Bengaluru Traffic: ಬೆಂಗಳೂರಲ್ಲಿ ಸೆ.4ರಿಂದ 5 ಪ್ರಮುಖ ಮೇಲ್ಸೇತುವೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ; ಹೊಸ ನಿಯಮಗಳೇನು?
Bengaluru Traffic: ಬೆಂಗಳೂರಿನ ದಿನದಿಂದ ದಿನಕ್ಕೆ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗುತ್ತಿದೆ. ಇದೀಗ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ನಿಯಂತ್ರಣಕ್ಕೆ ಬೆಂಗಳೂರು ಟ್ರಾಫಿಕ್ ಪೊಲೀಸರು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇದರ ಭಾಗವಾಗಿ ಬೆಂಗಳೂರಿನ ಪ್ರಮುಖ ರಸ್ತೆಗಳ ಮಾರ್ಗ ಬದಲಾವಣೆ ಆಗಲಿದೆ.
ಬೆಂಗಳೂರಿನ ವಾಹನ ಸವಾರರ ರಸ್ತೆ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ನಗರದ ಐದು ಪ್ರಮುಖ ಮೇಲ್ಸೇತುವೆಗಳು ಹಾಗೂ ಎಲಿವೇಟೆಡ್ ಕಾರಿಡಾರ್‌ಗಳಲ್ಲಿ ಕೆಲವು ನಿರ್ದಿಷ್ಟ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದಾರೆ. ಈ ನಿರ್ಬಂಧವು ಸೆಪ್ಪೆಂಬರ್ 4ರಿಂದ ಪ್ರಾರಂಭವಾಗಲಿದೆ. ಬೆಂಗಳೂರಿನ ಯಾವ ರಸ್ತೆ, ಪ್ರಮುಖ ಮೇಲ್ಸೇತುವೆಗಳಲ್ಲಿ ನಿರ್ಬಂಧ ಇರಲಿದೆ ಹಾಗೂ ಬೆಂಗಳೂರು ಟ್ರಾಫಿಕ್ ಪೊಲೀಸರು ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಜಾಮ್ ಕಂಟ್ರೋಲ್‌ಗೆ ಯಾವ ಮಾರ್ಗ ಅನುಸರಿಸುತ್ತಿದ್ದಾರೆ ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿದೆ.

ಬೆಂಗಳೂರು ನಗರದಲ್ಲಿ ಟ್ರಾಫಿಕ್ ಕಂಟ್ರೋಲ್‌ಗೆ ಮಹತ್ವದ ಕ್ರಮ ಅನುಸರಿಸಲಾಗಿದೆ. ಮೈಸೂರು ರಸ್ತೆಯ ಬಿಜಿಎಸ್ (ಸಿರ್ಸಿ ವೃತ್ತ) ಮೇಲ್ಸೇತುವೆ, ಪೀಣ್ಯ ಮೇಲ್ಸೇತುವೆ, ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ, ಸಿಲ್ಕ್ ಬೋರ್ಡ್ ಮತ್ತು ರಾಗಿಗುಡ್ಡ ನಡುವಿನ ಮೆಟ್ರೋ ಡಬಲ್ ಡೆಕ್ಕರ್ ಫ್ಲೈಓವರ್ ಮತ್ತು ಸಂಜೀವನಗರ ಕ್ರಾಸ್ ಮತ್ತು ಯಲಹಂಕ ಸಮೀಪದ ವಿದ್ಯಾಶಿಲ್ಪ್ ಜಂಕ್ಷನ್ ನಡುವಿನ ಬಳ್ಳಾರಿ ರಸ್ತೆ / ವಿಮಾನ ನಿಲ್ದಾಣ ರಸ್ತೆ ಫ್ಲೈಓವರ್ ಮೇಲೆ ವಾಹನ ಸಂಚಾರಕ್ಕೆ ನಿರ್ಬಂಧ ಇರಲಿದೆ. ಸಿರ್ಸಿ ಸರ್ಕಲ್, ಪೀಣ್ಯ, ಡಬಲ್ ಡೆಕ್ಕರ್ ಮತ್ತು ವಿಮಾನ ನಿಲ್ದಾಣ ರಸ್ತೆ ಫ್ಲೈಓವರ್‌ಗಳ ಮೇಲಿನ ನಿರ್ಬಂಧವು ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ 4 ರಿಂದ ಜಾರಿಗೆ ಬರಲಿವೆ. ಎಲೆಕ್ಟ್ರಾನಿಕ್ಸ್ ಸಿಟಿ ಎಕ್ಸ್‌ಪ್ರೆಸ್‌ವೇ ರಸ್ತೆಗಳಲ್ಲಿ ಈ ನಿರ್ಬಂಧವು ಸೆಪ್ಪೆಂಬರ್ 11ರಿಂದ ಜಾರಿಗೆ ತರಲಾಗುತ್ತದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಯಾವ ವಾಹನಗಳಿಗೆ ಯಾವ ಸಮಯದಲ್ಲಿ ನಿರ್ಬಂಧ
ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ: ಈ ಮಾರ್ಗದಲ್ಲಿ ಎಲ್ಲಾ ಮಾದರಿಯ ಸರಕು ವಾಹನಗಳು - ಭಾರೀ, ಮಧ್ಯಮ ಮತ್ತು ಲಘು ವಾಹನಗಳ ಸಂಚಾರವನ್ನು ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ನಿಷೇಧಿಸಲಾಗುವುದು. ದ್ವಿಚಕ್ರ ವಾಹನಗಳು, ಪ್ಯಾಸೆಂಜರ್ ಆಟೋರಿಕ್ಷಾಗಳು ಮತ್ತು ತ್ರಿಚಕ್ರ ವಾಹನ ಸರಕು ಆಟೋರಿಕ್ಷಾಗಳನ್ನು 24 ಗಂಟೆಗಳ ಕಾಲ ನಿಷೇಧಿಸಲಾಗುವುದು ಎಂದು ಹೇಳಲಾಗಿದೆ.
