Peenya Flyover: ಬೆಂಗಳೂರು-ತುಮಕೂರು ಪ್ರಯಾಣಿಕರೇ ಗಮನಿಸಿ: ಪೀಣ್ಯ ಫ್ಲೈಓವರ್ 8 ದಿನ ರಾತ್ರಿ ಸಂಚಾರ ನಿಷೇಧ
ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ನೆಲಮಂಗಲ, ತುಮಕೂರು ಕಡೆಗೆ ತೆರಳುವವ ವಾಹನ ಸವಾರರಿಗೆ ಪೀಣ್ಯ ಸಂಚಾರ ಪೊಲೀಸ್ ಮಹತ್ವದ ಸುದ್ದಿ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ-4 (National Highway 4)ರ ಭಾಗವಾಗಿರುವ ಪೀಣ್ಯ ಎಲಿವೇಟೆಡ್ ಫ್ಲೈಓವರ್ (ಡಾ. ಶ್ರೀ ಶಿವಕುಮಾರ ಮೇಲ್ವೇತುವೆ) ವಾಹನ ಸವಾರರಿಗೆ ನಿರ್ಬಂಧಿಸಲಾಗಿದ್ದು, ಪರ್ಯಾಯ ಮಾರ್ಗಗಳನ್ನು ಅನುರಿಸುವಂತೆ ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಪೀಣ್ಯ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-4 ರ ಪೀಣ್ಯದ 'ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ವೇತುವೆ' ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದಡಾಂಬರೀಕರಣ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸುಗಮ ಸಂಚಾರದ ದೃಷ್ಟಿಯಿಂದ ಜುಲೈ 27 ರಿಂದ ಮುಂದಿನ ತಿಂಗಳ ಆಗಸ್ಟ್ 05ರವರೆಗೆ (ಒಟ್ಟು 08 ದಿನ) ಈ ವಾಹನ ಸಂಚಾರ ನಿರ್ಬಂಧ ಜಾರಿಯಲ್ಲಿರಲಿದೆ. ಈ ತಾತ್ಕಾಲಿಕ ಸಂಚಾರ ಅಡಚಣೆಗಾಗಿ ಸಹಕರಿಸುಂತೆ ಪೊಲೀಸರು ಸಾರ್ವಜನಿಕರಲ್ಲಿ ಕೋರಿದ್ದಾರೆ.

ರಾತ್ರಿ 10-ಬೆಳಗ್ಗೆ 05 ಗಂಟೆಯವರೆಗೆ ನಿಷೇಧ
ಮೇಲ್ಸೇತುವೆ ಮೇಲೆ ರಾತ್ರಿ ಡಾಂಬರೀಕರಣ ಕಾರ್ಯ ನಡೆಯಲಿದೆ. ಉದ್ದೇಶಿತ ದಿನಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 05 ಗಂಟೆಯವರೆಗೆ ಹಾಗೂ ಈ ಅವಧಿಯ ಶನಿವಾರ ಮತ್ತು ಭಾನುವಾರ ರಾತ್ರಿ 12 ಗಂಟೆಯಿಂದ ಬೆಳಗ್ಗೆ 05ರವರೆಗೆ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಮೇಲೆ ಬೆಂಗಳೂರು ನಗರಕ್ಕೆ ಬರುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ವಾಹನ ಸವಾರರು ಈ ಸೂಚನೆ ಗಮನಿಸುವ ಜೊತೆಗೆ ಸಂಚಾರಕ್ಕೆ ಪರ್ಯಾಯ ರಸ್ತೆ ಅನುಸರಿಸುವಂತೆ ಕೋರಲಾಗಿದೆ.
ಬೆಂಗಳೂರು-ನೆಲಮಂಗಲದ ಈ ಮಾರ್ಗದಲ್ಲಿ ಸಾವಿರಾರು ವಾಹನಗಳು ಸಂಚಾರ ಮಾಡುತ್ತಿವೆ. ಹಗಲು ಎಂದಿನಂತೆ ಅವಕಾಶ ಇದ್ದು, ರಾತ್ರಿ ಮಾತ್ರವೇ ಡಾಂಬರೀಕರಣ ನಡೆಯುವ ಪ್ರಯುಕ್ತ ಮೇಲ್ಸೇತುವೆ ಮೇಲೆ ವಾಹನಗಳ ಪ್ರವೇಶ/ಸಂಚಾರವನ್ನು ನಿಷೇಧಿಸಲಾಗಿದೆ. ಕಾಮಗಾರಿ ಮುಗಿಯುತ್ತಿದ್ದಂತೆ ಪ್ರವೇಶ ಮುಕ್ತಗೊಳಿಸುವ ಕುರಿತು ಸಂಚಾರಿ ಪೊಲೀಸರು ಅಪ್ಡೇಟ್ ನೀಡಲಿದ್ದಾರೆ.
ಎಲ್ಲಿಂದ ಎಲ್ಲಿಯವರೆಗೆ ಸಂಚಾರ ನಿರ್ಬಂಧ?
ರಾಷ್ಟ್ರೀಯ ಹೆದ್ದಾರಿ-4 ರ ಪೀಣ್ಯ ಎಲಿವೇಟೆಡ್ ಫ್ಲೈಓವರ್ (ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ವೇತುವೆ) ಮೇಲೆ ಕೆನ್ನಮೆಟಲ್ ವಿಡಿಯಾ ಅಪ್ಪರ್ ರಾಂಪ್ ದಿಂದ ಎಸ್.ಆರ್.ಎಸ್ ಡೌನ್ ರಾಂಪ್ ವರೆಗೆ ಎಲ್ಲ ಬಗೆಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ ಯಾವುವು?
ನೆಲಮಂಗಲದಿಂದ ಬೆಂಗಳೂರು ಕಡೆಗೆ ಸಂಚರಿಸುವ ವಾಹನಗಳು ಕೆನ್ನಮೆಟಲ್ ಫ್ಯಾಕ್ಟರಿ ಹತ್ತಿರ ಫೈಓವರ್ ರಾಷ್ಟ್ರೀಯ ಹೆದ್ದಾರಿ-4 ಮತ್ತು ಸರ್ವಿಸ್ ರಸ್ತೆ ಮೂಲಕ 8ನೇ ಮೈಲಿ ತಲುಪಿ ಅಲ್ಲಿಂದ ದಾಸರಹಳ್ಳಿ ಮೂಲಕ ಜಾಲಹಳ್ಳಿ ಕ್ರಾಸ್, ಮುಂದೆ ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ ಮಾರ್ಗವಾಗಿ ಎಸ್.ಆರ್.ಎಸ್ ಜಂಕ್ಷನ್ ಮೂಲಕ ಸಾಗಿ ಗೊರಗುಂಟೆಪಾಳ್ಯ ಮೂಲಕ ಸಂಚರಿಸಬೇಕು ಎಂದು ಪೀಣ್ಯ ಸಂಚಾರಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Click it and Unblock the Notifications
