ರಸ್ತೆಗುಂಡಿಗೆ ಹಾಕಿದ ಸಾವಿರಾರು ಕೋಟಿ ಹಣ ಎಲ್ಲೋಯ್ತು: ಬೆಂಗಳೂರು ಸಮಗ್ರ ಯೋಜನೆಗೆ ತೇಜಸ್ವಿ ಸೂರ್ಯ ಒತ್ತಾಯ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಸ ವಿಲೇವಾರಿ, ಪ್ರವಾಹ, ರಸ್ತೆಗುಂಡಿ ಹಾಗೂ ಸಂಚಾರ ದಟ್ಟಣೆ ಸಮಸ್ಯೆಗಳು ಹೆಚ್ಚುತ್ತಿವೆ. ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ ಜಾರಿ ಮಾಡುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಪತ್ರ ಬರೆದಿರುವುದಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ನಗರದ ಸಮಸ್ಯೆಗಳ ಕುರಿತು ಸಭೆ ನಡೆಸುತ್ತಿರುವ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅದರ ಬೆನ್ನಲ್ಲೆ ನಗರದಲ್ಲಿ ವೈಟ್ ಟಾಪಿಂಗ್ ಕಾಮಗಾರಿಗೆ ವೇಗ ನೀಡುವ ಜೊತೆಗೆ ರಸ್ತೆ ಬದಿ ಅಲ್ಲಲ್ಲಿ ಕಂಡು ಬರುವ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಬ್ರೇಕ್ ಬಿದ್ದಂತೆ ಕಾಣುತ್ತಿದೆ. ಕಾರಣ ಕಸ ಬೀಳುತ್ತಿದ್ದಂತೆ ಅಧಿಕಾರಿಗಳು, ಸಿಬ್ಬಂದಿ ತ್ವರಿತವಾಗಿ ಕಾರ್ಯೊನ್ಮುಖರಾಗುತ್ತಿದ್ದಾರೆ. ಮತ್ತೊಂದೆಡೆ ವಿಡಿಯೋ, ಪ್ರಚಾರಕ್ಕೆ ಸಚಿವರೇ ಹೀಗೆ ಅಧಿಕಾರಿಗಳನ್ನು ಬೈಯುತ್ತಿದ್ದಾರೆ ಮಾಡುತ್ತಿದ್ದಾರೆ ಅಂತಲೂ ವಿಪಕ್ಷಗಳು ದೂರಿವೆ.

ಮಂಗಳವಾರ ಇತ್ತ ಸಂಸದ ತೇಜಸ್ವಿ ಸೂರ್ಯ ಅವರು ಬೆಂಗಳೂರಿನ ಅಭಿವೃದ್ಧಿ ಕುರಿತು ಕೃಷ್ಣ ಬೈರೇಗೌಡರಿಗೆ ಮನವಿ ಮಾಡಿದ್ದಾರೆ. 15 ಅಂಶಗಳ ಮೇಲೆ ಚರ್ಚಿಸಿದ್ದಾರೆ. ಬಳಿಕ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು. ರಸ್ತೆಗುಂಡಿ ಮುಚ್ಚಳಕ್ಕೆ ಘೋಷಣೆ ಆಗಿದ್ದ ಕೋಟ್ಯಾಂತರ ರೂಪಾಯಿ ಎಲ್ಲಿ ಹೋಯಿತು? ಸಮಸ್ಯೆ ಹಾಗೆಯೇ ಇದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಕೇಂದ್ರ ಸರ್ಕಾರದಿಂದ ಬೆಂಗಳೂರಿನ ಅಭಿವೃದ್ಧಿ ಕ್ರಮಗಳಿಗೆ ಅಗತ್ಯ ಬೆಂಬಲ ನೀಡಲಾಗುವುದು. ರಾಜ್ಯ ಸರ್ಕಾರದ ಮೂವತ್ತಕ್ಕೂ ಹೆಚ್ಚು ಯೋಜನೆಗಳು ಬಾಕಿ ಇವೆ. ಹೊಸ ಯೋಜನೆ ಜಾರಿ ಮಾಡುವ ಮೊದಲು ಹಳೆಯ ಯೋಜನೆಗಳನ್ನು ಶೀಘ್ರ ಮುಗಿಸಬೇಕಿದೆ. ಬಿಎಂಆರ್ಸಿಲ್, ಬಿಡಿಎ, ಬಿಎಂಎಲ್ಟಿಎ, ಕೆಆರ್ಐಡಿಎಲ್ ಸೇರಿ 12 ಕ್ಕೂ ಹೆಚ್ಚು ಮೂಲಸೌಕರ್ಯ ಏಜೆನ್ಸಿಗಳು ಬೆಂಗಳೂರಿನಲ್ಲಿವೆ. ಇವುಗಳ ನಡುವೆ ಅಂತರ ಸಮನ್ವಯ ಏಜೆನ್ಸಿ ಇಲ್ಲ. ಆದ್ದರಿಂದ ಬಿಎಂಎಲ್ಟಿಎಗೆ ಅಧ್ಯಕ್ಷರ ನೇಮಕ ಮಾಡಿ ನೋಡಲ್ ಏಜೆನ್ಸಿ ಮಾಡಬೇಕು. ನಮ್ಮ ಮೆಟ್ರೊ ವಿಸ್ತರಣೆ, ರಸ್ತೆ ಗುಂಡಿಗಳನ್ನು ಮುಚ್ಚುವುದು, ಪಾದಚಾರಿ ಮಾರ್ಗದ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರಕ್ಕೆ ತಿಳಿಸಿದ್ದೇನೆ ಎಂದರು.
