Bengaluru: ಟೀಚರ್‌ಗೆ ಹಣ್ಣುಗಳೆಂದರೆ ಇಷ್ಟ ಎಂದು ಗೊತ್ತಾದದ್ದೇ ತಡ; ಕಿಟಕಿ ಮೂಲಕ ಹರಿದು ಬಂತು ಮಕ್ಕಳ ಪ್ರೀತಿ, Viral Video
ಶಿಕ್ಷಕ ಮತ್ತು ವಿದ್ಯಾರ್ಥಿಯ ಸಂಬಂಧ ಕೇವಲ ತರಗತಿಯ ಪಾಠಗಳಿಗೆ ಸೀಮಿತವಾಗಿರುವುದಿಲ್ಲ ಎಂಬುದಕ್ಕೆ ಬೆಂಗಳೂರಿನ ಶಾಲೆಯೊಂದರಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಟೀಚ್ ಫಾರ್ ಇಂಡಿಯಾ (Teach For India) ಫೆಲೋ ಆಗಿ ಕೆಲಸ ಮಾಡುತ್ತಿರುವ ದೀಪಾಲಿ ದಹಿಕಂಬ್ಳೆ ಅವರು ಹಂಚಿಕೊಂಡಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಜನರ ಮನಗೆಲ್ಲುತ್ತಿದೆ. ಅದ್ದೂರಿಯಾದ ಉಡುಗೊರೆಗಳಿಲ್ಲದೆ, ಕೇವಲ ಮುಗ್ಧ ಪ್ರೀತಿಯಿಂದಲೇ ಮಕ್ಕಳು ಶಿಕ್ಷಕಿಯ ಮನಸ್ಸನ್ನು ಹೇಗೆ ಗೆದ್ದರು ಎಂಬುದು ಈ ವಿಡಿಯೋದ ವಿಶೇಷ.
ಈ ಸುಂದರ ಘಟನೆ ಪ್ರಾರಂಭವಾಗಿದ್ದು ಒಂದು ಸಣ್ಣ ಮಾತುಕತೆಯಿಂದ. ದೀಪಾಲಿ ಅವರು ಒಮ್ಮೆ ತಮ್ಮ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ, ತಮಗೆ ಹಣ್ಣುಗಳೆಂದರೆ ತುಂಬಾ ಇಷ್ಟ ಎಂದು ಸಹಜವಾಗಿ ಹೇಳಿಕೊಂಡಿದ್ದರು. ಶಿಕ್ಷಕಿ ಸುಮ್ಮನೆ ಹೇಳಿದ ಈ ಮಾತನ್ನು ಮಕ್ಕಳು ಗಂಭೀರವಾಗಿ ತೆಗೆದುಕೊಂಡರು. ಮರುದಿನದಿಂದಲೇ ದೀಪಾಲಿ ಅವರಿಗೆ ಅಚ್ಚರಿ ಕಾದಿತ್ತು. ಶಾಲೆಯ ಮಕ್ಕಳು ತಮ್ಮ ಮನೆಯಿಂದ ತರಬಹುದಾದ ಸಣ್ಣಪುಟ್ಟ ಹಣ್ಣುಗಳನ್ನು ಶಿಕ್ಷಕಿಗಾಗಿ ತರಲಾರಂಭಿಸಿದರು.

