Bangaluru Work: ನಾಳೆಯಿಂದ ಬೆಂಗಳೂರಿನಲ್ಲಿ ಎಲ್ಲಾ ಕಾಮಗಾರಿ ಬಂದ್!
ಬೆಂಗಳೂರಿನಲ್ಲಿ ನಾಳೆಯಿಂದ ಎಲ್ಲಾ ಮಾದರಿಯ ಕಾಮಗಾರಿಗಳು ಸಹ ಸ್ಟ್ಯಾಚು ಸ್ಥಿತಿಯನ್ನು ತಲುಪಲಿವೆ. ಹೌದು ಬೆಂಗಳೂರಿನಲ್ಲಿ ಈಗಾಗಲೇ ಈಜಿಪುರ ಸೇರಿದಂತೆ ಹಲವು ಕಾಮಗಾರಿಗಳು ಗಜಗರ್ಭ ಸ್ಥಿತಿಯನ್ನು ತಲುಪಿದ್ದು, ಐದಾರು ವರ್ಷವಾದರೂ ಪೂರ್ಣಗೊಂಡಿಲ್ಲ. ಸಕಾಲದಲ್ಲಿ ಕಾಮಗಾರಿಗಳು ಪೂರ್ಣಗೊಳದೆ ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುತ್ತಿದ್ದಾರೆ. ಇದೀಗ ಅನಿರ್ದಿಷ್ಟಾವಧಿಗೆ ಬೆಂಗಳೂರಿನ ಕಾಮಗಾರಿಗಳು ಸ್ಥಗಿತವಾಗುವ ಆತಂಕ ಎದುರಾಗುವ ಸಾಧ್ಯತೆ ಇದೆ.
ಬೆಂಗಳೂರಿನಂತಹ ಮಹಾನಗರದಲ್ಲಿ ಕಾಮಗಾರಿಗಳನ್ನು ನಡೆಸುವುದು ಸವಾಲಿನ ಕೆಲಸ. ಅಲ್ಲದೇ, ಕಾಮಗಾರಿಗಳನ್ನು ಕೈಗೊಂಡರೆ, ಅದು ನಿರ್ದಿಷ್ಟ ಅವಧಿಯಲ್ಲಿ ಮುಕ್ತಾಯವಾಗುವುದು ಸಹ ಇಲ್ಲ. ಇದೀಗ ದಶಕಗಳ ಹಿಂದೆ ಜಾರಿ ಮಾಡಿರುವ ಕಾಮಗಾರಿಗಳೇ ಆಮೆವೇಗದಲ್ಲಿ ಸಾಗುತ್ತಿದ್ದು, ಗುತ್ತಿಗೆದಾರರ ಕೋಟ್ಯಾಂತರ ರೂಪಾಯಿ ಬಿಲ್ ಬಾಕಿ ಇದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುತ್ತಿಗೆದಾರರು ಪ್ರತಿಭಟನೆಗೆ ಮುಂದಾದ ಸಂದರ್ಭದಲ್ಲಿ, ಗುತ್ತಿಗೆದಾರರ ಬಾಕಿ ಬಿಲ್ ಅನ್ನು ಕಾಲ ಮಿತಿಯಲ್ಲಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡುತ್ತಿದೆ. ಆದರೆ, ಬಾಕಿ ಬಿಲ್ ಬಿಡುಗಡೆ ಮಾಡಲು ಪುನಃ ಪುನಃ ವಿಳಂಬ ಧೋರಣೆಯನ್ನು ಅನುಸರಿಸುತ್ತಿದೆ ಎನ್ನುವ ಆರೋಪವೂ ಕೇಳಿ ಬಂದಿದೆ.

