Bengaluru Weather: ಭಾರಿ ಮಳೆಗೆ ನಲುಗಿದ ಬೆಂಗಳೂರು, ಟ್ರಾಫಿಕ್‌ನದ್ದೆ ಸಮಸ್ಯೆ, ಬಿಬಿಎಂಪಿ ಅಲರ್ಟ್
ಬೆಂಗಳೂರು, ಅಕ್ಟೋಬರ್ 15: ರಾಜ್ಯ ರಾಜಧಾನಿ ಬೆಂಗಳೂರು ಹಿಂಗಾರು ಮಳೆಗೆ ಅಕ್ಷರಶಃ ನಲುಗಿದೆ. ನೆನ್ನೆ ಸೋಮವಾರದಿಂದ ಮಂಗಳವಾರ ಬೆಳಗ್ಗೆವರೆಗೆ ಸುರಿದ ಧಾರಾಕಾರ ಮಳೆಗೆ ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತಗೊಂಡಿದೆ. ಐಎಂಡಿ ಹೇಳುವ ಪ್ರಕಾರ, ರಾತ್ರಿಯಿಂದ ಈವರೆಗೆ ಬರೋಬ್ಬರಿ 16.2 ಮಿಮೀ ಮಳೆ ದಾಖಲಾಗಿದೆ. ಬೆಂಗಳೂರು ನಗರದ ವಿವಿಧಡೆ ಮಳೆಯಿಂದಾಗಿ ಅನೇಕ ಸಮಸ್ಯೆಗಳು ಸೃಷ್ಟಿಯಾಗಿದ್ದು, ಬಿಬಿಎಂಪಿ ಅಲರ್ಟ್ ಆಗಿದೆ.
ಭಾರತೀಯ ಹವಾಮಾನ ಇಲಾಖೆಯ ವರದಿ ಪ್ರಕಾರ, ಬೆಂಗಳೂರಿನ ಏರ್‌ಪೋರ್ಟ್ ಪ್ರದೇಶದಲ್ಲಿ 10.5 ಮಿ.ಮೀ. ಹಾಗೂ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 8.6 ಮಿ.ಮೀ. ಮಳೆ ದಾಖಲಾಗಿದೆ. ನಗರದ ತಗ್ಗು ಪ್ರದೇಶಗಳಲ್ಲಿ ನೀರು ನಿಂತರೆ, ಪ್ರಮುಖ ರಸ್ತೆಗಳೇ ಜಲಾವೃತಗೊಂಡು ಸಮಸ್ಯೆ ಸೃಷ್ಟಿಯಾಗಿದೆ ಎಂದು 'ಡೆಕ್ಕನ್ ಹೆರಾಲ್ಡ್' ವರದಿ ಮಾಡಿದೆ.

ರಸ್ತೆ ಅಂಡರ್ ಪಾಸ್‌ಗಳಲ್ಲಿ ತುಂಬಿದ ಮಳೆ ನೀರು
ರಾಜಧಾನಿಯ ಮಾರತ್ತಹಳ್ಳಿ, ಇಬ್ಲೂರು, ಬನ್ನೇರುಘಟ್ಟ ರಸ್ತೆ, ಹೆಬ್ಬಾಳ ಮೇಲ್ಸೇತುವೆ, ಕೋರಮಂಗಲ, ಗೊರಗುಂಟೆಪಾಳ್ಯದ ಹೊರವರ್ತುಲ ರಸ್ತೆ, ಏರ್‌ಪೋರ್ಟ್ ರಸ್ತೆ ಸರ್ವೀಸ್ ರಸ್ತೆ, ವಸಂತನಗರ ಅಂಡರ್‌ಪಾಸ್, ವಿಲ್ಸನ್ ಮ್ಯಾನರ್ ರಸ್ತೆ ಅಂಡರ್‌ಪಾಸ್, ಎಂಜಿ ರಸ್ತೆ, ವೈಟ್‌ಫೀಲ್ಡ್ ಮುಖ್ಯರಸ್ತೆಗಳು, ಮೆಜೆಸ್ಟಿಕ್ ಓಕಳಿಪುರಂ ಅಂಡರ್‌ಪಾಸ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳು, ಅಂಡರ್‌ಪಾಸ್‌ಗಳಲ್ಲಿ ನೀರು ನಿಂತಿತ್ತು. ವಾಹನ ಸವಾರರು ಪರದಾಡಿದರು.
ಇಂದು ಮಂಗಳವಾರ ಬೆಳಗ್ಗೆ 11 ಗಂಟೆವರೆಗೂ ಎಂಎಂ ಟೆಂಪಲ್ ರಸ್ತೆ, ಎಸ್‌ವಿ ರಸ್ತೆ, ರಾಮಮೂರ್ತಿನಗರ ರಸ್ತೆ ಅಂಡರ್‌ಪಾಸ್, ಸ್ಯಾಂಕಿ ರೋಡ್, ಹೆಣ್ಣೂರು-ಬಾಗಲೂರು ಮುಖ್ಯರಸ್ತೆಗಳಲ್ಲಿ ಮಳೆ ನೀರು ನಿಂತಿತ್ತು. ಬೆಳಗ್ಗೆ ಪೀಕ್ ಹವರ್‌ನಲ್ಲಿ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ವಾಟರ್‌ಲಾಗಿಂಗ್ ಸಮಸ್ಯೆಯಿಂದಾಗಿ ಮಳೆ ನೀರು ಸರಾಗವಾಗಿ ಹರಿದು ಹೋಗದೇ ಕಿರಿ ಕಿರಿ ಉಂಟು ಮಾಡಿತು.
ರಾಜಧಾನಿಯಲ್ಲಿ ಹಿಂಗಾರು ಆರ್ಭಟ
ಬೆಂಗಳೂರಿನಲ್ಲಿ ಹಿಂಗಾರು ಮಳೆ ಅಕ್ಟೋಬರ್ ಮೊದಲ ವಾರವೇ ಆರಂಭವಾದಂತಾಗಿದೆ. ಶುರುವಾಗಿ ಎರಡೇ ವಾರದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಮಳೆ ಅಬ್ಬರಿಸುತ್ತಿದೆ. ಸಾಮಾನ್ಯವಾಗಿ ಅಕ್ಟೋಬರ್ 15 ರಂದು ನೈರುತ್ಯ ಮಾನ್ಸೂನ್ ಕೊನೆಗೊಂಡು, ಹಿಂಗಾರು ಮಾರುತಗಳು ಸಕ್ರಿಯಗೊಳ್ಳುತ್ತದೆ. ಅಕ್ಟೋಬರ್ 20 ರೊಳಗೆ ಹಿಂಗಾರು ಆರಂಭ ಅಧಿಕೃಗೊಳ್ಳುತ್ತೆ.

