Bengaluru Temperature: ಫೆಬ್ರವರಿಯಲ್ಲಿ ಬೆಂಗಳೂರಿಗೆ ಅಸಹಜ ಗರಿಷ್ಠ ತಾಪಮಾನದ ಮುನ್ಸೂಚನೆ: IMD
ಬೆಂಗಳೂರು, ಫೆಬ್ರವರಿ 06: ಉದ್ಯಾನ ನಗರಿ ಎಂದು ಕರೆಸಿಕೊಳ್ಳುವ ರಾಜ್ಯ ರಾಜಧಾನಿ ಬೆಂಗಳೂರಿಗರು ಫೆಬ್ರುವರಿ ಆರಂಭದಲ್ಲಿಯೇ ಬಿಸಿಲಿನ ಶಾಖದ ವಾತಾವರಣ ಎದುರಿಸುತ್ತಿದ್ದಾರೆ. ಮುಂದಿನ 48 ಗಂಟೆಗಳ ಕಾಲ ನಗರದಲ್ಲಿ ವಾಡಿಕೆಗಿಂತ ಅತ್ಯಧಿಕ ತಾಪಮಾನ ಕಂಡು ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸದ್ಯ ಕರ್ನಾಟಕದ ತುಂಬೆಲ್ಲ ಹವಾಮಾನದಲ್ಲಿ ಶಾಖದ ವಾತಾವರಣ ಉಂಟಾಗಿದೆ. ಒಣ ಹವೆ ಕಂಡು ಬರುತ್ತಿದೆ. ಇದಕ್ಕೆ ಬೆಂಗಳೂರು ಹೊರತಾಗಿಲ್ಲ. ಫೆಬ್ರವರಿ ಆರಂಭದಿಂದಲೇ ನಗರದಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ದಾಟಿದೆ. ಅದರಲ್ಲೂ ಮಧ್ಯಾಹ್ನ ಅವಧಿಯಲ್ಲಂತೂ ನಗರವು ಉತ್ತರ ಕರ್ನಾಟಕದ ಜಿಲ್ಲೆಗಳಂತೆ ಭಾಸವಾಗುತ್ತಿದೆ. ಈ ತಿಂಗಳಾದ್ಯಂತ ಗರಿಷ್ಠ ತಾಪಮಾನವೇ ಆವರಿಸುವ ಲಕ್ಷಣಗಳು ಇವೆ.

ಇಂದು ಸಹ ಗರಿಷ್ಠ ತಾಪಮಾನ
ಇಂದು ಮಂಗಳವಾರ (ಫೆ.6) ರಂದು ಬೆಂಗಳೂರು ನಗರ ಪ್ರದೇಶದಲ್ಲಿ ಗರಿಷ್ಠ 31.8 ಡಿ.ಸೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIAL) ಗರಿಷ್ಠ 31.8 ಡಿ.ಸೆ ಹಾಗೂ ಬೆಂಗಳೂರಿನ ಎಚ್‌ಎಎಲ್‌ನಲ್ಲಿ 31.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಕನಿಷ್ಠ ತಾಪಮಾನ 15ರಿಂದ 18 ಡಿ.ಸೆ ದಾಖಲಾಗುತ್ತಿದೆ ಎಂದು ಐಎಂಡಿ ಬೆಂಗಳೂರಿನ ವಿಜ್ಞಾನಿ ಎ ಪ್ರಸಾದ್ ಹೇಳಿದರು.
ಭಾರತೀಯ ಹವಾಮಾನ ಇಲಾಖೆಯ (IMD) ಪ್ರಕಾರ, ಕಳೆದ 30 ವರ್ಷಗಳ ಸರಾಸರಿ ಆಧರಿಸಿ ಬೆಂಗಳೂರು ಹವಾಮಾನ ಪರಿಸ್ಥಿತಿಗಳು ಸಹಜವಾಗಿಲ್ಲ. ವಾತಾವರಣದಲ್ಲಿ ಅಸಹಜತೆ ಇದೆ ಎಂದು ತಿಳಿಸಿದ್ದಾರೆ. ಮುಂದಿನ ಎರಡು ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ 1-2 ಡಿಗ್ರಿಗಳಷ್ಟು ತಾಪಮಾನದಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ.
'ಎಲ್ ನಿನೊ' ಕಾರಣದಿಂದ ತಾಪಮಾನ ಏರಿಕೆ
ಹೀಗೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಒಣಹವೆ ಮುಂದುವರಿಯಲು 'ಎಲ್ ನಿನೊ' ಕಾರಣ ಎನ್ನಲಾಗಿದೆ.'ಪೂರ್ವ ಪೆಸಿಫಿಕ್ ಸಾಗರದಲ್ಲಿ ಮೇಲ್ಮೈ ನೀರಿನ ತಾಪಮಾನ ಏರಿಕೆಗೆ ಕಾರಣವಾಗುವ ಹವಾಮಾನ ಪರಿಸ್ಥಿತಿ' ಅನ್ನು 'ಎಲ್ ನಿನೊ' ಎಂದು ಹವಾಮಾನ ಇಲಾಖೆ ಕರೆಯುತ್ತದೆ.

