SSLC Results: ಬೆಂಗಳೂರು ದಕ್ಷಿಣಕ್ಕೆ ರಾಜ್ಯಕ್ಕೆ 10ನೇ ಸ್ಥಾನ: ತೇಜಸ್ವಿ ಸೂರ್ಯ ಸಂತಸ
ಬೆಂಗಳೂರು, ಮೇ 02: ಕರ್ನಾಟಕ ರಾಜ್ಯದಲ್ಲಿ ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ರಾಜ್ಯ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ (KSEEB) ಪ್ರಕಟಿಸಿದೆ. ಇದರಲ್ಲಿ ರಾಜ್ಯಕ್ಕೆ 22 ಮಂದಿ ರ್ಯಾಂಕ್ ಪಡೆದಿದ್ದಾರೆ. ಈ ಫಲಿತಾಂಶದಲ್ಲಿ ಬೆಂಗಳೂರು ದಕ್ಷಿಣವು ಕರ್ನಾಟಕದಲ್ಲಿ 10ನೇ ಸ್ಥಾನದಲ್ಲಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಮಾಹಿತಿ ನೀಡಿದ್ದಾರೆ. ತಮ್ಮ ಲೋಕಸಭಾ ಕ್ಷೇತ್ರದ ಮಕ್ಕಳ ಸಾಧನೆ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಈ ಹಿಂದಿನ ವರ್ಷದ ಸಾಧನೆಗಿಂತಲೂ ಈ ವರ್ಷ ಗಮನಾರ್ಹವಾಗಿ ಹೆಚ್ಚಾಗಿದೆ. ಆಗ ಉತ್ತೀರ್ಣ ದರವು ಶೇ. 65 ರ ಆಸುಪಾಸಿನಲ್ಲಿತ್ತು. ಇದೀಗ ಈ ವರ್ಷ ಶೇಕಡಾ 72.3 ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ. ಹಿಂದಿನ ವರ್ಷಗಳಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಒಂದಂಕಿಯ ಅಂಕಗಳನ್ನು ಪಡೆಯುತ್ತಿದ್ದದ್ದು ಆತಂಕಕಾರಿ ವಿಷಯವಾಗಿತ್ತು. ಇದು ಹೆಚ್ಚಿನ ಪಿಎಸ್‌ಡಿ ಅಭ್ಯರ್ಥಿಗಳು ಇರುವ ಪ್ರದೇಶದಲ್ಲಿ ಎಂಬುದು ವಿಶೇಷವಾಗಿದೆ.

ಇಂತಹ ಪ್ರವೃತ್ತಿಯನ್ನು ನಾನು ಗುರುತಿಸಿ ವೈಯಕ್ತಿಕ ಹಾಗೂ ಶಿಕ್ಷಣ ನೀತಿಗೆ ಆದ್ಯತೆ ನೀಡುವತ್ತ ಗಮನಹರಿಸಿದೆ. ಒಳ್ಳೆಯ ಕಾರ್ಯಕ್ರಮಗಳ ಮೂಲಕ ಶ್ರಮಿಸಿದ್ದೇವೆ. ವಾರ್ಷಿಕವಾಗಿ 10,000ಕ್ಕೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಂಜೀವನಿ ಮಾರ್ಗದರ್ಶಿ ಪುಸ್ತಕಗಳನ್ನು ವಿತರಿಸಿದ್ದೇವೆ. ಕ್ಷೇತ್ರದ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ 'ನಮೋ ವಿದ್ಯಾನಿಧಿ ಯೋಜನೆ'ಯ ಅಡಿಯಲ್ಲಿ ವಿದ್ಯಾರ್ಥಿವೇತನ ಒದಗಿಸಲಾಗಿದೆ. ಮಕ್ಕಳಿಗೆ ಮಾತ್ರವಲ್ಲದೇ ಹೈಸ್ಕೂಲ್ ಶಿಕ್ಷಕರ ತರಬೇತಿ ಅಗತ್ಯ ಬೆಂಬಲ ನೀಡಲಾಗಿದೆ ಎಂದು ಅವರು ತಿಳಿಸಿದರು.
