ಬೆಂಗಳೂರು ವಿಷನ್ ಗ್ರೂಪ್ ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ
ಬೆಂಗಳೂರು, ಜೂನ್ 11: ಬೆಂಗಳೂರು ವಿಷನ್ ಗ್ರೂಪ್ ರದ್ದುಗೊಳಿಸಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
ಬೆಂಗಳೂರು ಮಹಾನಗರ ಯೋಜನೆ ಸಮಿತಿ ರಚನೆ ಹಿನ್ನೆಲೆ ಬೆಂಗಳೂರು ವಿಷನ್ ಗ್ರೂಪ್‌ನ್ನು ರದ್ದುಗೊಳಿಸುವಂತೆ ಆದೇಶ ನೀಡಿದೆ. ಈ ಮೊದಲು ವಿಷನ್ ಗ್ರೂಪ್‌ನ ಅಗತ್ಯವೇನಿದೆ ಎಂದು ಹೈಕೋರ್ಟ್ ಪ್ರಶ್ನಿಸಿದ್ದು
ಈ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ. ಈ ಕುರಿತು ಹೈಕೋರ್ಟ್‌ಗೆ ಎಎಜಿ ಎ.ಎಸ್. ಪೊನ್ನಣ್ಣ ಮಾಹಿತಿ ನೀಡಿದ್ದಾರೆ.
ಇದರಿಂದಾಗಿ ನಮ್ಮ ಬೆಂಗಳೂರು ಬೆಂಗಳೂರು ಫೌಂಡೇಶನ್ ಸಲ್ಲಿಸಿದ್ದ ಪಿಐಎಲ್ ಇತ್ಯರ್ಥವಾದಂತಾಗಿದೆ. ಸಂಸದ ರಾಜೀವ್ ಚಂದ್ರಶೇಖರ್, ನಮ್ಮ ಬೆಂಗಳೂರು ಪ್ರತಿಷ್ಠಾನವು ಬಿಬಿಪಿಎಜಿ ರಚನೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ನಗರದ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲೆಂದೇ ಬೆಂಗಳೂರು ಮಹಾನಗರ ಯೋಜನಾ ಸಮಿತಿ ಇರುವಾಗ ಅಂಥದ್ದೇ ಮತ್ತೊಂದು ಸಂಸ್ಥೆ ರಚಿಸುವ ಅಗತ್ಯವೇನಿದೆ ಎಂದು ಕಳೆದ ವಿಚಾರಣೆ ವೇಳೆ ಹೈಕೋರ್ಟ್ ಪ್ರಶ್ನಿಸಿತ್ತು.
ಬೆಂಗಳೂರು ನೀಲನಕ್ಷೆ ಯೋಜನಾ ತಂಡ ರಚಿಸಿ 2016ರಲ್ಲಿ ಹೊರಡಿಸಿದ್ದ ಆದೇಶವನ್ನು ಸರ್ಕಾರ ಹಿಂಪಡೆದಿದೆ. ಈ ಸಂಸ್ಥೆ ರದ್ದುಗೊಳಿಸುವಂತೆ ನಗರದಲ್ಲಿ ಸಾಕಷ್ಟು ಹೋರಾಟ ಪ್ರತಿಭಟನೆಗಳು ನಡೆದಿದ್ದವು. ಬಿಬಿಎಂಪಿ ಆಡಳಿತ ಮಂಡಳಿ ಇನ್ನು ಜೀವಂತವಾಗಿದೆ. ಮೇಯರ್ ಹಾಗೂ ಸದಸ್ಯರಿದ್ದಾರೆ. ಇಂಥ ಸ್ಥಿತಿಯಲ್ಲಿ ಬೇರೆ ತಂಡ ರಚಿಸಿ ಮೂಲಸೌಕರ್ಯಕ್ಕೆ ಹುಡುಕಾಟ ನಡೆಸುವುದು ಸರಿಯಲ್ಲ. ಆ ತಂಡವನ್ನು ರದ್ದುಗೊಳಿಸಬೇಕು ಎಂದು ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು.












Click it and Unblock the Notifications