ಪ್ರತಿ ವರ್ಷ, ಜಾಗತಿಕ ತಾಪಮಾನ ಏರಿಕೆಯ ಪರಿಣಾಮವು ರಾಜ್ಯದ ಮೇಲೂ ಆಗುತ್ತದೆ. ಇದರಿಂದಾಗಿ ಜನರು ಸಾಮಾನ್ಯಕ್ಕಿಂತ ಬಿಸಿಯಾದ ವಾತಾವರಣ ಎದುರಿಸುತ್ತಾರೆ. ಹಲವೆಡೆ ಹೀಟ್ ವೇ ನಿಂದಲೇ ಪ್ರಾಣ ಕಳೆದಕೊಂಡ ಉದಾಹರಣೆಗಳು ಇವೆ.
ನಿರೀಕ್ಷೆ ಹುಸಿ: ಫೆಬ್ರವರಿ ಪೂರ್ಣ ಒಣಹವೆ?
ಈ ಫೆಬ್ರವರಿ ತಿಂಗಳು ಚಳಿಗಾಲವಾದರೂ ಸಹಿತ ಎಲ್ ನಿನೊ ಪರಿಣಾಮವು ತಾಪಮಾನವನ್ನು ಹೆಚ್ಚಿಸುತ್ತಿದೆ. ಮಾರ್ಚ್ ತಿಂಗಳ ಬಳಿಕ ಅದು ಕಡಿಮೆ ಆಗುತ್ತದೆ ಎಂಬ ನಿರೀಕ್ಷೆಗಳು ಇತ್ತು. ಇದೀಗ ಮಾರ್ಚ್ ನಂತರವು ಅದರ ಪ್ರಭಾವ ಕಡಿಮೆ ಆಗುವ ಲಕ್ಷಣಗಳು ಇಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಪ್ರತಿ ವರ್ಷದಿಂದ ವರ್ಷಕ್ಕೆ ಬೇಸಿಗೆ ಶಾಖ/ಒಣ ಹವೆ ಹೆಚ್ಚಾಗುತ್ತಿದೆ. ಅದೇ ರೀತಿ ಈ ವರ್ಷವು ಬೇಸಿಗೆಯು ಮತ್ತಷ್ಟು ಕಠಿಣವಾಗುವ ಸಾಧ್ಯತೆ ಇದೆ. ಮಾರ್ಚ್ ಆರಂಭದಲ್ಲಿ ಕರಾವಳಿ ಕರ್ನಾಟಕದಲ್ಲಿ ಬಿಸಿಗಾಳಿಯ ವಾತಾವರಣ ಉಂಟಾಗಲಿದೆ. ಈ ಭಾಗದಲ್ಲಿ ಮುಂದಿನ ಏಳು ದಿನಗಳ ಮುನ್ಸೂಚನೆ ಇದೆ ಎಂದು ಡಾ.ಪ್ರಸಾದ್ ಮಾಹಿತಿ ನೀಡಿದರು.
ಫೆಬ್ರವರಿಯಲ್ಲಿ ಬೆಂಗಳೂರಿನ ಸರಾಸರಿ ಮಳೆ 7 ಮಿಮೀ ಮಳೆ ಆಗಿದ್ದು, ಇದು ಸಾಮಾನ್ಯಕ್ಕಿಂತ ಕಡಿಮೆ ಎಂದು ಐಎಂಡಿ ತಿಳಿಸಿದೆ. ಇನ್ನೂ ರಾಜ್ಯದಲ್ಲಿ ಮುಂದಿನ ಒಂದು ವಾರ ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದೆ. ಗರಿಷ್ಠ ತಾಪಮಾನ ಏರಿಕೆ ಆಗುತ್ತದೆ ಎಂದು ವರದಿ ತಿಳಿಸಿದೆ.
ಒಟ್ಟಾರೆ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಫೆಬ್ರವರಿ ಸೇರಿದಂತೆ ಇಡೀ ಬೇಸಿಗೆಯೇ ಅಧಿಕ ಶಾಖದ ಸ್ಥಿತಿ ನಿರ್ಮಾಣವಾಗಲಿದೆ.












Click it and Unblock the Notifications