National Highway: ಬೆಂಗಳೂರು-ವಿಜಯವಾಡ ಪ್ರಯಾಣದ ಸಮಯ, ದೂರ ಇನ್ಮುಂದೆ ಭಾರಿ ಇಳಿಕೆ
Bengaluru-Vijayawada Highway: ಕರ್ನಾಟಕ ಮತ್ತು ಆಂಧ್ರಪ್ರದೇಶ ನಡುವಿನ ರಸ್ತೆ ಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮಹತ್ವದ ಪ್ರಗತಿ ಸಾಧಿಸಿದೆ. ಬೆಂಗಳೂರು-ಕಡಪ-ವಿಜಯವಾಡ ಆರ್ಥಿಕ ಕಾರಿಡಾರ್ (NH-544G) ಯೋಜನೆಯ ಭಾಗವಾಗಿ ಆಂಧ್ರಪ್ರದೇಶದಲ್ಲಿ ನಿರ್ಮಾಣ ಆಗುತ್ತಿರುವ 3.68 ಕಿಲೋ ಮೀಟರ್ ಉದ್ದದ ಬೃಹತ್ ಸುರಂಗ ಮಾರ್ಗ ಕೊರೆಯುವ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಈ ಯೋಜನೆಯಿಂದಾಗಿ ಬೆಂಗಳೂರು ಮತ್ತು ವಿಜಯವಾಡ ನಡುವಿನ ಪ್ರಯಾಣದ ಸಮಯ ಬರೋಬ್ಬರಿ 3 ರಿಂದ 4 ಗಂಟೆಗಳಷ್ಟು ಕಡಿಮೆ ಆಗಲಿದೆ. ಈ ಸುರಂಗವು ವೈಎಸ್‌ಆರ್ ಕಡಪ ಜಿಲ್ಲೆಯ ಪೋರುಮಾಮಿಲ್ಲಾ ಮತ್ತು ಎಸ್‌ಪಿಎಸ್‌ಆರ್ ನೆಲ್ಲೂರು ಜಿಲ್ಲೆಯ ಸೀತಾರಾಮಪುರಂ ನಡುವೆ ನಿರ್ಮಾಣವಾಗುತ್ತಿದೆ.

ಏನೆಲ್ಲಾ ಪ್ರಯೋಜನಗಳಿವೆ?
ಸುತ್ತಿ ಬಳಸಿ ಹೋಗುವ ಪ್ರಸ್ತುತ ಸಂಚಾರ ಮಾರ್ಗವನ್ನು ತಪ್ಪಿಸಲು ಈ 3.68 ಕಿಲೋ ಮೀಟರ್ ಉದ್ದದ ಸುರಂಗವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ದಟ್ಟ ಅರಣ್ಯ ಪ್ರದೇಶ ಹೊಂದಿರುವ ಬೆಟ್ಟದ ಸುತ್ತಲೂ ಹಾದುಹೋಗುವ ಬದಲಿಗೆ ಹೆದ್ದಾರಿಯನ್ನು ಬೆಟ್ಟದ ಒಳಗಿನಿಂದಲೇ ನಿರ್ಮಿಸುವುದರಿಂದ ದೂರ ಗಮನಾರ್ಹವಾಗಿ ಇಳಿಕೆಯಾಗಲಿದೆ. ಸುಮಾರು 17 ಕಿಲೋ ಮೀಟರ್‌ವರೆಗೂ ಕಡಿಮೆಯಾಗುವ ನಿರೀಕ್ಷೆಯಿದೆ.
