ಹೈಟೆಕ್ ಕ್ಯಾಮೆರಾಗಳಿದ್ದರೂ ವಾಹನಗಳ ತಪಾಸಣೆಗೆ ಫೀಲ್ಡಿಗಿಳಿದ ಟ್ರಾಫಿಕ್ ಪೊಲೀಸರು, ಕಾರಣ ಕೊಟ್ಟ ಇಲಾಖೆ
ಬೆಂಗಳೂರು: ವಾಹನ ಸವಾರರ ಸಂಚಾರ ನಿಯಮಗಳ ಉಲ್ಲಂಘನೆ ತಡೆ ಹಾಗೂ ದಂಡ ವಿಧಿಸಲು ಬೆಂಗಳೂರು ಟ್ರಾಫಿಕ್ ಪೊಲೀಸರು ತಂತ್ರಜ್ಞಾನ ಆಧಾರಿತ ಕ್ರಮಗಳನ್ನು ಜಾರಿಗೊಳಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಆದರೆ ಹಿಂದಿನಂತೆ ಸ್ಥಳದಲ್ಲೇ ವಾಹನಗಳನ್ನು ತಡೆದು, ಪ್ರಕರಣ ದಾಖಲಿಸುವುದು ಕಡಿಮೆಯಾಗಿಲ್ಲ. ಏನೆಲ್ಲ ಹೈಟೆಕ್ ಕ್ಯಾಮರಾಗಳಿದ್ದರೂ ಪೊಲೀಸರು ರಸ್ತೆಗಳಲ್ಲಿ ನಿಂತು ವಾಹನಗಳನ್ನು ತಡೆದು ನಿಲ್ಲಿಸಿ ಪ್ರಕರಣ ದಾಖಲಿಸುತ್ತಿರುವುದು ಇತ್ತೀಚಿನ ದಿನಗಳನ್ನು ಹೆಚ್ಚಾಗಿದೆ.
ಅಂಕಿ-ಅಂಶಗಳ ಪ್ರಕಾರ, 2024ರಲ್ಲಿ ಒಟ್ಟು 4.81 ಲಕ್ಷ ಪ್ರಕರಣಗಳು ಪೊಲೀಸರ ಖುದ್ದು ತಪಾಸಣೆಯಿಂದ ದಾಖಲಾಗಿದ್ದರೆ, 2025ರಲ್ಲಿ ಅದು ಸುಮಾರು 8.49 ಲಕ್ಷಕ್ಕೆ ಏರಿಕೆಯಾಗಿದೆ. ಅಂದರೆ, ಒಂದೇ ವರ್ಷದಲ್ಲಿ ವಾಹನ ತಪಾಸಣೆ ಪ್ರಮಾಣ ಡಬಲ್ ಆಗಿದೆ. ಇನ್ನು 2023ರಲ್ಲಿ ಒಟ್ಟು ಪ್ರಕರಣಗಳಲ್ಲಿ ಕೇವಲ 2.7ರಷ್ಟು ಮಾತ್ರವೇ ಪೊಲೀಸರ ತಪಾಸಣೆಯಿಂದ ದಾಖಲಾಗಿದ್ದವು. ಈ ಪ್ರಮಾಣವು 2024ರಲ್ಲಿ ಶೇ 5.8ರಷ್ಟಾದರೆ, 2025ರಲ್ಲಿ ಶೇ 12.14ಕ್ಕೆ ಏರಿದ್ದು, ಪೊಲೀಸರೇ ಫೀಲ್ಡಿಗಿಳಿದು ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವುದು ಕ್ರಮೇಣ ಹೆಚ್ಚಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಅಚ್ಚರಿ ಎಂದರೆ ದುಬಾರಿ ಮೊತ್ತದ ಆಧುನಿಕ ಕ್ಯಾಮೆರಾಗಳನ್ನು ಸಂಚಾರ ನಿಯಮಗಳ ಉಲ್ಲಂಘನೆ ಪತ್ತೆಗಾಗಿಯೇ ಬಳಸಲಾಗುತ್ತಿದೆ. ಹಾಗಿದ್ದರೂ ಕ್ಯಾಮೆರಾಗಳ ಮೂಲಕ ದಾಖಲಾದ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. 2023ರಲ್ಲಿ ಸುಮಾರು 87.47 ಲಕ್ಷ ಪ್ರಕರಣಗಳು ಕ್ಯಾಮೆರಾಗಳಿಂದ ದಾಖಲಾಗಿದ್ದರೆ, 2024ರಲ್ಲಿ ಅದು 78.07 ಲಕ್ಷ ಹಾಗೂ 2025ರಲ್ಲಿ 61.38 ಲಕ್ಷಕ್ಕೆ ಇಳಿದಿದೆ ಎಂದು ತಿಳಿದುಬಂದಿದೆ.
