Bengaluru: ಕೆರೆಗಳ ಉಳಿವಿಗಾಗಿ ಕೈತುಂಬಾ ಸಂಬಳ ತರುವ ಕೆಲಸ ಬಿಟ್ಟ ಯುವಕ; ಈಗಾಗಲೇ 18 ಕೆರೆಗಳಿಗೆ ಮರುಜೀವ ನೀಡಿದ ಹರ್ಷ ತೇಜ್

ಬೆಂಗಳೂರು ಈ ಮಳೆಗಾಲದ ಸಮಯದಲ್ಲಿ ನಗರದ ರಸ್ತೆಗಳೆಲ್ಲಾ ಜಲಾವೃತಗೊಂಡು ಪ್ರವಾಹ ಉಂಟಾಗುತ್ತದೆ. ಆದರೆ ಅದೇ ಬೇಸಿಗೆ ಬರುತ್ತಿದ್ದಂತೆಯೇ ತೀವ್ರವಾದ ನೀರಿನ ಕೊರತೆ ಎದುರಾಗುತ್ತದೆ. ಕಾಂಕ್ರೀಟ್ ಕಾಡಿನ ನಡುವೆ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕೆರೆಗಳು ಮತ್ತು ಮಿತಿಮೀರಿದ ತ್ಯಾಜ್ಯದಿಂದಾಗಿ ನಗರದಲ್ಲಿರುವ ಜೀವಸೆಲೆಗಳೆಲ್ಲ ಬತ್ತಿಹೋಗುತ್ತಿರುವುದನ್ನ ಕಂಡು ಪರಿಸರವಾದಿ ಹರ್ಷ ತೇಜ್ ಸುಮ್ಮನೆ ಕೂರಲಿಲ್ಲ. ತಮ್ಮ ಕೈತುಂಬಾ ಸಂಬಳ ತರುವ ಕಾರ್ಪೊರೇಟ್ ಕೆಲಸಕ್ಕೆ ರಾಜೀನಾಮೆ ನೀಡಿ, ಪರಿಸರ ಸಂರಕ್ಷಣೆಗಾಗಿ ಕೈಯಲ್ಲಿ ಪಿಕಾಸಿ, ಗುದ್ದಲಿ ಹಿಡಿದು ಕೆರೆಗಳಿಗೆ ಮರುಜೀವ ನೀಡಲು ಮುಂದಾದರು.

ಸಾಮಾಜಿಕ ಜಾಲತಾಣಗಳಲ್ಲಿ '@muddyfingers' ಎಂದೇ ಪ್ರಖ್ಯಾತರಾಗಿರುವ ಹರ್ಷ ತೇಜ್ ಅವರು ಕೆರೆಗಳ ಉಳಿವಿಗಾಗಿ 'ಬ್ಲೂಡಾಟ್ ಫೌಂಡೇಶನ್' ಎಂಬ ಸಂಸ್ಥೆಯನ್ನ ಹುಟ್ಟುಹಾಕಿದರು. ಈ ಸಂಸ್ಥೆಯ ಮೂಲಕ ಕೇವಲ ಬೆಂಗಳೂರು ಮಾತ್ರವಲ್ಲದೆ, ಕರ್ನಾಟಕದಾದ್ಯಂತ ಒಟ್ಟು 18 ಕೆರೆಗಳನ್ನ ಯಶಸ್ವಿಯಾಗಿ ಪುನರುಜ್ಜೀವನಗೊಳಿಸಿದ್ದಾರೆ.

Bengaluru Water Crisis Harsha Tej Quits Job To Restore 18 Lakes amp amp Plant 1 5 Lakh Native Trees

ಇದಲ್ಲದೆ, ಪರಿಸರ ಸಮತೋಲನ ಕಾಯ್ದುಕೊಳ್ಳಲು 1.5 ಲಕ್ಷಕ್ಕೂ ಹೆಚ್ಚು ಸ್ಥಳೀಯ ಮರಗಳ ಸಸಿಗಳನ್ನ ನೆಟ್ಟು ಪೋಷಿಸಿದ್ದಾರೆ. ಅವರ ಈ ಕಾರ್ಯ ಕೇವಲ ಕೆರೆಗಳ ಸೌಂದರ್ಯೀಕರಣಕ್ಕೆ ಮಾತ್ರ ಸೀಮಿತವಾಗಿಲ್ಲ; ಬದಲಾಗಿ ಕೆರೆಗಳಲ್ಲಿ ಆಕ್ರಮಿಸಿಕೊಂಡಿರುವ ಕಳೆಗಳನ್ನ ತೆಗೆದು, ಜಲಚರಗಳು ಮತ್ತು ಪಕ್ಷಿಗಳಿಗೆ ನೈಸರ್ಗಿಕ ಆವಾಸಸ್ಥಾನವನ್ನ ಮರುನಿರ್ಮಾಣ ಮಾಡುವಲ್ಲಿ ಅವರು ಶ್ರಮಿಸುತ್ತಿದ್ದಾರೆ.

