ಲಸಿಕೆ:2ನೇ ಡೋಸ್ ವಿತರಣೆಯಲ್ಲಿ ಶೇ.100ರಷ್ಟು ಗುರಿ ಸಾಧಿಸಲಿದೆ ಬೆಂಗಳೂರು
ಬೆಂಗಳೂರು, ಡಿಸೆಂಬರ್ 22: ಬೆಂಗಳೂರಿನಲ್ಲಿ ಶೀಘ್ರವೇ ಕೊರೊನಾ ಲಸಿಕೆಯ ಎರಡನೇ ಡೋಸ್ ವಿತರಣೆ ಶೇ.100ರ ಗಡಿ ತಲುಪಲಿದ್ದು, ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಜೆ ಮಂಜುನಾಥ್ ತಿಳಿಸಿದ್ದಾರೆ. ಯಾರೂ ಭಯಪಡುವ ಅಗತ್ಯವಿಲ್ಲ, ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿವೆ, ಆದರೆ, ಡೆಲ್ಟಾದಷ್ಟು ವೇಗವಾಗಿ ಹರಡುವುದಿಲ್ಲ, ಪ್ರತಿನಿತ್ಯ ಸಾಕಷ್ಟು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯು ಮುಂದಿನ ಒಂದೆರಡು ದಿನಗಳಲ್ಲಿ ಶೇ.100ರಷ್ಟು ಲಸಿಕೆ ಪೂರೈಸಲಿದೆ. ಭಾರತದಲ್ಲಿ ಇದುವರೆಗೆ 200 ಓಮಿಕ್ರಾನ್ ಪ್ರಕರಣಗಳು ಕಂಡುಬಂದಿವೆ. ಕೋವಿಡ್-19 ಲಸಿಕೆಯಲ್ಲಿ ಮೊದಲ ಡೋಸ್ ವಿತರಣೆಯಲ್ಲಿ ರಾಜ್ಯದ ಮೂರು ಜಿಲ್ಲೆಗಳು ಶೇಕಡಾ 100 ಗುರಿ ಸಾಧನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಭಿನಂದನೆ ತಿಳಿಸಿದ್ದರು.
ಬೆಂಗಳೂರು ನಗರ ಸೇರಿದಂತೆ ಮೂರು ಜಿಲ್ಲೆಗಳು ಶೇ 100 ರಷ್ಟು ಗುರಿ ಸಾಧಿಸಿದ್ದು, ರಾಜ್ಯದ ಸರಾಸರಿ ಶೇ 96 ರಷ್ಟು ಇದೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ ಒಟ್ಟಾರೆ ಮೊದಲ ಡೋಸ್ ವಿತರಣೆ ಶೇಕಡಾ 96 ರಷ್ಟಿದ್ದು, 18 ವರ್ಷಕ್ಕಿಂತ ಮೇಲ್ಪಟ್ಟ 4.9 ಕೋಟಿ ಜನರಲ್ಲಿ ಸುಮಾರು 4.7 ಕೋಟಿ ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ.

ಬೆಂಗಳೂರು ನಗರದಲ್ಲಿಯೇ ( ಶೇ.127) ಅತೀ ಹೆಚ್ಚು ಜನರು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದು, ನಂತರದ ಸ್ಥಾನ ಗದಗ (ಶೇ 102) ಹಾಗೂ ವಿಜಯಪುರ (ಶೇ 101) ಪಡೆದುಕೊಂಡಿದೆ. ಈ ನಡುವೆ, ಇತರ ಐದು ಜಿಲ್ಲೆಗಳು ಶೇ.100 ಮೊದಲ ಡೋಸ್ ವ್ಯಾಪ್ತಿಯನ್ನು ಪೂರ್ಣಗೊಳಿಸುವ ಅಂಚಿನಲ್ಲಿವೆ.
ಕೊಡಗು ಮತ್ತು ಬಾಗಲಕೋಟೆ ಜಿಲ್ಲೆಗಳು ಶೇ.99, ಬೆಳಗಾವಿ, ಚಿಕ್ಕಬಳ್ಳಾಪುರ ಮತ್ತು ದಾವಣಗೆರೆ ಶೇ.98 ಗುರಿ ಸಾಧಿಸಿವೆ. ಲಸಿಕೆ ವಿತರಣೆ ಹೊಸ ಮೈಲಿಗಲ್ಲಿನಲ್ಲಿ ರಾಜ್ಯವು ಅರ್ಹ ಜನಸಂಖ್ಯೆಯ ಶೇ.96ರಷ್ಟು ಜನರಿಗೆ ಮೊದಲ ಡೋಸ್ ಲಸಿಕೆ ನೀಡಿದ್ದು, ಶೇ.80ರಷ್ಟು ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ವರ್ಷಾಂತ್ಯದ ವೇಳೆಗೆ ಎಲ್ಲಾ ಅರ್ಹ ಜನರಿಗೆ ಲಸಿಕೆ ನೀಡಲಾಗುತ್ತದೆ ಎಂದು ಡಾ.ಸುಧಾಕರ್ ಅವರು ಹೇಳಿದ್ದಾರೆ.
