ಬೆಂಗಳೂರು ಕಾಲ್ತುಳಿತ ದುರಂತ: ಎಚ್ಚೆತ್ತ ಸರ್ಕಾರದಿಂದ ಹೊಸ SOP, ಮ್ಯಾಜೆಸ್ಟ್ರೆಟಿಯಲ್ ತನಿಖೆಗೆ ಆದೇಶ
ಬೆಂಗಳೂರು, ಜೂನ್ 05: ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವ ಸಂಭ್ರಮಾಚರಣೆ ವೇಳೆ ದೊಡ್ಡ ದರುಂತ ನಡೆದಿದೆ. ಹನ್ನೊಂದು ಮಂದಿ ಜನ ಕಾಲ್ತುಳಿತದಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ನಡೆ, ನಿರ್ವಹಣೆ, ಪೊಲೀಸ್ ಲೋಪಗಳ ಎಂದು ದೂರಲಾಗಿದೆ. ಈ ಅವಘಡ ಬೆನ್ನಲ್ಲೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಹೊಸ ಪ್ಲಾನ್ ಮಾಡಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಕಾಲ್ತುಳಿತ ಘಟನೆ ಬೆನ್ನಲ್ಲೆ ಕೈಗೊಂಡ ನಿರ್ಧಾರ ಕುರಿತು ಗುರುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ನಿನ್ನೆ (ಜೂನ್ 04) ನಡೆದ ಘಟನೆ ರಾಜ್ಯದ ಕ್ರಿಕೆಟ್ ಇತಿಹಾಸದಲ್ಲಿ ಆಗಿರಲಿಲ್ಲ. ಮೊದಲನೇಯದಾಗಿ ಸಾವನ್ನಪ್ಪಿರುವ ಆತ್ಮಕ್ಕೆ ಶಾಂತಿ ಕೊರುತ್ತೇನೆ. ಕುಟುಂಬವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು. ಇನ್ನು ಮುಂದೆ ದೊಡ್ಡಮಟ್ಟದ ಸಭೆ, ಸಮಾರಂಭ ಮತ್ತು ವಿಜಯೋತ್ಸವ ಕಾರ್ಯಕ್ರಮಗಳಿಗೆ ಹೊಸ SOP (ಸ್ಟ್ಯಾಂಡರ್ಡ್ ಆಪರೇಟಿವ್ ಪ್ರೊಸಿಜರ್) ಮಾಡಲಾಗುವುದು ಎಂದು ತಿಳಿಸಿದರು.

ದರುಂತ: ಮ್ಯಾಜೆಸ್ಟ್ರೆಟಿಯಲ್ ತನಿಖೆಗೆ ಆದೇಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸಭೆ ನಡೆಸಿದ್ದಾರೆ. ಘಟನೆ, ಕಾರ್ಯಕ್ರಮ ಬಗ್ಗೆ ಅನೇಕ ಮಾಹಿತಿ ಪಡೆದು ಮಾತನಾಡಿದ್ದಾರೆ. ಈ ಬಗ್ಗೆ ಮ್ಯಾಜೆಸ್ಟ್ರೆಟಿಯಲ್ ತನಿಖೆಗೆ ಆದೇಶ ಮಾಡಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆಯಾಗಬೇಕೆಂದು ಆದೇಶಿಸಲಾಗಿದೆ. ಅವರು ಯಾರೇ ಆಗಿರಲಿ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ. ಈಗ ವಿವರಣೆ ಮಾಡಲು ಹೋಗುವುದಿಲ್ಲ. ತನಿಖೆಯ ವರದಿ ಬರುವವರೆಗು ಹೇಳಲು ಸಾಧ್ಯವಿಲ್ಲ ಎಂದರು.
ದುರ್ಘಟನೆಯಲ್ಲಿ 11 ಜನ ಸಾವನ್ನಪ್ಪಿದ್ದಾರೆ. 56 ಜನ ಗಾಯಗೊಂಡಿದ್ದಾರೆ. 46 ಜನ ಚಿಕಿತ್ಸೆ ಪಡೆದು ಮನೆಗಳಿಗೆ ಹೋಗಿದ್ದಾರೆ. 10 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೃಹ ಇಲಾಖೆಯಿಂದ ಹೊಸ ಎಸ್‌ಒಪಿ
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಆಗಬಾರದು ಎಂಬ ವಿಚಾರದಲ್ಲಿ ಗೃಹ ಇಲಾಖೆಯಿಂದ ಒಂದು ಹೊಸ ಎಸ್‌ಒಪಿ (ಸ್ಟ್ಯಾಂಡರ್ಡ್ ಆಪರೇಟಿವ್ ಪ್ರೊಸಿಜರ್) ಮಾಡುತ್ತೇವೆ. ಇನ್ನುಮುಂದೆ ಯಾವುದೇ ದೊಡ್ಡ ಸಮಾರಂಭ, ಸಭೆ, ವಿಜಯೋತ್ಸವ ನಡೆಯುವಾಗ ಪೊಲೀಸ್ ಇಲಾಖೆಯ ನಿರ್ದೇಶನ ಏನು ಬರುತ್ತದೆ, ಅದರ ಚೌಕಟ್ಟಿನಲ್ಲಿ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಹೇಳಿದರು.
