Bengaluru Stray Dogs: ನಗರದ ಬೀದಿ ನಾಯಿಗಳ ಆರೈಕೆಗೆ ಜಿಬಿಎ ವಿಶೇಷ ಕ್ರಮ: ಪೌಷ್ಟಿಕ ಆಹಾರ, ಲಸಿಕೆ ವ್ಯವಸ್ಥೆ
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ವಿಶೇಷ ಆರೈಕೆಗೆ ಮುಂದಾಗಿದೆ. ಬೆಂಗಳೂರಿನ ಮೇಡಿ ಅಗ್ರಹಾರ ಶ್ವಾನ ಆಶ್ರಯ ಕೇಂದ್ರದಲ್ಲಿ ಬೀದಿ ನಾಯಿಗಳಿಗೆ ಪೌಷ್ಟಿಕ ಆಹಾರ, ಲಸಿಕೆ ಹಾಗೂ ವೈದ್ಯಕೀಯ ಆರೈಕೆಗೆ ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದಾರೆ.
ಸುಪ್ರೀಂ ಕೋರ್ಟ್‌ನ ನಿರ್ದೇಶನಗಳ ಅನುಷ್ಠಾನದ ಅಂಗವಾಗಿ ಈ ಕ್ರಮವನ್ನು ಅನುಸರಿಸುತ್ತಿರುವುದಾಗಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಪ್ರಾಧಿಕಾರ ವ್ಯಾಪ್ತಿಯ ಬೆಂಗಳೂರು ಉತ್ತರ ನಗರ ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನ ಮೇಡಿ ಅಗ್ರಹಾರದಲ್ಲಿರುವ 500 ಬೀದಿ ನಾಯಿಗಳ ಸಾಮರ್ಥ್ಯದ ಶ್ವಾನ ಆಶ್ರಯ ಕೇಂದ್ರದಲ್ಲಿ ನಾಯಿಗಳಿಗೆ ಪೌಷ್ಟಿಕ ಆಹಾರ, ರೇಬೀಸ್ ನಿರೋಧಕ ಲಸಿಕೆ, ಜಂತುಹುಳು ನಿವಾರಕ ಔಷಧಿ ಹಾಗೂ ಅಗತ್ಯ ವೈದ್ಯಕೀಯ ಆರೈಕೆಯನ್ನು ಒದಗಿಸಲಾಗುತ್ತಿದೆ. ಪಾಲಿಕೆಯ ಪಶುಪಾಲನಾ ವಿಭಾಗದ ಮೇಲ್ವಿಚಾರಣೆಯಲ್ಲಿ ಆಶ್ರಯ ಕೇಂದ್ರವನ್ನು ನಿರ್ವಹಿಸಲಾಗುತ್ತಿದ್ದು, ನಾಯಿಗಳ ಆರೋಗ್ಯ, ಸುರಕ್ಷತೆ ಮತ್ತು ಕಲ್ಯಾಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Bengaluru Stray Dogs: ನಾಯಿಗಳ ಆರೋಗ್ಯ ತಪಾಸಣೆ ಮತ್ತು ವೈದ್ಯಕೀಯ ಆರೈಕೆ
ಆಶ್ರಯ ಕೇಂದ್ರಕ್ಕೆ ಕರೆತರುವ ಪ್ರತಿಯೊಂದು ನಾಯಿಯ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ, ಅದರ ದೇಹದ ತೂಕವನ್ನು ದಾಖಲಿಸಲಾಗುತ್ತದೆ. ಪಶುವೈದ್ಯರ ಸಲಹೆ ಮತ್ತು ನಿಗದಿತ ಮಾರ್ಗಸೂಚಿಗಳ ಪ್ರಕಾರ ಜಂತುಹುಳು ನಿವಾರಕ ಔಷಧಿ ಹಾಗೂ ರೇಬೀಸ್ ನಿರೋಧಕ ಲಸಿಕೆ (ARV) ನೀಡಲಾಗುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವ ಅಥವಾ ಗಾಯಗೊಂಡಿರುವ ನಾಯಿಗಳಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ಒದಗಿಸಿ, ಅವುಗಳ ಆರೋಗ್ಯದ ಮೇಲೆ ನಿಗಾ ವಹಿಸಲಾಗುತ್ತಿದೆ. ಅಕ್ಟೋಬರ್ 17ರಂದು ಆಶ್ರಯ ಕೇಂದ್ರದಲ್ಲಿ ನಾಯಿಯೊಂದಕ್ಕೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದು, ಆಹಾರ ವಿತರಣೆ, ಆರೋಗ್ಯ ನಿರ್ವಹಣೆ ಮತ್ತು ಕೆನಲ್‌ಗಳ ಸ್ವಚ್ಛತಾ ವ್ಯವಸ್ಥೆಯನ್ನು ಪಶುಪಾಲನಾ ವಿಭಾಗದ ವತಿಯಿಂದ ಪರಿಶೀಲಿಸಲಾಯಿತು.