ನಗರದಲ್ಲಿ ಲಸಿಕೆ ವಿತರಣೆ ತೀವ್ರಗತಿಯಲ್ಲಿ ಸಾಗುತ್ತಿದ್ದು, ತನ್ನ ವ್ಯಾಪ್ತಿಯ ಒಟ್ಟಾರೆ ಶೇ.91ರಷ್ಟು ಜನರಿಗೆ ಬಿಬಿಎಂಪಿ ಲಸಿಕೆಯನ್ನು ನೀಡಿದೆ. ಲಸಿಕೆ ವಿತರಣೆಯನ್ನು ತೀವ್ರವಾಗಿ ನಡೆಸಲು ವಿವಿಧ ಎನ್‌ಜಿಒಗಳು ಕೂಡ ನೆರವು ನೀಡುತ್ತಿವೆ.
ಈ ನಡುವೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು, ನಗರದಲ್ಲಿ ಪೂರ್ಣ ಪ್ರಮಾಣದ ಜನರಿಗೆ ಲಸಿಕೆ ನೀಡಲು ವಿವಿಧ ಎನ್‌ಜಿಒಗಳ ಸಹಯೋಗದಲ್ಲಿ ಆರು ಲಸಿಕೆ ವ್ಯಾನ್‌ಗಳಿಗೆ ಚಾಲನೆ ನೀಡಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ಶೇ.60 ರಷ್ಟು ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.
2021 ರ ಅಂತ್ಯದ ವೇಳೆಗೆ ಶೇ.70ರಷ್ಟು ಜನರಿಗೆ ಎರಡೂ ಡೋಸ್ ಲಸಿಕೆ ನೀಡುವ ಭರವಸೆಯನ್ನು ಆರೋಗ್ಯ ಇಲಾಖೆ ಹೊಂದಿದೆ ಎಂದು ವರದಿಗಳು ತಿಳಿಸಿವೆ.
ಓಮಿಕ್ರಾನ್ ನ ಗುಣಲಕ್ಷಣಗಳು ಏನು? ಇದು ಎಷ್ಟು ಅಪಾಯಕಾರಿ?
* ಓಮಿಕ್ರಾನ್ ಸೋಂಕಿತ ಅನೇಕ ಜನರು ಲಕ್ಷಣ ರಹಿತವಾಗಿದ್ದಾರೆ.
* ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
* ಒಂದು ಅಥವಾ ಎರಡು ದಿನಗಳವರೆಗೆ ಸುಸ್ತು ಇರಲಿದೆ.
* ಆದಾಗ್ಯೂ ಓಮಿಕ್ರಾನ್ ರೂಪಾಂತರ ಯಾವುದೇ ಹೊಸ ವೈಶಿಷ್ಠ್ಯಗಳು ಇಲ್ಲಿಯವರೆಗೆ ಕಂಡುಬಂದಿಲ್ಲ.
* ಗಂಟಲು ನೋವು, ತಲೆನೋವು, ಉಸಿರಾಟದ ತೊಂದರೆ, ಎದೆನೋವು ಕಾಣಿಸಿಕೊಳ್ಳಲಿದೆ.
* ಓಮಿಕ್ರಾನ್ 3ನೇ ಅಲೆ ಅನ್ನೋದು ಹಲವು ತಜ್ಞರ ಅಭಿಪ್ರಾಯ.
* ಹೊಸ ರೂಪಾಂತರಿ ಡೆಲ್ಟಾಕ್ಕಿಂತ ಹಲವಾರು ಪಟ್ಟು ಹೆಚ್ಚು ಮಾರಕ.
* ಓಮಿಕ್ರಾನ್ ಹೊಸ ರೂಪಾಂತರಿ ಡೆಲ್ಟಾಕ್ಕಿಂತ 7 ಪಟ್ಟು ವೇಗವಾಗಿ ಹರಡುತ್ತಿದೆ.
* ಹೊಸ ರೂಪಾಂತರಿಯನ್ನು ಗುರುತಿಸುವುದಕ್ಕೂ ಮುನ್ನ 32 ಬಾರಿ ರೂಪಾಂತರಗೊಂಡಿದೆ.
* ಸದ್ಯಕ್ಕೆ ಭಾರತದಲ್ಲಿ ಈ ರೂಪಾಂತರದ ಯಾವುದೇ ಪ್ರಕರಣ ದೃಢಪಟ್ಟಿಲ್ಲ.
ಹೊಸ ರೂಪಾಂತರವನ್ನು ತಪ್ಪಿಸಲು ಕೇಂದ್ರ ಸರ್ಕಾರ ಹಾಗೂ ಡಬ್ಲ್ಯುಎಚ್ಒ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವುದು ಅವಶ್ಯಕ. ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಅಲ್ಲದೆ, ಎಲ್ಲಾ ತಜ್ಞರು ಲಸಿಕೆ ಪಡೆಯಲು ಸಲಹೆ ನೀಡುತ್ತಿದ್ದಾರೆ.












Click it and Unblock the Notifications