ನಾಳೆಯಿಂದ ಹೊಸ ರೂಲ್ಸ್; ಈ ನಿಯಮ ಮೀರಿದ್ರೆ ಕರೆಂಟ್ ಕಟ್
ವಿದ್ಯುತ್ ಬಿಲ್ ವಿಚಾರದಲ್ಲಿ ಬೆಸ್ಕಾಂ ತನ್ನ ಗ್ರಾಹಕರಿಗೆ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಸೆಪ್ಟೆಂಬರ್ 1ರಿಂದ ಹೊಸ ನಿಯಮಗಳು ಜಾರಿಯಾಗಲಿದ್ದು, ಅದರಂತೆ ನಿಮ್ಮ ಮನೆಗೆ ಬರುವ ವಿದ್ಯುತ್ ಶುಲ್ಕವನ್ನು 30 ದಿನಗಳ ಒಳಗೆ ಪಾವತಿಸಲೇಬೇಕು ಎಂದು ಖಡಕ್ ಆಗಿ ಸೂಚಿಸಿದೆ. ಒಂದು ವೇಳೆ ಗ್ರಾಹಕರು ಬಿಲ್‌ಗಳನ್ನು ಸ್ವೀಕರಿಸಿದ 30 ದಿನಗಳಲ್ಲಿ ವಿದ್ಯುತ್ ಶುಲ್ಕ ಕಟ್ಟದಿದ್ದರೆ, ಅಥವಾ ಹೆಚ್ಚುವರಿ ಭದ್ರತಾ ಠೇವಣಿ ಪಾವತಿಸದಿದ್ದರೆ ನಿಮ್ಮ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಶಿಫಾರಸ್ಸಿನಂತೆ ಬೆಸ್ಕಾಂ ಈ ನಿರ್ಧಾರ ತೆಗೆದುಕೊಂಡಿದ್ದು, ಸೆಪ್ಟೆಂಬರ್ 1ರಿಂದಲೇ ಅಂದರೆ ನಾಳೆಯಿಂದಲೇ ಈ ನಿಯಮ ಜಾರಿಗೊಳಿಸಲಾಗುವುದು ಎಂದು ಹೇಳಿದೆ. ಮನೆ ಬಳಕೆ ಮತ್ತು ವಾಣಿಜ್ಯ ಬಳಕೆ ಗ್ರಾಹಕರು, ಅಪಾರ್ಟ್‌ಮೆಂಟ್‌ಗಳ ಗ್ರಾಹಕರು ತಮ್ಮ ಬಿಲ್‌ಗಳನ್ನು ನಿಗದಿತ ಅವಧಿಯೊಳಗೆ ಪಾವತಿಸಬೇಕು ಎಂದು ಸೂಚಿಸಿದೆ.

ಒಂದು ವೇಳೆ 30 ದಿನಗಳಲ್ಲಿ ಬಿಲ್ ಪಾವತಿಸಲು ಸಾಧ್ಯವಾಗದಿದ್ದರೆ, ನಿಮ್ಮ ಮನೆಗೆ ಮೀಟರ್ ರೀಡಿಂಗ್ ಬರುವ ದಿನದಂದೇ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಈ ಸಮಸ್ಯೆಯಿಂದ ಪಾರಾಗಲು ನಿಗದಿತ ಸಮಯದೊಳಗೆ ಬಿಲ್ ಪಾವತಿಸುವುದು ಒಳ್ಳೆಯದು ಎಂದು ಸಲಹೆ ನೀಡಿದೆ.