ಯೋಜನೆಯ ವೆಚ್ಚದ ವಿವರ
ಈ ಸುರಂಗವನ್ನು NH-544G ಯೋಜನೆಯ ಪ್ಯಾಕೇಜ್-9ರ ಭಾಗವಾಗಿ 1,092.18 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರು-ಕಡಪ-ವಿಜಯವಾಡ ಆರ್ಥಿಕ ಕಾರಿಡಾರ್‌ನಲ್ಲಿ ತಾಂತ್ರಿಕವಾಗಿ ಅತ್ಯಂತ ಸವಾಲಿನ ವಿಭಾಗಗಳಲ್ಲಿ ಒಂದಾದ ಪೋರುಮಾಮಿಲ್ಲಾ ಮತ್ತು ಸೀತಾರಾಮಪುರಂ ಗ್ರಾಮಗಳ ನಡುವಿನ ಹೆದ್ದಾರಿ ಹಾಗೂ ಸುರಂಗ ಮಾರ್ಗದ ಕಾಮಗಾರಿಗಳು ಈ ವೆಚ್ಚದಲ್ಲಿ ಸೇರಿವೆ.
ಕಾಮಗಾರಿ ಯಾವಾಗ ಪೂರ್ಣ?
ಎನ್‌ಎಚ್‌ಎಐ ಈಗಾಗಲೇ ಸುರಂಗ ಕೊರೆಯುವ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಅಂದರೆ ಬೆಟ್ಟವನ್ನು ಯಶಸ್ವಿಯಾಗಿ ಕೊರೆದು ಭೂಗತ ಮಾರ್ಗವನ್ನು ಪರಸ್ಪರ ಸಂಪರ್ಕಿಸಲಾಗಿದೆ. ಈ ಇಡೀ ಪ್ಯಾಕೇಜ್ ಕಾಮಗಾರಿಯನ್ನು 2027ರ ಮಧ್ಯಭಾಗದ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
3.68 ಕಿ.ಮೀ. ಉದ್ದದ ಈ ಸುರಂಗವು NH-544Gಯಲ್ಲಿ ನಿರ್ಮಿಸಲಾಗುತ್ತಿರುವ ಬೃಹತ್ ಬೆಂಗಳೂರು-ಕಡಪ-ವಿಜಯವಾಡ ಆರ್ಥಿಕ ಕಾರಿಡಾರ್‌ನ ಭಾಗವಾಗಿದೆ. ಈ ಆರು ಪಥಗಳ ನಿಯಂತ್ರಿತ ಪ್ರವೇಶದ ಹೆದ್ದಾರಿಯು ಸುಮಾರು 343 ಕಿ.ಲೋ. ಮೀಟರ್ ಉದ್ದವಿದೆ. ಬೆಂಗಳೂರಿನಿಂದ ಆರಂಭವಾಗಿ ಕಡಪ ಮೂಲಕ ಹಾದು ವಿಜಯವಾಡವನ್ನು ನೇರವಾಗಿ ಸಂಪರ್ಕ ಕಲ್ಪಿಸಲಿದೆ.
ಯೋಜನೆಯ ಉದ್ದೇಶ ಏನು?
ಸುರಂಗವು ಆಂಧ್ರಪ್ರದೇಶದ ವೈಎಸ್‌ಆರ್ ಕಡಪ ಜಿಲ್ಲೆಯ ಪೋರುಮಾಮಿಲ್ಲಾ ಮತ್ತು ಎಸ್‌ಪಿಎಸ್‌ಆರ್ ನೆಲ್ಲೂರು ಜಿಲ್ಲೆಯ ಸೀತಾರಾಮಪುರಂ ನಡುವೆ ಇದೆ. ಬೆಟ್ಟದ ಸುತ್ತಲೂ ಸುತ್ತಿ ಬಳಸಿ ಹೋಗುವ 17 ಕಿಲೋ ಮೀಟರ್ ರಸ್ತೆ ದೂರ ಮತ್ತು ಪ್ರಯಾಣದ ಸಮಯವನ್ನು ತಗ್ಗಿಸಲು ಈ ಮಾರ್ಗವನ್ನು ನಿರ್ಮಿಸಲಾಗುತ್ತಿದೆ.