ನಮ್ಮ ಮೆಟ್ರೋ ಕಾಮಗಾರಿ ಆರಂಭವೇ ಆಗಿಲ್ಲ!
ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದರೂ ನಮ್ಮ ಮೆಟ್ರೊ ಮೂರನೇ ಹಂತದ ಕಾಮಗಾರಿಯು ನಾಲ್ಕೂವರೆ ವರ್ಷಗಳಿಂದ ಶುರುವೇ ಆಗಿಲ್ಲ. ಎರಡು ವರ್ಷಗಳಿಂದ ಟೆಂಡರ್ ಕರೆದಿಲ್ಲ. ವಿಳಂಬದಿಂದ ಯೋಜನೆಯ ವೆಚ್ಚ ಹೆಚ್ಚಾಗುತ್ತಿದೆ. ವೆಚ್ಚ ತಗ್ಗಿಸಲು ಭೂಗತ ಮೆಟ್ರೊ ನಿಲ್ದಾಣಗಳ ಉದ್ದ ಕಡಿಮೆ ಮಾಡಿದ್ದಾರೆ. ಇದರಿಂದ ಎಂಟು ಬೋಗಿ ಬದಲು ಆರು ಬೋಗಿಗಳ ಮೆಟ್ರೋ ರೈಲು ಮಾತ್ರ ನಿಲ್ಲಬಹುದು. ವೆಚ್ಚ ಕಡಿಮೆ ಮಾಡಲು ನಿಲ್ದಾಣದ ಪ್ಲಾಟ್ಫಾರಂ ಉದ್ದ ಕಡಿಮೆ ಮಾಡಿದರೆ ಉಪಯೋಗವಿಲ್ಲ ಎಂದು ತಿಳಿಸಿದರು.

ಬೆಳಗ್ಗೆ 5ಕ್ಕೆ ಮೆಟ್ರೋ ಸೇವೆ ಆರಂಭಿಸಿ..
ಬೆಂಗಳೂರಿನಲ್ಲಿ ಬೇರೆ ಬೇರೆ ಕಡೆಗಳಿಂದ ಬಂದು ಕೆಲಸ ಮಾಡುವವರು ಬೆಳಗ್ಗೆ ಮೆಟ್ರೋ ಸೇವೆ ಆರಂಭಕ್ಕೆ ಕಾಯಬೇಕಾಗಿದೆ. ಆದ್ದರಿಂದ ನಿತ್ಯ ಮೆಟ್ರೋ ಸೇವೆಯನ್ನು ಬೆಳಗ್ಗೆ 5 ಗಂಟೆಗೆ ಆರಂಭ ಮಾಡಬೇಕು. ಬೇರೆ ನಗರದಲ್ಲಿ ನಿತ್ಯ ಸೇವೆ ಬೆಳಗ್ಗೆ ಬೇಗನೇ ಆರಂಭವಾಗುತ್ತದೆ. ಅದೇ ರೀತಿ ಬೆಂಗಳೂರಿನಲ್ಲಿ ಸೇವೆ ಲಭ್ಯವಾದಲ್ಲಿ ನೂರಾರು ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ವಿವರಿಸಿದರು.
ರಸ್ತೆಗುಂಡಿಗೆ ಘೋಷಿಸಿದ್ದ ಕೋಟ್ಯಾಂತರ ಹಣ ಎಲ್ಲಿದೆ?