ಕಳಪೆ ಪ್ರದರ್ಶನ ಶಾಲೆಗಳ ಪತ್ತೆ, ಹೊಸ ಕಾರ್ಯಕ್ರಮ
ಇನ್ನೂ ವಿಶೇಷ ಕಾರ್ಯಕ್ರಮಗಳಡಿ ಕ್ಷೇತ್ರದಲ್ಲಿ ಯಾವೆಲ್ಲ ವಾರ್ಷಿಕ ಫಲಿತಾಂಶ ಕಳಪೆ ಪ್ರದರ್ಶನ ನೀಡುತ್ತವೆಯೋ ಅಂತಹ ಶಾಲೆಗಳನ್ನು ಗುರುತಿಸಿದ್ದೇವೆ. ನಿರಂತರವಾಗಿ ಶೈಕ್ಷಣಿಕವಾಗಿ ಬೆಂಬಲಿಸುವ ಪ್ರಯತ್ನ ಮಾಡಿದ್ದೇವೆ. ಈ ಮೂಲಕ ಬೇರುಮಟ್ಟದಿಂದ ಸುಧಾರಣೆಗೆ, ಸಮಸ್ಯೆಗಳಿಗೆ ಅಗತ್ಯ ಪರಿಹಾರ ನೀಡುವ ಕೆಲಸವಾಗಿದೆ. ಒಂದು ಕಾಲದಲ್ಲಿ ಶೇಕಡಾ 45 ರಿಂದ 50ರಷ್ಟು ಇದ್ದ ಫಲಿತಾಂಶ ತೆಗೆಯುತ್ತಿದ್ದ 20 ಕ್ಕೂ ಹೆಚ್ಚು ಶಾಲೆಗಳು ಫಲಿತಾಂಶ ಇದೀಗ ಶೇಕಡಾ 100ರಷ್ಟಾಗಿದೆ ಎಂದು ಕ್ಷೇತ್ರದಲ್ಲಿ ತಾವು ಕೈಗೊಂಡ ಶಿಕ್ಷಣ ಉಪಕ್ರಮ, ಶಾಲೆಗಳ ಪ್ರಗತಿ, ಸಾಧನೆ ವಿವರಿಸಿದರು.
ಈ ಸಾಧನೆಗೆ ಕೇಂದ್ರೀಕೃತ ಪ್ರಯತ್ನ, ವಿವಿಧ ಹಂತಗಳಲ್ಲಿ ದೊರಕಿದ ಸಹಯೋಗದಿಂದ ಸಾಧ್ಯವಾಗಿದೆ. ಮನಸ್ಸು ಮಾಡಿದರೆ ಎನೆಲ್ಲ ಸಾಧಿಸಬಹುದು ಎಂಬುದನ್ನು ಕ್ಷೇತ್ರದ ಮಕ್ಕಳು ತೋರಿಸಿದ್ದಾರೆ ಎಂದು ಮಕ್ಕಳಿಗೆ, ಅವರ ಪೋಷಕರು ಮತ್ತು ಶಿಕ್ಷಕರಿಗೆ ಸಂಸದ ಅಭಿನಂದನೆ ತಿಳಿಸಿದರು.
ನಾವೆಲ್ಲರು 'ವಿಕಸಿತ್ ಭಾರತ್ 2047' ರತ್ತ ಸಾಗುತ್ತಿರುವಾಗ ಬೆಂಗಳೂರು ದಕ್ಷಿಣವನ್ನು ಶಿಕ್ಷಣ ಸೇರಿದಂತೆ ಎಲ್ಲದರಲ್ಲೂ ಶ್ರೇಷ್ಠತೆಗೆ ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು. ಅದಕ್ಕಾಗಿ ನಮ್ಮ ಶ್ರಮ ನಿರಂತರವಾಗಿ ಮುಂದುವರಿಯುತ್ತದೆ ಎಂದು ತಿಳಿಸಿದರು.












Click it and Unblock the Notifications