Water Crisis: ರೆಸಾರ್ಟ್‌ನಲ್ಲಿ 'ಹೈಫೈ' ಮಂದಿಯ ಹೋಳಿ 'ರೈನ್-ಸ್ವಿಮ್ಮಿಂಗ್' ಡಾನ್ಸ್: ಭಾರಿ ನೀರು ಪೋಲು
ಬೆಂಗಳೂರು, ಮಾರ್ಚ್ 25: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿನ ಕ್ಷಾಮ ತಲೆದೂರಿ ವಾರಗಳೇ ಕಳೆದಿವೆ. ಹೀಗಿದ್ದರೂ ಹೋಲಿ ಹಬ್ಬ ಹಿನ್ನೆಲೆಯಲ್ಲಿ ನಿಯಮ ಮೀರಿ ರೇಸಾರ್ಟ್‌ವೊಂದರಲ್ಲಿ ಭರ್ಜರಿ ರೈನ್ ಡಾನ್ಸ್ ಮತ್ತು ಸ್ವಿಮ್ಮಿಂಗ್ ಡಾನ್ಸ್ ಆಯೋಜನೆ ಮಾಡಲಾಗಿದೆ. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿ ಬಂದಿದೆ.
ಬೆಂಗಳೂರಿನಲ್ಲಿ ಈ ಬಾರಿ ಬೇಸಿಗೆ ಆರಂಭದಲ್ಲಿಯೇ ಕುಡಿಯುವ ನೀರಿಗೆ ಹಾಹಾಕಾರ ಶುರುವಾದ ಹಿನ್ನೆಲೆಯಲ್ಲಿಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಪರಿಹಾರ ಕ್ರಮ ಕೈಗೊಳ್ಳುತ್ತಿದೆ. ಹೋಲಿ ನೆಪದಲ್ಲಿ ನೀರು ಪೋಲಾಗದಂತೆ ನೋಡಿಕೊಳ್ಳಿ ಎಂದು ಕಟ್ಟುನಿಟ್ಟಿನ ಆದೇಶ ಸಹ ಮಾಡಿದೆ.

ಹಿಗಿದ್ದರೂ ಜಲಮಂಡಳಿ ಆದೇಶ ಉಲ್ಲಂಘಿಸಿ ಬೆಂಗಳೂರಿನ ವರ್ತೂರಿನ ಖಾಸಗಿ ರೆಸಾರ್ಟ್ ನಲ್ಲಿ ಅದ್ಧೂರಿ ರೈನ್ ಡಾನ್ಸ್ (Rain dance) ಮತ್ತು ಸ್ವಿಮ್ಮಿಂಗ್ ಡಾನ್ಸ್ (Swimming dance) ಆಯೋಜಿಸಿ ಬರ ಮಧ್ಯೆ ನೀರು ಪೋಲು ಮಾಡಲಾಗಿದೆ ಎಂಬ ಆರೋಪಿಸಲಾಗಿದೆ.
ನಗರದಲ್ಲಿ ನೀರಿಗೆ ಹಾಹಾಕಾರ
ಜಲಮಮಡಳಿ ನಿತ್ಯ ನಗರಕ್ಕೆ 1450 ಎಂಎಲ್‌ಡಿ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದಾರೆ. ಅದರೂ ಬಹುತೇಕ ಕಡೆಗಳಲ್ಲಿ ಜನ ನೀರಿಲ್ಲದೇ ಒದ್ದಾಡುತ್ತಿದ್ದಾರೆ. ಖಾಲಿ ಬಿಂದಿಗೆ ಹಿಡಿದು ಸಾಲು ಗಟ್ಟಿ ನಿಂತು ನೀರು ತರುತ್ತಿದ್ದಾರೆ. ಇಂತಹ ಬರ, ಜಲಕ್ಷಾಮದ ಸ್ಥಿತಿಯಲ್ಲಿ ಹೈಫೈ ಮಂದಿ ಹೋಳಿ ಹಬ್ಬದ ಹೆಸರಿನಲ್ಲಿ ರೆಸಾರ್ಟ್‌ನಲ್ಲಿ ನೀರು ಪೋಲು ಮಾಡಿದ್ದಾರೆ. ಕುಣಿದು ಕುಪ್ಪಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಜಲಮಂಡಳಿ ಆದೇಶ ಸ್ಪಷ್ಟ ಉಲ್ಲಂಘನೆ
ರೆಸಾರ್ಟ್‌ನಲ್ಲಿ ರೈನ್ ಡಾನ್ಸ್ ಆಯೋಜಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಈ ಕುರಿತು ಜಲಮಂಡಳಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ನೀರಿನ ಕೊರತೆಯ ಸನ್ನಿವೇಶದಲ್ಲಿ ರೈನ್ಸ್ ಡಾನ್ಸ್ ಮಾಡುವ ಮೂಲಕ ನಿಯಮ, ಸರ್ಕಾರಿ ಆದೇಶಗಳ ಭಯ ನಮಗಿಲ್ಲ ಎಂದು ಪರೋಕ್ಷವಾಗಿ ಬೀಗಿದ್ದಾರೆ. ಇಲ್ಲಿ ಜಲಮಂಡಳಿ ಆದೇಶ ಸ್ಪಷ್ಟ ಉಲ್ಲಂಘನೆ ಆಗಿದೆ.
ಬೆಂಗಳೂರಿನಲ್ಲಿ ಭಾನುವಾರ ಮತ್ತು ಇಂದು ಸೋಮವಾರ ಎರಡು ದಿನ ಹೋಳಿ ಹಬ್ಬದಾಚರಣೆ ನಡೆದಿದೆ. ಕಾರು ವಾಶ್ ಮಾಡದಂತೆ, ಸಂಸ್ಕರಿಸಿ ನೀರು ಬೇರೆ ಕಾರ್ಯಗಳಿಗೆ ಬಳಸುವ ಮೂಲಕ ನೀರು ಉಳಿಸಿ ಎಂದು ಅಪಾರ್ಟ್‌ಮೆಂಟ್, ಹೋಟೆಲ್, ರೆಸ್ಟೋರೆಂಟ್ ಮತ್ತು ರೇಸಾರ್ಟ್‌ಗಳಿಗೆ ಈಗಾಗಲೇ ಜಲಮಂಡಳಿ ಅಧಿಕಾರಿಗಳು ಆದೇಶಿಸಿ ಮನವಿ ಮಾಡಿದ್ದರು. ನೀರು ವಿನಾಕಾರಣ ಪೊಲು ಮಾಡಿದರು 5000 ರೂ. ದಂಡ ಹೇರುವುದಾಗಿ ಎಚ್ಚರಿಸಿದ್ದರು.

