Six-lane tunnel: ಬೆಂಗಳೂರು ಟ್ರಾಫಿಕ್‌ಗೆ ಮುಕ್ತಿ ನೀಡಲು ಬರಲಿದೆ ಆರು ಪಥದ ಸುರಂಗ ಮಾರ್ಗ, ಎಲ್ಲಿ?
ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಗೆ ಮುಕ್ತಿ ನೀಡಲು ಹಾಗೂ ಭವಿಷ್ಯದಲ್ಲಿ ಬೆಂಗಳೂರಿನ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಸರ್ಕಾರ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಎರಡನೇ ಹಂತದಲ್ಲಿ ಬರಲಿರುವ ಪೂರ್ವ-ಪಶ್ಚಿಮ ಕಾರಿಡಾರ್ ಸುರಂಗ ಮಾರ್ಗವನ್ನು ಡಬಲ್ ಡೆಕ್ ಆರು ಪಥಗಳ ರಸ್ತೆಗಳಾಗಿ ನಿರ್ಮಿಸಲು ಮುಂದಾಗಿದೆ.
ಬೆಂಗಳೂರು ಸಮಗ್ರ ಸಂಚಾರ ನಿರ್ವಹಣೆ ಯೋಜನೆಯಡಿ ಟ್ರಾಫಿಕ್ ಜಾಮ್‌ಗೆ ಕಡಿವಾಣ ಹಾಕಲು ಹಾಗೂ ಇತರ ಮೂಲಸೌಕರ್ಯ ಒದಗಿಸಲು ದೆಹಲಿಯ ಆಲ್ಟಿನೋಕ್ ಎಂಬ ಸಂಸ್ಥೆ ಕಾರ್ಯಸಾಧ್ಯತಾ ವರದಿ ಸಲ್ಲಿಸಿದೆ. ಇದರಲ್ಲಿಯೂ ಈ ಭಾಗದಲ್ಲಿ ಐದು ಪಥ, ಆರು ಪಥ ನಿರ್ಮಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರಣೆ ನೀಡಲಾಗಿದೆ.