ಹೊಸ ಎಸ್‌ಒಪಿ ಮಾಡುತ್ತೇವೆ. ನಾವು ಕೆಲವು ಸೂಚನೆಗಳನ್ನು ಕೊಡುತ್ತೇವೆ. ಯಾವತ್ತು ಕೂಡ ಇಂತಹ ಘಟನೆಗಳಾಗಬಾರದು. ಅಮಾಯಕರ ಸಾವುಗಳು ಆಗಬಾರದು. ಇದೆಲ್ಲವನ್ನು ನೋಡಿದಾಗ ನೋವಾಗುತ್ತದೆ. ನಿನ್ನೆ ಶವಗಾರದಲ್ಲಿ ನೋಡಿದಾಗ ದುಃಖವಾಯಿತು. 20-25 ವರ್ಷ ವಯಸ್ಸಿನವರು ಸಂತೋಷದಿಂದ ಆಚರಣೆಗೆ ಬಂದಾಗ ಜೀವವನ್ನೇ ಕಳೆದುಕೊಂಡಿದ್ದಾರೆ. ಇದೆಲ್ಲವನ್ನು ಯಾರು ಊಹೆ ಮಾಡಿರಲಿಲ್ಲ. ಇನ್ನೂ ಘಟನೆಗೆ ಸಂಬಂಧಿಸಿದಂತೆ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ. ಎಲ್ಲಿ ಲೋಪವಾಗಿದೆ ಎಂಬುದನ್ನು ಪರಿಶೀಲಿಸುತ್ತೇವೆ ಎಂದು ಭರವಸೆ ನೀಡಿದರು.
3 ಲಕ್ಷ ಜನ ಆಗಮಿಸಿದ್ದರು
ಒಬ್ಬ ವ್ಯಕ್ತಿ ತನಗಿದ್ದ ಒಬ್ಬ ಮಗನನ್ನ ಕಳೆದಕೊಂಡ ಬಗ್ಗೆ ವೈದೇಹಿ ಆಸ್ಪತ್ರೆಯಲ್ಲಿ ಹೇಳಿಕೊಂಡರು. ಮಗ ಕಾಲೇಜಿಗೆ ಹೋಗುವುದಾಗಿ ಬೆಳಗ್ಗೆ 6 ಗಂಟೆಗೆ ಮನೆ ಬಿಟ್ಟಿದ್ದ. ಆದರೆ ನೋಡಿದರೆ ಈ ರೀತಿಯಾಗಿದೆ. ಸಮುದಾಯ ಸಂತೋಷದಲ್ಲಿ ಬಂದರು. ಇದನ್ನು ಯಾರು ಕೂಡ ಊಹಿಸಿರಲಿಲ್ಲ. 34 ಸಾವಿರ ಸೀಟುಗಳ ಸಾಮಾರ್ಥ್ಯ ಇರುವ ಸ್ಟೇಡಿಯಂಗೆ 3 ಲಕ್ಷ ಜನ ಬಂದಿದ್ದರು ಎಂದು ಅವರು ವಿವರಿಸಿದರು.
ಮೆಟ್ರೋ ಸಂಚಾರ, ತನಿಖಾ ವರದಿ ಬಳಿಕ ಬಹಿರಂಗ
ಬೆಂಗಳೂರು ನಮ್ಮ ಮೆಟ್ರೋ ಸಂಸ್ಥೆಯವರು ನೀಡಿರುವ ಮಾಹಿತಿ ಪ್ರಕಾರ ಬೆಳಗ್ಗೆ 9 ಗಂಟೆಯಿಂದ ರಾತ್ರಿ 11 ಗಂಟೆವರೆಗೆ 8.7 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ. ತನಿಖೆಯ ವರದಿ ಬರುವವರೆಗೂ ಏನನ್ನು ಹೇಳುವುದಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಘಟನೆ ನಡೆದ ಸ್ಥಳ ಪರಿಶೀಲನೆ ಮಾಡುತ್ತೇನೆ. ಆರ್‌ಸಿಬಿ, ಕೆಎಸ್‌ಸಿಎ ಅವರೊಂದಿಗೆ ಸಭೆ ಮಾಡುತ್ತೇನೆ. ತಾಂತ್ರಿಕವಾಗಿ ಏನೇ ಇದ್ದರು ಸಹ ಡಿಜಿಪಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರು ನೋಡಿಕೊಳ್ಳುತ್ತಾರೆ. ಎಲ್ಲಿ ಮತ್ತು ಏನು ಲೋಪ ಆಗಿದೆ ಎಂಬುದು ಗೊತ್ತಾದ ಬಳಿಕ ತಪ್ಪು ಯಾರದ್ದು? ಎಂಬುದು ಗೊತ್ತಾಗಲಿದೆ ಎಂದು ಹೇಳಿದರು.