ಇಲಾಖೆ ಹೇಳುವುದೇನು?
ಸ್ವಯಂಚಾಲಿತ ಕ್ಯಾಮೆರಾಗಳಿಂದ ಕೆಲವೊಮ್ಮೆ ತಪ್ಪಾಗಿ ಪ್ರಕರಣಗಳು ದಾಖಲಾಗುತ್ತಿದ್ದವು ಎಂಬ ದೂರುಗಳು ಬಂದವು. ಆದ್ದರಿಂದ ಈಗ ಎಲ್ಲ ಪ್ರಕರಣಗಳನ್ನು ಕೈಯಾರೆ ಪರಿಶೀಲಿಸುತ್ತಿದ್ದೇವೆ. ಈ ಪರಿಶೀಲನೆ ವೇಳೆ ಕೆಲವು ಪ್ರಕರಣಗಳನ್ನು ಕೈಬಿಡಲಾಗುತ್ತದೆ. ಅದರಿಂದ ಸಂಖ್ಯೆಗಳು ಕಡಿಮೆಯಾಗಿರುವ ಸಾಧ್ಯತೆ ಇದೆ" ಎಂದು ಸಂಚಾರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು ಕಾರಣ ತಿಳಿಸಿದ್ದಾರೆ. ಮತ್ತೊಂದೆಡೆ ಕೆಲವು ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ, ಇದು ಕೂಡ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲು ಕಾರಣ ಎನ್ನಲಾಗಿದೆ. ನಗರದ ಹಲವು ಪ್ರದೇಶಗಳು ಕ್ಯಾಮೆರಾ ವ್ಯಾಪ್ತಿಯಲ್ಲಿ ಇಲ್ಲದಿರುವುದರಿಂದ ಅಲ್ಲಿ ಸಂಪೂರ್ಣವಾಗಿ ಸಿಬ್ಬಂದಿಯೇ ಪರಿಶೀಲನೆ ನಡೆಸಬೇಕಾದ ಅನಿವಾರ್ಯತೆ ಇದೆ ಎಂದಿದ್ದಾರೆ.
ಕ್ಯಾಮೆರಾ ಅಳವಡಿಸಿದ್ದು ಹಣ ವ್ಯರ್ಥ ಮಾಡುವುದಕ್ಕಾ?
ಪೊಲೀಸರೇ ಅಲ್ಲಲ್ಲಿ ನಿಂತು ವಾಹನಗಳನ್ನು ತಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ಬಹುತೇಕ ಪ್ರಮುಖ ರಸ್ತೆಗಳಲ್ಲಿ ಪೊಲೀಸರ ಗುಂಪು ನಿಂತಿರುತ್ತದೆ. ಪ್ರತಿ ಸಿಗ್ನಲ್‌ನಲ್ಲೂ ಇರುತ್ತಾರೆ. ಎಂದಿನಂತೆ ಹಲವರು ಪೊಲೀಸರಿಗೆ ಲಂಚ ನೀಡಿ ತಪ್ಪಿಸಿಕೊಳ್ಳುತ್ತಾರೆ, ಲಂಚ ಕೊಡದವರು ಚಲನ್ ಪಡೆಯುತ್ತಾರೆ. ಕೆಲಸದ ನಿಮಿತ್ತ ಹೊರಟಿರುವವರನ್ನು ತಡೆದಾಗ ಪೊಲೀಸರೊಂದಿಗೆ ವಾಗ್ವಾದಗಳು ಕೂಡ ಹೆಚ್ಚಾಗುತ್ತಿವೆ. ಕ್ಯಾಮೆರಾಗಳಿದ್ದಾಗ ಪೊಲೀಸರು ಯಾಕೆ ರಸ್ತೆಗಳಲ್ಲಿ ನಿಲ್ಲಬೇಕು? ಎಂದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಪೊಲೀಸರು ಮಾತ್ರ ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಎಲ್ಲ ಉಲ್ಲಂಘನೆಗಳನ್ನು ಕ್ಯಾಮೆರಾಗಳು ಪತ್ತೆಹಚ್ಚಲು ಸಾಧ್ಯವಿಲ್ಲ. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ನೋ ಪಾರ್ಕಿಂಗ್, ಪಾದಚಾರಿ ಮಾರ್ಗದಲ್ಲಿ ಚಾಲನೆ ಮುಂತಾದ ಪ್ರಕರಣಗಳನ್ನು ಸಿಬ್ಬಂದಿಯೇ ಪರಿಶೀಲಿಸಬೇಕು. ಅದಕ್ಕಾಗಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಪಾದಚಾರಿಗಳ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಿದ್ದೇವೆ ಎನ್ನುತ್ತಿದ್ದಾರೆ ಬೆಂಗಳೂರು ಟ್ರಾಫಿಕ್ ಪೊಲೀಸರು.