ಈ ಪೂರ್ವ-ಪಶ್ಚಿಮ ಕಾರಿಡಾರ್ ಸುರಂಗ ಮಾರ್ಗವು ನಗರದ ಕೆ.ಆರ್.ಪುರದಿಂದ ಜವಾಹರಲಾಲ್ ನೆಹರೂ ಪಾರ್ಕ್, ಸಿ.ವಿ. ರಾಮನ್ ಆಸ್ಪತ್ರೆ, ಇಂದಿರಾನಗರ, ದೊಮ್ಮಲೂರು, ಲಾಲ್‌ಬಾಗ್, ನ್ಯಾಷನಲ್ ಕಾಲೇಜು, ಚಾಮರಾಜಪೇಟೆ, ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಹಾಗೂ ನಾಯಂಡಹಳ್ಳಿ ಬಳಿಯ ನೈಸ್ ರಸ್ತೆ ಜಂಕ್ಷನ್‌ವರೆಗೆ ನಿರ್ಮಾಣವಾಗಲಿದೆ. ಈ ಸಂಬಂಧ ಈಗಾಗಲೇ ನಕ್ಷೆ ಕೂಡ ಸಿದ್ಧಗೊಂಡಿದೆ.
ಐದು ಪಥಗಳಾಗಿ ಈ ಟ್ವಿನ್ ಟ್ಯೂಬ್ ಟನಲ್ ಅನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಮೇಲೆ ಎರಡು ಹಾಗೂ ಕೆಳಗೆ ಮೂರು ಪಥಗಳು ಬರಲಿವೆ. ಈ ಮಾರ್ಗದಲ್ಲಿ ಪ್ರತಿ ಗಂಟೆಗೆ ಸುಮಾರು 4,500 ವಾಹನಗಳು ಸುಗಮವಾಗಿ ಸಂಚರಿಸಬಹುದು ಎಂದು ಹೇಳಲಾಗಿದೆ. ಅಲ್ಲದೆ ಮಾರ್ಗಮಧ್ಯೆ ಎಮರ್ಜೆನ್ಸಿಗಾಗಿಯೂ ಒಂದು ಪಥವನ್ನು ಮೀಸಲಿಡಲಾಗುವುದು. ಇದರಿಂದ ನಿರ್ಮಾಣ ವೆಚ್ಚ ಕೂಡ ತಗ್ಗಲಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಉತ್ತರ-ದಕ್ಷಿಣ ಕಾರಿಡಾರ್ ಸುರಂಗ ರಸ್ತೆಯನ್ನು ಮೂರು ಪಥದಲ್ಲಿ ನಿರ್ಮಿಸಲಾಗುತ್ತಿದೆ. ಇಲ್ಲಿಯೂ ಸಾರ್ವಜನಿಕ ಬಸ್ ಸಂಚಾರ ಹಾಗೂ ಎಮರ್ಜೆನ್ಸಿಗಾಗಿ ಪ್ರತ್ಯೇಕ ರಸ್ತೆ ಮಾರ್ಗ ನಿರ್ಮಿಸಲಾಗುತ್ತಿದೆ. ಇದೇ ರೀತಿ ಪೂರ್ವ-ಪಶ್ಚಿಮ ಕಾರಿಡಾರ್‌ನಲ್ಲೂ ಐದು ಇಲ್ಲವೇ ಆರು ಪಥದ ಟನ್ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. ಈ ರಸ್ತೆಗಳು ವಿಸ್ತಾರವಾಗಿ ನಿರ್ಮಾಣವಾದರೆ, ದೀರ್ಘಕಾಲದವರೆಗೆ ಜನ ಅದರ ಪ್ರಯೋಜನ ಪಡೆಯಬಹುದು ಎಂದು ಹೇಳಲಾಗಿದೆ.
ಉತ್ತರ-ದಕ್ಷಿಣ ಕಾರಿಡಾರ್‌ನ ಮೊದಲ ಹಂತದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೆಬ್ಬಾಳ-ಸಿಲ್ಕ್ ಬೋರ್ಡ್‌ವರೆಗಿನ ಸುರಂಗ ರಸ್ತೆ ಯೋಜನೆಯು ಸುಮಾರು ಮೂರು ಪಥದ 18 ಕಿ.ಮೀ ಮಾರ್ಗದ ರಸ್ತೆಯಲ್ಲಿ ಪ್ರತಿ ಕಿ.ಮೀಗೆ 16 ರೂಪಾಯಿ ಶುಲ್ಕ ನಿಗದಿಪಡಿಸಲು ಸಹ ಮುಂದಾಗಿದೆಯಂತೆ.

ಭವಿಷ್ಯದಲ್ಲಿ ಅಂದರೆ, 2031 ಹಾಗೂ 2041ರ ವೇಳೆಗೆ ಈ ಸುರಂಗ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಅಂದಾಜಿಸಿ ಈ ಶುಲ್ಕ ನಿಗದಿ ಮಾಡುವಂತೆಯೂ ತಿಳಿಸಿದೆ ಎನ್ನಲಾಗಿದೆ. ಇನ್ನು ಈ ಉತ್ತರ-ದಕ್ಷಿಣ ಕಾರಿಡಾರ್ ಸುರಂಗ ರಸ್ತೆ ನಿರ್ಮಿಸಲು 56 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಅಗತ್ಯವಿದೆ. ಇದಕ್ಕಾಗಿ ಸುಮಾರು 800 ಕೋಟಿ ರೂಪಾಯಿ ಮೀಸಲಿಡಬೇಕು ಎಂದೂ ಆ ವರದಿಯಲ್ಲಿ ಉಲ್ಲೇಖಿಸಲಾಗಿದೆ.












Click it and Unblock the Notifications