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾವಿರಾರು ಕೋಟಿಯನ್ನು ಗುಂಡಿ ಮುಚ್ಚಲು ವ್ಯಯಿಸಿರುವುದಾಗಿ ಹೇಳಿದೆ. ಆದರೂ ಗುಂಡಿಗಳು ಮಾತ್ರ ಹಾಗೇ ಇವೆ. ಎನ್ಸಿಆರ್ಬಿ ಮಾಹಿತಿ ಪ್ರಕಾರ ಗುಂಡಿಗೆ ಬಿದ್ದು ಸಾಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗಾದರೆ ಹಣ ಎಲ್ಲಿ ಹೋಯಿತು?. 2023ರ ಡಿಸೆಂಬರ್ನಲ್ಲಿ 7 ಕೋಟಿ ರೂಪಾಯಿ ಜಿಬಿಎ ವ್ಯಾಪ್ತಿಯಲ್ಲಿನ ಗುಂಡಿ ಮುಚ್ಚಲು ವ್ಯಯಿಸಿದ್ದೇವೆ ಎಂದು ಹೇಳಿದ್ದರು. ಆದರೆ ಡಿಸೆಂಬರ್ 2024 ರಲ್ಲಿ ಶೇ 63 ರಷ್ಟು ಗುಂಡಿ ಜಾಸ್ತಿ ಆಗಿದೆ ಎಂದು ವಿಧಾನ ಪರಿಷತ್ನಲ್ಲಿ ಮಾಹಿತಿ ನೀಡಿದ್ದರು.
ಆಗಸ್ಟ್ 2025ರಲ್ಲಿ ಜಿಬಿಎ ವತಿಯಿಂದ 12 ಕೋಟಿಯನ್ನು ರಸ್ತೆ ಗುಂಡಿ ಮುಚ್ಚಲು ವೆಚ್ಚ ಮಾಡಿದೆ.2025 ರ ಸೆಪ್ಟೆಂಬರ್ನಲ್ಲಿ 750 ಕೋಟಿಯನ್ನು ರಸ್ತೆ ಗುಂಡಿ ಮುಚ್ಚಲು ಘೋಷಿಸಿದರು. ಮತ್ತೆ 1100 ಕೋಟಿ ಅನುದಾನ ಗುಂಡಿ ಮುಚ್ಚಲು ಘೋಷಣೆ ಆಯಿತು. ಹಾಗಾದರೆ ಈ ಎಲ್ಲ ಹಣ ಹೋಗಿದ್ದೆಲ್ಲ ಎಂದು ಅವರು ಖಾರವಾಗಿ ಪ್ರಶ್ನೆ ಮಾಡಿದ್ದಾರೆ. ವೈಟ್ ಟಾಪಿಂಗ್ಗೆ ಸಾವಿರಾರು ಕೋಟಿ ರೂಪಾಯಿ ವ್ಯಯಿಸಿದ್ದಾರೆ. ಡಿಕೆ ಶಿವಕುಮಾರ್ ಅವರು 5.5 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ಮುಖ್ಯಮಂತ್ರಿ ಆಗಿದ್ದಾರೆ. ಇವರು ಒಟ್ಟಾರೆ ರಸ್ತೆಗುಂಡಿಗೆ ಕೊಟ್ಟ ಕೋಟ್ಯಾಂತರ ರೂಪಾಯಿ ಹಣ ಏನಾಯಿತು? ಉತ್ತರಿಸುವಂತೆ ಆಗ್ರಹಿಸಿದರು. ಭ್ರಷ್ಟಾಚಾರ ನಡೆದಿರುವ ಅನುಮಾನ ವ್ಯಕ್ತಪಡಿಸಿದರು.
ಸಿಎಂ ಶ್ವೇತಪತ್ರ ಬಿಡುಗಡೆ ಮಾಡಿ ಉತ್ತರಿಸಲಿ
ರಸ್ತೆ ಗುಂಡಿ ದುರಸ್ತಿಗೆ ಮೂರು ವರ್ಷದಲ್ಲಿ ಎಷ್ಟು ಹಣ ವ್ಯಯಿಸಿದ್ದೀರಿ ಎಂಬುದರ ಬಗ್ಗೆ ಮೂವತ್ತು ದಿನಗಳ ಒಳಗೆ ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ಸಚಿವರಿಗೆ ಆಗ್ರಹಿಸಿದ್ದೇನೆ. ರಾಜ್ಯದ ತೆರಿಗೆದಾರರ ಹಣ. ತೆರಿಗೆ ಕಟ್ಟದಿದ್ದರೆ ದಂಡ ಹಾಕ್ತಾರೆ. ಹಾಗಾದರೆ ನಮ್ಮ ರಸ್ತೆ ಗೆ ಜವಾಬ್ದಾರಿ ಯಾರು ಎಂಬುದೂ ತಿಳಿಯಬೇಕು ಎಂದು ಹೇಳಿದರು.
