Bengaluru Second Airport: ಬೆಂಗಳೂರು 2ನೇ ಏರ್‌ಪೋರ್ಟ್ ನಿರ್ಮಾಣಕ್ಕೆ ಈ ಭಾಗದ ಜಾಗಕ್ಕೆ ಆದ್ಯತೆ
ಬೆಂಗಳೂರು: ರಾಜಧಾನಿಯಲ್ಲಿ ಬಹುನಿರೀಕ್ಷೆಯ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಯೋಜನೆ (Bengaluru Second Ariport) ಬೆಂಗಳೂರು ದಕ್ಷಿಣ ಭಾಗದಲ್ಲಿ ನಿರ್ಮಿಸುವ ಬಗ್ಗೆ ತೀವ್ರ ಚರ್ಚೆಗಳು ಶುರುವಾಗಿವೆ. ಈಗಾಗಲೇ ವಿವಿಧೆಡೆ ಜಾಗ ಗುರುತಿಸಿದ್ದ ಸರ್ಕಾರ ಅಂತಿಮಗೊಳಿಸಲು ಮುಂದಾಗಿದೆ. ಮುಂದಿನ ವಾರದ ಸಭೆಯಲ್ಲಿ ಅಥವಾ ಬಜೆಟ್ ಅಧಿವೇಶನದಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವ ನಿರೀಕ್ಷೆಗಳು ಇವೆ.
ಬೆಂಗಳೂರು ವಾಯುಯಾನ ಮೂಲ ಸೌಕರ್ಯದಲ್ಲಿ, ಜನದಟ್ಟಣೆ ಹಾಗೂ ಹಾಲಿ ದೇವನಹಳ್ಳಿ ಕೆಂಪೇಗೌಡ ಏರ್‌ಪೋರ್ಟ್ ಮೇಲಿನ ಪ್ರಯಾಣಿಕರ ಒತ್ತಡ ಕಡಿಮೆ ಮಾಡಲು ಬೆಂಗಳೂರಿನ ವ್ಯಾಪ್ತಿಯಲ್ಲಿ ಎರಡನೇ ವಿಮಾನ ನಿಲ್ದಾಣ ಅಗತ್ಯವೆಂದು ಸರ್ಕಾರ ತಿಳಿಸಿದೆ. ಕನಕಪುರ ರಸ್ತೆಯಲ್ಲಿ ಎರಡು ಕಡೆ, ತುಮಕೂರು ರಸ್ತೆ ಕಡೆಗೆ ಕುಣಿಗಲ್ ಸಮೀಪ, ನೆಲಮಂಗಲ, ದಾಬಾಸ್‌ಪೇಟೆ ಹೀಗೆ ಕೆಲವು ಜಾಗಗಳನ್ನು ಸರ್ಕಾರ ಗುರುತಿಸಿದೆ. ಕೇಂದ್ರ ಅಧಿಕಾರಿಗಳ ತಂಡ ಬಂದು ಪರಿಶೀಲಿಸಿದೆ. ಯೋಜನೆ ಸಾಕಾರಕ್ಕಾಗಿ ಕಾರ್ಯಸಾಧ್ಯತಾ ವರದಿಗೆ ಸಲಹೆಗಾರರನ್ನು ನೇಮಿಸಲು ಸರ್ಕಾರ ಟೆಂಡರ್ ಆಹ್ವಾನಿತ್ತು. ದಕ್ಷಿಣ ಭಾಗದ ಕನಕಪುರ ರಸ್ತೆ ಕಡೆಗೇ ಜಾಗ ಅಂತಿಮಗೊಳಿಸುವ ನಿರೀಕ್ಷೆ ಇದೆ.

ಏರ್‌ಪೋರ್ಟ್ ಯೋಜನೆಗೆ ಅಡಚಣೆ?
