ಬೆಂಗಳೂರು; ಒಂದೇ ವಾರದಲ್ಲಿ 51,000 ಕೋವಿಡ್ ಪ್ರಕರಣ ದಾಖಲು
ಬೆಂಗಳೂರು, ಜನವರಿ 12; ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಅದರಲ್ಲೂ ಬೆಂಗಳೂರು ನಗರದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ.
ಬುಧವಾರ ಬೆಂಗಳೂರು ನಗರದಲ್ಲಿ 15,617 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 73,654ಕ್ಕೆ ಏರಿಕೆಯಾಗಿದೆ. ನಗರದ ಒಟ್ಟು ಸೋಂಕಿತರ ಸಂಖ್ಯೆ 13,34,957.
ಬೆಂಗಳೂರು ನಗರದಲ್ಲಿ ಜನವರಿ 4 ರಿಂದ 10ರ ತನಕ 51 ಸಾವಿರ ಕೋವಿಡ್ ಪ್ರಕರಣ ದಾಖಲಾಗಿದೆ. ಸದ್ಯ ರಾಜ್ಯದಲ್ಲಿಯೇ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗುತ್ತಿರುವ ಜಿಲ್ಲೆಗಳಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ.

ನವೆಂಬರ್ 16 ರಿಂದ ಡಿಸೆಂಬರ್ 27ರ ತನಕ ಬೆಂಗಳೂರು ನಗರದಲ್ಲಿ ಒಂದು ವಾರದಲ್ಲಿ ದಾಖಲಾದ ಕೋವಿಡ್ ಪ್ರಕರಣಗಳ ಸಂಖ್ಯೆ 1 ಸಾವಿರಿಂದ 1,500 ಆಗಿತ್ತು. ಜನವರಿ 4 ರಿಂದ 10ರ ತನಕ ನಗರದಲ್ಲಿ 50,895 ಪ್ರಕರಣ ದಾಖಲಾಯಿತು.
ಬೆಂಗಳೂರು ನಗರದಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆಯೂ ಹೆಚ್ಚಳವಾಗಿದೆ. ವಾರಕ್ಕೆ 3.5 ಲಕ್ಷ ಮಾದರಿಗಳ ಪರೀಕ್ಷೆ ಮಾಡಲಾಗುತ್ತಿತ್ತು. ಈಗ ಅದು 5.88 ಲಕ್ಷಕ್ಕೆ ಏರಿಕೆಯಾಗಿದೆ. ಜನವರಿ 4 ರಿಂದ 10ರ ತನಕ ನಗರದಲ್ಲಿ ದಾಖಲಾದ ಕೋವಿಡ್ ಪ್ರಕರಣಗಳ ಸಂಖ್ಯೆ 3,385 ಮೃತಪಟ್ಟವರು 16 ಜನ.
ಡಿಸೆಂಬರ್ 28 ರಿಂದ ಜನವರಿ 3ರ ತನಕ ನಗರದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿತು. 6,448 ಪ್ರಕರಣ ದಾಖಲಾದರೆ, 23 ಸೋಂಕಿತರು ಮೃತಪಟ್ಟರು.
ಬೆಂಗಳೂರು ನಗರದಲ್ಲಿ ಡಿಸೆಂಬರ್ 1 ರಿಂದ 27ರ ತನಕ 150 ರಿಂದ 269 ಪ್ರಕರಣಗಳು ದಾಖಲಾಗಿದ್ದವು. ಡಿಸೆಂಬರ್ 28ರಂದು 400 ಪ್ರಕರಣ ದಾಖಲಾಗುವ ಮೂಲಕ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿತು.
ಮಂಗಳವಾರ ನಗರದಲ್ಲಿ 10,800 ಪ್ರಕರಣ ಪತ್ತೆಯಾದರೆ, ಬುಧವಾರ 15,617 ಹೊಸ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣ, ಸಕ್ರಿಯ ಪ್ರಕರಣವಿರುವ ಜಿಲ್ಲೆ ಬೆಂಗಳೂರು ನಗರ.
