Bengaluru Traffic:‌ ಬನ್ನೇರುಘಟ್ಟ ಮುಖ್ಯ ರಸ್ತೆಯ ಜಂಕ್ಷನ್‌ಗಳ ಅಭಿವೃದ್ಧಿಗೆ ಡಿಪಿಆರ್ ಸಿದ್ಧಪಡಿಸಿ : ಮಹೇಶ್ವರ್ ರಾವ್

ಬೆಂಗಳೂರು: ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಸುಗಮ ವಾಹನ ಸಂಚಾರ ಹಾಗೂ ಪಾದಚಾರಿಗಳ ಸುರಕ್ಷತೆಯ ನಿಟ್ಟಿನಲ್ಲಿ ಗೊಟ್ಟಿಗೆರೆಯಿಂದ ತಾವರೆಕೆರೆವರೆಗೆ ಇರುವ ಜಂಕ್ಷನ್‌ಗಳ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಿ ಸಲ್ಲಿಸುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣದಿಂದ ಐಐಎಂಬಿ ಮೆಟ್ರೋ ನಿಲ್ದಾಣದವರೆಗೆ ಸುಮಾರು 3.2 ಕಿ.ಮೀ ಉದ್ದದ ರಸ್ತೆಯಲ್ಲಿನ ಪಾದಚಾರಿ ಮಾರ್ಗಗಳನ್ನು ಪರಿಶೀಲಿಸಿದ ಅವರು, ಪಾದಚಾರಿಗಳ ಸಂಚಾರಕ್ಕೆ ಎದುರಾಗುತ್ತಿರುವ ಸಮಸ್ಯೆಗಳನ್ನು ಗುರುತಿಸಿ, ಅವುಗಳನ್ನು ಆದ್ಯತೆಯ ಮೇರೆಗೆ ಪರಿಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Bengaluru Traffic Maheshwar Rao Directs Preparation of DPR for Bannerghatta Main Road Junction Development

Bengaluru Traffic: ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಆದ್ಯತೆ

ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣದಿಂದ ಸಮೀಪದ ಬಸ್ ನಿಲ್ದಾಣಕ್ಕೆ ಸುಮಾರು 50 ಮೀಟರ್ ಅಂತರವಿದ್ದರೂ, ಪಾದಚಾರಿಗಳಿಗೆ ಸುರಕ್ಷಿತವಾಗಿ ಸಂಚರಿಸಲು ಸೂಕ್ತ ಮಾರ್ಗವಿಲ್ಲದಿರುವುದನ್ನು ಗಮನಿಸಿದ ಮುಖ್ಯ ಆಯುಕ್ತರು, ಈ ಸ್ಥಳದಲ್ಲಿ ಪಾದಚಾರಿ ಮಾರ್ಗದ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಅಲ್ಲದೆ, ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣದ ಸಮೀಪ ಬನ್ನೇರುಘಟ್ಟ ರಸ್ತೆಯನ್ನು ದಾಟುವುದು ಅಪಾಯಕಾರಿಯಾಗಿರುವುದರಿಂದ, ಸ್ಥಳದ ಪರಿಸ್ಥಿತಿಗೆ ಅನುಗುಣವಾಗಿ ಸುರಕ್ಷಿತ ಪಾದಚಾರಿ ದಾಟುವ ವ್ಯವಸ್ಥೆ ನಿರ್ಮಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ತಿಳಿಸಿದರು. ಈ ಭಾಗದಲ್ಲಿ 10.5 ಮೀಟರ್ ಕ್ಯಾರೇಜ್‌ವೇ ಇದ್ದು, ಪಾದಚಾರಿ ಮಾರ್ಗದ ಕೊರತೆಯಿರುವುದರಿಂದ ಲಭ್ಯವಿರುವ ಸ್ಥಳಾವಕಾಶವನ್ನು ಪರಿಶೀಲಿಸಿ ಸೂಕ್ತ ಪರಿಹಾರ ರೂಪಿಸುವಂತೆ ನಿರ್ದೇಶಿಸಿದರು.

ಕೇಬಲ್‌ಗಳಿಂದಾಗುವ ಅಡಚಣೆ ನಿವಾರಣೆ

ಪಾದಚಾರಿ ಮಾರ್ಗಗಳಲ್ಲಿ ಹಾಗೂ ತೆರೆದ ಚರಂಡಿಗಳ ಬಳಿ ಅಳವಡಿಸಿರುವ ಆಪ್ಟಿಕಲ್ ಫೈಬರ್ ಕೇಬಲ್‌ಗಳ (ಒಎಫ್‌ಸಿ) ಚೇಂಬರ್‌ಗಳು ಮತ್ತು ಕೇಬಲ್‌ಗಳಿಂದ ಸಂಚಾರಕ್ಕೆ ಅಡಚಣೆಯಾಗುತ್ತಿರುವುದನ್ನು ಗಮನಿಸಿ, ಸಂಬಂಧಪಟ್ಟ ಕೇಬಲ್ ಆಪರೇಟರ್‌ಗಳೊಂದಿಗೆ ಸಮನ್ವಯ ಸಾಧಿಸಿ ಅವುಗಳನ್ನು ಸೂಕ್ತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿ, ಪಾದಚಾರಿಗಳ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಹಾಗೂ ಚರಂಡಿಗಳ ನಿರ್ವಹಣೆಗೆ ಅಡ್ಡಿಯಾಗದಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.

ಟ್ರಾಫಿಕ್ ಪೊಲೀಸ್ ಕ್ಯಾಬಿನ್‌ಗಳ ಸ್ಥಳಾಂತರ

ಪಾದಚಾರಿ ಮಾರ್ಗಗಳ ಮೇಲೆ ಅಳವಡಿಸಿರುವ ಟ್ರಾಫಿಕ್ ಪೊಲೀಸ್ ಕ್ಯಾಬಿನ್‌ಗಳಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗುತ್ತಿರುವುದನ್ನು ಗಮನಿಸಿದ ಅವರು, ಸೂಕ್ತ ಪರ್ಯಾಯ ಸ್ಥಳಗಳನ್ನು ಗುರುತಿಸಿ ಕ್ಯಾಬಿನ್‌ಗಳನ್ನು ಜಂಕ್ಷನ್‌ಗಳ ಬಳಿ ಅಥವಾ ಇತರೆ ಅನುಕೂಲಕರ ಸ್ಥಳಗಳಿಗೆ ಸ್ಥಳಾಂತರಿಸುವ ಸಾಧ್ಯತೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಟ್ರಾಫಿಕ್ ಪೊಲೀಸ್ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.

ಅದೇ ರೀತಿ, ಹಲವು ಕಡೆಗಳಲ್ಲಿ ಪಾದಚಾರಿ ಮಾರ್ಗಗಳಿಗೆ ಅಡ್ಡಿಯಾಗುತ್ತಿರುವ ಬೆಸ್ಕಾಂನ ಆರ್‌ಎಂಯು (ರಿಂಗ್ ಮೇನ್ ಯುನಿಟ್) ಉಪಕರಣಗಳನ್ನು ಸಮೀಪದ ಆಸ್ತಿಗಳ ಆವರಣದೊಳಗೆ ಸ್ಥಳಾಂತರಿಸುವ ಸಾಧ್ಯತೆಯನ್ನು ಪರಿಶೀಲಿಸಬೇಕು. ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಪಾದಚಾರಿ ಮಾರ್ಗಗಳನ್ನು ಅಡೆತಡೆಗಳಿಂದ ಮುಕ್ತಗೊಳಿಸುವಂತೆ ನಿರ್ದೇಶಿಸಿದರು.

ತೆರೆದ ಚರಂಡಿಗಳ ಮುಚ್ಚುವಿಕೆ

ಪರಿಶೀಲನೆ ವೇಳೆ ಹಲವು ಕಡೆಗಳಲ್ಲಿ ಪಾದಚಾರಿ ಮಾರ್ಗದ ಚರಂಡಿಗಳ ಮೇಲಿನ ಸ್ಲ್ಯಾಬ್‌ಗಳು ಇಲ್ಲದಿರುವುದನ್ನು ಕಂಡುಬಂದ ಹಿನ್ನೆಲೆಯಲ್ಲಿ, ತಕ್ಷಣವೇ ಹೊಸ ಸ್ಲ್ಯಾಬ್‌ಗಳನ್ನು ಅಳವಡಿಸಿ ತೆರೆದ ಚರಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಿಡ್‌ಬ್ಲಾಕ್ ಕ್ರಾಸಿಂಗ್ ಮೂಲಕ ರಸ್ತೆ ದಾಟಲು ವ್ಯವಸ್ಥೆ

ಬನ್ನೇರುಘಟ್ಟ ರಸ್ತೆಯ ಹಲವು ಭಾಗಗಳಲ್ಲಿ ಪಾದಚಾರಿಗಳಿಗೆ ರಸ್ತೆ ದಾಟಲು ಸೂಕ್ತ ವ್ಯವಸ್ಥೆಯಿಲ್ಲದಿರುವುದು ಹಾಗೂ ಕೆಲವು ಕಡೆಗಳಲ್ಲಿ ಅಸ್ತಿತ್ವದಲ್ಲಿರುವ ಕ್ರಾಸಿಂಗ್‌ಗಳ ವಿನ್ಯಾಸ ಸಮರ್ಪಕವಾಗಿಲ್ಲದಿರುವುದನ್ನು ಗಮನಿಸಿ, ಅಗತ್ಯವಿರುವ ಸ್ಥಳಗಳಲ್ಲಿ ಮೀಡಿಯನ್‌ನ ಮಿಡ್‌ಬ್ಲಾಕ್ ಕ್ರಾಸಿಂಗ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಸೂಚಿಸಿದರು.

ಅಲ್ಲದೆ, ಪಾದಚಾರಿಗಳು ರಸ್ತೆ ದಾಟುವಾಗ ಸುರಕ್ಷಿತವಾಗಿ ಕಾಯಲು ಅನುಕೂಲವಾಗುವಂತೆ ಸೂಕ್ತ ಸ್ಥಳಗಳಲ್ಲಿ ಪಾದಚಾರಿ ರೆಫ್ಯೂಜ್ ಐಲ್ಯಾಂಡ್‌ಗಳನ್ನು ನಿರ್ಮಿಸಬೇಕು. ಜಂಕ್ಷನ್‌ಗಳಲ್ಲಿಯೂ ಸ್ಥಳಾವಕಾಶ ಮತ್ತು ಸಂಚಾರದ ಅಗತ್ಯಕ್ಕೆ ಅನುಗುಣವಾಗಿ ಈ ಸೌಲಭ್ಯ ಕಲ್ಪಿಸಿ, ಪಾದಚಾರಿಗಳ ಸುರಕ್ಷತೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಈ ಸಂದರ್ಭದಲ್ಲಿ ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಕೆ.ಎನ್. ರಮೇಶ್, ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ, ಮಾಲತಿ, ಮೆಟ್ರೋ, ಬಿಎಂಟಿಸಿ, ಸಂಚಾರ ವಿಭಾಗದ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+