Bengaluru Stray Dogs: ನಾಯಿಗಳ ತೂಕಕ್ಕೆ ಅನುಗುಣವಾಗಿ ಮೂರು ಬಾರಿ ಆಹಾರ
ಆಶ್ರಯ ಕೇಂದ್ರದಲ್ಲಿರುವ ನಾಯಿಗಳಿಗೆ ಅವುಗಳ ದೇಹದ ತೂಕ, ವಯಸ್ಸು ಮತ್ತು ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಪ್ರತಿದಿನ ಎರಡರಿಂದ ಮೂರು ಬಾರಿ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಆಹಾರದಲ್ಲಿ ಕೋಳಿ ಮಾಂಸ, ಅನ್ನ, ತರಕಾರಿಗಳು ಹಾಗೂ ನಾಯಿಗಳ ಪೌಷ್ಟಿಕಾಂಶದ ಅಗತ್ಯಕ್ಕೆ ಅನುಗುಣವಾದ ಇತರ ಆಹಾರ ಪದಾರ್ಥಗಳನ್ನು ಸೇರಿಸಲಾಗುತ್ತದೆ. ಆಹಾರ ತಯಾರಿಕೆ ಮತ್ತು ವಿತರಣೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ಪ್ರತ್ಯೇಕ ಆಹಾರ ಪಾತ್ರೆಗಳ ಮೂಲಕ ನಾಯಿಗಳಿಗೆ ಆಹಾರ ನೀಡಲಾಗುತ್ತದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಆಶ್ರಯ ಕೇಂದ್ರದ ನಿರ್ವಹಣೆ ಮತ್ತು ಸ್ವಚ್ಛತೆ
ನಾಯಿಗಳ ಸುರಕ್ಷಿತ ವಾಸ್ತವ್ಯಕ್ಕಾಗಿ ಪ್ರತ್ಯೇಕ ಕೆನಲ್‌ಗಳು ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನಾಯಿಗಳ ವಾಸಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಲು ಕ್ರಮ ಕೈಗೊಳ್ಳಲಾಗುತ್ತಿದೆ. ನಾಯಿಗಳ ಆಹಾರ, ಆರೋಗ್ಯ, ಸ್ವಚ್ಛತೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಶ್ರಯ ಕೇಂದ್ರದ ನಿರ್ವಹಣಾ ಸಿಬ್ಬಂದಿಗೆ ಸೂಚಿಸಲಾಗಿದೆ.
Bengaluru Stray Dogs: ನಾಯಿಗಳನ್ನು ದತ್ತು ಪಡೆಯಲು ಸಾರ್ವಜನಿಕರಿಗೆ ಅವಕಾಶ
ಇನ್ನು ಬೆಂಗಳೂರಿನ ಮೇಡಿ ಅಗ್ರಹಾರ ಶ್ವಾನ ಆಶ್ರಯ ಕೇಂದ್ರದಲ್ಲಿರುವ ನಾಯಿಗಳನ್ನು ದತ್ತು ಪಡೆಯಲು ಆಸಕ್ತಿ ಹೊಂದಿರುವ ಸಾರ್ವಜನಿಕರು ಮತ್ತು ಪ್ರಾಣಿ ಪ್ರೇಮಿಗಳು ಬೆಂಗಳೂರು ಉತ್ತರ ನಗರ ಪಾಲಿಕೆಯ ಪಶುಪಾಲನಾ ವಿಭಾಗವನ್ನು ಸಂಪರ್ಕಿಸಬಹುದು. ನಿಗದಿತ ನಿಯಮಗಳು ಮತ್ತು ಪ್ರಕ್ರಿಯೆಗಳನ್ನು ಅನುಸರಿಸಿ ನಾಯಿಗಳನ್ನು ದತ್ತು ಪಡೆಯಲು ಅವಕಾಶವಿದೆ. ದತ್ತು ಪಡೆಯುವವರು ನಾಯಿಗಳಿಗೆ ಸೂಕ್ತ ಆಹಾರ, ವಸತಿ, ವೈದ್ಯಕೀಯ ಆರೈಕೆ ಮತ್ತು ಸುರಕ್ಷಿತ ವಾತಾವರಣ ಒದಗಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.
ಪಶುಪಾಲನಾ ವಿಭಾಗದಿಂದ ಪರಿಶೀಲನೆ
ಅಕ್ಟೋಬರ್ 17ರಂದು ಬೆಂಗಳೂರು ಉತ್ತರ ನಗರ ಪಾಲಿಕೆಯ ಪಶುಪಾಲನಾ ವಿಭಾಗವು ಮೇಡಿ ಅಗ್ರಹಾರ ಶ್ವಾನ ಆಶ್ರಯ ಕೇಂದ್ರದಲ್ಲಿ ಆಹಾರ ತಯಾರಿಕೆ, ಆಹಾರ ವಿತರಣೆ, ವೈದ್ಯಕೀಯ ಚಿಕಿತ್ಸೆ, ನಾಯಿಗಳ ವಾಸಸ್ಥಳ ಮತ್ತು ಸ್ವಚ್ಛತಾ ವ್ಯವಸ್ಥೆಯನ್ನು ಪರಿಶೀಲಿಸಿತು. ನಾಯಿಗಳ ಆರೋಗ್ಯ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ವಹಣಾ ಸಿಬ್ಬಂದಿಗೆ ಸೂಚಿಸಲಾಗಿದೆ.
ಅಲ್ಲದೆ ಬೆಂಗಳೂರು ಉತ್ತರ ನಗರ ಪಾಲಿಕೆಯು ಸಾರ್ವಜನಿಕರ ಸುರಕ್ಷತೆ ಮತ್ತು ಪ್ರಾಣಿಗಳ ಕಲ್ಯಾಣಕ್ಕೆ ಆದ್ಯತೆ ನೀಡುತ್ತಿದ್ದು, ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳ ಅನುಷ್ಠಾನಕ್ಕೆ ಬದ್ಧವಾಗಿದೆ. ಬೀದಿ ನಾಯಿಗಳ ಸಂರಕ್ಷಣೆ, ಆರೋಗ್ಯ ರಕ್ಷಣೆ ಮತ್ತು ದತ್ತು ಸ್ವೀಕಾರ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹಾಗೂ ಪ್ರಾಣಿ ಕಲ್ಯಾಣ ಸಂಘಟನೆಗಳು ಸಹಕರಿಸುವಂತೆ ಪಾಲಿಕೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.


Click it and Unblock the Notifications
