Bengaluru 2nd Airport: ಬೆಂಗಳೂರು ಏರ್‌ಪೋರ್ಟ್: ಈ ಜಾಗದಲ್ಲಿ ನಿರ್ಮಾಣ ಡೌಟ್!
Bengaluru 2nd Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರವು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೇಂದ್ರ ಸರ್ಕಾರಕ್ಕೆ ಮೂರು ಜಾಗಗಳನ್ನು ಫೈನಲ್ ಮಾಡಿ ಕರ್ನಾಟಕ ಸರ್ಕಾರವು ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ಆದರೆ, ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳುವುದು ಅನುಮಾನವಾಗಿದೆ. ಇದಕ್ಕೆ ಕಾರಣ ಈಗ ಸಲ್ಲಿಸಿರುವ ಮೂರು ಜಾಗಗಳಲ್ಲೂ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರ ಹಿತಾಸಕ್ತಿ ಹೆಚ್ಚಾಗಿರುವುದು. ಅದರಲ್ಲೂ ಈ ಒಂದು ಜಾಗಕ್ಕೆ ಒಪ್ಪಿಗೆ ಸಿಗುವುದು ಅನುಮಾನವಾಗಿದೆ. ಈಗಾಗಲೇ ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಘೋಷಣೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವು ಹೇಳಿದೆ.
ರಾಮನಗರದ ವಿಚಾರದಲ್ಲಿ ಕೇಂದ್ರ ಸರ್ಕಾರವು ಈಗಾಗಲೇ ಡಿ.ಕೆ ಶಿವಕುಮಾರ್ ಅವರಿಗೆ ಶಾಕ್ ನೀಡಿದೆ. ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಘೋಷಣೆ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸರ್ಕಸ್ ಮಾಡಿದ್ದರು. ಆದರೆ, ಅವರ ಲೆಕ್ಕಾಚಾರವನ್ನು ಕೇಂದ್ರ ಸರ್ಕಾರವು ತಲೆಕೆಳಗಾಗಿಸಿದೆ. ಅದೇ ಪರಿಸ್ಥಿತಿ ಇದೀಗ ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ವಿಷಯದಲ್ಲೂ ಆಗಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಡಿ.ಕೆ ಶಿವಕುಮಾರ್ ಅವರು ಹೇಗಾದರೂ ಮಾಡಿ ಕನಕಪುರ - ರಾಮನಗರ ಭಾಗಕ್ಕೆ ಲಾಭ ತಂದುಕೊಡಬೇಕು ಎಂದು ಲೆಕ್ಕಾಚಾರ ಮಾಡಿರುವುದು.

ಹೌದು ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಇದೀಗ ಅಂತಿಮವಾಗಿ ಮೂರು ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಆ ಮೂರು ಜಾಗಗಳ ವಿವರ ಈ ರೀತಿ ಇದೆ.
* ಬೆಂಗಳೂರು ದಕ್ಷಿಣ ತಾಲ್ಲೂಕಿನ ಚೂಡಹಳ್ಳಿ ಸಮೀಪ
* ಬೆಂಗಳೂರು ದಕ್ಷಿಣ ತಾಲ್ಲೂಕು ಸೋಮನಹಳ್ಳಿ ಸಮೀಪ
* ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ನೆಲಮಂಗಲ ಸಮೀಪ
ಈ ಮೂರು ಜಾಗಗಳೊಂದಿಗೆ ಕನಕಪುರದ ಹೆಸರು ಸಹ ಕೇಳಿ ಬಂದಿದೆ. ಆದರೆ, ಈಗಾಗಲೇ ರಾಮನಗರದ ಕನಸಿಗೆ ಕೇಂದ್ರ ಸರ್ಕಾರವು ತಣ್ಣೀರು ಎರಚಿದೆ. ಹೀಗಾಗಿ, ಡಿ.ಕೆ ಶಿವಕುಮಾರ್ ಅವರು ಹೆಚ್ಚು ಮುತುವರ್ಜಿ ವಹಿಸಿರುವ ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ವಿಷಯದಲ್ಲೂ ಇದೇ ಆಗಲಿದೆ ಎಂದು ಹೇಳಲಾಗುತ್ತಿದೆ.
ಎಚ್.ಡಿ ಕುಮಾರಸ್ವಾಮಿ ಪ್ರಭಾವ: ಕೇಂದ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಪ್ರಭಾವ ಹೆಚ್ಚಾಗಿದೆ. ಎಚ್.ಡಿ ಕುಮಾರಸ್ವಾಮಿ ಅವರು ವಿವಿಧ ಯೋಜನೆಗಳ ಜಾರಿಗೆ ಮುಂದಾಗಿದ್ದಾರೆ. ಈಗಾಗಲೇ ಮಂಡ್ಯಗೆ ಭರ್ಜರಿ ಕೊಡುಗೆಗಳನ್ನು ತರಲು ಅವರು ಸಿದ್ಧರಾಗಿದ್ದಾರೆ. ಉಪನಗರ ವರ್ತುಲ ರಸ್ತೆಗೆ ಶೀಘ್ರವೇ ಕೇಂದ್ರ ಸರ್ಕಾರದ ಅನುಮೋದನೆ ನೀಡಲಿದೆ. ಶೀಘ್ರವೇ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಎಂದು ಹೇಳಿದ್ದಾರೆ. ಹೀಗಾಗಿ, ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ವಿಚಾರದಲ್ಲೂ ಎಚ್.ಡಿ ಕುಮಾರಸ್ವಾಮಿ ಅವರ ಪ್ರಭಾವ ಇರಲಿದೆ ಎಂದು ಹೇಳಲಾಗಿದೆ.
ಎಚ್.ಡಿ ಕುಮಾರಸ್ವಾಮಿ Vs ಡಿ.ಕೆ ಶಿವಕುಮಾರ್: ರಾಜ್ಯದಲ್ಲಿ ಎಚ್.ಡಿ ಕುಮಾರಸ್ವಾಮಿ vs ಡಿ.ಕೆ ಶಿವಕುಮಾರ್ ವಾಗ್ದಾಳಿ ಮುಂದಿನ ಹಂತಕ್ಕೆ ಹೋಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಅವರಿಗೆ ಹಿನ್ನಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ರಿಯಲ್ ಎಸ್ಟೇಟ್ ಲೆಕ್ಕಾಚಾರಕ್ಕೆ ಹಿನ್ನಡೆ: ಯಾವುದೇ ಕಾರಣಕ್ಕೂ ಕನಕಪುರ ಹಾಗೂ ರಾಮನಗರದ ಜನ ಆಸ್ತಿ ಮಾರಾಟ ಮಾಡಬೇಡಿ ಎಂದು ಕಳೆದ ಆರು ತಿಂಗಳಿನಿಂದಲೂ ಡಿ.ಕೆ ಶಿವಕುಮಾರ್ ಅವರು ಹೇಳುತ್ತಲ್ಲೇ ಇದ್ದಾರೆ. ಇದೀಗ ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ವಿಚಾರದಲ್ಲೂ ರಿಯಲ್ ಎಸ್ಟೇಟ್ ಲೆಕ್ಕಾಚಾರ ಜೋರಾಗಿ ಇದೆ. ಆದರೆ, ಈ ಲೆಕ್ಕಾಚಾರಗಳು ತಲೆಕೆಳಗಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.












Click it and Unblock the Notifications