ಬೆಂಗಳೂರಿನಲ್ಲಿ ಅದೆಷ್ಟು ಅನಾಗರಿಕರಿದ್ದಾರೆ: ಬೆಂಗಳೂರಲ್ಲಿರುವ ಬಡ ಹುಡುಗರ ಕಷ್ಟಗಳು ನೂರೆಂಟು!
ಬೆಂಗಳೂರು ಎಂದರೆ ಇಂದಿಗೂ ಭಾರತ ಹಾಗೂ ವಿಶ್ವದ ವಿವಿಧ ರಾಷ್ಟ್ರಗಳ ಜನರು ಬೆರಗುಗಣ್ಣಿನಿಂದ ನೋಡುವುದು ಇದೆ. ಕರ್ನಾಟಕದಲ್ಲೇ ಲಕ್ಷಾಂತರ ಜನ ಬೆಂಗಳೂರು ಎಂದರೆ ವಿಸ್ಮಯ ಲೋಕ, ಗಗನ ಚುಂಬಿ ಕಟ್ಟಡಗಳು ಎಂದೇ ಪರಿಗಣಿಸುತ್ತಾರೆ. ಆದರೆ ಬೆಂಗಳೂರಿನಲ್ಲಿ ಬೆಳಂಬೆಳಿಗ್ಗೆ ನಡೆಯುವುದು ಎಂದರೆ ಅದೊಂದು ಸಾಹಸವೇ ಸರಿ. ಇಂದು ಮಕ್ಕಳಿರುವಾಗಲೇ ಕಲಿಸಬೇಕಿರುವ ತುರ್ತು ಯಾವುದೆಂದರೆ ಅದು ನಾಗರಿಕತೆ ಎನ್ನುತ್ತಾರೆ ಹವ್ಯಾಸಿ ಬರಹಗಾರ ಎಲ್.ಕೆ ಮಂಜುನಾಥ್ ಬೆಂಗಳೂರಿನ ಅವ್ಯವಸ್ಥೆಯ ಬಗ್ಗೆ ಅವರ ಬರಹ ಇಲ್ಲಿದೆ.
ಕೊರೆಯುವ ಚಳಿಯಾದರೂ ಬೆಳ್ಳಂಬೆಳಿಗ್ಗೆ ಎದ್ದು ಜಿಮ್ಮಿಗೆ ಹೋದರೆ ಅಥವಾ ಮೈದಾನದಲ್ಲಿ ಹತ್ತು ಸುತ್ತು ನಡೆದರೆ ಇಡೀ ದಿನ ತಾಜಾತನದಿಂದ ಕೂಡಿರುತ್ತದೆಂದು ಲಗುಬಗೆಯಿಂದ ಹೊರಟು ಬೀದಿಗಿಳಿದರೆ ಹೆಜ್ಜೆಯಿಡಲು ಹೇಸಿಗೆ ಎನಿಸುತ್ತದೆ. ಉಗುಳು, ಸಿಂಬಳದಿಂದ ತುಂಬಿದ ರಸ್ತೆಯನ್ನು ಗಂಟಲು ಹಿಂಜಿಕೊಂಡೇ ದಾಟಬೇಕು. ಬಹುತೇಕ ಮಧ್ಯರಸ್ತೆಗೆ ಬಂದರೂ ಈ ನರಕ ಸದೃಶದಿಂದ ಮುಕ್ತಿ ಸಿಗುವುದಿಲ್ಲ. ಮನುಷ್ಯನ ದ್ರವೀಕೃತ ತ್ಯಾಜ್ಯಗಳನ್ನು ಸೂರ್ಯನ ಶಾಖ ಒಣಗಿಸದಿದ್ದರೆ, ಮಳೆಯ ನೀರು ತೊಳೆದುಕೊಂಡು ಹೋಗದಿದ್ದರೆ ಬಹುಷಃ ಸದಾ ಕಾಲ ರಸ್ತೆಗಳ ಪರಿಸ್ಥಿತಿ ಹೀಗೆಯೇ ಇರುತ್ತದೆನೋ.

