ಬೆಂಗಳೂರಿನ ರಸ್ತೆಯಲ್ಲಿ ನಡೆದಾಡಲು ಸಣ್ಣ ಮಗುವಿನ ಪರದಾಟ: ವಿದೇಶಿ ಪ್ರಜೆ ವಿಡಿಯೋ ವೈರಲ್
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ನಿತ್ಯವೂ ಒಂದಿಲ್ಲೊಂದು ರಸ್ತೆ, ರಸ್ತೆ ಗುಂಡಿಯ ಬಗ್ಗೆ ಚರ್ಚೆ ಆಗುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ರಸ್ತೆಗಳು ಪಾದಚಾರಿ ಸ್ನೇಹಿಯಾಗಿ ಇಲ್ಲ. ಅಲ್ಲದೇ ಪಾದಚಾರಿ ಮಾರ್ಗದಲ್ಲಿ ಸಂಚರಿಸುವುದಕ್ಕೂ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರೀತಿ ಇರುವಾಗ ನಗರದ ಹೃದಯಭಾಗದಲ್ಲಿನ ರಸ್ತೆ ಮತ್ತು ಪಾದಚಾರಿ ಮಾರ್ಗದ ಅವ್ಯವಸ್ಥೆಯ ಬಗ್ಗೆ ವಿದೇಶಿಗರೊಬ್ಬರು ಸಣ್ಣ ಮಗುವಿನ ಕಷ್ಟಪಟ್ಟು ನಡೆಯುತ್ತಿರುವುದನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಹೃದಯಭಾಗದ ರಸ್ತೆಗಳ ಅವ್ಯವಸ್ಥೆಯ ಬಗ್ಗೆ ವಿದೇಶಿಗರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್ ಇದೀಗ ಭಾರೀ ವೈರಲ್ ಆಗಿದೆ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಕೆನಡಾದ ವ್ಯಕ್ತಿಯೊಬ್ಬರು ಮಗುವೊಂದು ಪಾದಚಾರಿ ಮಾರ್ಗ ಹಾಗೂ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದಕ್ಕೆ ಪರದಾಡುತ್ತಿರುವ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ.

ಸಿಲಿಕಾನ್ ಸಿಟಿ ನಗರದ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳು ಎಷ್ಟು ಹದಗೆಟ್ಟಿವೆ ಎನ್ನುವುದನ್ನು ವಿಡಿಯೋದಲ್ಲಿ ಹೇಳಲಾಗಿದೆ. ದೈನಂದಿನ ಸಂಕಷ್ಟಗಳ ಬಗ್ಗೆ ಭಾವನಾತ್ಮಕ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ನಗರದ ಅತ್ಯಂತ ದುಬಾರಿ ಪ್ರದೇಶಗಳಲ್ಲಿ ಒಂದು ಎನ್ನುವ ಖ್ಯಾತಿ ಗಳಿಸಿರುವ ಇಂದಿರಾನಗರದ ಡಬಲ್ ರೋಡ್‌ನಿಂದ ಸುತ್ತಮುತ್ತಲಿನ ಪ್ರದೇಶದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಕ್ಯಾಲೆಬ್ ಫ್ರೈಸೆನ್ (caleb_friesen) ಎನ್ನುವ ಖಾತೆಯಿಂದ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿರುವ ನೆಟ್ಟಿಗರು ಬೆಂಗಳೂರಿನ ಅತ್ಯಂತ ದುಬಾರಿ ನಗರಗಳಲ್ಲೇ ಒಂದಾಗಿರುವ ಈ ಪ್ರದೇಶದಲ್ಲಿ ಈ ಪರಿಸ್ಥಿತಿ ಇದ್ದರೆ ಹೇಗೆ ಎಂದು ಜನ ಪ್ರಶ್ನೆ ಮಾಡಿದ್ದಾರೆ.