ವೈರಲ್ ಆಗಿರುವ ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ಈ ದೃಶ್ಯಗಳನ್ನು ನಾವು ಕಾಣಬಹುದು. ಮಕ್ಕಳು ಸ್ಟಾಫ್ ರೂಂನ ಕಿಟಕಿಯ ಸರಳುಗಳ ಮೂಲಕ ತಮ್ಮ ಪುಟ್ಟ ಕೈಗಳನ್ನು ಚಾಚಿ ಪೇರಲೆ, ಬಾಳೆಹಣ್ಣು ಮತ್ತು ಇತರ ಹಣ್ಣುಗಳನ್ನು ಶಿಕ್ಷಕಿಗೆ ನೀಡುತ್ತಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಕೇವಲ ತಮ್ಮ ನೆಚ್ಚಿನ ಶಿಕ್ಷಕಿಗೆ ಖುಷಿಪಡಿಸಬೇಕೆಂಬ ಒಂದೇ ಕಾರಣಕ್ಕೆ ಮಕ್ಕಳು ಈ ರೀತಿ ಮಾಡುತ್ತಿದ್ದಾರೆ ಎಂದು ದೀಪಾಲಿ ಬರೆದುಕೊಂಡಿದ್ದಾರೆ. "ಇದು ನಾನು ನಿರೀಕ್ಷಿಸದ ಪ್ರೀತಿ. ಇಂದಿನ ವೇಗದ ಜಗತ್ತಿನಲ್ಲಿ ಇಂತಹ ನಿಷ್ಕಲ್ಮಶ ಪ್ರೀತಿ ಸಿಗುವುದು ಅಪರೂಪ," ಎಂದು ಅವರು ಭಾವುಕರಾಗಿ ಹೇಳಿದ್ದಾರೆ.
ದೀಪಾಲಿ ಅವರು ಬೆಂಗಳೂರಿನ ಹೊರವಲಯದ ಸರ್ಕಾರಿ ಶಾಲೆಯಲ್ಲಿ ಪಾಠ ಮಾಡುತ್ತಿದ್ದು, ಅಲ್ಲಿನ ಗ್ರಾಮೀಣ ಭಾಗದ ಮಕ್ಕಳ ಮುಗ್ಧತೆಯನ್ನು ಈ ವಿಡಿಯೋ ಎತ್ತಿ ತೋರಿಸಿದೆ. ಮಕ್ಕಳು ತರುವ ಹಣ್ಣುಗಳು ಬೆಲೆಬಾಳುವಂಥದ್ದಲ್ಲದಿದ್ದರೂ, ಅದರ ಹಿಂದಿರುವ ಪ್ರೀತಿ ಬೆಲೆಕಟ್ಟಲಾಗದ್ದು. ವಿಡಿಯೋದಲ್ಲಿ ಮಕ್ಕಳು ಹಣ್ಣುಗಳನ್ನು ಕೊಟ್ಟು ನಾಚಿಕೆಯಿಂದ ಓಡಿಹೋಗುವ ದೃಶ್ಯ ಎಲ್ಲರ ಮನಸ್ಸನ್ನು ತಟ್ಟತ್ತದೆ.
ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. 6 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟಿರುವ ಈ ವಿಡಿಯೋಗೆ ಕಮೆಂಟ್ ಮಾಡಿರುವ ಅನೇಕರು, "ಶಿಕ್ಷಕರು ಕೇವಲ ಪಾಠ ಹೇಳಿಕೊಡುವುದಿಲ್ಲ, ಬದಲಿಗೆ ಮಕ್ಕಳಲ್ಲಿ ದಯೆ ಮತ್ತು ಕರುಣೆಯನ್ನು ಬೆಳೆಸುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ," ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು, ಶಾಲಾ ದಿನಗಳಲ್ಲಿ ತಮಗೂ ತಮ್ಮ ಶಿಕ್ಷಕರ ಮೇಲಿದ್ದ ಇಂಥಹದೇ ಗೌರವ ಮತ್ತು ಪ್ರೀತಿಯನ್ನು ನೆನಪಿಸಿಕೊಂಡಿದ್ದಾರೆ. ಒಟ್ಟಿನಲ್ಲಿ, ಈ ಘಟನೆಯು ಶಿಕ್ಷಣ ಅಂದರೆ ಕೇವಲ ಅಂಕಗಳಲ್ಲ, ಅದು ಮನುಷ್ಯ ಸಂಬಂಧಗಳನ್ನು ಬೆಸೆಯುವ ಒಂದು ಸುಂದರ ಪ್ರಕ್ರಿಯೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.












Click it and Unblock the Notifications