ಶೇ 25ರಷ್ಟು ಬಾಕಿ ಬಿಲ್ ಬಿಡುಗಡೆಗೆ ಆಗ್ರಹ
ಬೆಂಗಳೂರಿನಲ್ಲಿ (ಬಿಬಿಎಂಪಿ ವ್ಯಾಪ್ತಿಯಲ್ಲಿ) ಕಾಮಗಾರಿಗಳನ್ನು ನಡೆಸುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗುತ್ತಿಗೆದಾರರ ಸಂಘವು ಈ ಬಾರಿ ತನ್ನ ಪಟ್ಟು ಸಡಿಲಿಸದೆ ಇರಲು ನಿರ್ಧರಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಸಿರುವ ಕಾಮಗಾರಿಗಳಿಗೆ ಈಗಾಗಲೇ ಬಿಬಿಎಂಪಿ ಬಿಲ್ ಬಿಡುಗಡೆ ಮಾಡಿದೆ. ಆದರೆ, ಇಲ್ಲಿಯವರೆಗೂ ಗುತ್ತಿಗೆದಾರರಿಗೆ ಈಗಾಗಲೇ ಪಾವತಿಸಿರುವ ಬಿಲ್‌ಗಳಲ್ಲಿ ಶೇ.25 ಪ್ರಮಾಣದ ಮೊತ್ತವನ್ನು ಬಾಕಿ ಉಳಿಸಿಕೊಂಡಿದೆ. ಹೀಗಾಗಿ, ಈ ಮೊತ್ತವನ್ನು ಬಿಡುಗಡೆ ಮಾಡುವ ವರೆಗೂ ಎಲ್ಲಾ ಮಾದರಿಯ ಕಾಮಗಾರಿಗಳನ್ನು ಸಹ ಸ್ಥಗಿತ ಮಾಡುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗುತ್ತಿಗೆದಾರರ ಸಂಘದಲ್ಲಿ ತೀರ್ಮಾನಿಸಲಾಗಿದೆ.
ಡಿಸಿಎಂ ಡಿಕೆಶಿ ನೀಡಿದ ಆಶ್ವಾಸನೆ ಈಡೇರಿಲ್ಲ
ಬಾಕಿ ಬಿಲ್‌ಗಳನ್ನು ಕಾಲಮಿತಿಯಲ್ಲಿ ಬಿಡುಗಡೆ ಮಾಡಿಕೊಡುವುದಾಗಿ ಬಿಬಿಎಂಪಿ ಭರವಸೆ ನೀಡಿತ್ತು. ಅಲ್ಲದೇ 2021ರ ಏಪ್ರಿಲ್‌ನಿಂದ ಬಿಡುಗಡೆ ಮಾಡಲಾಗಿರುವ ಬಿಲ್‌ಗಳಲ್ಲಿ ಬಾಕಿ ಉಳಿಸಿಕೊಳ್ಳಲಾಗಿರುವ ಶೇ 25ರಷ್ಟು ಮೊತ್ತವನ್ನು ಬಿಡುಗಡೆ ಮಾಡುವಂತೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಮತ್ತು ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರೂ, ಭರವಸೆ ಈಡೇರಿಲ್ಲ. ಡಿ.ಕೆ ಶಿವಕುಮಾರ್ ಅವರು ಬಿಲ್ ಬಾಕಿ ಮೊತ್ತವನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಇದಾಗಿ ಹಲವು ತಿಂಗಳುಗಳೇ ಕಳೆದರೂ ಗುತ್ತಿಗೆದಾರರಿಗೆ ಬಾಕಿ ಬಿಲ್ ಬಿಡುಗಡೆಯಾಗಿಲ್ಲ ಎನ್ನಲಾಗಿದ್ದು, ಗುತ್ತಿಗೆದಾರರ ಸಂಘದ ಸದಸ್ಯರು ರೊಚ್ಚಿಗೆದಿದ್ದಾರೆ.
ಇದು ಎರಡನೇ ಬಾರಿ ಕಾಮಗಾರಿ ಸ್ಥಗಿತ
ಬೆಂಗಳೂರಿನಲ್ಲಿ ಕಾಮಗಾರಿಗಳನ್ನು ಸ್ಥಗಿತ ಮಾಡಿ ಬೀದಿಗೆ ಇಳಿಯಲು ಗುತ್ತಿಗೆದಾರರ ಸಂಘದ ಸದಸ್ಯರು ಎರಡನೇ ಬಾರಿ ನಿರ್ಧರಿಸಿದ್ದಾರೆ. ಈ ಹಿಂದೆಯೂ ಗುತ್ತಿಗೆದಾರರ ಸಂಘದ ಸದಸ್ಯರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಆ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಮಧ್ಯಪ್ರವೇಶ ಹಾಗೂ ಬಾಕಿ ಬಿಲ್ ಬಿಡುಗಡೆಯ ಭರವಸೆಯಿಂದ ನಿಂತಿತ್ತು. ಗುತ್ತಿಗೆದಾರರ ಸಂಘದ ಸದಸ್ಯರು ಈ ಹಿಂದೆಯೂ ಒಮ್ಮೆ ಪ್ರತಿಭಟನೆ ನಡೆಸಿದ್ದರು. ಆ ಸಂದರ್ಭದಲ್ಲೂ ಬೆಂಗಳೂರಿನ ಪ್ರಮುಖ ಕಾಮಗಾರಿಗಳು ಸ್ಥಗಿತವಾಗಿತ್ತು.

500 ಜನ ಗುತ್ತಿಗೆದಾರರಿಂದ ಪ್ರೊಟೆಸ್ಟ್
ಬೆಂಗಳೂರಿನಲ್ಲಿ ನಾಳೆಯಿಂದ ಎಲ್ಲಾ ಮಾದರಿಯ ಕಾಮಗಾರಿಗಳು ಸ್ಥಗಿತವಾಗಲಿದೆ. ಅದರಲ್ಲಿ ಬೆಂಗಳೂರಿನ ರಸ್ತೆ ಕಾಮಗಾರಿಗಳು, ವೈಟ್‌ಟಾಪಿಂಗ್, ಕೆರೆ, ರಸ್ತೆ ಹಾಗೂ ಮೂಲಸೌಕರ್ಯ ಕಾಮಗಾರಿಗಳು, ರಾಜಕಾಲುವೆ, ಎಲೆಕ್ಟ್ರಿಕಲ್ ಹಾಗೂ ಎಲ್ಲಾ ಮಾದರಿಯ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ಬಿಬಿಎಂಪಿ ಗುತ್ತಿಗೆದಾರರ ಸಂಘ ನಿರ್ಧರಿಸಿದೆ. ಇದಕ್ಕೆ ಗುತ್ತಿಗೆದಾರರ ಸಂಘದ 500ಕ್ಕೂ ಹೆಚ್ಚು ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಜಿ.ಎಂ ನಂದಕುಮಾರ್ ಅವರು ತಿಳಿಸಿದ್ದಾರೆ.












Click it and Unblock the Notifications