ಬೆಂಗಳೂರು ರಸ್ತೆ ಸಮಸ್ಯೆಗಳಿಗೆ AI ಪರಿಹಾರ: ಗುಂಡಿ, ಕಸ, ಒತ್ತುವರಿ ಪತ್ತೆಗೆ ಬರಲಿದೆ ಸ್ಮಾರ್ಟ್ ವಾಹನ
ಬೆಂಗಳೂರು: ಫುಟ್‌ಪಾತ್ ಒತ್ತುವರಿ, ಬೇಸ್‌ಮೆಂಟ್ ದುರುಪಯೋಗ ಹಾಗೂ ತ್ಯಾಜ್ಯ ಸಮಸ್ಯೆಗೆ ಶೀಘ್ರ ಪರಿಹಾರ ನೀಡಲು ಮುಂದಾಗಿರುವ ಬೆಂಗಳೂರು ದಕ್ಷಿಣ ನಗರ ಪಾಲಿಕೆಯು ಇದೀಗ ರಸ್ತೆ ಸಮಸ್ಯೆಗಳಿಗೆ AI ಬಳಸಲು ಮುಂದಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನ ಬಳಕೆ ಹೇಗೆ, ಅದರಿಂದ ಏನೆಲ್ಲ ಪ್ರಯೋಜನೆ ಎಂಬುದನ್ನು ಪಾಲಿಕೆ ಆಯುಕ್ತರಾದ ಕೆ. ಎನ್. ರಮೇಶ್ ಅವರು ವಿವರಿಸಿದ್ದಾರೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿ ಕಂಡುಬರುವ ವಿವಿಧ ಸಾರ್ವಜನಿಕ ಸಮಸ್ಯೆಗಳನ್ನು ತ್ವರಿತವಾಗಿ ಗುರುತಿಸಿ ಬಗೆಹರಿಸಲು ಕೃತಕ ಬುದ್ಧಿಮತ್ತೆ (Artificial Intelligence - AI) ಆಧಾರಿತ ಅತ್ಯಾಧುನಿಕ ವಾಹನ ತಪಾಸಣಾ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಆರಂಭದಲ್ಲಿ ಪ್ರಾಯೋಗಿಕ ಹಂತದಲ್ಲಿ ಜಾರಿಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಸಮಸ್ಯೆಗಳ ಪರಿಹಾರಕ್ಕಾಗಿ AI ತಂತ್ರಜ್ಞಾನ ಬಳಕೆ ಹೇಗೆ?
AI ಕ್ಯಾಮೆರಾ ಹಾಗೂ ಜಿಪಿಎಸ್ (GPS) ಉಪಕರಣಗಳನ್ನು ಅಳವಡಿಸಲಾದ ವಾಹನವು ರಸ್ತೆಗಳಲ್ಲಿ ಸಂಚರಿಸುವಾಗ ವಿಡಿಯೋ ಹಾಗೂ ಛಾಯಾಚಿತ್ರಗಳನ್ನು ಸೆರೆಹಿಡಿಯುತ್ತದೆ. ಈ ದೃಶ್ಯಾವಳಿಗಳನ್ನು ವಿಶ್ಲೇಷಿಸುವ AI ತಂತ್ರಜ್ಞಾನವು ರಸ್ತೆಯಲ್ಲಿನ ಗುಂಡಿಗಳು, ಫುಟ್‌ಪಾತ್ ಒತ್ತುವರಿ, ಕಸದ ರಾಶಿ, ಕಟ್ಟಡ ತ್ಯಾಜ್ಯ, ಅಪಾಯಕಾರಿಯಾಗಿ ನೇತಾಡುವ ತಂತಿಗಳು ಹಾಗೂ ಒಡೆದ ಮ್ಯಾನ್‌ಹೋಲ್‌ಗಳಂತಹ ಸಮಸ್ಯೆಗಳನ್ನು ಗುರುತಿಸಿ ವರ್ಗೀಕರಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ನೇರವಾಗಿ ಮಾಹಿತಿ ಒದಗಿಸುವ ವ್ಯವಸ್ಥೆ ಇದಾಗಿದೆ.

