Bengaluru Suburban Rail: ಹೊಸ ಗಡುವು ನೀಡಿದ ಕೇಂದ್ರ, 2030ರವರೆಗೆ ಕಾಯಲೇಬೇಕು: ಇಲ್ಲಿದೆ ಲೇಟೆಸ್ಟ್ ಅಪ್‌ಡೇಟ್
ಬೆಂಗಳೂರು: ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ಪಡೆಯಲು ಕಾತರದಿಂದ ಕಾಯುತ್ತಿದ್ದ ಜನತೆಗೆ ಮತ್ತೆ ನಿರಾಸೆಯಾಗಿದೆ. ನಗರದ ಬಹುನಿರೀಕ್ಷಿತ 'ಬೆಂಗಳೂರು ಉಪನಗರ ರೈಲು ಯೋಜನೆ' (BSRP) ಪೂರ್ಣಗೊಳ್ಳುವುದು ಭಾರೀ ವಿಳಂಬವಾಗಲಿದ್ದು, ಈ ಯೋಜನೆಯಡಿ ರೈಲುಗಳ ಸಂಚಾರ ಆರಂಭವಾಗಲು 2030 ರವರೆಗೂ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. 2020ರಲ್ಲಿ ಈ ಯೋಜನೆ ಅನುಮೋದನೆಗೊಂಡಾಗ, ಚಾಲಕರಿಗೆ ಟ್ರಾಫಿಕ್‌ನಿಂದ ಮುಕ್ತಿ ನೀಡಿ, ಅಗ್ಗದ ಮತ್ತು ಪರಿಸರ ಸ್ನೇಹಿ ಪ್ರಯಾಣ ಒದಗಿಸುವ ಭರವಸೆ ನೀಡಲಾಗಿತ್ತು. ಆದರೆ, ಈಗಿನ ಪರಿಸ್ಥಿತಿ ನೋಡಿದರೆ ಆ ಕನಸು ನನಸಾಗಲು ಇನ್ನೂ ಐದು ವರ್ಷಗಳೇ ಬೇಕಾಗಬಹುದು.
ವಿಳಂಬಕ್ಕೆ ಕಾರಣವೇನು?
ಯೋಜನೆ ಆರಂಭಗೊಂಡು ವರ್ಷಗಳೇ ಕಳೆದರೂ, ನಿರೀಕ್ಷಿತ ವೇಗದಲ್ಲಿ ಕೆಲಸ ಸಾಗುತ್ತಿಲ್ಲ. ಪ್ರಮುಖವಾಗಿ ರೈಲ್ವೆ ಹಳಿ ನಿರ್ಮಾಣಕ್ಕೆ ಬೇಕಾದ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಜೊತೆಗೆ, ಎಸಿ ರೈಲು ಬೋಗಿಗಳ ಖರೀದಿ ಪ್ರಕ್ರಿಯೆಯೂ ತಲೆನೋವಾಗಿ ಪರಿಣಮಿಸಿದೆ. ಮೊದಲು ರೈಲುಗಳನ್ನು ಗುತ್ತಿಗೆ ಪಡೆಯಲು ಯೋಜಿಸಲಾಗಿತ್ತು, ಆದರೆ ಅದು ಸಾಧ್ಯವಾಗದ ಕಾರಣ ಹೊಸದಾಗಿ ರೈಲುಗಳನ್ನು ಖರೀದಿಸಬೇಕಿದೆ. ಇವೆಲ್ಲದರ ಪರಿಣಾಮವಾಗಿ, ರೈಲು ಮಾರ್ಗಗಳ ಪೂರ್ಣಗೊಳ್ಳುವಿಕೆ ದಿನಾಂಕಗಳು ಬದಲಾಗಿವೆ.ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಈ ಕೆಳಗಿನಂತೆ ಯೋಜನೆಗಳು ಪೂರ್ಣಗೊಳ್ಳಲಿವೆ.

- 25 ಕಿಮೀ ಮಲ್ಲಿಗೆ ಮಾರ್ಗ (ಬೆನ್ನಿಗಾನಹಳ್ಳಿ-ಚಿಕ್ಕಬಾಣಾವರ): 2028ರ ಅಂತ್ಯದ ವೇಳೆಗೆ.