ಸದ್ಯ ಉಂಟಾದ ಪರಿಸ್ಥಿತಿ ನೋಡಿದರೆ, ಐಎಂಡಿ ಬೆಂಗಳೂರು ನಿರ್ದೇಶಕ ಸಿಎಸ್ ಪಾಟೀಲ್ ಅವರು, ಮಂಗಳವಾರವೇ ಹಿಂಗಾರು ಮಳೆ ಆರಂಭದ ಬಗ್ಗೆ ಘೋಷಿಸಬೇಕಾಗುತ್ತದೆ ಎಂದಿದ್ದಾರೆ. ಬೆಂಗಳೂರು ಮಾತ್ರವಲ್ಲದೇ, ಕೋಲಾರ, ರಾಮನಗರ, ಹಾಗೂ ಚಿಕ್ಕಬಳ್ಳಾಪುರಲ್ಲಿ ಮುಂದಿನ ಮೂರು ದಿನಗಳಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದು ಅವರು ಮುನ್ಸೂಚನೆ ನೀಡಿದ್ದಾರೆ.
ಸಾರ್ವಜನಿಕರಿಗೆ ತುರ್ತು ಸ್ಪಂದನೆಗೆ ಪಾಲಿಕೆ ಸೂಚನೆ
ಕಳೆದ ಮೂರು ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಅಲರ್ಟಾಗಿರುವಂತೆ ಸೂಚಿಸಿದ್ದಾರೆ. ತುರ್ತು ಸಭೆ ಮೂಲಕ ಮಳೆಯಿಂದ ತೊಂದರೆ ಅನುಭವಿಸುತ್ತಿರುವ ಸಾರ್ವಜನಿಕರಿಗೆ, ಸಮಸ್ಯೆಗಳಿಗೆ ಸ್ಪಂದಿಸುವಂತೆ ತಿಳಿಸಿದ್ದಾರೆ.
ನಗರದ ತಗ್ಗು ಪ್ರದೇಶದ ಸ್ಥಳಗಳಲ್ಲಿ ಪ್ರವಾಹ ಉಂಟಾಗದಂತೆ ತಡೆಬೇಕು. ಕಟ್ಟುನಿಟ್ಟಿನ ಕ್ರಮ ಕೈಗೊಂಡು ತ್ವರಿತವಾಗಿ ಸ್ಪಂದಿಸಬೇಕು. ಸಮಸ್ಯೆ ಉಲ್ಬಣಗೊಂಡರೆ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲು ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ವಾಟರ್‌ಲಾಗಿಂಗ್ ಸ್ಥಳದಲ್ಲಿ ತ್ಯಾಜ್ಯವನ್ನು ತೆರವುಗೊಳಿಸಿ ಮಳೆನೀರು ಸರಾಗವಾಗಿ ಹೋಗುವಂತೆ ಮಾಡಬೇಕು. ಕಾಮಗಾರಿ ಸ್ಥಳಗಳಲ್ಲಿ ಕಣ್ಣಿಡಬೇಕು. ರಸ್ತೆಗಳ ಮೇಲೆ ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದು ಪಾಲಿಕೆ ರಸ್ತೆ ಮೂಲಸೌಕರ್ಯ ಕಾಮಗಾರಿಗಳ ಉಸ್ತುವಾರಿ ಅಧಿಕಾರಿಗಳಿಗೆ ಸಲಹೆ ನೀಡಿದರು.
ನಗರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಬಂದ ಮಳೆಯಿಂದಾಗಿ ಬಿಟಿಎಂ ಬಡಾವಣೆಯಲ್ಲಿ ಮರ ಧರೆಗುರುಳಿದೆ. ಅದೇ ರೀತಿ ವಿಜಯನಗರ, ಹಂಪಿನಗರ, ಮಲ್ಲೇಶ್ವರಂನಲ್ಲಿ ಮರ ಕೊಂಬೆ ಮುರಿದು ಬಿದ್ದಿವೆ. ಈ ಬಗ್ಗೆ ದೂರಿನ ಆಧಾರದಲ್ಲಿ ತೆರವಿಗೆ ಪಾಲಿಕೆ ಸೂಕ್ತ ಕ್ರಮ ಕೈಗೊಂಡಿದೆ. ಮಳೆ ಹಾನಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಬಿಬಿಎಂಪಿಯ ಈ ಸಹಾಯವಾಣಿ ಸಂಖ್ಯೆಗೆ 1533 ಸಂಪಕಿಸಬೇಕೆಂದು ಪಾಲಿಕೆ ಕೋರಿದೆ.












Click it and Unblock the Notifications