ಪೀಕ್ ಸಮಯದಲ್ಲಿ ತಪಾಸಣೆ ಇಲ್ಲ
ನಮ್ಮ ಸಿಬ್ಬಂದಿ ಧರಿಸುವ ಬಾಡಿ ಕ್ಯಾಮೆರಾಗಳಲ್ಲಿ ಎಲ್ಲ ಕಾರ್ಯಾಚರಣೆ ದಾಖಲೆಯಾಗುತ್ತದೆ. ಸ್ಪಷ್ಟ ಉಲ್ಲಂಘನೆ ಕಂಡಾಗ ಮಾತ್ರ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಪೀಕ್ ಸಮಯದಲ್ಲಿ ಸಿಬ್ಬಂದಿ ಸಂಚಾರ ನಿಯಂತ್ರಣದಲ್ಲೇ ತೊಡಗಿರುತ್ತಾರೆ. ಬಾಕಿ ಸಮಯದಲ್ಲಿ ಮಾತ್ರವೇ ವಾಹನಗಳ ತಪಾಸಣೆ ನಡೆಯುತ್ತಿದೆ ಎನ್ನುತ್ತಿದ್ದಾರೆ. ಆದರೆ ನಾವು ಹೈಟೆಕ್ ಕ್ಯಾಮರಾ ಅಳವಡಿಸಿದ್ದೇವೆ ಎಂದು ಬೆನ್ನುತಟ್ಟಿಕೊಂಡಿದ್ದ ಪೊಲೀಸರು ಈಗ ಎಂದಿನಂತೆ ಫೀಲ್ಡಿಗಿಳಿದು ವಾಹನಗಳ ತಪಾಸಣೆ ಮಾಡುತ್ತಿರುವುದು ಸಾರ್ವಜನಿಕರಿಂದ ಟೀಕೆಗೆ ಗುರಿಯಾಗುತ್ತಿದೆ.
ನೀವೇ ತಪಾಸಣೆ ಮಾಡುವುದಾದರೆ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಎಲ್ಲೆಲ್ಲೂ ಕ್ಯಾಮೆರಾಗಳನ್ನೇಕೆ ಅಳವಡಿಸಿದ್ದೀರಿ? ಎಂದು ಇಲಾಖೆಗೆ ಪ್ರಶ್ನೆ ಮುಂದಿಟ್ಟಿದ್ದಾರೆ. ಆಧುನಿಕ ತಂತ್ರಜ್ಞಾನ ವ್ಯವಸ್ಥೆ ಜಾರಿಯಲ್ಲಿದ್ದರೂ ಭೌತಿಕ ತಪಾಸಣೆಯಿಂದ ಪ್ರಕರಣಗಳ ಸಂಖ್ಯೆ ಏರಿಕೆಯಾಗಿರುವುದು ಸಾರ್ವಜನಿಕರಲ್ಲಿ ಅನುಮಾನ ಹುಟ್ಟಿಸಿದೆ. ಪೊಲೀಸರು ಇದು ಕಟ್ಟುನಿಟ್ಟಿನ ಜಾರಿ ಎಂದು ಹೇಳುತ್ತಿದ್ದು, ಸಾರ್ವಜನಿಕರು ಮಾತ್ರ ಕಿರುಕುಳ ಹೆಚ್ಚಾಗಿದೆ ಎಂದೇ ಆರೋಪಿಸುತ್ತಿದ್ದಾರೆ.












Click it and Unblock the Notifications