2 ತಿಂಗಳಲ್ಲಿ ಡ್ಯಾಶ್ ಬೋರ್ಡ್ ವ್ಯವಸ್ಥೆ ಬೇಕು
ಬೆಂಗಳೂರಿನ ಬಿಡಿಎ, ಬಿಎಂಆರ್ಸಿಎಲ್, ಕೆಆರ್ಐಡಿಎಲ್ ನಲ್ಲಿ ಅಧಿಕಾರಿಗಳು ಏನು ಮಾಡುತ್ತಾರೆ ಎಂಬುದರ ವಿವರವಾದ ದತ್ತಾಂಶ ಹೊಂದಿರುವ ಡ್ಯಾಶ್ ಬೋರ್ಡ್ ಅಗತ್ಯವಿದೆ. ಬೆಂಗಳೂರಿನ ಲೈವ್ ಡ್ಯಾಶ್ ಬೋರ್ಡ್ ಇದ್ದರೆ ಪಾಲಿಕೆಗಳು ಏನು ಕೆಲಸ ಮಾಡುತ್ತಿವೆ. ಯಾರನ್ನು ಕೇಳಬೇಕು ಎಂಬುದು ನಾಗರಿಕರಿಗೆ ತಿಳಿಯಲಿದೆ. ಆದ್ದರಿಂದ ಮುಂದಿನ ತಿಂಗಳ ಒಳಗೆ ಈ ಡ್ಯಾಶ್ಬೋರ್ಡ್ ಮಾಡಬೇಕು ಎಂದು ಅವರು ಕೋರಿದ್ದಾರೆ.
ಕೇಂದ್ರಕ್ಕೆ ಪ್ರಸ್ತಾವನೆ, ಡಿಪಿಆರ್ ಬಂದಿಲ್ಲ
ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದ ಅರ್ಬನ್ ಚಾಲೆಂಜ್ ಫಂಡ್ (ಯುಸಿಎಫ್) ಅಡಿ 1 ಲಕ್ಷ ಕೋಟಿ ರೂಪಾಯಿ ಇಡಲಾಗಿದೆ. ರಾಜ್ಯ ಸರ್ಕಾರದಿಂದ ಈ ಯೋಜನೆಯಡಿ ಅನುದಾನಕ್ಕಾಗಿ ಪ್ರಸ್ತಾವನೆ ಬಂದಿಲ್ಲ. ಸರಿಯಾದ ಡಿಪಿಆರ್ ಕೊಟ್ಟರೆ ಕೇಂದ್ರ ಹಣ ನೀಡುತ್ತದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಎರಡು ವರ್ಷದ ಹಿಂದೆ ಮಹಾನಗರದಲ್ಲಿ ಬಾಡಿಗೆ ಮನೆಯಲ್ಲಿ ಇರುವವರಿಗೆ ಸಹಾಯವಾಗಲು ಯೋಜನೆ ರೂಪಿಸಲಾಗಿದೆ. ಈ ಸರ್ಕಾರ ಬಂದ ಮೇಲೆ ಈ ಯೋಜನೆಯಡಿ ಒಂದೇ ಒಂದು ಬಾಡಿಗೆ ಮನೆ ಕಟ್ಟಿಲ್ಲ. ಅರ್ಜಿ ಸಹ ಬಂದಿಲ್ಲ. ಈ ಬಗ್ಗೆ ಗಮನ ಹರಿಸಲು ಸಚಿವರನ್ನು ಕೋರಿರುವುದಾಗಿ ಹೇಳಿದರು.
ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ, ಕೆರೆ ಉಳಿಸುವುದು, ಅಂತರ್ಜಲ ಕಾಪಾಡುವ ಬಗ್ಗೆಯೂ ಚರ್ಚೆ ನಡೆಸಿದ್ದಾಗಿ ತಿಳಿಸಿದರು. ಜಿಬಿಎಯ ಐದು ಪಾಲಿಕೆಗಳಲ್ಲಿ ಸಾಕಷ್ಟು ಸಿಬ್ಬಂದಿ, ಅಗತ್ಯ ಎಂಜಿನಿಯರ್ಗಳು ಇಲ್ಲ. ಯೋಜನೆ ಘೋಷಣೆ ಮಾಡುವ ಮೊದಲು ಸಿಬ್ಬಂದಿ ನೇಮಕ ಮಾಡಬೇಕು. ಅಂದಾಗಲೇ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.














Click it and Unblock the Notifications