Bengaluru Second Airport: ಎರಡನೇ ವಿಮಾನ ನಿಲ್ದಾಣ: ಆಸ್ತಿದಾರರಿಗೆ ಕಹಿ ಸುದ್ದಿ, ಭೂಮಿಗೆ ಬಂಪರ್ ಬೆಲೆ ಬಂದರೂ..!
Bengaluru Second Airport: ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣದಿಂದ ಆಸ್ತಿದಾರರಿಗೆ ಬಂಪರ್ ಬೆಲೆ ಬರಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಎರಡನೇ ವಿಮಾನ ನಿಲ್ದಾಣದ ವಿಚಾರದಲ್ಲಿ ಆಸ್ತಿದಾರರಿಗೆ ಹಿನ್ನಡೆ ಆಗುವ ಆತಂಕ ಎದುರಾಗಿದೆ. ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಪ್ರಕ್ರಿಯೆ ಜೋರಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಭೂಮಿ ಸ್ವಾಧೀನ ಪ್ರಕ್ರಿಯೆ ಶುರುವಾಗಲಿದ್ದು ಭೂಮಿಗೆ ಬಂಗಾರದ ಬೆಲೆ ಬರಲಿದೆ ಎನ್ನುವ ನಿರೀಕ್ಷೆಯಲ್ಲಿ ಜನ ಇದ್ದರು. ಆದರೆ, ಜನರ ನಿರೀಕ್ಷೆಗಳಿಗೆ ರಾಜ್ಯ ಸರ್ಕಾರವು ಶಾಕ್ ನೀಡಿದೆ.
ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಮೂರು ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಈಗಾಗಲೇ ಕೇಂದ್ರ ತಂಡವು ಬಂದು ಸ್ಥಳ ಪರಿಶೀಲನೆ ಮಾಡಿದ್ದು ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಕೆ ಮಾಡಿದೆ. ಅಧ್ಯಯನ ವರದಿಯ ಒಂದು ಪ್ರತಿಯನ್ನು ರಾಜ್ಯ ಸರ್ಕಾರಕ್ಕೂ ನೀಡಲಾಗುತ್ತದೆ. ಎಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬಹುದು ಎನ್ನುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿಯೇ ಆಗಲಿದೆ.

ಕೇಂದ್ರದ ವರದಿಯ ಆಧಾರದ ಮೇಲೆ ರಾಜ್ಯ ಸರ್ಕಾರವು ಯಾವ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ನಿರ್ಧಾರ ಮಾಡಲಿದೆ. ಆದರೆ, ಭೂಮಿ ವಿಚಾರದ ಲೆಕ್ಕಾಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಹೊಸ ಪ್ಲ್ಯಾನ್ ಮಾಡಿದ್ದು. ಇದರಿಂದ ಭೂಮಿ ಮಾರಾಟ ಹಾಗೂ ಭೂಮಿ ಬೆಲೆ ಹೆಚ್ಚಳವಾಗುವ ನಿರೀಕ್ಷೆಯಲ್ಲಿ ಇದ್ದವರಿಗೆ ನಿರಾಸೆ ಮೂಡಿದೆ. ಇಷ್ಟಕ್ಕೂ ಸರ್ಕಾರ ಭೂಮಿದಾರರಿಗೆ ಕೊಡಲು ಮುಂದಾಗಿರುವ ಶಾಕ್ ಏನು ಅಂತ ನೋಡೋಣ.
ಮೂರು ಜಾಗಗಳಲ್ಲೂ ಸರ್ಕಾರದ ಒಂದು ನಿರ್ಧಾರ: ಬೆಂಗಳೂರು 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರವು ಭೂಮಿ ವಿಚಾರದಲ್ಲಿ ಚೌಕಾಸಿ ಲೆಕ್ಕಾಚಾರವನ್ನು ಹಾಕಿದೆ. ಹೌದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬರೋಬ್ಬರಿ 4500 ರಿಂದ 5000 ಸಾವಿರಕ್ಕೂ ಹೆಚ್ಚು ಎಕರೆ ಜಾಗದ ಅವಶ್ಯಕತೆ ಇದೆ. ಕನಕಪುರ - ಬಿಡದಿ ಹಾಗೂ ನೆಲಮಂಗಲ ಸುತ್ತಮುತ್ತಲಿನ ಪ್ರದೇಶದಲ್ಲಿ ವಿಮಾನ ನಿಲ್ದಾಣಕ್ಕೆ ಸೂಕ್ತ ಜಾಗಕ್ಕೆ ಹುಡುಕಾಟ ಮುಂದುವರಿದಿದೆ.
