Bengaluru SIR: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ವಿಶೇಷ ಅಭಿಯಾನ; 4.29 ಲಕ್ಷ ಜನರಿಗೆ ನೋಟಿಸ್
Bengaluru SIR: ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪ್ರಮುಖ ಹಂತವನ್ನು ತಲುಪಿದೆ. ಇದೀಗ ಯುವ ಸಮೂಹ ಹಾಗೂ ಸಾರ್ವಜನಿಕರು ವಿಶೇಷ ಅಭಿಯಾನದ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಜಗದೀಶ್.ಜಿ ಅವರು ಮನವಿ ಮಾಡಿದ್ದಾರೆ. ಎಸ್‌ಐಆರ್‌ಗೆ ಸಂಬಂಧಿಸಿದಂತೆ 4,29,360 ನೋಟಿಸ್ ಜಾರಿ ಮಾಡಲಾಗಿದ್ದು, SIR ಕೇಂದ್ರಕ್ಕೆ ದಾಖಲೆಗಳೊಂದಿಗೆ ಭೇಟಿ ನೀಡುವಂತೆ ತಿಳಿಸಿದ್ದಾರೆ.
ಅಪರ ಜಿಲ್ಲಾ ಚುನಾವಣಾಧಿಕಾರಿ (ಕೇಂದ್ರ) ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸೆಪ್ಪೆಂಬರ್ 2ರಂದು ಸಭೆ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಪರ ಜಿಲ್ಲಾ ಚುನಾವಣಾಧಿಕಾರಿಗಳು ( ಕೇಂದ್ರ) ಹಾಗೂ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಜಗದೀಶ್.ಜಿ ಅವರು ಈಗಾಗಲೇ ಬಿಡುಗಡೆಯಾಗಿರುವ ಕರಡು ಮತದಾರರ ಪಟ್ಟಿಯ ಕುರಿತು ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿರುವುದರಿಂದ ಸಾರ್ವಜನಿಕರಿಂದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಿ, ಅರ್ಹ ಮತದಾರರ ಹೆಸರುಗಳು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ತಪ್ಪಿಹೋಗದಂತೆ ಕ್ರಮ ವಹಿಸಲು ಎಲ್ಲಾ ಮತದಾರರ ನೊಂದಣಾಧಿಕಾರಿಗಳು, ಎ.ಇ.ಆರ್.ಓ ಗಳು, ಬಿ.ಎಲ್.ಓ ಗಳು ಕ್ರಮ ವಹಿಸಬೇಕೆಂದು ನಿರ್ದೇಶನ ನೀಡಿದರು.

Bengaluru SIR: ನಮೂನೆ-6 ಮೂಲಕ ಅರ್ಜಿ ಸಲ್ಲಿಸಿ
ಈಗಾಗಲೇ ವಿಶೇಷ ಸಮಗ್ರ ಪರಿಷ್ಕರಣೆಯ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು ಸಾರ್ವಜನಿಕರು ತಮ್ಮ ಹೆಸರು ಕರಡು ಪಟ್ಟಿಯಲ್ಲಿ ಸೇರಿರುವುದನ್ನು ಮತದಾರರು ಖಚಿತಪಡಿಸಿಕೊಳ್ಳಬೇಕು. ಸ್ಥಳಾಂತರಗೊಂಡಿರುವ ಅಥವಾ ಕರಡು ಪಟ್ಟಿಯಲ್ಲಿ ಹೆಸರು ಇಲ್ಲದ ಮತದಾರರು ನಮೂನೆ-6 ರ ಮೂಲಕ ಆನ್ಲೈನ್ ಅಥವಾ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ, ಹೊಸ ವಿಳಾಸದಲ್ಲಿ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಸಿಕೊಳ್ಳಲು ಆಯುಕ್ತರು ತಿಳಿಸಿದರು.
4,29,360 ನೋಟಿಸ್ ಜಾರಿ - SIR ಕೇಂದ್ರಕ್ಕೆ ದಾಖಲೆಗಳೊಂದಿಗೆ ಭೇಟಿ ನೀಡಬೇಕು
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026ರ ಪ್ರಕ್ರಿಯೆಯಲ್ಲಿ ಮ್ಯಾಪಿಂಗ್ ಆಗದಿರುವುದು ಹಾಗೂ ವಿವಿಧ ವ್ಯತ್ಯಾಸಗಳು (Anomalies) ಕಂಡು ಬಂದಿರುವ ಸುಮಾರು 4,29,360 ಸಾರ್ವಜನಿಕರಿಗೆ ನೋಟಿಸ್‌ಗಳನ್ನು ಜಾರಿ ಮಾಡಲಾಗಿದ್ದು, ಸಂಬಂಧಪಟ್ಟವರು ನೋಟಿಸ್‌ನಲ್ಲಿ ತಿಳಿಸಿದ ಸ್ಥಳ, ದಿನಾಂಕ, ಸಮಯಕ್ಕೆ ಭೇಟಿ ನೀಡಿ, ಮುಖ್ಯ ಮಾನ್ಯ ಚುನಾವಣಾಧಿಕಾರಿಗಳು - ಕರ್ನಾಟಕ ಅವರ ಮಾರ್ಗಸೂಚಿಯನ್ವಯ ಅಗತ್ಯ ದಾಖಲೆಗಳನ್ನು ಸಲ್ಲಿಸಿ, ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಕುರಿತು ಕ್ರಮ ವಹಿಸಲು ಮನವಿ ಮಾಡಿದ್ದಾರೆ.
ವಿಶೇಷ ಅಭಿಯಾನದ ಮೂಲಕ ಹೆಸರು ಸೇರ್ಪಡೆಗೆ ಅವಕಾಶ
ಸೆಪ್ಟೆಂಬರ್ 19 ಮತ್ತು 20, 2026 ರಂದು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026ರ ಸಂಬಂಧ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು ಈ ಸಂದರ್ಭದಲ್ಲಿ 18 ವರ್ಷ ಮೇಲ್ಪಟ್ಟ ಹಾಗೂ ಇನ್ನೂ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗದ ಯುವ ಜನರು, ತಮ್ಮ ಸಮೀಪದ BLO ಕಚೇರಿ/ ಮತಗಟ್ಟೆ ಕೇಂದ್ರಕ್ಕೆ ಭೇಟಿ ನೀಡಿ ಮುಖ್ಯ ಚುನಾವಣಾಧಿಕಾರಿಗಳು-ಕರ್ನಾಟಕ ಅವರ ಮಾರ್ಗಸೂಚಿಯನ್ವಯ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಒದಗಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
Bengaluru SIR: ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಕಾರಕ್ಕೆ ಮನವಿ
ವಿಶೇಷ ಸಮಗ್ರ ಪರಿಷ್ಕರಣೆ (SIR)-2026 ಕಾರ್ಯವನ್ನು ಯಶಸ್ವಿಯಾಗಿ, ನಿಖರವಾಗಿ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಚುನಾವಣಾ ಅಧಿಕಾರಿಗಳೊಂದಿಗೆ ಸಂಪೂರ್ಣ ಸಹಕಾರ ನೀಡಿ ಈ ಮಹತ್ವದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ.


Click it and Unblock the Notifications