ಕಠಿಣ ನಿಯಮಗಳು ಜಾರಿಗೆ; ಕರ್ನಾಟಕ ಸರ್ಕಾರ ಡಿಸೆಂಬರ್ 28ರಿಂದಲೇ ಜಾರಿಗೆ ಬರುವಂತೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಬೆಂಗಳೂರು ನಗರದಲ್ಲಿ ಸಾರ್ವಜನಿಕವಾಗಿ ಹೊಸ ವರ್ಷಾಚರಣೆ ಮಾಡಲು ಸಹ ನಿರ್ಬಂಧ ಹೇರಲಾಗಿತ್ತು.
ಜನವರಿ 5ರಿಂದ ಜಾರಿಗೆ ಬರುವಂತೆ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ನೈಟ್ ಕರ್ಫ್ಯೂ ವಿಸ್ತರಣೆ ಮಾಡುವ ಜೊತೆಗೆ ವಾರಾಂತ್ಯದ ಕರ್ಫ್ಯೂವನ್ನು ಜಾರಿಗೆ ತರಲಾಗಿದೆ. ಜನವರಿ 31ರ ತನಕ ಈ ಆದೇಶ ಜಾರಿಯಲ್ಲಿರುತ್ತದೆ.
ಜನವರಿ 6ರಿಂದಲೇ ಜಾರಿಗೆ ಬರುವಂತೆ ಬೆಂಗಳೂರು ನಗರದಲ್ಲಿ 1 ರಿಂದ 9ನೇ ತರಗತಿಗೆ ಭೌತಿಕ ತರಗತಿಗಳನ್ನು ರದ್ದುಗೊಳಿಸಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಆದೇಶ ಸಹ ಜನವರಿ 31ರ ತನಕ ಜಾರಿಯಲ್ಲಿರುತ್ತದೆ ಎಂದು ಶಿಕ್ಷಣ ಸಚಿವರು ಬುಧವಾರ ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸಹ ಕೋವಿಡ್ ಸೋಂಕು ತಗುಲಿದ್ದು, ಹೋಂ ಐಸೋಲೇಷನ್‌ನಲ್ಲಿದ್ದಾರೆ. ಮಂಗಳವಾರ ರಾಜ್ಯದ ಕೋವಿಡ್ ಸ್ಥಿತಿ-ಗತಿ ಕುರಿತು ಅವರು ಅಧಿಕಾರಿಗಳು ಮತ್ತು ಸಚಿವರ ಸಭೆ ನಡೆಸಿದರು.
ಕೋವಿಡ್ ಹರಡುವಿಕೆ ತಡೆಯಲು ಮುಂಜಾಗ್ರತೆ ಕ್ರಮವಾಗಿ ಜಾರಿಗೊಳಿಸುವ ಮಾರ್ಗಸೂಚಿಗಳನ್ನು ಜನವರಿ 31ರ ತನಕ ವಿಸ್ತರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆಯಾ ಜಿಲ್ಲೆಗಳ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.
ಸಂಕ್ರಾಂತಿ ಹಬ್ಬ ಮತ್ತು ವೈಕುಂಠ ಏಕಾದಶಿ ಮತ್ತಿತರ ಹಬ್ಬಗಳ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಕಂದಾಯ ಮತ್ತು ಮುಜರಾಯಿ ಇಲಾಖೆಗೆ ಸೂಚಿಸಲಾಗಿತ್ತು. ಮಾರ್ಗಸೂಚಿ ಪ್ರಕಟವಾಗಿದೆ.
ಮಾರುಕಟ್ಟೆ ಪ್ರದೇಶದಲ್ಲಿ ಜನದಟ್ಟಣೆ ಕಡಿಮೆಗೊಳಿಸಲು ವಸ್ತುಸ್ಥಿತಿ ಆಧರಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದ್ದು, ಬೆಂಗಳೂರು ನಗರದ ಕೆ. ಆರ್. ಮಾರುಕಟ್ಟೆ, ಯಶವಂತಪುರ ಮಾರುಕಟ್ಟೆಯಲ್ಲಿ ಜನದಟ್ಟಣೆ ಕಡಿಮೆ ಮಾಡಲು ಬಿಬಿಎಂಪಿ ಕ್ರಮ ಕೈಗೊಂಡಿದೆ.












Click it and Unblock the Notifications