Tunnel Road: ಶಿರಾಡಿ ಘಾಟ್‌ನಲ್ಲಿ ಟನಲ್ ಕೊರೆದರೆ ಪ್ರಕೃತಿ ಉದ್ಧಾರವಾಗುತ್ತಾ? ಕಾಂಗ್ರೆಸ್ ತಿರುಗೇಟು
ಬೆಂಗಳೂರಿನಲ್ಲಿ ಕಾಂಗ್ರೆಸ್ ಸರ್ಕಾರ ನಿರ್ಮಿಸಲು ಹೊರಟಿರುವ ಟನಲ್ ರಸ್ತೆ ಯೋಜನೆಗೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಂದು ಕೂಡ ಬಿಜೆಪಿ ನಾಯಕರು ಇದರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ. ಬಿಜೆಪಿಯವರು ಶಿರಾಡಿ ಘಾಟ್‌ನಲ್ಲಿ ಟನಲ್ ಕೊರೆದರೆ ಪ್ರಕೃತಿ ಉದ್ಧಾರವಾಗುತ್ತದೆಯೇ? ಎಂದು ಕಾಂಗ್ರೆಸ್ ಕೇಳಿದೆ. ಶಿರಾಡಿ ಘಾಟ್ ಟನಲ್‌ಗೆ ಒಪ್ಪಿಗೆ, ಬೆಂಗಳೂರಿಗೆ ವಿರೋಧ. ಟನಲ್ ವಿಚಾರದಲ್ಲಿ ಬಿಜೆಪಿಯದ್ದು ಪರಿಸರ ಕಾಳಜಿಯೋ ಅಥವಾ ರಾಜಕೀಯವೋ? ಎಂದು ತಿರುಗೇಟು ನೀಡಿದೆ.
ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಲೋಕಕ್ಕೆ ತಿಳಿಯುವುದಿಲ್ಲ ಎಂದು ಭಾವಿಸುವಂತೆ, ಬಿಜೆಪಿಗರು ತಮ್ಮ ನಾಟಕ ಯಾರಿಗೂ ಗೊತ್ತಾಗುವುದಿಲ್ಲ ಎಂದು ಭಾವಿಸಿದ್ದಾರೆ. ಬೆಂಗಳೂರಿನಲ್ಲಿ ಉದ್ದೇಶಿತ ಟನಲ್ ರಸ್ತೆ ಯೋಜನೆಯಿಂದ ಪರಿಸರ ಸರ್ವನಾಶವಾಗಿಬಿಡುತ್ತದೆ ಎಂಬಂತೆ ಬಿಜೆಪಿ ನಾಯಕರು ಬೊಬ್ಬೆ ಹಾಕುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರದ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರು ಯುನೆಸ್ಕೋ ಮಾನ್ಯತೆ ಪಡೆದಿರುವ ಪಶ್ಚಿಮ ಘಟ್ಟಗಳಾದ ಶಿರಾಡಿ ಘಾಟ್‌ನಲ್ಲಿ ಟನಲ್ ಕೊರೆಯಲು ಅನುಮತಿ ನೀಡಿದ್ದಾರೆ. ಇದರ ಬಗ್ಗೆ ಬಿಜೆಪಿಯ ಬೃಹಸ್ಪತಿಗಳು ಯಾಕೆ ಉಸಿರು ಬಿಡುತ್ತಿಲ್ಲ? ಎಂದು ಟಾಂಗ್ ನೀಡಿದೆ.

