪೂರ್ತಿ ಅಭಿಯಾನ ನಿರಂತರವಾಗಿ ನಡೆಯಲಿದೆ,' ಎಂದು ಅವರು ಸ್ಪಷ್ಟಪಡಿಸಿದ್ದಾರೆ.


Click it and Unblock the Notifications