ಶಿರ್ಸಿ ಸರ್ಕಲ್ ಫ್ಲೈಓವರ್‌ನಲ್ಲಿ ಭಾರೀ ಸರಕು ವಾಹನಗಳ ಸಂಚಾರವನ್ನು 24/7 ರವರೆಗೆ ನಿಷೇಧಿಸಲಾಗುವುದು. ತ್ರಿಚಕ್ರ ವಾಹನ ಸರಕು ಆಟೋರಿಕ್ಷಾಗಳು ಸೇರಿದಂತೆ ಇತರ ಸರಕು ವಾಹನಗಳನ್ನು ಬೆಳಿಗ್ಗೆ 7 ರಿಂದ ಬೆಳಿಗ್ಗೆ 11 ರವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 10 ರವರೆಗೆ ನಿರ್ಬಂಧಿಸಲಾಗುವುದು.
ಇನ್ನು ಪೀಣ್ಯ ಫ್ಲೈಓವರ್‌ನಲ್ಲಿ, ಪ್ಯಾಸೆಂಜರ್ ಆಟೋರಿಕ್ಷಾಗಳು ಮತ್ತು ತ್ರಿಚಕ್ರ ವಾಹನ ಸರಕು ಆಟೋರಿಕ್ಷಾಗಳನ್ನು 24 ಗಂಟೆಗಳ ಕಾಲ ನಿಷೇಧಿಸಲು ನಿರ್ಧರಿಸಲಾಗಿದೆ . ಬೆಳಿಗ್ಗೆ ಮತ್ತು ಸಂಜೆ ಪೀಕ್ ಅವರ್‌ನಲ್ಲಿ ಭಾರೀ ಮತ್ತು ಮಧ್ಯಮ ಸರಕು ವಾಹನಗಳ ಸಂಚಾರ ನಿರ್ಬಂಧ ಇರಲಿದೆ.
ಡಬಲ್ ಡೆಕ್ಕರ್ ಫ್ಲೈಓವರ್‌ನಲ್ಲೂ ಬದಲಾವಣೆ
ಇನ್ನು ಡಬಲ್ ಡೆಕ್ಕರ್ ಫ್ಲೈಓವರ್‌ನಲ್ಲೂ ಬದಲಾವಣೆ ಕೆಲವೊಂದು ಪ್ರಮುಖ ಬದಲಾವಣೆಗಳು ಇರಲಿವೆ. ಈ ಮಾರ್ಗದಲ್ಲಿ ಭಾರೀ ಸರಕು ವಾಹನಗಳ ಮೇಲೆ ದಿನದ 24 ಗಂಟೆಗಳ ಕಾಲ ನಿಷೇಧವಿರಲಿದೆ. ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್ ಕಾರಿಡಾರ್‌ನಲ್ಲಿ ಬೈಕ್‌ಗಳು ಮತ್ತು ಆಟೋರಿಕ್ಷಾಗಳನ್ನು 24 ಗಂಟೆಗಳ ಕಾಲ ನಿಷೇಧ ಇರಲಿದೆ. ಅಲ್ಲದೆ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಎಲ್ಲಾ ಮಾದರಿಯ ಸರಕು ವಾಹನಗಳ ಸಂಚಾರವನ್ನು ನಿರ್ಬಂಧಿಸಲು ನಿರ್ಧರಿಸಲಾಗಿದೆ.
ಈ ಬದಲಾವಣೆಗೆ ಕಾರಣವೇನು: ಬೆಂಗಳೂರು ಸಂಚಾರ ಪೊಲೀಸರು ಹೇಳಿದ್ದೇನು ?
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಹಾಗೂ ಮೇಲ್ಸೇತುವೆಗಳಲ್ಲಿ ವಾಹನಗಳ ವೇಗ ಹಾಗೂ ಅಪಘಾತಗಳ ಅಂಕಿ - ಅಂಶಗಳನ್ನು ಪರಿಶೀಲನೆ ಮಾಡಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಈ ರಸ್ತೆಗಳ ವಿನ್ಯಾಸ ಮತ್ತು ಅಗಲ, ಅಪಘಾತದ ತೀವ್ರತೆ, ವಾಹನ ಸಂಚಾರ, ಪ್ರವೇಶ ಹಾಗೂ ನಿರ್ಗಮನ ಸ್ಥಳಗಳಲ್ಲಿ ದಟ್ಟಣೆ, ತುರ್ತು ಸಂಚಾರ ನಿರ್ವಹಣೆ ಮತ್ತು ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರ ಸುರಕ್ಷತೆ ಸೇರಿದಂತೆ ಹಲವು ವಿಷಯಗಳನ್ನು ಗಮನದಲ್ಲಿ ಇರಿಸಿಕೊಂಡು ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.


Click it and Unblock the Notifications