ಏರ್‌ಪೋರ್ಟ್‌ಗೆ ಜಾಗ ಗುರುತಿಸಿದ ಕನಕಪುರ ರಸ್ತೆಯ ಸೋಮನಹಳ್ಳಿ ಇಲ್ಲವೇ ಚೂಡನಹಳ್ಳಿ ಭಾಗದಲ್ಲೇ ಏರ್‌ಪೋರ್ಟ್ ತಲೆ ಎತ್ತಲಿದೆ. ಯೋಜನೆಗಳಿಂದ ರಸ್ತಗೆ ಮೂಲಸೌಕರ್ಯ, ವಾಯುಯಾನ ಸುಧಾರಣೆ, ಈ ಭಾಗದ ಆರ್ಥಿಕತೆಗಳು ಸುಧಾರಣೆಗೊಳ್ಳುತ್ತವೆ. ಇತ್ತ ಬೆಂಗಳೂರು ಪಶ್ಚಿಮ ಭಾಗದಲ್ಲಿ ಅಂದರೆ ವಿಮಾನ ನಿಲ್ದಾಣ ಗುರುತಿಸಿದ ಸುಮಾರು 30-40 ಕಿಲೋ ಮೀಟರ್ ದೂರದಲ್ಲಿ ಏಷ್ಯಾದ ಅತೀ ಎತ್ತರದ 250 ಮೀಟರ್‌ನ ಸ್ಕೈಡೆಕ್ ನಿರ್ಮಿಸಲು ಪ್ಲಾನ್ ಮಾಡಲಾಗಿದೆ. ಇದು ವಿಮಾನಗಳ ಚಲನೆಗೆ ಅಡಚಣೆ ಉಂಟು ಮಾಡುವ ಸಂಭವವಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟತೆ ಸಿಗಬೇಕಿದೆ.
ಹೊಸ ವಿಮಾನ ನಿಲ್ದಾಣ: ಸೋಮನಹಳ್ಳಿ ಸ್ಥಳ ಅಂತಿಮ?
ವಿಧಾನಸೌಧದಲ್ಲಿ ಇತ್ತೀಚೆಗೆ ನಡೆದಿದ್ದ ಸಭೆಯಲ್ಲಿ ಅಧಿಕಾರಿಗಳು ಎರಡನೇ ವಿಮಾನ ನಿಲ್ದಾಣಕ್ಕೆ ಕನಿಷ್ಠ ಆರು ಸಂಭಾವ್ಯ ಸ್ಥಳಗಳನ್ನು ಗುರುತಿಸಿದ್ದನ್ನು ಪ್ರಸ್ತಾಪಿಸಿದರು. ಈ ಪೈಕಿ ಕನಕಪುರ ರಸ್ತೆಯ ಸೋಮನಹಳ್ಳಿ ಗ್ರಾಮದಲ್ಲಿ ಸೂಕ್ತ ಜಾಗ ಇದೆ ಎಂದಿರುವ ಅವರು ಈ ಪ್ರದೇಶವನ್ನು ಯೋಜನೆಗೆ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಸ್ಥಳವು ಹಾಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) 70 ಕಿ.ಮೀ ದೂರದಲ್ಲಿದೆ. ಇಲ್ಲಿ ನಿರ್ಮಾಣವಾದರೆ ಬೆಂಗಳೂರು ದಕ್ಷಿಣದಿಂದ ಹಿಡಿದು ಮೈಸೂರು ರಸ್ತೆಯ ಜಿಲ್ಲೆಗಳಿಗೆ ಹೆಚ್ಚು ಅನುಕೂಲ ಆಗಲಿದೆ. ವಾಣಿಜ್ಯ, ವ್ಯವಹಾರಗಳು ವೃದ್ಧಿಸಲಿವೆ.