ಬೆಂಗಳೂರಿನ ನೀರು ಸಮಸ್ಯೆ ಮತ್ತು ಪ್ರವಾಹ ನಿಯಂತ್ರಣ

ಬೆಂಗಳೂರಿನಲ್ಲಿರುವ ನೀರಿನ ಸಮಸ್ಯೆ ನಿವಾರಣೆಗೆ ಕೆರೆಗಳ ಪುನರುಜ್ಜೀವನ ಅತ್ಯಂತ ಅವಶ್ಯಕವಾಗಿದೆ. ಆರೋಗ್ಯಕರ ಕೆರೆಗಳು ವನ್ಯಜೀವಿಗಳಿಗೆ ಆಶ್ರಯ ನೀಡುವುದು ಮಾತ್ರವಲ್ಲದೆ, ಅಂತರ್ಜಲ ಮಟ್ಟವನ್ನ ಸಹ ಗಣನೀಯವಾಗಿ ಹೆಚ್ಚಿಸುತ್ತವೆ.

ಮಳೆನೀರು ಸರಾಗವಾಗಿ ಹರಿದು ಕೆರೆ ಸೇರುವುದರಿಂದ ಪ್ರವಾಹದ ತೀವ್ರತೆ ಕಡಿಮೆಯಾಗುತ್ತದೆ. ಕೆರೆಗಳಲ್ಲಿ ನೀರು ಶೇಖರಣೆಯಾಗುವುದರಿಂದ ಅಂತರ್ಜಲ ಮರುಪೂರಣಗೊಂಡು ಬೋರ್‌ವೆಲ್‌ಗಳಲ್ಲಿ ನೀರು ಹೆಚ್ಚಾಗುತ್ತದೆ. ಹೀಗಾಗಿ, ಪ್ರವಾಹ ನಿಯಂತ್ರಣ ಮತ್ತು ನೀರಿನ ಅಭಾವ ಎರಡಕ್ಕೂ ಕೆರೆಗಳ ಸಂರಕ್ಷಣೆ ಒಂದೇ ಪರಿಹಾರ.

ಯಲಹಂಕದ ತಿಮ್ಮಕ್ಕ ಕೆರೆ ಮತ್ತು ಪರಿಸರ ಸಂರಕ್ಷಣೆ

ಹರ್ಷ ತೇಜ್ ಅವರ ಮುಂದಾಳತ್ವದಲ್ಲಿ, ಬ್ಲೂಡಾಟ್ ಫೌಂಡೇಶನ್ ಸಂಸ್ಥೆಯು ಸಿಎಸ್‌ಆರ್ (CSR) ಅನುದಾನದ ನೆರವಿನೊಂದಿಗೆ ಯಲಹಂಕದ ಸಿಆರ್‌ಪಿಎಫ್ ಕ್ಯಾಂಪಸ್‌ನಲ್ಲಿ ಹೊಸದಾಗಿ 'ತಿಮ್ಮಕ್ಕ ಕೆರೆ'ಯನ್ನು ನಿರ್ಮಿಸಿದೆ.

ಸಂಪೂರ್ಣವಾಗಿ ಪಾಳುಬಿದ್ದಿದ್ದ ಪ್ರದೇಶವನ್ನು ಸುಂದರವಾದ ಕೆರೆಯಾಗಿ ಪರಿವರ್ತಿಸಿರುವ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಮಳೆಯಾದಾಗ ನೀರು ವ್ಯರ್ಥವಾಗಿ ಹರಿದು ಹೋಗುವ ಬದಲು ಭೂಮಿಯೊಳಗೆ ಇಂಗಿದರೆ, ಕೆಲವೇ ವರ್ಷಗಳಲ್ಲಿ ಬೆಂಗಳೂರು ಜಲ-ಸುರಕ್ಷಿತ ನಗರವಾಗಲಿದೆ ಎಂಬುದು ಅವರ ದೃಢವಾದ ನಂಬಿಕೆ.

ಕೆರೆಗಳ ಜೀರ್ಣೋದ್ಧಾರದಿಂದ ಜಲ-ಸುರಕ್ಷಿತ ನಗರ ನಿರ್ಮಾಣ

ಮಳೆನೀರು ಕೊಯ್ಲು ಮತ್ತು ಇಂಗುಗುಂಡಿಗಳ ನಿರ್ಮಾಣದ ಮೂಲಕ ನಗರವನ್ನು 'ವಾಟರ್-ಪಾಸಿಟಿವ್' ಮಾಡಬಹುದು ಎಂದು ಹರ್ಷ ತೇಜ್ ನಂಬಿದ್ದಾರೆ. ಪುನರುಜ್ಜೀವನಗೊಂಡ ಪ್ರತಿಯೊಂದು ಕೆರೆಯೂ ಬೆಂಗಳೂರನ್ನ ಮತ್ತೊಮ್ಮೆ ಹಳೆಯ ಸುಂದರ ನಗರವನ್ನಾಗಿ ಮಾಡುವ ಹರ್ಷ ಅವರ ಕನಸಿಗೆ ಹತ್ತಿರವಾಗಿಸುತ್ತಿದೆ.

ನಿಸರ್ಗ ಮತ್ತು ನಗರ ಜೀವನ ಒಟ್ಟೊಟ್ಟಿಗೆ ಸಾಗಬೇಕು ಎಂಬುದು ಅವರ ಆಶಯ. ಒಬ್ಬ ವ್ಯಕ್ತಿಯ ದೃಢಸಂಕಲ್ಪ ಮತ್ತು ಇಚ್ಛಾಶಕ್ತಿಯಿಂದ ಎಂತಹ ದೊಡ್ಡ ಪರಿಸರ ಬದಲಾವಣೆ ತರಬಹುದು ಎಂಬುದಕ್ಕೆ ಹರ್ಷ ತೇಜ್ ಅವರ ಈ ಪಯಣವೇ ಸಾಕ್ಷಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+