Bengaluru Second Airport: ಬೆಂಗಳೂರಿನ 2ನೇ ವಿಮಾನ ನಿಲ್ದಾಣದ ಜಾಗ ಮುಂದಿನ ವಾರವೇ ಫೈನಲ್?
ಬೆಂಗಳೂರಿಗೆ ಎರಡನೇ ಏರ್‌ಪೋರ್ಟ್ ನಿರ್ಮಾಣ ಮಾಡುವ ಸಂಬಂಧ ರಾಜ್ಯ ಸರ್ಕಾರವು ವಿಶೇಷ ಕಾಳಜಿ ತೋರಿದೆ. ಈಗಾಗಲೇ ಮೂರು ಜಾಗಗಳನ್ನು ಗುರುತು ಮಾಡಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಅನುಮೋದನೆಗೆ ಕಳುಹಿಸಿ ಕೊಟ್ಟಿದೆ. ಸಚಿವ ಎಂ.ಬಿ.ಪಾಟೀಲ್ ಅವರು ನೀಡಿರುವ ಮಾಹಿತಿಯಂತೆ ಏಪ್ರಿಲ್ 7ರಿಂದ 9ನೇ ತಾರೀಖಿನ ನಡುವೆ ಕೇಂದ್ರದ ತಂಡದ ರಾಜ್ಯಕ್ಕೆ ಆಗಮಿಸಲಿದೆ. ಈ ವೇಳೆ ರಾಜ್ಯ ಸರ್ಕಾರ ಗುರುತಿಸಿರುವ ಮೂರೂ ಸ್ಥಳಗಳಿಗೆ ಈ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಹಾಗಾದರೆ ಎರಡನೇ ವಿಮಾನ ನಿಲ್ದಾಣಕ್ಕೆ ಸ್ಥಳ ಯಾವಾಗ ಅಂತಿಮಗೊಳ್ಳಲಿದೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು 2ನೇ ಅಂತರರಾಷ್ಟ್ರೀಯ ಹಸಿರು ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಕನಕಪುರ ರಸ್ತೆಯಲ್ಲಿ ಎರಡು ಸ್ಥಳಗಳು ಹಾಗೂ ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿ ಒಂದು ಜಾಗ ಸೇರಿದಂತೆ ಒಟ್ಟು ಮೂರು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಈ ಮೂರೂ ಸ್ಥಳಗಳ ಪೂರ್ವಕಾರ್ಯಸಾಧ್ಯತಾ ಅಧ್ಯಯನಕ್ಕಾಗಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ತಂಡವು ಏಪ್ರಿಲ್ ಎರಡನೇ ವಾರ ರಾಜ್ಯಕ್ಕೆ ಆಗಮಿಸುತ್ತಿದೆ. ಇದಕ್ಕಾಗಿ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮವು (ಕೆಎಸ್ಐಐಡಿಸಿ) 1.21 ಕೋಟಿ ರೂಪಾಯಿ ಶುಲ್ಕವನ್ನು ಸಹ ಪ್ರಾಧಿಕಾರಕ್ಕೆ ಪಾವತಿಸಿದೆ.

ಪ್ರಾಧಿಕಾರಕ್ಕೆ ಕೆಎಸ್ಐಐಡಿಸಿ ವತಿಯಿಂದ ಶುಲ್ಕ ಪಾವತಿಸಿರುವ ಹಿನ್ನೆಲೆ ಆ ತಂಡವು ರಾಜ್ಯಕ್ಕೆ ಆಗಮಿಸಿ, ಮೂರೂ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಈ ಮೂರೂ ಸ್ಥಳಗಳಲ್ಲಿ ಏರ್‌ಪೋರ್ಟ್‌ಗೆ ಯಾವ ಜಾಗ ಸೂಕ್ತ ಎಂಬ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಲಿದ್ದಾರೆ. ಇನ್ನು ಏರ್‌ಪೋರ್ಟ್ ನಿರ್ಮಾಣಕ್ಕೆ ಕೆಲವು ಮಹತ್ವದ ಮಾನದಂಡಗಳಿರುವುದರಿಂದ ಅದರ ಅನುಸಾರವಾಗಿಯೇ ಸ್ಥಳ ಆಯ್ಕೆ ನಡೆಯಲಿದೆ. ಸ್ಥಳ ಆಯ್ಕೆ ಸಂಬಂಧ ಪ್ರಾಧಿಕಾರವು ವರದಿ ನೀಡಿದ ನಂತರವೇ ರಾಜ್ಯ ಸರ್ಕಾರವು ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ.

ಬೆಂಗಳೂರಿನಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಈಗಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯವಾಗಿ ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿನ ದಟ್ಟಣೆ ತಗ್ಗಿಸುವುದೇ ಹೊಸ ಏರ್‌ಪೋರ್ಟ್ ಪ್ರಸ್ತಾವನೆಯ ಪ್ರಮುಖ ಉದ್ದೇಶವಾಗಿದೆ. ಹೀಗಾಗಿ ಕನಕಪುರ ರಸ್ತೆ ಸಮೀಪ ಎರಡು ಜಾಗ ಹಾಗೂ ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿ ಒಂದು ಸ್ಥಳವನ್ನು ಗುರುತಿಸಿ ಈ ಪ್ರಸ್ತಾವನೆಯನ್ನು ಕೇಂದ್ರಕ್ಕೆ ರವಾನಿಸಿದೆ.

ಈಗಿನ ಮಾಹಿತಿ ಪ್ರಕಾರ ಪ್ರಾಧಿಕಾರವು ಮುಂದಿನ ವಾರದಲ್ಲಿ ಅಧಿಕಾರಿಗಳ ತಂಡವನ್ನು ರಾಜ್ಯಕ್ಕೆ ಕಳಿಸಿಕೊಡಲಿದೆ. ಈ ನಡುವೆ ಸಚಿವ ಎಂಬಿ ಪಾಟೀಲ್ ಅವರು ದೆಹಲಿಗೆ ಭೇಟಿ ನೀಡಿ, ಈ ಪ್ರಸ್ತಾಪಿಸಿರುವ ಮೂರು ಸ್ಥಳಗಳ ಬಗ್ಗೆ ಕೇಂದ್ರ ಸರ್ಕಾರದ ಸಂಬಂಧಪಟ್ಟ ಇಲಾಖೆಗಳು ಹಾಗೂ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸುವ ಸಾಧ್ಯತೆ ಇದೆ. ಹೊಸ ವಿಮಾನ ನಿಲ್ದಾಣಕ್ಕೆ ಅಂತಿಮ ಅನುಮೋದನೆ ಪಡೆಯಲು ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ. ಒಂದು ವೇಳೆ ನಿಗದಿಯಾದಂತೆ ಪ್ರಾಧಿಕಾರದ ತಂಡ ಮುಂದಿನ ವಾರ ಸ್ಥಳ ಪರಿಶೀಲನೆ ನಡೆಸಿದರೆ, ಎರಡನೇ ಏರ್‌ಪೋರ್ಟ್‌ಗೆ ಜಾಗ ಕೂಡ ಫೈನಲ್ ಆಗುವ ಸಾಧ್ಯತೆ ಇದೆ.












Click it and Unblock the Notifications