ಏರ್‌ಪೋರ್ಟ್ ನಿರ್ಮಾಣ ಯೋಜನೆಯಿಂದ ಒಂದು ಸ್ಥಳ ಆಯ್ಕೆ ಆಗುವವರೆಗೂ ದಾಬಾಸ್‌ಪೇಟೆ, ನೆಲಮಂಗಲ, ಬಿಡದಿ ಮತ್ತು ಹಾರೋಹಳ್ಳಿ ಸೇರಿದಂತೆ ಇನ್ನಿತರ ಸ್ಥಳಗಳು ಪಟ್ಟಿಯಲ್ಲಿಯೇ ಇರಲಿವೆ. ಈ ಯೋಜನೆ ಮೇಲೆ ರಾಜಕೀಯ ಹಿತಾಸಕ್ತಿಗಳ ಪ್ರಭಾವ ಉಂಟಾಗಲ್ಲ ಎಂದಿರುವ ಮೂಲ ಸೌಕರ್ಯಾಭಿವೃದ್ಧಿ ಸಚಿವ ಎಂಬಿ ಪಾಟೀಲ್ ಅವರು ಇನ್ನೂವರೆಗೆ ಸ್ಥಳ ಅಂತಿಮಗೊಳಿಸಿಲ್ಲ. ಸರ್ಕಾರಕ್ಕೆ ಕಾರ್ಯಸಾಧ್ಯತಾ ವರದಿ ಸಲ್ಲಿಕೆ ಆಗಬೇಕಿದ್ದು, ನಂತರದ ದಿನಗಳಲ್ಲಿ ಸ್ಥಳ ಅಂತಿಮಗೊಳ್ಳುವ ಸಾಧ್ಯತೆ ಇದೆ.
ಬೆಂಗಳೂರು ಪಶ್ಚಿಮ ಹಾಗೂ ಬೆಂಗಳೂರು ದಕ್ಷಿಣ ಭಾಗಗಳು ಅಕ್ಕಪಕ್ಕದಲ್ಲಿವೆ. ಇಲ್ಲಿನ ಪ್ರವಾಸೋದ್ಯಮ ಮತ್ತು ಸ್ಥಳೀಯ ಅಭಿವೃದ್ಧಿಯ ಮೇಲೆ ಹೊಸ ಏರ್‌ಪೋರ್ಟ್ ಯೋಜನೆ ಹಾಗೂ ಸ್ಕೈಡೆಕ್ ಯೋಜನೆಗಳು ಪ್ರಭಾವ ಬೀರಲಿವೆ. ಬೆಂಗಳೂರಿನ ಸಂಸ್ಕೃತಿ, ಪರಂಪರೆಯನ್ನು ವೀಕ್ಷಣಾ ಗೋಪುರದ ಮೇಲೆ ನಿಂತು ಕಣ್ತುಂಬಿಕೊಳ್ಳಬಹುದು. ಈ ಸ್ಕೈಡೆಕ್ ಪ್ರವಾಸೋದ್ಯಮಕ್ಕೆ ತನ್ನದೇ ಆದ ರೀತಿಯ ಕೊಡುಗೆ ನೀಡಲಿದೆ. ಅದೇ ರೀತಿ ತಮಿಳುನಾಡಿಗೆ ಪೈಪೋಟಿ ನೀಡಿ ಹೊಸ ಏರ್‌ಪೋರ್ಟ್ ನಿರ್ಮಾಣಕ್ಕೆ ಕಸರತ್ತು ನಡೆಸಿರುವ ಸರ್ಕಾರ ಈ ಭಾಗದಲ್ಲಿ ಏರ್‌ಪೋರ್ಟ್ ನಿರ್ಮಿಸಿ ವಾಯುಯಾನದ ಒತ್ತಡ ಕಡಿಮೆ ಮಾಡುವುದು, ಜಾಗತಿಕವಾಗಿ ಬೆಂಗಳೂರಿನ ಹೆಗ್ಗುರುತನ್ನು ಬಲಪಡಿಸುವ ಕನಡು ಹೊಂದಿದೆ.












Click it and Unblock the Notifications