Bengaluru Street Lights: 222 ದೀಪಗಳಲ್ಲಿ 142 ಬಂದ್; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೃಷ್ಣ ಬೈರೇಗೌಡ ಗರಂ

Bengaluru Street Lights: ಬೆಂಗಳೂರು ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವುದನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮುಂದುವರಿಸಿದ್ದಾರೆ. ಬೆಂಗಳೂರಿಗೆ ಕಾಡುತ್ತಿರುವುದು ವಿವಿಧ ಅಭಿವೃದ್ಧಿ ಯೋಜನೆಗಳು, ಹುದ್ದೆಗಳು, ಅಧಿಕಾರಿಗಳು ಅಥವಾ ಅನುದಾನದ ಕೊರತೆಯಲ್ಲ. ಬದಲಿಗೆ, ಕನಿಷ್ಠ ಜವಾಬ್ದಾರಿ ಮತ್ತು ಹೊಣೆಗಾರಿಕೆಯ ಅಭಾವ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ.

ದುರದೃಷ್ಟವಶಾತ್, ಕೆಲವರು ತಮಗೆ ಯಾವುದೇ ಹೊಣೆಗಾರಿಕೆಯೂ ಇಲ್ಲ ಮತ್ತು ತಾವು ಅಧಿಕಾರಕ್ಕೂ ಮೀರಿದವರು ಎಂದು ಭಾವಿಸಿದಂತಿದೆ. ಬೆಂಗಳೂರಿನ ಆಡಳಿತ ವ್ಯವಸ್ಥೆಯು ಇಂತಹ ಕೆಲವರನ್ನು ಪೋಷಿಸಿದಂತೆ ಕಾಣುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಪದೇ ಪದೇ ಸೂಚನೆ ಹಾಗೂ ಎಚ್ಚರಿಕೆಗಳನ್ನು ನೀಡಿದ್ದರೂ, ಮತ್ತು ಬೆಂಗಳೂರಿನ ಬೀದಿ ದೀಪಗಳ ನಿರ್ವಹಣೆಯನ್ನು ಸುಧಾರಿಸಲು ಸಾಕಷ್ಟು ಸಮಯಾವಕಾಶ ನೀಡಿದ್ದರೂ, ಕೆಲವು ಅಧಿಕಾರಿಗಳಲ್ಲಿ ತಮ್ಮ ಕನಿಷ್ಠ ಕರ್ತವ್ಯದ ಬಗ್ಗೆಯೂ ಕಾಳಜಿ ಇರುವಂತೆ ಕಾಣುತ್ತಿಲ್ಲ ಎಂದು ಸಚಿವ ಕೃಷ್ಣಬೈರೇಗೌಡ ಅವರು ಗರಂ ಆಗಿದ್ದಾರೆ.

Bengaluru Street Lights

ಈಚೆಗೆ ಹಡ್ಸನ್ ಸರ್ಕಲ್‌ನಿಂದ ಮೈಸೂರು ಬ್ಯಾಂಕ್ ಸರ್ಕಲ್ ಮಾರ್ಗವಾಗಿ ಚಾಲುಕ್ಯ ಸರ್ಕಲ್‌ವರೆಗಿನ ರಸ್ತೆಯಲ್ಲಿ 222 ಬೀದಿ ದೀಪಗಳ ಪೈಕಿ 142 ಬೀದಿ ದೀಪಗಳು ಉರಿಯುತ್ತಿರಲಿಲ್ಲ ಎಂಬುದನ್ನು ನಾನು ಗಮನಿಸಿದೆ. ಇದು ಬೆಂಗಳೂರಿನ ಹೃದಯಭಾಗದಲ್ಲಿರುವ ಅತ್ಯಂತ ಪ್ರಮುಖ ರಸ್ತೆಯಾಗಿದ್ದು, ಪ್ರತಿ ನಿಮಿಷವೂ ನೂರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ. ಇದು ಬಸ್ ನಿಲ್ದಾಣ, ಮೆಜೆಸ್ಟಿಕ್, ವಿಧಾನ ಸೌಧ, ಸಿವಿಲ್ ಕೋರ್ಟ್ ಸಂಕೀರ್ಣ, ಮುಖ್ಯ ನ್ಯಾಯಮೂರ್ತಿಗಳ ಅಧಿಕೃತ ನಿವಾಸ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳು ಹಾಗೂ ಸ್ಥಳಗಳನ್ನು ಸಂಪರ್ಕಿಸುತ್ತದೆ. ಇಂತಹ ಅಧಿಕಾರದ ಕೇಂದ್ರಭಾಗದ ಸುತ್ತಮುತ್ತಲೇ ಈ ರೀತಿಯ ನಿರ್ಲಕ್ಷ್ಯ ವಹಿಸಲಾಗಿದೆ!

ಆಕರ್ಷಕ ಯೋಜನೆಗಳನ್ನು ರೂಪಿಸಲಾಗುತ್ತದೆ. ಅನುದಾನ ಹಂಚಿಕೆ ಮಾಡಲಾಗುತ್ತದೆ. ಹುದ್ದೆಗಳನ್ನು ಸೃಷ್ಟಿಸಲಾಗುತ್ತದೆ. ಅಧಿಕಾರಿಗಳನ್ನು ನೇಮಿಸಲಾಗುತ್ತದೆ. ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ತೆರಿಗೆದಾರರ ಹಣ ವೆಚ್ಚವಾಗುತ್ತದೆ. 'ಅಪರೇಷನ್ ಸಕ್ಸಸ್' (ಯೋಜನೆ ಯಶಸ್ವಿ). ಆದರೆ, ಮೂಲಭೂತ ಸೇವೆ ಮಾತ್ರ ಅಷ್ಟಕ್ಕಷ್ಟೇ. ಸಾಮಾನ್ಯ ಹಾಗೂ ಮೂಲಭೂತ ಸರ್ಕಾರಿ ಕೆಲಸಗಳಲ್ಲೇ ಇಂತಹ ಹೊಣೆಗೇಡಿತನವನ್ನು ನೋಡುವುದು ತೀವ್ರ ಬೇಸರ ತರುತ್ತದೆ.

ಬೀದಿ ದೀಪಗಳ ನಿರ್ವಹಣೆಯು ಸಾರ್ವಜನಿಕ ಭದ್ರತೆ ಮತ್ತು ನಗರದ ಸುಗಮ ಕಾರ್ಯನಿರ್ವಹಣೆಗೆ ನೇರವಾಗಿ ಸಂಪರ್ಕ ಹೊಂದಿರುವ ಕನಿಷ್ಠ ಪೌರ ಸೇವೆಯಾಗಿದೆ. ಆದ್ದರಿಂದ, ತಮ್ಮ ಕನಿಷ್ಠ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲರಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಮತ್ತು ಕೇಂದ್ರ ಪಾಲಿಕೆಯ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+