ಬೆಂಗಳೂರಿನ ಜಯನಗರಕ್ಕೆ 75ನೇ ವರ್ಷದ ಸಂಭ್ರಮ- ಹಳ್ಳಿಗಳ ಸಮೂಹವೊಂದು ಪ್ರತಿಷ್ಠಿತ ನಗರವಾಗಿ ರೂಪಗೊಂಡಿದ್ದು ಹೇಗೆ? ತಿಳಿಯಿರಿ
ಬೆಂಗಳೂರು, ಆಗಸ್ಟ್ 23: ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ಜಯನಗರಕ್ಕೀಗ 75ನೇ ವರ್ಷದ ಸಂಭ್ರಮ. ಆಗಸ್ಟ್ 20, 1948 ರಂದು ಭಾರತದ ಗವರ್ನರ್ ಜನರಲ್ ಸಿ ರಾಜಗೋಪಾಲಾಚಾರಿ ಅವರಿಂದ ಜಯನಗರಕ್ಕೆ ಅಡಿಪಾಯ ಹಾಕಲಾಯಿತು. ಇದು ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾಗಿ ರೂಪಗೊಂಡಿದೆ. ಈ ಕುರಿತಾಗಿ 'ಡೆಕ್ಕನ್ ಹೆರಾಲ್ಡ್' ಪ್ರಕಟಿಸಿರುವ ವರದಿ ಓದಿ.
ಜಯನಗರವು ಹಳ್ಳಿಗಳ ಸಮೂಹದಿಂದ ಕೂಡಿದ ನಗರವಾಗಿದೆ. ಇದನ್ನು ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ (ಸಿಐಟಿಬಿ) ಅಭಿವೃದ್ಧಿಪಡಿಸಿದೆ.

'ಈ ಪ್ರದೇಶವು ಹೆಚ್ಚಾಗಿ ಕೃಷಿ ಭೂಮಿಯಿಂದ ಆವೃತವಾಗಿತ್ತು. ಇವೆಲ್ಲವನ್ನೂ ಒಟ್ಟುಗೂಡಿಸಿ ಒಂದು ಯೋಜಿತ ಬಡಾವಣೆಯನ್ನಾಗಿ ನಿರ್ಮಿಸುವ ಉದ್ದೇಶದಿಂದ ಸಿಐಟಿಬಿ ಯೋಜನೆ ರೂಪಿಸಿತು' ಎಂದು ಲೇಖಕಿ ಮತ್ತು ವಾಸ್ತುಶಿಲ್ಪಿ ಯಶಸ್ವಿನಿ ಶರ್ಮಾ ಹೇಳಿದ್ದಾರೆ.
ಬಡಾವಣೆಯ ನೀಲನಕ್ಷೆಯು ಪಕ್ಕದ ಬಸವನಗುಡಿಯ ಪ್ರದೇಶದಿಂದ ಸ್ಫೂರ್ತಿ ಪಡೆದಿದೆ. ಬಸವನಗುಡಿಗಿಂತಳು ಉತ್ತಮ ರಸ್ತೆಗಳು, ಪಾರ್ಕ್‌ಗಳನ್ನು ಜಯನಗರ ಹೊಂದಿದೆ ಎಂಬುದು ನಿವಾಸಿಗಳ ಅಭಿಪ್ರಾಯವಾಗಿದೆ.
ಆರಂಭದಲ್ಲಿ ಜಯನಗರದಲ್ಲಿ 5,750 ಸೈಟ್‌ಗಳನ್ನು ನಿರ್ಮಿಸಲಾಯಿತು. ಇದು 1,262 ಎಕರೆಗಳನ್ನು ಒಳಗೊಂಡಿತ್ತು. ಇದು ನಗರದಲ್ಲಿನ ಯಾವುದೇ ಯೋಜಿತ ಬಡಾವಣೆಗಳಿಗಿಂತ ದೊಡ್ಡದಾಗಿದೆ. ಜಯನಗರವು ಅದರ ಪ್ರಾರಂಭದ ಸಮಯದಲ್ಲಿ ಏಷ್ಯಾದ ಅತಿದೊಡ್ಡ ಯೋಜಿತ ವಿನ್ಯಾಸವಾಗಿತ್ತು ಎಂದು ಹೇಳಲಾಗುತ್ತದೆ.