ಈ ಹೊಸ ಕಾರಿಡಾರ್ ಪೂರ್ಣಗೊಂಡರೆ ಎರಡು ನಗರಗಳ ನಡುವಿನ ಒಟ್ಟು ರಸ್ತೆ ದೂರವು ಸುಮಾರು 110 ಕಿಲೋ ಮೀಟರ್‌ಗಳಷ್ಟು ಕಡಿಮೆಯಾಗಲಿದೆ. ಪ್ರಯಾಣದ ಸಮಯ 3 ರಿಂದ 4 ಗಂಟೆಗಳಷ್ಟು ಇಳಿಕೆಯಾಗಲಿದೆ. NH-16ರ ಮೂಲಕ ತಿರುಪತಿ ಮತ್ತು ನೆಲ್ಲೂರು ಮಾರ್ಗವಾಗಿ ಇರುವ ಪ್ರಸ್ತುತ 630 ಕಿಲೋ ಮೀಟರ್ ಉದ್ದದ ರಸ್ತೆಗೆ ಸಂಪರ್ಕ ಕಲ್ಪಿಸುವಂತೆ ಇದನ್ನು ನಿರ್ಮಿಸಲಾಗುತ್ತಿದೆ.
ಪ್ರಯೋಜನಗ ವಿವರಗಳ ಪ್ರಮುಖ ಅಂಶಗಳು
* ಈ ಕಾರಿಡಾರ್ ಕೇವಲ ಪ್ರಯಾಣಿಕರಿಗಷ್ಟೇ ಅಲ್ಲದೆ, ಕೈಗಾರಿಕಾ ಅಭಿವೃದ್ಧಿಗೂ ಹೊಸ ಚೈತನ್ಯ ನೀಡಲಿದೆ.
* ಅನಂತಪುರದಲ್ಲಿರುವ ಕಿಯಾ ಇಂಡಿಯಾ ಉತ್ಪಾದನಾ ಘಟಕವನ್ನು ಒಳಗೊಂಡ ಹಿಂದೂಪುರ-ಪೆನುಕೊಂಡ ಆಟೋಮೊಬೈಲ್ ವಲಯಕ್ಕೆ ಉತ್ತಮ ರಸ್ತೆ ಸಂಪರ್ಕ ಕಲ್ಪಿಸಲಿದೆ.
* ವೈಜಾಗ್-ಚೆನ್ನೈ ಆರ್ಥಿಕ ಕಾರಿಡಾರ್‌ನಲ್ಲಿರುವ 2,596 ಎಕರೆ ವಿಸ್ತೀರ್ಣದ ಕೊಪ್ಪರ್ತಿ ಕೈಗಾರಿಕಾ ಪ್ರದೇಶಕ್ಕೆ ಈ ಹೆದ್ದಾರಿ ನೇರ ಸಂಪರ್ಕ ನೀಡಲಿದೆ. ಇದರಿಂದ ಆಟೋ ಮೊಬೈಲ್ ಬಿಡಿಭಾಗಗಳು, ಜವಳಿ, ರಾಸಾಯನಿಕ ಮತ್ತು ಇಂಜಿನಿಯರಿಂಗ್ ಉತ್ಪನ್ನಗಳ ಸಾಗಣೆ ಸುಲಭವಾಗಲಿದೆ. ಒಟ್ಟಿನಲ್ಲಿ ಈ ಸುರಂಗ ಮಾರ್ಗ ಮತ್ತು ಆರ್ಥಿಕ ಕಾರಿಡಾರ್ ಯೋಜನೆಗಳು ಪೂರ್ಣಗೊಂಡ ನಂತರ ಕರ್ನಾಟಕ ಮತ್ತು ಆಂಧ್ರಪ್ರದೇಶ ನಡುವಿನ ಸಂಪರ್ಕವೂ ಸುಲಭವಾದಂತಾಗಲಿದೆ.


Click it and Unblock the Notifications
