ನೋಡನೊಡುತ್ತಿದ್ದಂತೆ ನಡು ರಸ್ತೆಯಲ್ಲಿ ಧಗಧಗಿಸಿದ ಕಾರು: ಬೆಂಗಳೂರಿನಲ್ಲಿ ವಾಹನ ಸವಾರರ ಪರದಾಟ
ಬೆಂಗಳೂರು ಜನವರಿ 12: ಬೆಂಗಳೂರಿನಲ್ಲಿ ನೋಡನೋಡುತ್ತಿದ್ದಂತೆ ಕಾರೊಂದು ಹೊತ್ತಿ ಉರಿದಿದೆ. ಕಳೆದ ದಿನ ರಾತ್ರಿ ನಡು ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದಕ್ಕೆ ಬೆಂಕಿ ಹೊತ್ತುಕೊಂಡಿದ್ದು ಇದರಿಂದಾಗಿ ಎರಡು ಗಂಟೆಗಳ ಕಾಲ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.
ಆಗ್ನೇಯ ಬೆಂಗಳೂರಿನ ದೊಡ್ಡನೆಕುಂಡಿ (Doddanekundi) ಬಳಿಯ ಹೊರ ವರ್ತುಲ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದಕ್ಕೆ ಮಂಗಳವಾರ ರಾತ್ರಿ ಬೆಂಕಿ ಹೊತ್ತಿ ಉರಿದಿದೆ. ರಾತ್ರಿ 7.30 ರ ಸುಮಾರಿಗೆ ಬಿಳಿ ಮಾರುತಿ ಸುಜುಕಿ ಎರ್ಟಿಗಾ ಇದ್ದಕ್ಕಿದ್ದಂತೆ ಧಗಧಗಿಸಿದೆ. ಸಂಚಾರ ಪೊಲೀಸರ ಪ್ರಕಾರ, ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಶಾರ್ಟ್ ಸರ್ಕ್ಯೂಟ್ ನಿಂದ ಇದು ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಬೆಂಕಿಯ ಜ್ವಾಲೆಗೆ ರಸ್ತೆಯಲ್ಲಿ ಇದ್ದ ವಾಹನ ಸವಾರರು ರಸ್ತೆ ಬದಿ ಓಡಿ ಬಂದಿದ್ದಾರೆ. ಕಣ್ಣೆದುರೇ ಕಾರು ಸುಟ್ಟು ಕರಕಲಾಗಿದೆ.

ರಾತ್ರಿ 7.30ಕ್ಕೆ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಲಾಯಿತು. ಮಹದೇವಪುರ ಅಗ್ನಿಶಾಮಕ ಠಾಣೆಯಿಂದ ಅಗ್ನಿಶಾಮಕ ದಳದ ವಾಹನವನ್ನು ಕಳುಹಿಸಲಾಯಿತು. ಒಂದು ಗಂಟೆಯೊಳಗೆ ಬೆಂಕಿಯನ್ನು ನಂದಿಸಲಾಯಿತು. ಆದರೆ ಅಷ್ಟು ಹೊತ್ತಿಗಾಗಲೇ ಕಾರು ಸುಟ್ಟು ಭಸ್ಮವಾಗಿದೆ. ಅಲ್ಲದೆ ಸಾಲುಗಟ್ಟಿ ವಾಹನಗಳು ನಿಂತು ಸವಾರರು ಪರದಾಡುವಂತಾಗಿದೆ.
ಅಗ್ನಿಶಾಮಕ ಸುರಕ್ಷತಾ ಅಧಿಕಾರಿಗಳು ಬೆಂಕಿಯನ್ನು ನಂದಿಸಿ ಕಾರನ್ನು ತೆರವುಗೊಳಿಸುವಷ್ಟರಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಒಂದು ಗಂಟೆಗೂ ಹೆಚ್ಚು ಕಾಲ ವಾಹನಗಳು ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ರಾತ್ರಿ 8.30ರ ಹೊತ್ತಿಗೆ ವಾಹನ ಸಂಚಾರ ನಿಧಾನವಾಗಿ ಪುನರಾರಂಭವಾಯಿತು ಮತ್ತು ರಾತ್ರಿ 10 ಗಂಟೆಯ ಹೊತ್ತಿಗೆ ಎಲ್ಲಾ ವಾಹನಗಳು ಎಂದಿನಂತೆ ಪ್ರಯಾಣಿಸಲಾರಂಭಿಸಿದವು.












Click it and Unblock the Notifications