- 46 ಕಿಮೀ ಕನಕ ಮಾರ್ಗ (ಹೀಲಲಿಗೆ-ರಾಜನಕುಂಟೆ): ಜೂನ್ 2029ರ ವೇಳೆಗೆ.
- 41 ಕಿಮೀ ಸಂಪಿಗೆ ಮಾರ್ಗ (ಕೆಎಸ್‌ಆರ್ ಬೆಂಗಳೂರು ನಗರ-ಯಲಹಂಕ-ದೇವನಹಳ್ಳಿ): ಮಾರ್ಚ್ 2030 ರೊಳಗೆ.
- 35 ಕಿಮೀ ಪಾರಿಜಾತ ಮಾರ್ಗ (ಕೆಂಗೇರಿ-ವೈಟ್‌ಫೀಲ್ಡ್): ಈಗ ಮಾರ್ಚ್ 2030 ರೊಳಗೆ.
ಈ ವಿಳಂಬದಿಂದಾಗಿ ನಗರದ ಹೊರವಲಯದ ಬೆಳವಣಿಗೆಗೆ ಹೊಡೆತ ಬೀಳುವುದಲ್ಲದೆ, ಮಾಲಿನ್ಯ ಮತ್ತು ಪ್ರಯಾಣದ ವೆಚ್ಚವೂ ಹೆಚ್ಚಾಗಲಿದೆ. ಇದು ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಿದಂತೆಯೇ ಸರಿ.
ಕೆ-ರೈಡ್ (K-RIDE) ಸ್ಪಷ್ಟನೆ
ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ, ಯೋಜನೆಯ ಉಸ್ತುವಾರಿ ಹೊತ್ತಿರುವ 'ಕೆ-ರೈಡ್' (K-RIDE) ಸಂಸ್ಥೆ ಇತ್ತೀಚೆಗೆ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ಮತ್ತು ನಿರ್ದೇಶಕ ರಾಜೇಶ್ ಕುಮಾರ್ ಸಿಂಗ್ ಅವರು ಸ್ಥಳೀಯರು ಮತ್ತು ಸಂಘ ಸಂಸ್ಥೆಗಳ ಜೊತೆ ಮುಕ್ತವಾಗಿ ಚರ್ಚಿಸಿದ್ದಾರೆ. "ನಾವು ಕೇವಲ ಕಟ್ಟಡ ಕಟ್ಟುತ್ತಿಲ್ಲ, ಜನರ ಅಭಿಪ್ರಾಯವನ್ನೂ ಕೇಳುತ್ತಿದ್ದೇವೆ," ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಯೋಜನೆಯ ಮಾಹಿತಿಯನ್ನು ಜನರಿಗೆ ತಲುಪಿಸಲು 'ಸಂಪರ್ಕ' ಎಂಬ ನ್ಯೂಸ್‌ಲೆಟರ್ ಅನ್ನು ಬಿಡುಗಡೆ ಮಾಡಲಾಯಿತು. ಜನರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ, ಯೋಜನೆ ಜಾರಿಯಲ್ಲಿ ಅಳವಡಿಸಿಕೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ತಜ್ಞರ ಪ್ರಕಾರ, ಎಷ್ಟೇ ತಡವಾದರೂ ಈ ಯೋಜನೆ ಬೆಂಗಳೂರಿಗೆ ಅತ್ಯಗತ್ಯ. ಉದ್ಯೋಗ ಮತ್ತು ವಸತಿಗಾಗಿ ನಗರದಾದ್ಯಂತ ಹರಡಿಕೊಂಡಿರುವ ಜನರಿಗೆ ಇದು ಜೀವನಾಡಿಯಾಗಬಲ್ಲದು. ಮುಂದಿನ ದಿನಗಳಲ್ಲಿ ರೈಲು ಸಂಚಾರಕ್ಕೆ ಅಗತ್ಯವಿರುವ ಯಂತ್ರೋಪಕರಣಗಳು, ಬೋಗಿ, ಎಂಜಿನ್‌ಗಳ ಖರೀದಿಯೂ ಸೇರಿದಂತೆ ಒಟ್ಟಾರೆಕಾಮಗಾರಿ ವೇಗ ಪಡೆದುಕೊಳ್ಳಬೇಕಿದೆ ಎಂಬುದೇ ಎಲ್ಲರ ಒತ್ತಾಯವಾಗಿದೆ.












Click it and Unblock the Notifications