ಬಿಜೆಪಿಯವರು ಶಿರಾಡಿ ಘಾಟ್‌ನಲ್ಲಿ ಟನಲ್ ಕೊರೆದರೆ ಪ್ರಕೃತಿ ಉದ್ಧಾರವಾಗುತ್ತದೆ. ಆದರೆ ಕಾಂಗ್ರೆಸ್ ಸರ್ಕಾರ ಬೆಂಗಳೂರಿನಲ್ಲಿ ಸುರಂಗ ಕೊರೆದರೆ ಅದು ಪ್ರಕೃತಿಗೆ ಧಕ್ಕೆಯಾಗುತ್ತದೆಯಂತೆ. ಇವರ ಇಬ್ಬಗೆ ನೀತಿ ನೋಡಿ ನಗಬೇಕೋ, ಅಳಬೇಕೋ ತೋಚುತ್ತಿಲ್ಲ ಎಂದು ವ್ಯಂಗ್ಯವಾಡಿದೆ. ಇತ್ತ ಬಿಜೆಪಿ ಸುರಂಗ ರಸ್ತೆ ನಿರ್ಮಿಸಿದರೆ ಸ್ಯಾಂಕಿ ಕೆರೆ, ಲಾಲ್‌ಬಾಗ್ ನಾಶವಾಗಲಿದೆ. ದುಡ್ಡು ಹೊಡೆಯಲು ಟನಲ್ ರಸ್ತೆ ನಿರ್ಮಿಸಲಾಗುತ್ತಿದೆ. ಅಭಿವೃದ್ಧಿ ಬೇಕು, ಆದರೆ ಜನರ ಜೀವನದ ಜೊತೆ ಚೆಲ್ಲಾಟವಾಡಬಾರದು. ಸುರಂಗ ಮಾರ್ಗ ಸಂಪೂರ್ಣ ಪರಿಸರ ವಿರೋಧಿ ಮತ್ತು ಜನವಿರೋಧಿ ಎಂದು ಖಂಡಿಸಿದೆ.
ಸ್ಯಾಂಕಿ ಕೆರೆ ಉಳಿಸಿ ಎಂದ ಬಿಜೆಪಿ
ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಸುಂದರ ಪ್ರಕೃತಿಯನ್ನು ನಾಶ ಮಾಡಿ, ಕೆರೆಗಳನ್ನು ಹಾಳು ಮಾಡಿ, ಅವೈಜ್ಞಾನಿಕ ಮೇಲ್ಸೇತುವೆಗಳನ್ನು ನಿರ್ಮಿಸಲು ಸ್ಯಾಂಕಿ ಕೆರೆಯ ನಾಶಕ್ಕೆ ಮುಂದಾಗಿದೆ ಎಂದು ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆರೆಯ ಸಂರಕ್ಷಣೆಗಾಗಿ ಸಹಿ ಸಂಗ್ರಹ ಅಭಿಯಾನ ಮತ್ತು ಸರ್ಕಾರದ ಅಧಿಕಾರಿಗಳೊಂದಿಗೆ ಸ್ಯಾಂಕಿ ಕೆರೆ ಪರಿಶೀಲನೆ ನಡೆಸಿದ್ದಾರೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ನೇತೃತ್ವದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯಿತು. ಸಿ.ಎನ್.ಅಶ್ವತ್ಥ್ ನಾರಾಯಣ್, ಮಾಜಿ ಸಚಿವ ಕೆ.ಗೋಪಾಲಯ್ಯ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಪರಿಸರ ಪ್ರೇಮಿಗಳು ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡರು.
ಬೆಂಗಳೂರು ನಗರದ ಅಮೂಲ್ಯ ಹಸಿರು ಪರಂಪರೆಯಾದ ಸ್ಯಾಂಕಿ ಕೆರೆಯನ್ನು ನಾಶ ಮಾಡುವ ಟನಲ್ ಯೋಜನೆಯನ್ನು ನಾವು ಒಪ್ಪುವುದಿಲ್ಲ. ನಗರದ ಪರಿಸರ, ನೀರು, ಮರಗಳು, ಜೀವವೈವಿಧ್ಯ ಇವುಗಳೆಲ್ಲ ಜನರ ಭವಿಷ್ಯ ಎಂದು ಸಿ.ಎನ್.ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ. ಈ ಅವೈಜ್ಞಾನಿಕ ಟನಲ್ ಯೋಜನೆಯ ಹೆಸರಿನಲ್ಲಿ ಸ್ಯಾಂಕಿ ಕೆರೆ ಬಲಿ ಕೊಡಿಸುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಹಿ ಸಂಗ್ರಹ ಅಭಿಯಾನ ಮಾಡಲಾಗಿದೆ. ಈ ಟನಲ್ ಯೋಜನೆಯಿಂದ ಸ್ಯಾಂಕಿ ಕೆರೆಯ ಬಳಿ ಆಗಮನ ಮತ್ತು ನಿರ್ಗಮನವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications