Traffic Fine: ನಿಮ್ಮ ಗಾಡಿ ಮೇಲೆ ಟ್ರಾಫಿಕ್ ಫೈನ್ ಇದ್ರೆ ಈ ಸುದ್ದಿ ತಪ್ಪದೇ ಓದಿ
ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರ ಸಂಖ್ಯೆ ಕಡಿಮೆಯೇನಿಲ್ಲ. ಈ ಟ್ರಾಫಿಕ್ ಸಿಟಿಯಲ್ಲಿ ಎಷ್ಟೋ ಹುಷಾರಾಗಿ ಗಾಡಿ ಓಡಿಸಿದ್ರೂ ಒಂದಾದ್ರೂ ಕೇಸ್ ಬಿದ್ದಿರುತ್ತೆ. ಸಿಗ್ನಲ್ ಜಂಪ್, ಹೆಲ್ಮೆಟ್ ಧರಿಸದೆ ವಾಹನ ಚಾಲನೆ, ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದೇ ಇರುವುದು ಸೇರಿದಂತೆ ಟ್ರಾಫಿಕ್ ಫೈನ್ ಬಿದ್ದಿರುತ್ತೆ. ಇತ್ತೀಚೆಗೆ ದಂಡ ಪಾವತಿಸುವವರಿಗೆ ಬೆಂಗಳೂರು ಪೊಲೀಸರು ಶೇ 50ರಷ್ಟು ಡಿಸ್ಕೌಂಟ್ ಕೂಡ ಘೋಷಿಸಿದ್ದರು. ಆದರೆ ಇನ್ನು ಮುಂದೆ ನೀವು ಪೊಲೀಸರ ಕಣ್ತಪ್ಪಿಸಿ ಬೆಂಗಳೂರಲ್ಲಿ ಓಡಾಡುವಂತಿಲ್ಲ. ಇನ್ಮುಂದೆ ನಿಮ್ಮ ಗಾಡಿ ಮೇಲೆ ದಂಡ ಎಷ್ಟಿದೆ? ಎಂದು ಸಾರ್ವಜನಿಕವಾಗಿ ತೋರಿಸಲಾಗುತ್ತದೆ. ಇಂತಹ ತಂತ್ರಜ್ಞಾನದ ಮೊರೆ ಹೋಗಿದ್ದಾರೆ ಬೆಂಗಳೂರು ಪೊಲೀಸರು.
ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವ ವಾಹನ ಮಾಲೀಕರಿಗೆ ಮೊದಲೆಲ್ಲ ಪೊಲೀಸರು ಕಷ್ಟಪಟ್ಟು ವಾಹನ ನೋಂದಣಿ ಸಂಖ್ಯೆಯ ಫೋಟೋ ಕ್ಲಿಕ್ಕಿಸಿ ಫೈನ್ ಹಾಕುವ ನಿಯಮ ಇತ್ತು. ನಂತರ ಬೆಂಗಳೂರಿನ ಎಲ್ಲ ರಸ್ತೆಗಳಲ್ಲಿ ಆಧುನಿಕ ಕ್ಯಾಮೆರಾಗಳನ್ನು ಅಳವಡಿಸಿ ಆಟೋಮ್ಯಾಟಿಕ್ ಆಗಿ ಫೋಟೋ ತೆಗೆದು ದಂಡ ಹಾಕುವ ನಿಯಮ ಚಾಲ್ತಿಯಲ್ಲಿದೆ. ಇದೀಗ ಪೊಲೀಸರು ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿದ್ದಾರೆ. ನಿಮ್ಮ ವಾಹನದ ಮೇಲಿರುವ ದಂಡದ ಮೊತ್ತವನ್ನು ನಿಮಗೇ ದೊಡ್ಡದಾಗಿ ಪ್ರದರ್ಶಿಸಲು ಮುಂದಾಗಿದ್ದಾರೆ.

ಎಐ ಕ್ಯಾಮೆರಾ ಸಹಾಯ
ಬೆಂಗಳೂರಿನ ಪ್ರಮುಖ ಸರ್ಕಲ್ ಆಗಿರುವ ಟ್ರಿನಿಟಿ ಸರ್ಕಲ್ ಬಳಿ ಇಂತಹ ಜಾಹೀರಾತು ಫಲಕ ಅಳವಡಿಸಲಾಗಿದೆ. ಒಂದು ವೇಳೆ ನಿಮ್ಮ ವಾಹನದ ಮೇಲೆ ಇರುವ ಬಾಕಿ ಇರುವ ಟ್ರಾಫಿಕ್ ದಂಡದ ಚಲನ್‌ಗಳನ್ನು ಇದರಲ್ಲಿ ಜಾಹೀರಾತಿನಂತೆ ಪ್ರದರ್ಶಿಸಲಾಗುತ್ತಿದೆ. ಸುಮಾರು 100 ಮೀಟರ್ ದೂರದವರೆಗಿನ ವಾಹನಗಳ ನೋಂದಣಿ ಸಂಖ್ಯೆಯನ್ನು ಸೆರೆಹಿಡಿಯುವ ಕೃತಕ ಬುದ್ಧಿಮತ್ತೆ (AI) ಚಾಲಿತ ಕ್ಯಾಮೆರಾಗಳು ಈ ಕೆಲಸ ಮಾಡಲಿವೆ. ಡೇಟಾಬೇಸ್‌ನಿಂದ ತಕ್ಷಣವೇ ವಾಹನದ ವಿವರಗಳನ್ನು ಪಡೆದು ಹತ್ತು ಸೆಕೆಂಡುಗಳಲ್ಲಿ ಅವುಗಳನ್ನು ಪ್ರದರ್ಶಿಸುತ್ತದೆ. ಅಲ್ಲದೆ ಬಾಕಿ ಇರುವ ಚಲನ್‌ಗಳು, ಅವಧಿ ಮೀರಿದ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರಗಳು ಮತ್ತು ಸಂಚಾರ ನಿಯಮ ಉಲ್ಲಂಘನೆಗಳಿಗೆ ಇತರ ಬಾಕಿಗಳ ಬಗ್ಗೆ ನಿಮಗೆ ಎಚ್ಚರಿಕೆ ನೀಡಲಾಗುತ್ತದೆ.
ಜವಾಬ್ದಾರಿಯುತ ಚಾಲನೆ ಮತ್ತು ರಸ್ತೆ ಸುರಕ್ಷತೆಯನ್ನು ಉತ್ತೇಜಿಸುವ ಗುರಿಯೊಂದಿಗೆ ಈ ಪ್ರಯತ್ನಕ್ಕೆ ಕೈಹಾಕಲಾಗಿದೆ. ಕಾರ್ಸ್ 24 ಮತ್ತು ಬೆಂಗಳೂರು ಸಂಚಾರ ಪೊಲೀಸರ ಸಹಯೋಗದಲ್ಲಿ ಇದಕ್ಕೆ ಪ್ರಾಯೋಗಿಕವಾಗಿ ಟ್ರಿನಿಟಿ ವೃತ್ತದಲ್ಲಿ ಚಾಲನೆ ನೀಡಲಾಗಿದೆ ಎನ್ನಲಾಗಿದೆ. ಈ ಎಐ ಬಿಲ್‌ಬೋರ್ಡ್ ನಿಮ್ಮ ಬಾಕಿ ಇರುವ ಟ್ರಾಫಿಕ್ ಚಲನ್‌ಗಳನ್ನು ರಿಯಲ್ ಟೈಮ್‌ನಲ್ಲಿ ಜಾಹೀರಾತಿನಂತೆ ಪ್ರದರ್ಶಿಸುತ್ತದೆ. ನಿಮ್ಮ ವಾಹನದ ನೋಂದಣಿ ಸಂಖ್ಯೆಯನ್ನ 100 ಮೀಟರ್ ದೂರದವರೆಗೆ ಸ್ಕ್ಯಾನ್ ಮಾಡುವ ಕ್ಯಾಮೆರಾಗಳಿಗೆ ಈ ಸ್ಕ್ರೀನ್ ಸಂಪರ್ಕ ನೀಡಲಾಗಿದೆ.
ವಾಹನ ಮಾಲೀಕರಿಗೆ ಕೇವಲ ಚಲನ್‌ಗಳನ್ನು ತೆರವುಗೊಳಿಸಲು ಅಥವಾ ದಾಖಲೆಗಳನ್ನು ಅಪ್‌ಡೇಟ್ ಮಾಡುವುದನ್ನು ನೆನಪಿಸುವುದು ಮಾತ್ರ ಇದರ ಉದ್ದೇಶವಲ್ಲ. ರಸ್ತೆಯ ಮೇಲಿನ ಪ್ರತಿಯೊಂದು ಜವಾಬ್ದಾರಿಯು ಇಡೀ ನಗರವನ್ನು ಹೇಗೆ ಜೀವಂತವಾಗಿರಿಸುತ್ತದೆ ಎಂದು ನಾವು ಅವರಿಗೆ ನೆನಪಿಸುತ್ತಿದ್ದೇವೆ. ರಸ್ತೆ ಸುರಕ್ಷತೆ ವ್ಯವಸ್ಥೆಗಳಿಂದ ಮಾತ್ರ ಬರೋದಿಲ್ಲ ಎಂದು ಕಾರ್ಸ್ 24ನ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಸದ್ಯಕ್ಕೆ ಪ್ರಾಯೋಗಿಕವಾಗಿ ಈ ವ್ಯವಸ್ಥೆಗೆ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ನಗರದ ವಿವಿಧೆಡೆ ಇದೇ ತಂತ್ರಜ್ಞಾನ ಜಾರಿಯಾಗಲಿದೆ. ಇದನ್ನು ಹಲವರು ಸ್ವಾಗತಿಸುತ್ತಿದ್ದರೆ, ವಾಹನ ಮಾಲೀಕರ ಖಾಸಗಿ ವಿವರಗಳ ಬಹಿರಂಗ ಪ್ರದರ್ಶನ ಸರಿಯೇ? ಎಂದು ಪ್ರಶ್ನಿಸುತ್ತಿದ್ದಾರೆ.












Click it and Unblock the Notifications