ಪ್ರಾಯೋಗಿಕವಾಗಿ 75 ಕಿ.ಮೀ ರಸ್ತೆ ಆಯ್ಕೆ
ಪಾಲಿಕೆ ವ್ಯಾಪ್ತಿಯ ಒಟ್ಟು 311 ರಸ್ತೆ ಜಾಲದ ಪೈಕಿ ಪ್ರಾಯೋಗಿಕ (ಪೈಲಟ್) ಅಧ್ಯಯನಕ್ಕಾಗಿ ಸುಮಾರು 75 ಕಿ.ಮೀ ಉದ್ದದ ರಸ್ತೆಯನ್ನು ಆಯ್ಕೆ ಮಾಡಿಕೊಂಡು ಸಮೀಕ್ಷೆ ನಡೆಸಲಾಗುತ್ತಿದೆ. ಈ ಯೋಜನೆಯು ನಿರೀಕ್ಷಿತ ಫಲಿತಾಂಶ ನೀಡಿದಲ್ಲಿ, ಮುಂಬರುವ ದಿನಗಳಲ್ಲಿ ಪಾಲಿಕೆಯ ಸಂಪೂರ್ಣ ವ್ಯಾಪ್ತಿಗೆ ವಿಸ್ತರಿಸುವುದರ ಜೊತೆಗೆ ಆಸ್ತಿ ತೆರಿಗೆ ಪರಿಷ್ಕರಣೆ ಮತ್ತು ಕಟ್ಟಡ ನಿಯಮಗಳ ಉಲ್ಲಂಘನೆ ಪತ್ತೆಗೂ ಇದನ್ನು ಬಳಸಿಕೊಳ್ಳಲು ಚಿಂತನೆ ನಡೆಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ಬೇಸ್‌ಮೆಂಟ್ ದುರುಪಯೋಗ, ಒತ್ತುವರಿ ಪತ್ತೆ
ಕಟ್ಟಡಗಳ ಬೇಸ್‌ಮೆಂಟ್‌ಗಳನ್ನು ಕಡ್ಡಾಯವಾಗಿ ವಾಹನಗಳ ಪಾರ್ಕಿಂಗ್‌ಗೆ ಮಾತ್ರ ಬಳಸಬೇಕಾಗಿದ್ದು, ಹಲವೆಡೆ ನಿಯಮಬಾಹಿರವಾಗಿ ವಾಣಿಜ್ಯ ಮಳಿಗೆಗಳನ್ನಾಗಿ ಪರಿವರ್ತಿಸಿರುವುದನ್ನು ಈ AI ಕ್ಯಾಮೆರಾಗಳು ಸ್ಪಷ್ಟವಾಗಿ ಸೆರೆಹಿಡಿಯಲಿವೆ. ಇದರೊಂದಿಗೆ, ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿಕೊಂಡಿರುವ ಅನಧಿಕೃತ ಅಂಗಡಿಗಳು, ಜಾಹೀರಾತು ಫಲಕಗಳು ಹಾಗೂ ಬೆಸ್ಕಾಂ ಕಂಬಗಳನ್ನು ಗುರುತಿಸಿ ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ.
ಸ್ವಯಂಚಾಲಿತ ಟಿಕೆಟ್ ಮೂಲಕ ತ್ವರಿತ ಪರಿಹಾರ
ವಾಹನವು ಗುರುತಿಸುವ ಪ್ರತಿಯೊಂದು ಸಮಸ್ಯೆಯೂ ಜಿಪಿಎಸ್ ಲೊಕೇಶನ್ ಸಮೇತ ಸ್ವಯಂಚಾಲಿತವಾಗಿ "ಕಂಪ್ಲೇಂಟ್ ಟಿಕೆಟ್' ರೂಪದಲ್ಲಿ ಸಿಸ್ಟಮ್‌ನಲ್ಲಿ ದಾಖಲಾಗುತ್ತದೆ. ಈ ಟಿಕೆಟ್‌ಗಳು ಆಯಾ ವಾರ್ಡ್‌ನ ಸಹಾಯಕ ಕಾರ್ಯಪಾಲಕ ಅಭಿಯಂತರರು (AEE) ಹಾಗೂ ಸಂಬಂಧಪಟ್ಟ ಇಲಾಖೆಯ ಲಾಗಿನ್‌ಗೆ ನೇರವಾಗಿ ರವಾನೆಯಾಗುತ್ತವೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಿದ ನಂತರ, ಕಾಮಗಾರಿಯ 'ಮುಂಚಿನ ಮತ್ತು ನಂತರದ' (Before and After) ಛಾಯಾಚಿತ್ರವನ್ನು ಅಪ್‌ಲೋಡ್ ಮಾಡಿ ಟಿಕೆಟ್ ಕ್ಲೋಸ್ ಮಾಡಲಾಗುವುದು ಎಂದರು.
ಸಾರ್ವಜನಿಕರ ದೂರುಗಳಿಗೆ ಕಾಯದೆ, ಪಾಲಿಕೆಯೇ ಸ್ವಯಂಪ್ರೇರಿತವಾಗಿ ಸಮಸ್ಯೆಗಳನ್ನು ಪತ್ತೆಹಚ್ಚಿ ಪರಿಹರಿಸುವ ಮೂಲಕ ಜನಸ್ನೇಹಿ ಆಡಳಿತ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಆಯುಕ್ತರು ಹೇಳಿದರು.


Click it and Unblock the Notifications