ಮನೆಯಿಂದ ಕೆಳಗಿಳಿದು ಅಡ್ಡದಿಡ್ಡಿ ನಿಲ್ಲಿಸಿದ ರಾಶಿ ದ್ವಿಚಕ್ರ ವಾಹನಗಳ ಮಧ್ಯೆ ದಾರಿ ಮಾಡಿಕೊಂಡು ಮುಂದಡಿಯಿಡಬೇಕು. ಹಿಂದಿನ ರಾತ್ರಿ ಮಲಗುವ ಮೊದಲು ಅಡುಗೆ ಮನೆಯ ತ್ಯಾಜ್ಯವನ್ನೆಲ್ಲ ಬಳಿದು ಕಟ್ಟಿಟ್ಟ ಪ್ಲಾಸ್ಟಿಕ್ ಚೀಲಗಳು, ಕೆಲವೆಡೆ ಮೇಲಿಂದಲೇ ಎಸೆದ ರಭಸಕ್ಕೆ ಒಡೆದು ಗಬ್ಬೇರಿದ ಕಸದ ಚೀಲಗಳು, ದೇವರ ಕೋಣೆಯಿಂದ ಹೊರಬಿದ್ದ ಬಾಡಿದ ಹೂವು ಹಾಗೂ ಮತ್ತಿತರ ತ್ಯಾಜ್ಯಗಳು, ಸತ್ತು ಬಿದ್ದ ಇಲಿ, ಹೆಗ್ಗಣಗಳನ್ನು ಕುಕ್ಕಿ ಬಗೆಯುತ್ತಿರುವ ಕಾಗೆಗಳು, ಇಂತಹ ಯಾವ ಸೋಂಕು ತಾಗದಂತೆ ಜಾಗರೂಕತೆಯಿಂದ ಹೆಜ್ಜೆಯಿಡಬೇಕು.
ಅಕ್ಕಪಕ್ಕದ ಮನೆಗಳಲ್ಲಿ ಕೇಳಿಬರುವ ತರಹೇವಾರಿ ಅಲರಾಂ ಸದ್ದುಗಳನ್ನು ಆಲಿಸುತ್ತ ಹೆಜ್ಜೆಯಿಟ್ಟರೆ, ಅಲ್ಲೋ ಇಲ್ಲೋ ಒಂದೊಂದು ಮನೆಯ ಮುಂದೆ ರಸ್ತೆಯನ್ನೇ ಅಂಗಳವೆಂದು ತೊಳೆದು ರಂಗೋಲಿ ಹಾಕುವವರು, ಸಣ್ಣ ಧ್ವನಿಯಲ್ಲಿ ಮೊಳಗುತ್ತಿರುವ 'ಕೌಸಲ್ಯ ಸುಪ್ರಜಾ ರಾಮ ಪೂರ್ವ ಸಂಧ್ಯಾ ಪ್ರವರ್ತತೆ' ಹಾಡಿಗೆ ಧ್ವನಿಗೂಡಿಸುತ್ತ ನಿತ್ಯ ಕಾಯಕವನ್ನು ಆರಂಭಿಸುತ್ತಿರುವವರು, ಮನೆಮುಂದೆಯೇ ಗುಡಿ ಮಾಡಿ ಕೂರಿಸಿದ ದೇವರಿಗೆ ಕೈಮುಗಿದು ನಿಂತವರನ್ನು ನೋಡುತ್ತ, ಬೆಳಗಾರೂ ಮಧ್ಯರಾತ್ರಿಯೆಂಬಂತೆ ಗಾಢ ನಿದ್ರೆಯಲ್ಲಿರುವವರನ್ನು ನೆನೆಯುತ್ತ, 'ಇವರುಗಳಿಗೆ ಸ್ವಚ್ಛತೆಯ ಚಿಂತೆಯೇ ಹತ್ತುವುದಿಲ್ಲವೇ?' ಎಂಬ ಪ್ರಶ್ನೆ ಕಾಡುತ್ತದೆ.
ಮುಖ್ಯರಸ್ತೆಗಿಳಿದರೆ ದೊಡ್ಡ ರಸ್ತೆಯಾದರೂ ಉದ್ದಕ್ಕೂ ಅರ್ಧ ಭಾಗವನ್ನು ತಿಂದು ನಿಂತಿರುವ ಕಾರು, ಲಾರಿ, ಗೂಡ್ಸ್ ವಾಹನಗಳು. ಬೆಳಗ್ಗಿನ ವ್ಯಾಪಾರಕ್ಕೆ ಸಿದ್ಧತೆ ಮಾಡಿಕೊಳ್ಳುವ ಬರದಲ್ಲಿ ಮುನ್ನುಗ್ಗಿ ಬರುವ ದ್ವಿಚಕ್ರ ವಾಹನ ಸವಾರರು. ಸಂದುಗೊಂದುಗಳಲ್ಲಿ ಜಾಗ ಮಾಡಿಕೊಂಡು ನಿಂತ ತಳ್ಳುಗಾಡಿಗಳು. ಆಸುಪಾಸಲ್ಲೇ ಎಸೆಯಲ್ಪಟ್ಟ ಕೊಳೆತ, ಹಾಳಾದ ತರಕಾರಿ, ಸೊಪ್ಪು, ಹಣ್ಣುಗಳು, ಕುರಿಗಳ ಕೊಂದು ಚರ್ಮ ಸುಲಿಯುತ್ತಿರುವ ಮಾಂಸದಂಗಡಿಗಳು. ಮುಚ್ಚಿದ ಇತರೆ ಅಂಗಡಿಗಳ ಮುಂದೆ ಬಿದ್ದಿರುವ ಖಾಲಿ ಬಾಟಲಿಗಳು, ಅಳಿದುಳಿದು ಚೆಲ್ಲಿದ ಕಾರಕಡ್ಡಿಗಳು, ಕಬಾಬ್‌ನ ಎಲುಬುಗಳು, ಬೆಳಕು ಏರಿದಂತೆ ಆಯ್ದು ತಿನ್ನಲು ಬರುವ ಬೀದಿನಾಯಿಗಳು ಬೆಳಗ್ಗಿನ ತಾಜಾ ಗಳಿಗೆಯನ್ನು ಕಸದ ತೊಟ್ಟಿಯನ್ನಾಗಿಸುತ್ತಿವೆ.
ಈ ನಗರದಲ್ಲಿ ಅದೆಷ್ಟು ಅನಾಗರಿಕರಿದ್ದಾರೆ ? ಕಸ ಸಂಗ್ರಹಿಸಲು ಬರುವ ಗಾಡಿಗೆ ತ್ಯಾಜ್ಯವನ್ನು ಹಾಕಲಾಗದವರು, ಕನಿಷ್ಠ ಹಸಿ ಕಸ, ಒಣ ಕಸ ಬೇರ್ಪಡಿಸಿ ಕೊಡಲಾಗದವರು, ಸಂಚಾರಕ್ಕೆ ಅಡೆತಡೆಯಾಗದಂತೆ ವಾಹನಗಳನ್ನು ನಿಲ್ಲಿಸಲು ಬಾರದವರು, ತಮ್ಮ ಕರುಳಿನ ಕಲ್ಮಷವನ್ನು ಎಲ್ಲೆಂದರಲ್ಲಿ ಉಗಿಯಬಾರದೆಂಬ ವಿವೇಕವಿಲ್ಲದವರು, ಫೂಟ್‌ಪಾತ್‌ಗಳು ಪಾದಚಾರಿಗಳ ಓಡಟಕ್ಕೆ ಇರುವುದೆಂಬುದನ್ನು ಮರೆತವರು ಎಷ್ಟಿದ್ದಾರೆ? ಇದೇನು ಯಾವುದೋ ಒಂದು ಏರಿಯಾಕ್ಕೆ ಸೀಮಿತವಾಗಿಲ್ಲ. ನಗರದ ಬಹುತೇಕ ಕಡೆಗಳಲ್ಲಿ ಇದೇ ದೃಶ್ಯಗಳು ಕಣ್ಣಿಗೆ ರಾಚುತ್ತವೆ.
ಶಾಲೆಗಳಲ್ಲಿ ಮಕ್ಕಳಿಗೆ ಕಲಿಸಬೇಕಿರುವುದು ಯಾವುದೋ ಧರ್ಮ ಗ್ರಂಥಗಳನ್ನೋ, ಪುರಾಣಗಳನ್ನೋ ಅಲ್ಲ. ಗುರು-ಹಿರಿಯರಿಗೆ ಗೌರವಿಸುವುದು ಹೇಗೆ ಎಂಬುದಲ್ಲ. ಎಂತಹ ಬಟ್ಟೆಯನ್ನು ಹಾಕಬೇಕು ಎಂಬುದಲ್ಲ. ಮಕ್ಕಳಿರುವಾಗಲೇ ಕಲಿಸಬೇಕಿರುವ ತುರ್ತು ಯಾವುದೆಂದರೆ ಅದು ನಾಗರಿಕತೆ. ಸಾರ್ವಜನಿಕ ಸ್ಥಳಗಳಲ್ಲಿ ಹೇಗಿರಬೇಕು, ಸ್ವಚ್ಛತೆಯನ್ನು ಹೇಗೆ ಕಾಪಾಡಬೇಕು, ಸಂಚಾರಿ ಶಿಸ್ತನ್ನು ಹೇಗೆ ರೂಢಿಸಿಕೊಳ್ಳಬೇಕು, ಸ್ವಚ್ಛತಾಕರ್ಮಿಗಳನ್ನು ಹೇಗೆ ಗೌರವಿಸಬೇಕು, ರಸ್ತೆ ಅಪಘಾತಗಳಂತಹ ಸಂದರ್ಭದಲ್ಲಿ ಹೇಗೆ ಸಂಯಮದಿಂದಿರಬೇಕು, ಇತರರು ನಮ್ಮಂತೆಯೇ ಮನುಷ್ಯರು, ಸಮಾನರು ಎಂಬುದನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದನ್ನೆಲ್ಲ ಹೇಳಿಕೊಡಬೇಕು. ತಮ್ಮ ನಡೆ-ನುಡಿಗಳು, ವ್ಯಾಪಾರ-ವ್ಯವಹಾರಗಳು, ಆಚರಣೆ-ಸಂಪ್ರದಾಯಗಳು ಅನ್ಯರಿಗೆ ತೊಂದರೆಯುಂಟು ಮಾಡದ ರೀತಿಯಲ್ಲಿ ಇರಬೇಕು ಎಂಬುದನ್ನು ಮೊದಲು ಬೈಹಾರ್ಟ್ ಮಾಡಿಸಿ ಕಲಿಸಬೇಕು. ಬಹುಷಃ ಹಾಗಾದರೆ ಇಂದು ನಗರದ ಎಲ್ಲೆಂದರಲ್ಲಿ ಕಾಣಸಿಗುತ್ತಿರುವ ಕಲ್ಮಷಗಳು ಕಣ್ಮರೆಯಾಗುತ್ತವೆಯೇನೋ.
ಇವೆಲ್ಲ ಒಂದೊಳ್ಳೆ ಏರಿಯಾದಲ್ಲಿ ಬಾಡಿಗೆ ಮನೆ ಹಿಡಿಯಲಾಗದ ಎಷ್ಟೋ ಹುಡುಗರ ಮನಸ್ಸಿನ ಹಳಹಳಿಕೆಗಳಷ್ಟೇ. ಮಂಜಿನ ಮುಸಿಕಿನ ನಡುವೆ ಕಿತ್ತಳೆ ಚೆಂಡಿನಂತೆ ಮೇಲೇಳುವ ಸೂರ್ಯನನ್ನು ನೋಡುತ್ತ, ದಾರಿಯುದ್ದಕ್ಕೂ ಹಕ್ಕಿಗಳ ಇಂಚರನ್ನು ಕೇಳುತ್ತ, ಗದ್ದೆಯ ಬೆಳೆಗಳಿಗೆ ನೀರುಣಿಸಲು ಹೋಗುತ್ತಿದ್ದ ದಿನಗಳ ನೆನೆಕೆಯಲ್ಲೇ ಪರಿತಪಿಸುವಾಗ ಮೂಡಿಬರುವ ಹತಾಶೆಗಳಷ್ಟೇ. ಹಂದಿ ಪ್ರಪಂಚದಲ್ಲೇ ಅತ್ಯಂತ ಶುದ್ಧವಾದ ಪ್ರಾಣಿಯಂತೆ. ಮನುಷ್ಯ ತನ್ನ ಕೊಳಕನ್ನು ಮುಚ್ಚಿಕೊಳ್ಳಲು ಹಂದಿಗಳನ್ನೇ ಕೊಳಕು ಪ್ರಾಣಿಯೆಂದು ಹೀಗಳೆಯುತ್ತಿದ್ದಾನೆ ಎಂದೆನಿಸುತ್ತದೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ












Click it and Unblock the Notifications