19 ವರ್ಷದ ಯುವತಿ ಜತೆಗೆ ಇಷ್ಟವಿರದ ಮದುವೆ ಮಾಡಿಸಿದರೆಂದು ಯುವಕ ದೂರು
ಬೆಂಗಳೂರು, ಅಕ್ಟೋಬರ್ 2: ಇಬ್ಬರು ಪುರುಷರು ಹಾಗೂ ಒಬ್ಬ ಮಹಿಳೆ ಯಲಹಂಕದಲ್ಲಿರುವ ಮನೆಯಿಂದ ನನ್ನನ್ನು ಅಪಹರಿಸಿ, ಬಲವಂತವಾಗಿ 19 ವರ್ಷದ ಯುವತಿ ಜತೆಗೆ ಮದುವೆ ಮಾಡಿಸಿದರು. ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಸಾಧ್ಯವಾಗದಂತೆ ಒತ್ತಡ ಹಾಕಿದ್ದರು ಎಂದು ಖಾಸಗಿ ಸಂಸ್ಥೆಯೊಂದರ ಉದ್ಯೋಗಿ- 24 ವರ್ಷದ ಶರತ್ ಕೋರ್ಟ್ ಮೊರೆ ಹೋಗಿದ್ದಾರೆ.
ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮೊರೆ ಹೋದ ಶರತ್ ಅಹವಾಲು ಆಲಿಸಿದ ನಂತರ, ಕೋರ್ಟ್ ನಿರ್ದೇಶನದ ಅನುಸಾರ ಯಲಹಂಕ ನ್ಯೂ ಟೌನ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ನನ್ನ ಮನೆಯಿಂದ ಮಿನಿ ಗೂಡ್ಸ್ ಟೆಂಪೋದಲ್ಲಿ ಕಳೆದ ಫೆಬ್ರವರಿ ಅಪಹರಿಸಿ, ದೇವಸ್ಥಾನದಲ್ಲಿ ನನ್ನ ಇಷ್ಟಕ್ಕೆ ವಿರುದ್ಧವಾಗಿ ಮದುವೆ ಮಾಡಿಸಿದರು. ಆ ನಂತರ ಬೆದರಿಸಿ, ಯಲಹಂಕ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿಯೂ ಅದೇ ದಿನ ಮಾಡಿಸಿದರು ಎಂದು ಈ ಘಟನೆ ನಡೆದ ನಾಲ್ಕು ತಿಂಗಳ ನಂತರ ಶರತ್ ಕೋರ್ಟ್ ಮೆಟ್ಟಿಲೇರಿದ್ದಾರೆ.

ದೂರುದಾರರ ಪತ್ನಿ, ಸಂಬಂಧಿಗಳಾದ ಲೋಕೇಶ್, ಮಂಜುನಾಥ್, ಅಮರಾವತಿ ಮತ್ತು ವರಲಕ್ಷ್ಮಿ ಅವರ ಹೆಸರು ಎಫ್ ಐಆರ್ ನಲ್ಲಿ ಸೇರಿಸಿದ್ದೇವೆ. ಆರೋಪಿಗಳ ಮೂಲಕ ಈ ಹಿಂದೆ ನಿಜಕ್ಕೂ ಆಗಿದ್ದೇನು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿ, ಕೋರ್ಟ್ ಗೆ ವರದಿ ಸಲ್ಲಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications