ವಿಜಯವಾಡದಲ್ಲಿ ಆಟೋ ಚಾಲಕನ ದೌರ್ಜನ್ಯದಿಂದ ಬೆಂಗಳೂರು ಯುವತಿ ಪಾರು: ಪ್ರಾಣ ಉಳಿಸಿದ 'ಶಕ್ತಿ ಆ್ಯಪ್'
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಯುವತಿಯೊಬ್ಬರು ವಿಜಯವಾಡದ ಬಸ್ ನಿಲ್ದಾಣದಲ್ಲಿ ಆಟೋ ಚಾಲಕನೊಬ್ಬನ ಲೈಂಗಿಕ ದೌರ್ಜನ್ಯದ ಯತ್ನದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಯುವತಿಯ ಸಮಯಪ್ರಜ್ಞೆ ಹಾಗೂ 'ಶಕ್ತಿ ಆ್ಯಪ್' ಆಕೆಯನ್ನು ಈ ಘಟನೆಯಿಂದ ಪಾರು ಮಾಡಿದೆ. ಮಹಿಳಾ ಸುರಕ್ಷತೆಯ ದೃಷ್ಟಿಯಿಂದ ಈ ಘಟನೆಯು ಶಕ್ತಿ ಆ್ಯಪ್‌ಗಳ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಘಟನೆಯ ಹಿನ್ನೆಲೆ
ಏಪ್ರಿಲ್ 24 ರಂದು ಮಧ್ಯರಾತ್ರಿ ಸುಮಾರು 12:30ರ ಸುಮಾರಿಗೆ ಯುವತಿಯು ವಿಜಯವಾಡ ಬಸ್ ನಿಲ್ದಾಣವನ್ನು ತಲುಪಿದ್ದಳು. ಈ ವೇಳೆ ಫಣೀಂದ್ರ ಎಂಬ ಆಟೋ ಚಾಲಕ ಆಕೆಯ ಬಳಿ ಬಂದು, ನಂಬೂರಿಗೆ (Namburu) ಕರೆದೊಯ್ಯುವುದಾಗಿ ಪಟ್ಟು ಹಿಡಿದಿದ್ದಾನೆ. ಯುವತಿ ಆರಂಭದಲ್ಲಿ ಆತನ ಆಟೋ ಹತ್ತಲು ನಿರಾಕರಿಸಿದ್ದಾಳೆ. ಆದರೆ ಚಾಲಕ ಎರಡು-ಮೂರು ಬಾರಿ ಬಲವಂತಪಡಿಸಿದಾಗ, ಬೇರೆ ದಾರಿಯಿಲ್ಲದೆ 'ಸರಿ, ಹೋಗೋಣ' ಎಂದು ಆಟೋ ಹತ್ತಿದ್ದಾಳೆ.

ಆದರೆ, ಆಟೋ ಹತ್ತುವ ಮುನ್ನವೇ ಎಚ್ಚೆತ್ತುಕೊಂಡಿದ್ದ ಯುವತಿ, ಆಟೋದ ನಂಬರ್ ಪ್ಲೇಟ್ ಫೋಟೋ ತೆಗೆದು 'ಶಕ್ತಿ ಆ್ಯಪ್'ನಲ್ಲಿ ಅಪ್‌ಲೋಡ್ ಮಾಡಿದ್ದಳು. ಆಟೋ ವಿಜಯವಾಡದಿಂದ ಡಿಜಿಪಿ ಕಚೇರಿಯತ್ತ ಸಾಗುತ್ತಿದ್ದಾಗ, ಚಾಲಕ ಫಣೀಂದ್ರ ಯುವತಿಯೊಂದಿಗೆ ಅಸಭ್ಯವಾಗಿ ಮಾತನಾಡಲು ಪ್ರಾರಂಭಿಸಿದ್ದಾನೆ. ಆತನ ವರ್ತನೆಯಿಂದ ಗಾಬರಿಗೊಂಡ ಯುವತಿ, ತಕ್ಷಣವೇ ಆ್ಯಪ್‌ನಲ್ಲಿ ತನ್ನ ಸಂಪೂರ್ಣ ವಿವರಗಳನ್ನು ಅಪ್‌ಲೋಡ್ ಮಾಡಿದ್ದಾಳೆ.
ಯುವತಿ ಫೋನ್ ಬಳಸುತ್ತಿರುವುದನ್ನು ಕಂಡು ಅನುಮಾನಗೊಂಡ ಚಾಲಕ, ಯಾರಿಗೆ ಕರೆ ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾನೆ. ತಾನು ಮನೆಗೆ ಕರೆ ಮಾಡುತ್ತಿರುವುದಾಗಿ ಯುವತಿ ಸುಳ್ಳು ಹೇಳಿದ್ದಾಳೆ. ಆಟೋ ಕಾಜಾ (Kazha) ಟೋಲ್ ಪ್ಲಾಜಾ ದಾಟಿ ಸ್ವಲ್ಪ ದೂರ ಸಾಗುತ್ತಿದ್ದಂತೆ, ಚಾಲಕ ತನ್ನ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ ಎಂಬುದು ಯುವತಿಗೆ ಅರಿವಾಗಿದೆ. ಆದರೆ, ಯುವತಿ ಆ್ಯಪ್‌ನಲ್ಲಿ ನೀಡಿದ್ದ ಮಾಹಿತಿಯ ನೇರವಿನಿಂದ ಪೊಲೀಸರು ಆಗಲೇ ಟ್ರ್ಯಾಕ್ ಮಾಡುತ್ತಿದ್ದರು.
ಮಂಗಳಗಿರಿ ಎಸ್‌ಐ ವೆಂಕಟ್ ಅವರು ಶಕ್ತಿ ಆ್ಯಪ್ ಮೂಲಕ ಸರಿಯಾಗಿ ಆಟೋದ ಚಲನವಲನಗಳನ್ನು ಟ್ರ್ಯಾಕ್ ಮಾಡುತ್ತಿದ್ದರು. ಟೋಲ್ ಗೇಟ್‌ನಿಂದ ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆಟೋವನ್ನು ಅಡ್ಡಗಟ್ಟಿ ಯುವತಿಯನ್ನು ರಕ್ಷಿಸಿದ್ದಾರೆ. ಅಲ್ಲದೆ, ಸ್ಥಳದಲ್ಲೇ ಆಟೋ ಚಾಲಕ ಫಣೀಂದ್ರನನ್ನು ವಶಕ್ಕೆ ಪಡೆದಿದ್ದಾರೆ.
ಯುವತಿಯ ಯಶಸ್ವಿ ರಕ್ಷಣೆಯ ನಂತರ, ಆಂಧ್ರಪ್ರದೇಶ ಸಚಿವ ನಾರಾ ಲೋಕೇಶ್ ಅವರು ಮಂಗಳಗಿರಿ ಗ್ರಾಮಾಂತರ ಪೊಲೀಸರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ಮಹಿಳೆಯರ ಸುರಕ್ಷತೆಗಾಗಿ ತಂತ್ರಜ್ಞಾನ ಎಷ್ಟು ಉಪಯುಕ್ತವಾಗಿದೆ ಎಂಬುದನ್ನು ಈ ಘಟನೆ ಸ್ಪಷ್ಟವಾಗಿ ಸಾಬೀತುಪಡಿಸಿದೆ ಎಂದು ಅವರು ತಿಳಿಸಿದ್ದಾರೆ.
ಬಂಧನದ ನಂತರ ಮಾತನಾಡಿದ ಮಂಗಳಗಿರಿ ಡಿಎಸ್‌ಪಿ ಮುರಳಿ ಕೃಷ್ಣ, "ಚಾಲಕನ ಹಿನ್ನೆಲೆ ಕುರಿತು ತನಿಖೆ ಮುಂದುವರಿದಿದೆ. ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರು ಕಡ್ಡಾಯವಾಗಿ 'ಶಕ್ತಿ ಆ್ಯಪ್' ಡೌನ್‌ಲೋಡ್ ಮಾಡಿಕೊಳ್ಳಬೇಕು ಮತ್ತು ಅದನ್ನು ಸಕ್ರಿಯವಾಗಿಟ್ಟುಕೊಳ್ಳಬೇಕು. ಸಂತ್ರಸ್ತೆ ನೀಡಿದ ಮಾಹಿತಿಯಿಂದಾಗಿಯೇ ಅನಾಹುತ ಸಂಭವಿಸುವ ಮುನ್ನವೇ ಪೊಲೀಸರು ಆಕೆಯನ್ನು ತಲುಪಲು ಸಾಧ್ಯವಾಯಿತು" ಎಂದು ಹೇಳಿದರು.













Click it and Unblock the Notifications