Tunnel Road Row: ಟನಲ್ ರಸ್ತೆ ಕೇಂದ್ರ ಸರ್ಕಾರ ಮಾಡಿದ್ರೆ ಅಭಿವೃದ್ಧಿ, ನಾವು ಮಾಡಿದ್ರೆ ವಿವಾದ: ಡಿಸಿಎಂ
ರಾಜ್ಯ ಕಾಂಗ್ರೆಸ್ ಸರ್ಕಾರ ಉದ್ದೇಶಿಸಿರುವ ಬೆಂಗಳೂರಿನ ಟನಲ್ ರಸ್ತೆ ಯೋಜನೆಗೆ ವಿರೋಧದ ಕೂಗು ಜೋರಾಗಿ ಎದ್ದಿದೆ. ಬಿಜೆಪಿ ನಾಯಕರು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ತಮ್ಮ ಲಾಭಕ್ಕಾಗಿ ಈ ಯೋಜನೆಗೆ ಮುತುವರ್ಜಿ ತೋರುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಜೆಪಿಯವರು ಸುರಂಗ ರಸ್ತೆ ನಿರ್ಮಿಸಿದರೆ ಅಭಿವೃದ್ಧಿ ಅಂತಾರೆ, ನಾವು ನಿರ್ಮಿಸಲು ಹೋದರೆ ವಿವಾದ ಏಕೆ? ಎಂದಿದ್ದಾರೆ.
ಈ ಹಿಂದೆ ಟನಲ್ ರಸ್ತೆ ಬಗ್ಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾತನಾಡಿರುವ ವಿಡಿಯೋವನ್ನು ಡಿಕೆ.ಶಿವಕುಮಾರ್ ಹಂಚಿಕೊಂಡಿದ್ದಾರೆ. ಮೊದಲು ಬೆಂಗಳೂರು, ನಂತರ ರಾಜಕೀಯ. ಸುರಂಗ ರಸ್ತೆ ನನ್ನ ವೈಯಕ್ತಿಕ ಯೋಜನೆಯಲ್ಲ. ಇದು ಬೆಂಗಳೂರಿನ ಭವಿಷ್ಯಕ್ಕಾಗಿ ಉದ್ದೇಶಿಸಿರುವ ಯೋಜನೆ. ನಾವು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಸಭೆ ನಡೆಸಿದ್ದೇವೆ. ಅವರು ನಮ್ಮ ನಗರದ ಸಂಚಾರ ಸಮಸ್ಯೆಗಳಿಗೆ ಪರಿಹಾರವಾಗಿ ಸುರಂಗ ಯೋಜನೆಯನ್ನು ನಮಗೆ ಸಲಹೆ ನೀಡಿ ಬೆಂಬಲಿಸಿದ್ದಾರೆ ಎಂದಿದ್ದಾರೆ.

ನಮ್ಮ ಟನಲ್ ಯೋಜನೆಯ ವಿರುದ್ಧ ಯುದ್ಧದ ಹಾದಿಯಲ್ಲಿರುವ ರಾಜ್ಯ ಬಿಜೆಪಿ ನಾಯಕರು ಮೊದಲು ತಮ್ಮದೇ ಆದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮಾತನ್ನು ಕೇಳಬೇಕು. ಭಾರತದಾದ್ಯಂತ ಕೇಂದ್ರ ಸರ್ಕಾರವು ಸುರಂಗ ರಸ್ತೆಗಳನ್ನು ನಿರ್ಮಿಸಿದಾಗ, ಅದನ್ನು ಅಭಿವೃದ್ಧಿ ಎಂದು ಕರೆಯಲಾಗುತ್ತದೆ. ಆದರೆ ನಾವು ಬೆಂಗಳೂರಿಗೆ ಒಂದು ಸುರಂಗ ರಸ್ತೆ ಯೋಜಿಸಿದಾಗ, ಅದು ವಿವಾದಾತ್ಮಕವಾಗುತ್ತದೆ. ಬೆಂಗಳೂರಿಗೆ ಪ್ರಗತಿ ಬೇಕು, ರಾಜಕೀಯವಲ್ಲ ಎಂದು ಬಿಜೆಪಿ ಹಾಗೂ ಆರ್.ಅಶೋಕ್‌ಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಟನಲ್ ರಸ್ತೆ ವಿರೋಧಿಸಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಆರ್.ಅಶೋಕ್ ನೇತೃತ್ವದಲ್ಲಿ ಲಾಲ್‌ಬಾಗ್ ಉದ್ಯಾನವನದಲ್ಲಿ ಭಾನುವಾರ ಬೃಹತ್ ಪ್ರತಿಭಟನೆ ನಡೆಯಿತು. ನೂರಾರು ಸಾರ್ವಜನಿಕರು ಕೂಡ ಈ ಟನಲ್ ರಸ್ತೆ ಯೋಜನೆ ಬೇಡ ಎಂದು ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡರು.ಈ ಯೋಜನೆಯಿಂದ ಲಾಲ್‌ಬಾಗ್‌ಗೂ ಹಾನಿಯಾಗಲಿದೆ ಎಂದು ತೇಜಸ್ವಿ ಸೂರ್ಯ ವಿರೋಧ ವ್ಯಕ್ತಪಡಿಸಿದರು.
ಅಶೋಕ್ ನೇತೃತ್ವದಲ್ಲಿ ಸಮಿತಿ ರಚನೆ
ಟನಲ್ ರಸ್ತೆ ಯೋಜನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯಿಸಿದ್ದಾರೆ. ಈ ಯೋಜನೆ ಬಗ್ಗೆ ಬಿಜೆಪಿಯವರು ರಾಜಕೀಯ ಉದ್ದೇಶದಿಂದ ವಿರೋಧಿಸುತ್ತಿದ್ದಾರೆ. ಇದಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈಗಾಗಲೇ ಉತ್ತರ ನೀಡಿದ್ದಾರೆ. ಯೋಜನೆಯ ಬಗ್ಗೆ ವಿರೋಧ ಪಕ್ಷದವರ ಕಳವಳಗಳನ್ನು ಪರಿಶೀಲಿಸಿ, ಒಮ್ಮತಕ್ಕೆ ಬರಲು ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದಿದ್ದಾರೆ.
ಟನಲ್ ಯೋಜನೆಯನ್ನು ಕಾರು, ಬಸ್, ದ್ವಿಚಕ್ರ ವಾಹನ ಸವಾರರು ಹೀಗೆ ಎಲ್ಲ ವರ್ಗದ ಜನರಿಗೆ ಅನುಕೂಲವಾಗಲೆಂದು ಕೈಗೊಳ್ಳಲಾಗುತ್ತಿದೆ. ಯೋಜನೆಯ ಬಗ್ಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ ಬಿಜೆಪಿಯವರು ರಾಜಕೀಯ ಉದ್ದೇಶದಿಂದ ವಿರೋಧಿಸುತ್ತಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಹೋಗಲಾಡಿಸುವ ಈ ಯೋಜನೆಗೆ ವಿರೋಧ ಏಕೆ ವ್ಯಕ್ತವಾಗಬೇಕು? ಇದೇ ರೀತಿಯ ಟನಲ್ ಯೋಜನೆಗಳನ್ನು ಅನೇಕ ದೇಶದಲ್ಲಿಯೂ ಕೈಗೊಳ್ಳಲಾಗಿದೆ. ಅಲ್ಲಿನ ಜನರು ಇದನ್ನು ವಿರೋಧಿಸಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications