VV Puram Food Street: ಆಧುನಿಕ ಸ್ಪರ್ಶದೊಂದಿಗೆ 'ವಿವಿ ಪುರಂ ತಿಂಡಿ ಬೀದಿ' ಆಗಸ್ಟ್‌ನಲ್ಲಿ ಓಪನ್
ಬೆಂಗಳೂರು, ಜುಲೈ 11: ಸಿಲಿಕಾನ್ ಸಿಟಿ ಬೆಂಗಳೂರಿನ ಜನರ ನೆಚ್ಚಿನ ಸ್ಥಳದಲ್ಲಿ ಒಂದಾದ ವಿ.ವಿ ಪುರಂ ಫುಡ್ ಸ್ಟ್ರೀಟ್ (ತಿಂಡಿ ಬೀದಿ) ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ವಿನೂತನ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇನ್ನೊಂದು ತಿಂಗಳಲ್ಲಿ ಹೊಸ ರೂಪದಲ್ಲಿ, ಸುವ್ಯವಸ್ಥೆಯುತವಾಗಿ ತಲೆ ಎತ್ತಲು ಸಜ್ಜಾಗುತ್ತಿದೆ.
ಸುಮಾರು ಆರೇಳು ತಿಂಗಳ ಹಿಂದೆ ಹಳೆಯ ಪ್ರದೇಶವಾಗಿದ್ದ ವಿವಿಪುರಂ ಫುಡ್ ಸ್ಟ್ರೀಟ್‌ಗೆ ಆಧನಿಕ ಟಚ್ ಕೊಟ್ಟು, ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಬಿಬಿಎಂಪಿ ನಿರ್ಧರಿಸಿತ್ತು. ಆರು ತಿಂಗಳಲ್ಲಿ ಮುಗಿಯಬೇಕಿದ್ದ ಅಭಿವೃದ್ಧಿ ಕೆಲಸಗಳು ತುಸು ತಡವಾಗಿದ್ದು, ಕೆಲವೇ ಕೆಲವು ಕೆಲಸಗಳು ಬಾಕಿ ಇದೆ. ಅದವೆಲ್ಲವು ಮುಂದಿನ ತಿಂಗಳ ಆಗಸ್ಟ್ ನಲ್ಲಿ ಪೂರ್ಣಗೊಳ್ಳಲಿವೆ ಎಂದು ಬಿಬಿಎಂಪಿ ದಕ್ಷಿಣ ವಲಯ ಆಯುಕ್ತ ಜಯರಾಮ್ ರಾಯಪುರ ತಿಳಿಸಿದರು.

ವಿವಿ ಪುರಂ ತಿಂಡಿ ಬೀದಿಯ ಅಭಿವೃದ್ಧಿ ಕಾಮಗಾರಿಯನ್ನು ಅವರು ಮಂಗಳವಾರ ಪರಿಶೀಲನೆ ಮಾಡಿ ಮಾತನಾಡಿದರು, ವಿವಿ ಪುರಂನ ತಿಂಡಿ ಬೀದಿಯಲ್ಲಿ ಸಮರ್ಪಕ ಮೂಲಭೂತ ಸೌಕರ್ಯಗಳನ್ನು ಒಗದಿಸುವ ನಿಟ್ಟಿನಲ್ಲಿ ಹಾಗೂ ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸಜ್ಜನ್ ರಾವ್ ವೃತ್ತ ಮತ್ತು ಮಿನರ್ವ ವೃತ್ತದ ನಡುವೆ ಇರುವ ಸುಮಾರು 200 ಮೀಟರ್ ಉದ್ದದ ರಸ್ತೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದರು.
ಸ್ಥಳಿಯ ಶಾಸಕರು ಹೇಳೋದೇನು?
ವಿವಿ ಪುರಂ ತಿಂಡಿ ಬೀದಿಯಲ್ಲಿ ಎಲ್ಲಾ ವ್ಯಾಪಾರಿಗಳ ಸಹಯೋಗದೊಂದಿಗೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸ್ಥಳದಲ್ಲಿದ್ದ ಸಮಸ್ಯೆಗಳನ್ನೆಲ್ಲಾ ಬಗೆಹರಿಸಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ. ಇನ್ನೊಂದು ತಿಂಗಳೊಳಗಾಗಿ ಕಾಮಗಾರಿಯನ್ನು ಮುಗಿಸಿ ನವೀಕರಣಗೊಂಡ ತಿಂಡಿ ಬೀದಿಯನ್ನು ಉದ್ಘಾಟನೆಗೊಳಿಸಲಾಗುವುದು ಎಂದು ಸ್ಥಳೀಯ ಶಾಸಕರಾದ ಉದಯ್ ಬಿ. ಗರುಡಾ ಚಾರ್ ತಿಳಿಸಿದರು.
ಪ್ರಸ್ತುತ ಕಾಮಗಾರಿಯ ಸ್ಥಿತಿಗತಿ
ಫುಡ್ ಸ್ಟ್ರೀಟ್‌ನಲ್ಲಿ ಕಳೆದ ಆರು ಏಳು ತಿಂಗಳಿಂದ ಒಳಚರಂಡಿ ಸಂಪರ್ಕ, ನೀರು ಸರಬರಾಜು ಸಂಪರ್ಕ, ಮಳೆ ನೀರುಗಾಲುವೆ ಸಂಪರ್ಕ, ಕೇಬಲ್‌ಗಳ ಲೈನ್ ಡಕ್ಟ್ ಹಾಗೂ ಕೇಬಲ್ ಚೇಂಬರ್‌ಗೆ ಸಂಬಂಧಿಸಿದ ಕಾಮಗಾರಿಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ.