ಡಿಸ್ಕವರಿಂಗ್ ಬೆಂಗಳೂರು ಪುಸ್ತಕದ ಲೇಖಕಿ ಮೀರಾ ಅಯ್ಯರ್ ಅವರು ಜಯನಗರ ಇಂತಹ ಯಶಸ್ಸನ್ನು ಸಾಧಿಸಲು ಕಾರಣಗಳನ್ನು ವಿವರಿಸಿದ್ದಾರೆ.
'ಜನನಗರದ ಯೋಜನೆಯ ವಿಷಯದಲ್ಲಿ, ಎದ್ದು ಕಾಣುವ ಒಂದು ವಿಷಯವೆಂದರೆ ಉದ್ಯಾನವನಗಳು ಮತ್ತು ತೆರೆದ ಖಾಲಿ ಜಾಗಗಳು. ಇದನ್ನು ಬಸವನಗುಡಿಯಂತಹ ಲೇಔಟ್‌ಗಳನ್ನು ನಿದರ್ಶನವಾಗಿಟ್ಟುಕೊಂಡು ಜಯನಗರವನ್ನು ನಿರ್ಮಿಸಲಾಗಿದೆ. ಮಧ್ಯ ದೊಡ್ಡ ಉದ್ಯಾನವನ, ದೊಡ್ಡ ತೆರೆದ ಸ್ಥಳ ಮತ್ತು ಒಂದು ತುದಿಯಲ್ಲಿ ಸಣ್ಣ ಉದ್ಯಾನವನಗಳ ಸರಣಿಗಳನ್ನು ಜಯನಗರದಲ್ಲಿ ನಿರ್ಮಿಸಲಾಗಿದೆ' ಎಂದು ಹೇಳುತ್ತಾರೆ.
ವಿಶಾಲವಾದ ರಸ್ತೆಗಳು, ಹಸಿರು ಸ್ಥಳಗಳು ಮತ್ತು 'ಆರ್ಟ್ ಡೆಕೊ' ಕಟ್ಟಡಗಳು ಇಂದಿಗೂ ಜಯನಗರದಲ್ಲಿ ಕಾಣಸಿಗುತ್ತವೆ.

ಜಯನಗರದ ಬೆಳವಣಿಗೆ ಕುರಿತು ಕಾಸ್ಮೋಪಾಲಿಟನ್ ಕ್ಲಬ್ ಅಧ್ಯಕ್ಷ ಎಎನ್ ಕುಮಾರ್ ರಾಜು ಮಾತನಾಡಿದ್ದಾರೆ. ಅವರು ಜಯನಗರದ ತಾಯಪ್ಪನಹಳ್ಳಿಯಲ್ಲಿ ಹುಟ್ಟಿ ಬೆಳೆದಿದ್ದಾರೆ. ಇದನ್ನು ಪ್ರಸ್ತುತ ಜಯನಗರದ 4 ನೇ ಟಿ ಬ್ಲಾಕ್ ಎಂದು ಕರೆಯಲಾಗುತ್ತದೆ. ಈ ಪ್ರದೇಶವು ಮೊದಲು ಅನೇಕ ಕೃಷಿ ಕುಟುಂಬಗಳಿಗೆ ನೆಲೆಯಾಗಿತ್ತು ಎಂದು ಅವರು ಹೇಳುತ್ತಾರೆ.
'ತಾಯಪ್ಪನಹಳ್ಳಿ ಒಂದು ಸಣ್ಣ ಹಳ್ಳಿ. ಇಲ್ಲಿ ಸುಮಾರು 20ರಿಂದ 25 ಸಣ್ಣ ಮನೆಗಳಿದ್ದವು. ಅವುಗಳಿಗೆ ಹೆಂಚಿನ ಛಾವಣಿಗಳಿದ್ದವು. ಅಲ್ಲಿ ಎರಡು ದೊಡ್ಡ ಮನೆಗಳಿದ್ದವು. ಸುತ್ತಮುತ್ತಲಿನ ಪ್ರದೇಶವು ಕೇವಲ ಖಾಲಿ ಮೈದಾನಗಳು, ಕೃಷಿಭೂಮಿಗಳು ಮತ್ತು ಕೆರೆಗಳಿಂದ ಆವೃತವಾಗಿತ್ತು' ಎಂದು ಅವರು ತಿಳಿಸಿದ್ದಾರೆ.
'ನಮ್ಮಲ್ಲಿ ವಿದ್ಯುತ್ ಇತ್ತು, ಆದರೆ ಸರಿಯಾದ ನೀರಿನ ಸಂಪರ್ಕವಿರಲಿಲ್ಲ. ರಸ್ತೆಗಳೆಲ್ಲ ಮಣ್ಣಿನ ರಸ್ತೆಗಳಾಗಿದ್ದವು. ಜಯನಗರ ಅಭಿವೃದ್ಧಿಯಾದಂತೆ ಡಾಂಬರು ರಸ್ತೆ ಹಾಗೂ ಇತರೆ ಸೌಕರ್ಯಗಳು ದೊರಕಿದವು' ಎಂದು 66ರ ಹರೆಯದ ರಾಜು ಹೇಳಿದ್ದಾರೆ.