ವೀಡಿಯೊದಲ್ಲಿ ಕ್ಯಾಲೆಬ್ ಎನ್ನುವವರು ತಮ್ಮ ಚಿಕ್ಕ ಮಗನ ಕೈಯನ್ನು ಹಿಡಿದು ಮುರಿದ ಪಾದಚಾರಿ ಮಾರ್ಗಗಳು, ಅಸಮರ್ಪಕ ಚಪ್ಪಡಿಗಳು ಮತ್ತು ರಸ್ತೆ ಗುಂಡಿಗಳಿಂದ ಕೂಡಿದ ಪ್ರದೇಶದಲ್ಲಿ ದಾಟುವುದನ್ನು ತೋರಿಸಿದ್ದಾರೆ. ಈ ರೀತಿಯ ಮಾರ್ಗಗಳು ಪಾದಚಾರಿಗಳಿಗೆ ತುಂಬಾ ಸಂಕಷ್ಟವನ್ನು ತಂದೊಡ್ಡಿದೆ ಎಂದು ಹೇಳಲಾಗಿದೆ.
ಇನ್ನು ಈ ಪೋಸ್ಟ್‌ನಲ್ಲಿ ಗಂಭೀರವಾಗಿ ಹೇಳುವುದಾದರೆ ಇಂದಿರಾನಗರದಲ್ಲಿರುವ (ಬೆಂಗಳೂರಿನ ಅತ್ಯಂತ ದುಬಾರಿ ಪ್ರದೇಶಗಳಲ್ಲಿ ಒಂದು) ಡಬಲ್ ರಸ್ತೆ ಪಾದಚಾರಿಗಳಿಗೆ ಸಂಕಷ್ಟವಾಗಿದೆ. ಪಾದಚಾರಿ ಮಾರ್ಗಗಳು ದುರಸ್ತಿ ಮಾಡಲಾಗದಷ್ಟು ಹಾನಿಗೊಳಗಾಗಿವೆ. ಕುಂಡಗಳಲ್ಲಿ ಇಟ್ಟಿರುವ ಸಸ್ಯಗಳು, ಮರಗಳು ಮತ್ತು ವಾಹನಗಳಿಂದ ಆಕ್ರಮಿಸಲ್ಪಟ್ಟಿವೆ ಮತ್ತು ಸಾಮಾನ್ಯವಾಗಿ ನಡೆಯಲು ಸಾಧ್ಯವಿಲ್ಲ ಎನ್ನುವಂತೆ ಇದೆ.
ಇಂದಿರಾನಗರದಲ್ಲಿ ಕನಿಷ್ಠ ಪಾದಚಾರಿ ಮಾರ್ಗಗಳಿವೆ. ಭಾರತದ ಮಹಾನಗರಗಳಲ್ಲಿನ ಅನೇಕ ಪ್ರದೇಶಗಳ ವಾಸ್ತವಕ್ಕಿಂತ ಇದು ಒಂದು ದೊಡ್ಡ ಹೆಜ್ಜೆ ಎಂದು ನಾನು ಅಂದುಕೊಳ್ಳುತ್ತೇನೆ. ಆದರೆ ಇಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ನಡೆಯುವಾಗ ಇರುವ ವ್ಯವಸ್ಥೆ ನೋಡಿದರೆ ನಗು ಬರುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಇನ್ನು ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜನ ಈ ವಿಡಿಯೋವನ್ನು ನೋಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲೇ ಈ ಅವ್ಯವಸ್ಥೆಯಾದರೆ ಉಳಿದ ಭಾಗದ ಪರಿಸ್ಥಿತಿ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಈ ವಿಡಿಯೋ ವೈರಲ್ ಆದ ಮೇಲಾದರೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಸ್ಥಳೀಯ ಪಾಲಿಕೆಯ ಅಧಿಕಾರಿಗಳು ಸರಿಮಾಡಬಹುದೇ ಎಂದು ನೋಡಬೇಕು ಎಂದು ಕೆಲವು ನೆಟ್ಟಿಗರು ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಈಗಾಗಲೇ ಬೆಂಗಳೂರಿನಲ್ಲಿ ಯಾವುದೇ ರಸ್ತೆಗುಂಡಿಗಳು ಇಲ್ಲ ಎಂದು ಪೋಸ್ಟ್ ಮಾಡಿ ಆಗಿದೆ. ಈಗ ಇದನ್ನು ನೋಡಿದರೆ ಏನು ಹೇಳುತ್ತಾರೋ ನೋಡಬೇಕು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.












Click it and Unblock the Notifications