ಯಾವೆಲ್ಲ ಕೆಲಸಗಳು ಬಾಕಿ ಉಳಿದಿವೆ
* ಕ್ಯಾರೇಜ್ ವೇಯಲ್ಲಿ ವರ್ಣರಂಜಿತ ಬಣ್ಣದ ಕಾಂಕ್ರೀಟ್ ರಸ್ತೆ ನಿರ್ಮಾಣ.
* ಕರ್ಬ್ ಸ್ಟೋನ್ ಗಳ ಅಳವಡಿಕೆ.
* ಪಾದಚಾರಿ ಮಾರ್ಗ ನಿರ್ಮಾಣ.
* ಎಚ್‌ಡಿಡಿ ಕೇಬಲ್‌ಗಳೊಂದಿಗೆ ಬೀದಿ ದೀಪದ ಕಂಬಗಳ ಅಳವಡಿಕೆ.
* ಎಲ್ಲಾ ಅಂಗಡಿಗಳಿಗೆ ಕೆನೋಪಿಗಳ ಅಳವಡಿಕೆ.
* ಪ್ರವೇಶ ಪ್ಲಾಜಾ.
* ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆಯ ಸುತ್ತಮುತ್ತ ಸುಂದರೀಕರಣಗೊಳಿಸುವುದು ಬಾಕಿ ಇದೆ.
ಈ ವೇಳೆ ವಲಯ ಮುಖ್ಯ ಅಭಿಯಂತರರಾದ ರಾಜೇಶ್, ಕಾರ್ಯಪಾಲಕ ಅಭಿಯಂತರರಾದ ಮಹಂತೇಶ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಬಗೆ ಬಗೆಯ ತಿಂಡಿ ತಿನಿಸುಗಳಿಗೆ ವಿವಿ ಪುರಂ ಫುಡ್ ಸ್ಟ್ರೀಟ್ ಹೆಚ್ಚು ಖ್ಯಾತಿ ಪಡೆದಿದೆ. ಇಲ್ಲಿನ ಆಹಾರಕ್ಕೆ ಮನಸೋಲದವರೇ ಇಲ್ಲ. ಅಷ್ಟರ ಮಟ್ಟಿಗೆ ಜನರನ್ನು ಈ ತಿಂಡಿ ಬೀದಿ ಆಕರ್ಷಿಸುತ್ತದೆ. ಹೀಗಾಗಿಯೇ ಸಾವಿರಾರು ಮಂದಿ ನಿತ್ಯ ಸಂಜೆ 4 ಗಂಟೆ ನಂತರ ಆಗಮಿಸುತ್ತಾರೆ. ಆದರೆ ಇಲ್ಲಿ ಮೂಲಭೂತಿ ಸೌಕರ್ಯದ ಕೊರತೆ ಜೊತೆಗೆ ಸ್ಥಳ ಇಕ್ಕಟ್ಟಾಗಿತ್ತು. ಕುಡಿಯುವ ನೀರಿನ ವ್ಯವಸ್ಥೆ, ಕೂರಲು ಆಸನ ಇನ್ನಿತರ ಸಮಸ್ಯೆಗಳಿದ್ದವು.
ಈ ಸಂಬಂಧ ಬಿಬಿಎಂಪಿ ಫುಡ್ ಸ್ಟ್ರೀಟ್‌ಗೆ ಆಧುನಿಕತೆಯ ಸ್ಪರ್ಶ ನೀಡುವ ಜೊತೆಯಲ್ಲೇ ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಹಲವು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ನಿರ್ಧರಿಸಿತು. ಆಹಾರ ಪದಾರ್ಥಗಳ ಸೇವನೆ ಜೊತೆಯಲ್ಲೇ ಫುಡ್ ಸ್ಟ್ರೀಟ್‌ಗೆ ಬರುವ ಜನರಿಗೆ ಮನರಂಜನೆ ನೀಡೋದಕ್ಕೂ ಪ್ರತ್ಯೇಕ ವೇದಿಕೆ ಕಲ್ಪಿಸಲು ನಿರ್ಧರಿಸಿದೆ. ಬೀದಿ ನಾಟಕ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ವಿವಿ ಪುರಂ ಫುಡ್ ಸ್ಟ್ರೀಟ್‌ನ ಬದಿಯಲ್ಲಿ ವೇದಿಕೆ ನಿರ್ಮಿಸಲಾಗುತ್ತಿದೆ.












Click it and Unblock the Notifications