'ಜಯನಗರದಲ್ಲಿ ಕ್ರಿಕೆಟ್ ಆಡಲು ನಗರದ ಸುತ್ತಮುತ್ತಲಿನ ಜನರು ಬರುತ್ತಿದ್ದರು. ಇಲ್ಲಿ ಅನೇಕ ಖಾಲಿ ಮೈದಾನಗಳಿದ್ದವು. ಬಹುತೇಕ ಎಲ್ಲ ಮೈದಾನಗಳಲ್ಲೂ ನೀವು ಕ್ರಿಕೆಟ್ ಅಥವಾ ಇತರ ಕ್ರೀಡೆಗಳನ್ನು ಆಡುತ್ತಿರುವ ಯುವಕರನ್ನು ಕಾಣಬಹುದಿತ್ತು. ಇಂದು ಈ ಮೈದಾನಗಳು ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಂತಹ ಕ್ರೀಡಾಂಗಣಗಳಾಗಿ ಮಾರ್ಪಟ್ಟಿವೆ' ಎಂದು ರಾಜು ತಿಳಿಸಿದ್ದಾರೆ.
ಈಗೀನ ಜಯನಗರವು ಅದರ ಆರಂಭಿಕ ದಿನಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು 75 ವರ್ಷದ ಗಾಯತ್ರಿ ಚಂದ್ರಶೇಖರ್ ಹೇಳಿದ್ದಾರೆ. 3 ನೇ ಬ್ಲಾಕ್‌ನಲ್ಲಿರುವ ಅವರ ಮನೆಯು ಆರಂಭಿಕ ದಿನಗಳಲ್ಲಿ ಕಟ್ಟಲಾಗಿದೆ. ಈಗ ಉಳಿದಿರುವ ಕೆಲವೇ ಕೆಲವು ಮನೆಗಳಲ್ಲಿ ಇದೂ ಒಂದಾಗಿದೆ ಎಂದು ಅವರು 'ಡೆಕ್ಕನ್ ಹೆರಾಲ್ಡ್'ಗೆ ತಿಳಿಸಿದ್ದಾರೆ.
'ಇದು ಸಂಪೂರ್ಣವಾಗಿ ವಸತಿ ಪ್ರದೇಶವಾಗಿತ್ತು. ಇಲ್ಲಿ ಗ್ರ್ಯಾಂಟ್ ಸ್ಟೋರ್ ಎಂಬ ಒಂದೇ ಒಂದು ದಿನಸಿ ಅಂಗಡಿ ಇತ್ತು. ಸ್ವಲ್ಪ ವಾಹನ ಸಂಚಾರವಿತ್ತು. ರಾತ್ರಿ 7.30 ರ ಹೊತ್ತಿಗೆ ಇಲ್ಲಿ ಸಂಪೂರ್ಣ ಮೌನವಿರುತ್ತಿತ್ತು. ಇಂದಿನ ಟ್ರಾಫಿಕ್ ನೋಡಿದರೆ ಅಂತಹ ಪ್ರಶಾಂತತೆಯನ್ನು ನೀವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ' ಎಂದು ಅವರು ಹೇಳುತ್ತಾರೆ.

1960 ರಲ್ಲಿ ಜಯನಗರಕ್ಕೆ ಸ್ಥಳಾಂತರಗೊಂಡ ಇನ್ನೊಬ್ಬ ನಿವಾಸಿ ಹೊಂಗನೂರು ಅಹೋಬಲ ರಾವ್ ಮನೋಹರ್, ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಇಡೀ ಪ್ರದೇಶವನ್ನು ಬದಲಾಯಿಸಿತು ಎಂದು ಹೇಳುತ್ತಾರೆ.
'ನಾವು ಹಿಂದೆಂದೂ ಅಂತಹದನ್ನು ನೋಡಿರಲಿಲ್ಲ. ಇದು ತೆರೆದ ವಿನ್ಯಾಸ ಮತ್ತು ಬಹು ಮಳಿಗೆಗಳನ್ನು ಹೊಂದಿದೆ. 3 ನೇ ಬ್ಲಾಕ್‌ನಲ್ಲಿರುವ ಅಂಬಾ ಭವನದಂತಹ ನಮ್ಮ ನೆಚ್ಚಿನ ಹೋಟೆಲ್‌ಗಳಿಗೆ ನಾವು ವಿದಾಯ ಹೇಳಬೇಕಾಯಿತು' ಎಂದು ಅವರು ತಿಳಿಸಿದ್ದಾರೆ.












Click it and Unblock the Notifications