ಈ ರೀತಿ ಇರುವಾಗಲೇ ಸರ್ಕಾರವು ಹೆಚ್ಚು ವೆಚ್ಚ ಮಾಡದಂತೆ ಅಥವಾ ಸರ್ಕಾರಿ ಭೂಮಿಯ ಲೆಕ್ಕಾಚಾರವನ್ನು ಮಾಡಿದೆ. ಈ ವಿಚಾರವಾಗಿ ಮಾತನಾಡಿರುವ ಸಚಿವ ಎಂ.ಬಿ ಪಾಟೀಲ್‌ಅವರು ಎಲ್ಲಿ ಸರ್ಕಾರಿ ಜಾಗ ಹೆಚ್ಚಾಗಿದೆಯೋ ಅಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. ಸರ್ಕಾರಿ ಜಾಗ ಎಲ್ಲಿ ಹೆಚ್ಚಾಗಿ ಇದೆಯೋ ಅದನ್ನೇ ಈಗ ಶಾರ್ಟ್‌ಲಿಸ್ಟ್ ಮಾಡಿರುವ ಜಾಗದಲ್ಲಿ ಆದ್ಯತೆಯಾಗಿ ಇರಿಸಿಕೊಳ್ಳುವುದಾಗಿ ಸರ್ಕಾರ ಹೇಳಿದೆ.
ಈ ನಿರ್ಧಾರದಿಂದಾಗಿ ಭೂಮಿಯ ಬೆಲೆ ಹೆಚ್ಚಳವಾಗಲಿದೆ ಎಂದು ನಿರೀಕ್ಷೆ ಮಾಡಿದವರಿಗೆ ಇದೀಗ ಹಿನ್ನಡೆಯಾಗುವ ಆತಂಕ ಎದುರಾಗಿದೆ. ಸರ್ಕಾರಿ ಜಾಗವನ್ನೇ ಹೆಚ್ಚು ಬಳಸುವುದರಿಂದ ಆಸ್ತಿದಾರರ ಭೂಮಿ ಖರೀದಿ ಮಾಡುವ ಅವಶ್ಯಕತೆ ತುಸು ಕಡಿಮೆಯಾಗುತ್ತದೆ. ಮಾತ್ರವಲ್ಲ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುವುದು ಸರ್ಕಾರದ ಲೆಕ್ಕಾಚಾರವಾಗಿದೆ.
ಭೂಮಿ ಮಾರಾಟ ಲೆಕ್ಕಾಚಾರ ತಲೆಕೆಳಗೆ: ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದರೆ ಭೂಮಿಗೆ ಬಂಗಾರದ ಬೆಲೆ ಬರಲಿದೆ ಎಂದು ಲೆಕ್ಕಾಚಾರ ಹಾಕಿದ್ದ ಈ ಭಾಗದ ಜನರ ಲೆಕ್ಕಾಚಾರಗಳು ಇದೀಗ ತಲೆಕೆಳಗಾಗುವಂತೆ ಆಗಿದೆ. ಸರ್ಕಾರವು ಸರ್ಕಾರಿ ಜಾಗವೇ ಹೆಚ್ಚಾಗಿರುವ ಪ್ರದೇಶವನ್ನು ಹುಡುಕಿದರೆ, ಸುತ್ತಮುತ್ತಲಿನ ಭಾಗದ ಆಸ್ತಿದಾರರ ಭೂಮಿಗೆ ಒಳ್ಳೆಯ ಬೆಲೆ ಬರುವುದು ಅನುಮಾನ ಅಂತಲೂ ಹೇಳಲಾಗುತ್ತಿದೆ.












Click it and Unblock the Notifications