ಸದ್ಯ ಪ್ರತಿ ತಿಂಗಳ ಮೊದಲೆರಡು ವಾರಗಳಲ್ಲಿ ಮೀಟರ್ ರೀಡಿಂಗ್ ನಡೆಯುತ್ತಿತ್ತು. ಆ ನಂತರ ಮೀಟರ್ ರೀಡರ್ ಹಾಗೂ ಲೈನ್‌ಮ್ಯಾನ್‌ಗಳು ಬಾಕಿ ಬಿಲ್ ಇರುವ ಮನೆಗಳಿಗೆ ತೆರಳಿ ವಿದ್ಯುತ್ ಸಂಪರ್ಕ ಕಟ್ ಮಾಡುತ್ತಿದ್ದರು. ಆದರೆ ಹೊಸ ನಿಯಮವು ಈ ರೀತಿ ಇರುವುದಿಲ್ಲ.

ನಾಳೆಯಿಂದಲೇ ಮೀಟರ್ ರೀಡರ್‌ಗಳೊಂದಿಗೆ ಲೈನ್‌ಮ್ಯಾನ್‌ಗಳು ನಿಮ್ಮ ಮನೆಗಳಿಗೆ ಬರಲಿದ್ದಾರೆ. ಒಂದು ವೇಳೆ ನೀವೇನಾದರೂ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದರೆ, ಹೊಸ ಬಿಲ್ ನೀಡುವ ಸಮಯದಲ್ಲೇ ಕರೆಂಟ್ ಕಟ್ ಮಾಡಲಿದ್ದಾರೆ ಎಂದು ಬೆಸ್ಕಾಂ ತಿಳಿಸಿದೆ. ಈ ಹೊಸ ನಿಯಮವು ಗ್ರಾಹಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಬಡ್ಡಿ ರಹಿತವಾಗಿ ವಿದ್ಯುತ್ ಬಿಲ್ ಪಾವತಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದ್ದು, ನಿಗದಿ ಪಡಿಸಿದ ದಿನಾಂಕದ ನಂತರ ಬಡ್ಡಿ ಸಹಿತ ಹಣ ಪಾವತಿಗೆ ಹೆಚ್ಚುವರಿಯಾಗಿ 15 ದಿನಗಳ ಕಾಲಾವಕಾಶವೂ ಇದೆ.
ಇದನ್ನೂ ಮೀರಿ ನೀವು ಬಿಲ್ ಪಾವತಿಸದಿದ್ದರೆ, ಮುಂದಿನ ಸಲ ನಿಮ್ಮ ಮನೆಗೆ ಮೀಟರ್ ರೀಡಿಂಗ್ ಬರುವ ದಿನದಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಬಾಕಿ ಮೊತ್ತವು ಹೆಚ್ಚುವರಿ ಭದ್ರತಾ ಠೇವಣಿ ಸೇರಿದಂತೆ 100 ರೂಪಾಯಿಗಿಂತ ಹೆಚ್ಚು ಮೀರಿದರೆ ನಿಮ್ಮ ಮನೆಯ ವಿದ್ಯುತ್ ಸಂಪರ್ಕ ಕಟ್ ಮಾಡುವುದು ಗ್ಯಾರಂಟಿ ಎಂದು ಬೆಸ್ಕಾಂ ತಿಳಿಸಿದೆ.
ಈ ಹೊಸ ನಿಯಮಕ್ಕೆ ಗ್ರಾಹಕರು ಹೊಂದಿಕೊಂಡು ಸಕಾಲಕ್ಕೆ ಬಿಲ್ ಕಟ್ಟಲಿದ್ದಾರಾ? ಅಥವಾ ಈ ನಿಯಮಕ್ಕೆ ವಿರೋಧ ವ್ಯಕ್ತವಾಗಲಿದೆಯಾ ಎನ್ನುವುದು ನಾಳೆಯಿಂದಲೇ ತಿಳಿಯಲಿದೆ. ಮತ್ತೊಂದೆಡೆ ಸಂಪರ್ಕ ಕಡಿತಗೊಳ್ಳುವ ಭೀತಿಯಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಗ್ರಾಹಕರು ಬಿಲ್ ಪಾವತಿಸಲು ಈ ನಿಯಮ ಸಹಾಯಕವಾಗಲಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications