ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘನೆ, 14,000 ರೂಪಾಯಿ ದಂಡ ವಸೂಲಿ... Bengaluru Tobacco Violation
ಬೆಂಗಳೂರು: ತಂಬಾಕು ನಿಯಂತ್ರಣ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ತರಲು ಅಧಿಕಾರಿಗಳು ಇದೀಗ ದೊಡ್ಡ ಮಟ್ಟದಲ್ಲಿ ಕಾರ್ಯಾಚರಣೆ ಶುರು ಮಾಡಿದ್ದಾರೆ. ತಂಬಾಕು ಬಳಕೆ ಕಾರಣ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ, ಹೀಗಿದ್ದಾಗ ಸರ್ವಾಜನಿಕ ಪ್ರದೇಶದಲ್ಲಿ ತಂಬಾಕು ಬಳಕೆ ವಿರುದ್ಧವಾಗಿ ಈಗಾಗಲೇ ಕಠಿಣ ಕಾನೂನು ಜಾರಿಗೆ ತರಲಾಗಿದೆ. ಹೀಗಿದ್ರೂ ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘನೆ ಆರೋಪ ಪದೇ ಪದೇ ಕೇಳಿಬರುತ್ತಲೇ ಇತ್ತು. ಹೀಗಾಗಿ ಖುದ್ದು ಅಧಿಕಾರಗಳೇ ಅಖಾಡಕ್ಕೆ ಇಳಿದು, ಆ ಮೂಲಕ ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘನೆ ಮಾಡುತ್ತಿದ್ದವರಿಗೆ ತಕ್ಕಪಾಠ ಕಲಿಸಿದ್ದಾರೆ.
ಅಂದಹಾಗೆ ಬೆಂಗಳೂರಿನಲ್ಲಿ ಗಲ್ಲಿ ಗಲ್ಲಿಗಳಲ್ಲೂ ತಂಬಾಕು ಮಾರಾಟ ನಡೆಯುತ್ತಿರುವ ಕಾರಣಕ್ಕೆ ಈಗ ತಂಬಾಕು ನಿಯಂತ್ರಣ ಕಾಯ್ದೆ ಸರಿಯಾಗಿ ಪಾಲನೆ ಆಗುತ್ತಿಲ್ಲ ಎಂಬ ದೂರುಗಳು ಬಂದಿದ್ದವು. ಈ ಬೆಳವಣಿಗೆ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಭಯ ಇಲ್ಲದೆ ತಂಬಾಕು ಉತ್ಪನ್ನ ಹಾಗೂ ತಂಬಾಕು ಬಳಸುವವರ ಸಂಖ್ಯೆ ಕೂಡ ಹೆಚ್ಚಾಗಿತ್ತು. ಇದೇ ಕಾರಣಕ್ಕೆ ತಂಬಾಕು ನಿಯಂತ್ರಣ ಕಾಯ್ದೆ ನಿಯಮ ಉಲ್ಲಂಘನೆ ತಡೆಯಲು ಬಿಬಿಎಂಪಿ ಉತ್ತರ ವಲಯ ವ್ಯಾಪ್ತಿಯಲ್ಲಿ ಫೆಬ್ರವರಿ 18 ಬುಧವಾರವೇ ವಿಶೇಷ ಪರಿಶೀಲನಾ ಅಭಿಯಾನ ಆರಂಭಿಸಲಾಗಿದೆ. ಈ ಅಭಿಯಾನ ಫೆಬ್ರವರಿ 26 ಗುರುವಾರ ತನಕವೂ ನಡೆಯಲಿದ್ದು, ಈಗ ನಿಯಮ ಉಲ್ಲಂಘನೆ ಮಾಡಿದ್ದವರಿಂದ 14,000 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

14,000 ರೂಪಾಯಿ ದಂಡ ವಸೂಲಿ
ತಂಬಾಕು ನಿಯಂತ್ರಣ ಕಾಯ್ದೆ ನಿಯಮ ಉಲ್ಲಂಘನೆ ತಡೆಯಲು ಕೈಗೊಂಡಿರುವ ವಿಶೇಷ ಅಭಿಯಾನ ಸಾರ್ಜನಿಕರಲ್ಲಿ ಜಾಗೃತಿ ಕೂಡ ಮೂಡಿಸಲಿದೆ. ಫೆಬ್ರವರಿ 19 ತನಕವು ಜಾರಿ ದಳದ ಅಧಿಕಾರಿಗಳು 1, 4, 11, 23 & 29ನೇ ವಾರ್ಡ್‌ಗಳಲ್ಲಿ ಪರಿಶೀಲನೆ ನಡೆಸಿ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣವನ್ನ ದಾಖಲಿಸಿ ಒಟ್ಟು 14,000 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. 23ನೇ ವಾರ್ಡ್‌ನ ನಾಗವಾರದಲ್ಲಿ ಅತಿ ಹೆಚ್ಚು ಎಂದರೆ ಸುಮಾರು 3,000 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ಶಿಕ್ಷಣ ಸಂಸ್ಥೆಗಳ ಸಮೀಪದಲ್ಲೇ ಮಾರಾಟ
ಅಂದಹಾಗೆ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧವಿದ್ದರೂ ಧೂಮಪಾನ ಮಾಡುವುದು ಸೇರಿ, ಅಪ್ರಾಪ್ತರಿಗೆ ತಂಬಾಕು ಉತ್ಪನ್ನ ಮಾರಾಟ & ನಿಷೇಧಿತ ಪ್ರದೇಶದಲ್ಲಿ ತಂಬಾಕು ಜಾಹೀರಾತು ಪ್ರದರ್ಶನ ತಡೆಯುವುದು ಪ್ರಮುಖವಾಗಿ ಅಭಿಯಾನ ಉದ್ದೇಶವಾಗಿದೆ. ತಂಬಾಕು ನಿಯಂತ್ರಣ ಕಾಯ್ದೆ ಅಡಿಯಲ್ಲಿ ನಿಗದಿ ಮಾಡಿರುವ ಅಂತರ ನಿಯಮ ಉಲ್ಲಂಘಿಸಿ, ಶಿಕ್ಷಣ ಸಂಸ್ಥೆಗಳ ಸಮೀಪದಲ್ಲೇ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರಿಗೆ ತಕ್ಕ ಪಾಠ ಕಲಿಸಿದ್ದಾರೆ ಅಧಿಕಾರಿಗಳು. ಈ ಮೂಲಕ ಬೆಂಗಳೂರಿನಲ್ಲಿ ಇದೀಗ, ತಂಬಾಕು ಮಾರಾಟ ವಿಚಾರದಲ್ಲಿ ಖಡಕ್ ಕ್ರಮ ಕೈಗೊಂಡಿದ್ದಾರೆ ಪಾಲಿಕೆ ಅಧಿಕಾರಿಗಳು.












Click it and Unblock the Notifications