ಚಿನ್ನಸ್ವಾಮಿ ಸ್ಟೇಡಿಯಂಗೆ ಪರಮೇಶ್ವರ ಭೇಟಿ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿದ ಸ್ಥಳಗಳಿಗೆ ಗುರುವಾರ ಗೃಹ ಸಚಿವ ಜಿ.ಪರಮೇಶ್ವರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ್, ಹೆಚ್ಚುವರಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹಾಗೂ ಡಿಸಿಪಿಗಳಿಂದ ಮಾಹಿತಿ ಪಡೆದರು. ಮಹತ್ವದ ಸಭೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ ಅವರು, ಸಿಎಂ ಅವರು ಮೆಜಿಸ್ಟ್ರಿಯಲ್ ವಿಚಾರಣೆಗೆ ಆದೇಶಿಸಿದ್ದು, ಅದರ ಪ್ರಕ್ರಿಯೆ ಆರಂಭವಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಯಾವ ಸ್ಥಳದಲ್ಲಿ ಕಾಲ್ತುಳಿತ ಆಗಿದೆ. ಅದನ್ನು ಯಾವ ರೀತಿಯಾಗಿ ತಪ್ಪಿಸಬಹುದಾಗಿತ್ತು ಎಂಬುದನ್ನು ತಿಳಿದುಕೊಳ್ಳಲು ಖುದ್ದಾಗಿ ನಾನೇ ಪರಿಶೀಲಿಸಿದ್ದೇನೆ.
ಗೇಟ್ ನಂಬರ್ 6, 7, 2 ಮತ್ತು 2ಎ, 17, 18, 21, 16 ಇಷ್ಟು ಗೇಟ್‌ಗಳಲ್ಲಿ ಕಾಲ್ತುಳಿತ ಆಗಿದೆ. ಘಟನೆ ನಡೆದ ಸ್ಥಳದಲ್ಲಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಇಲ್ಲ. ಆಸ್ಪತ್ರೆಗೆ ಕರೆದೊಯ್ಯುವಾಗ, ಚಿಕಿತ್ಸೆ ವೇಳೆ ಕೆಲವರು ಮೃತಪಟ್ಟಿದ್ದಾರೆ. ಹೀಗಾಗಿ ಯಾವ ಗೇಟ್‌ನಲ್ಲಿ ಎಷ್ಟು ಜನ ಸಾವನ್ನಪ್ಪಿದರು ಎಂಬ ಮಾಹಿತಿ ಇಲ್ಲ ಎಂದರು.
ಒಂದು ಲಕ್ಷ ಜನ ಸೇರಬಹುದೆಂಬ ನಿರೀಕ್ಷೆ
ವಿಧಾನಸೌಧದ ಮುಂದೆ ಒಂದು ಲಕ್ಷ ಜನ ಸೇರುತ್ತಾರೆ ಎಂದು ಅಂದಾಜಿಸಲಾಗಿತ್ತು. ಸ್ಟೇಡಿಯಂನಲ್ಲಿ 40 ಸಾವಿರ ಮತ್ತು ಸ್ಟೇಡಿಯಂ ಹೊರಗಡೆ 2.50 ಲಕ್ಷ ಜನ ಸೇರಿದ್ದರು ಎಂಬುದಾಗಿ ಅಂದಾಜಿಸಲಾಗಿದೆ. ಇಷ್ಟೊಂದು ಜನ ಒಂದೇ ಕಡೆ ಸೇರಿದ್ದರ ಉದಾಹರಣೆಗಳಿಲ್ಲ. ದುರ್ದೈವದಿಂದ ಈರೀತಿಯಾಗಿದೆ ಎಂದು ವಿಷಾಧಿಸಿದರು.












Click it and Unblock the Notifications