ಈ ಸದ್ಯ ನೀರು ಪೋಲು ಪ್ರಕರಣ ಸಂಬಂಧ ಜಲಮಂಡಳಿ ಅಧಿಕಾರಿಗಳು ರೆಸಾರ್ಟ್ ಹಾಗೂ ಆಯೋಜಕರ ವಿರುದ್ಧ ಯಾವೆಲ್ಲ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.
ಬಾಗಲಕೋಟೆ: ಡಿಜೆ ಡಾನ್ಸ್ ಜೊತೆ ನೀರು ಪೋಲು
ಇನ್ನೂ ಉತ್ತರ ಕರ್ನಾಟಕದ ಕೆಲವು ಕಡೆಗಳಲ್ಲಿ ಬೇಸಿಗೆ ವೇಳೆ ಸಾಮಾನ್ಯವಾಗಿ ನೀರು ಅಭಾವ ಉಂಟಾಗುತ್ತದೆ. ಹೀಗಿದ್ದರೂ ಸಹ ಬಾಗಲಕೋಟೆಯಲ್ಲಿ ಯುವ ಸಮೂಹ ಡಿಜೆ ಜೊತೆ ಹೋಳಿ ಆಚರಿಸಿದ್ದಾರೆ. ಈ ವೇಳೆ ರೈನ್ ಡಾನ್ಸ್ ಮಾಡುವ ಮೂಲಕ ಬಾಗಲಕೋಟೆಯಲ್ಲಿ ಸಹ ಯುವಕ, ಯುವತಿಯರು ಹೋಳಿ ಸಂಭ್ರಮದಲ್ಲಿ ನೀರು ಪೋಲು ಮಾಡಿದ ಆರೋಪ ಕೇಳಿ ಬಂದಿದೆ. ಇಲ್ಲಿನ ವಿದ್ಯಾಗಿರಿ ವೃತ್ತದಲ್ಲಿ ರೈನ್ ಡಾನ್ಸ್ ಆಯೋಜನೆ ಮಾಡಲಾಗಿತ್ತು. ಡಿಜೆ ಡಾನ್ಸ್ ಹಾಕಿ ಭರ್ಜರಿ ಡಾನ್ಸ್ ಮಾಡಿದ ಯುವಕರಿಗೆ ನೀರಿನ ಬೆಲೆ ಗೊತ್ತೇ ಇಲ್ಲವಾ ಎಂದು ಹಲವರು ಪ್ರಶ್ನೆ ಕೇಳಿದರು.
ಹೀಗೆ ಹೋಳಿ ಹಬ್ಬದಾಚರಣೆಗೆ ಯಾರು ಅನುಮತಿ ಪಡೆದು ಮಾಡಿದ್ದಾರೆ. ನೀರಿನ ಸಂಕಷ್ಟದ ವೇಳೆ ಹೋಳಿ ಆಚರಣೆ ನೆಪದಲ್ಲಿ ನೀರು ಪೋಲು ಮಾಡುವ ಅಗತ್ಯವೇನಿತ್ತು? ಎಂಬ ಪ್ರಶ್ನೆ ಸಾರ್ವಜನಿಕ ಕೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.












Click it and Unblock the Notifications