Viral: ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪಾದಚಾರಿಗಳೇ ಕಾರಣವೆಂದ ಸಂಸ್ಥಾಪಕ: ಕಿಡಿಕಾರಿದ ನೆಟ್ಟಿಗರು
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಪ್ರತಿದಿನ ಒಂದಿಲ್ಲೊಂದು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಐಟಿ ರಾಜಧಾನಿ ಎನಿಸಿಕೊಂಡಿರುವ ಈ ನಗರದಲ್ಲಿ ಬೆಳಗಿನ ಪೀಕ್ ಅವರ್‌ಗಳಲ್ಲಿ ವಾಹನ ದಟ್ಟಣೆ ನಿಯಂತ್ರಿಸುವುದು ಸಂಚಾರ ಪೊಲೀಸರಿಗೂ ದೊಡ್ಡ ಸವಾಲಾಗಿದೆ. ಇದೀಗ, ಸುಸಜ್ಜಿತವಾದ ಫುಟ್ ಓವರ್‌ಬ್ರಿಡ್ಜ್ (Foot Overbridge) ಇದ್ದರೂ ಸಹ ಅದನ್ನು ಬಳಸದೆ, ವಾಹನ ದಟ್ಟಣೆ ಇರುವ ರಸ್ತೆಯನ್ನು ನೇರವಾಗಿ ದಾಟುವ ಪಾದಚಾರಿಗಳ ಬಗ್ಗೆ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಸಂಸ್ಥಾಪಕರೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಮಲ್ಟಿಬ್ಯಾಗ್ ಎಐ (Multibagg AI) ಸಂಸ್ಥಾಪಕ ಮತ್ತು ಸಿಇಒ ಆಗಿರುವ ಆದಿತ್ಯ ಆನಂದ್ ಅವರು ತಮ್ಮ ಲಿಂಕ್ಡ್‌ಇನ್ ಖಾತೆಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ತಾವು ಪ್ರತಿದಿನ ಬೆಳಿಗ್ಗೆ 6:40ಕ್ಕೆ ಮನೆಯಿಂದ 5 ಕಿ.ಮೀ ದೂರದಲ್ಲಿರುವ ಬ್ಯಾಡ್ಮಿಂಟನ್ ಕೋರ್ಟ್‌ಗೆ ತೆರಳುವುದಾಗಿ ಹೇಳಿರುವ ಅವರು, "ನಿಯಮದ ಪ್ರಕಾರ ಈ 5 ಕಿ.ಮೀ ದೂರವನ್ನು ಕ್ರಮಿಸಲು ಕೇವಲ 10 ನಿಮಿಷ ಸಾಕು. ಆದರೆ ಹೆಚ್‌ಎಎಲ್ ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿನ ಟ್ರಾಫಿಕ್‌ನಿಂದಾಗಿ ನಾನು ಪ್ರತಿದಿನ ತಡವಾಗಿ ತಲುಪುತ್ತೇನೆ" ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬೆಳಿಗ್ಗೆ 6:50ರ ಸುಮಾರಿಗೆ ಹೆಚ್‌ಎಎಲ್ ಕಚೇರಿಗೆ ತೆರಳುವ ನೂರಾರು ಉದ್ಯೋಗಿಗಳು ಏಕಾಏಕಿ ರಸ್ತೆ ದಾಟುವುದರಿಂದಲೇ ಅಲ್ಲಿ ಟ್ರಾಫಿಕ್ ಜಾಮ್ ಮತ್ತು ಗೊಂದಲ ಉಂಟಾಗುತ್ತದೆ ಎಂದು ಆದಿತ್ಯ ಆರೋಪಿಸಿದ್ದಾರೆ. "ಇಂದಿರಾನಗರದಿಂದ ಹೋಗುವಾಗ ರಸ್ತೆಯ ಎಡಭಾಗದಲ್ಲಿ ಉದ್ಯೋಗಿಗಳ ವಸತಿಗೃಹಗಳಿದ್ದು, ಬಲಭಾಗದಲ್ಲಿ ಹೆಚ್‌ಎಎಲ್ ಕಚೇರಿ ಇದೆ ಎಂದು ನಾನು ಭಾವಿಸುತ್ತೇನೆ. ವಿಪರ್ಯಾಸವೆಂದರೆ, ಅಲ್ಲಿಯೇ ಒಂದು ಫುಟ್ ಓವರ್‌ಬ್ರಿಡ್ಜ್ ಇದೆ. ಆದರೆ, ವಿದ್ಯಾವಂತರು ಎನಿಸಿಕೊಂಡಿರುವ ಈ ಜನರು ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ರಸ್ತೆಯಲ್ಲೇ ನಡೆದುಕೊಂಡು ಹೋಗುತ್ತಾರೆ. ಇದರಿಂದಲೇ ಪ್ರತಿದಿನ ಬೆಳಿಗ್ಗೆ ವಾಹನ ದಟ್ಟಣೆ ಉಂಟಾಗುತ್ತಿದೆ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರ ಪರ-ವಿರೋಧ ಚರ್ಚೆ
ಆದಿತ್ಯ ಆನಂದ್ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಪರ-ವಿರೋಧವಾಗಿ ಪ್ರತಿಕ್ರಿಯಿಸಲು ಆರಂಭಿಸಿದ್ದಾರೆ. ಕೆಲವರು ಫುಟ್ ಓವರ್‌ಬ್ರಿಡ್ಜ್‌ಗಳ ಪ್ರಾಯೋಗಿಕತೆಯ ಬಗ್ಗೆಯೇ ಪ್ರಶ್ನೆ ಎತ್ತಿದ್ದಾರೆ. "ವಾಹನ ಸವಾರರ ಅನುಕೂಲಕ್ಕಾಗಿ ಪಾದಚಾರಿಗಳು ಮೆಟ್ಟಿಲುಗಳನ್ನು ಹತ್ತಿ ಶೇ. 60ರಷ್ಟು ಹೆಚ್ಚು ನಡೆಯಬೇಕು ಎಂದು ನಿರೀಕ್ಷಿಸುವುದು ಮೂರ್ಖತನ. ವಾಹನಗಳಿಗೆ ಮೇಲ್ಸೇತುವೆ ಇರಬೇಕು, ಜನರು ಸರಾಗವಾಗಿ ಕೆಳಗಡೆ ನಡೆಯುವಂತಿರಬೇಕು" ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, "ನೀವು ಮೆಟ್ರೋ ಸಿಟಿಯಲ್ಲಿ ವಾಸಿಸುತ್ತಿದ್ದೀರಿ, ಹಳ್ಳಿಯಲ್ಲಲ್ಲ. 10 ನಿಮಿಷ ಮುಂಚಿತವಾಗಿ ಮನೆಯಿಂದ ಹೊರಡಿ. ಕೆಲವು ವಿಷಯಗಳನ್ನು ನೀವು ನಿರ್ಲಕ್ಷಿಸಲೇಬೇಕು" ಎಂದು ಟಾಂಗ್ ನೀಡಿದ್ದಾರೆ.
ಮತ್ತೆ ಕೆಲವರು ಪಾದಚಾರಿಗಳನ್ನು ಬೆಂಬಲಿಸಿ, ವ್ಯವಸ್ಥೆಯಲ್ಲಿನ ಮೂಲಸೌಕರ್ಯಗಳ ಕೊರತೆಯ ಬಗ್ಗೆ ಗಮನ ಸೆಳೆದಿದ್ದಾರೆ. "ಲಿಫ್ಟ್ ಅಥವಾ ಎಸ್ಕಲೇಟರ್‌ಗಳಿಲ್ಲದೆ, ಪ್ರತಿದಿನ ಫುಟ್ ಓವರ್‌ಬ್ರಿಡ್ಜ್ ಬಳಸಲು ಜನರಿಗೆ ಹೇಳುವುದು ಅನ್ಯಾಯ. ಸೌಲಭ್ಯಗಳು ಸುಲಭವಾಗಿ ಬಳಸಲು ಯೋಗ್ಯವಾಗಿಲ್ಲದಿದ್ದರೆ, ಅಲ್ಲಿ ಜನರು ಸಮಸ್ಯೆಯಲ್ಲ, ವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ಕೊರತೆಯೇ ಸಮಸ್ಯೆಯಾಗಿದೆ. ವಯಸ್ಸಾದವರು ಹಾಗೂ ವಿಕಲಚೇತನರು ಅಷ್ಟು ಎತ್ತರದ ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು ದೊಡ್ಡ ಸವಾಲು. ನಮ್ಮ ನಗರಗಳು ಕಾರುಗಳಿಗಾಗಿ ನಿರ್ಮಾಣವಾಗಿವೆಯೇ ಹೊರತು ಜನರಿಗಾಗಿ ಅಲ್ಲ" ಎಂದು ಕಮೆಂಟ್ ಮಾಡಿದ್ದಾರೆ.












Click it and Unblock the Notifications