ಬೆಂಗಳೂರಿನ ರಸ್ತೆಯೊಂದಕ್ಕೆ ಡಿ.ಕೆ.ಶಿವಕುಮಾರ್ ತಂದೆಯ ಹೆಸರು!
Recommended Video
ಬೆಂಗಳೂರು, ಜುಲೈ 14 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ರಸ್ತೆಯೊಂದಕ್ಕೆ ಸಚಿವ ಡಿ.ಕೆ.ಶಿವಕುಮಾರ್ ಹೆಸರು ಇಡಲಾಗುತ್ತದೆ. ಈ ಬಗ್ಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಬಿಬಿಎಂಪಿ ಪ್ರಕಟಣೆ ಹೊರಡಿಸಿದೆ.
ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾಲೇಜು ರಸ್ತೆಗೆ 'ದೊಡ್ಡ ಆಲದಹಳ್ಳಿ ಕೆಂಪೇಗೌಡ ರಸ್ತೆ' ಎಂದು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ. ಆಕ್ಷೇಪಣೆಗಳಿದ್ದರೆ ಆಗಸ್ಟ್ 4ರೊಳಗೆ ಸಲ್ಲಿಸಿ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.
ದೊಡ್ಡ ಆಲದಹಳ್ಳಿ ಕೆಂಪೇಗೌಡ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಅವರ ತಂದೆ. ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾಲೇಜು ಡಿ. ಕೆ. ಶಿವಕುಮಾರ್ ಅವರಿಗೆ ಸೇರಿದ್ದಾಗಿದೆ. ಬಿಬಿಎಂಪಿಯ ಈ ಪ್ರಸ್ತಾವನೆ ವಿರೋಧಕ್ಕೆ ಕಾರಣವಾಗುವ ಸಾಧ್ಯತೆ ಇದೆ.

30/7/2018ರಂದು ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭೆಯ ವಿಷಯದ ಸಂಖ್ಯೆ 53/2018-19ರಲ್ಲಿ ತೀರ್ಮಾನಿಸಿದಂತೆ 'ದೊಡ್ಡ ಆಲದಹಳ್ಳಿ ಕೆಂಪೇಗೌಡ ರಸ್ತೆ' ಎಂದು ನಾಮಕರಣ ಮಾಡಲು ಪ್ರಸ್ತಾವನೆ ಸಿದ್ಧಗೊಳಿಸಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳು ಇದ್ದರೆ ಸಾರ್ವಜನಿಕರು ಆಗಸ್ಟ್ 4ರೊಳಗೆ ಬಿಬಿಎಂಪಿಗೆ ಸಲ್ಲಿಸಬಹುದು ಎಂದು ಬಿಬಿಎಂಪಿ ಜಾಹೀರಾತು ನೀಡಿದೆ.
ಆಕ್ಷೇಪಣೆ ಸಲ್ಲಿಸಲು ವಿಳಾಸ : ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ನರಸಿಂಹರಾಜ ಚೌಕ, ಬೆಂಗಳೂರು 02
ಸಂಪತ್ ರಾಜ್ ಸಿದ್ಧಪಡಿಸಿದ ಪ್ರಸ್ತಾವನೆ : 2018ರ ಜುಲೈನಲ್ಲಿ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾಲೇಜು ರಸ್ತೆಗೆ ಡಿ. ಕೆ. ಶಿವಕುಮಾರ್ ತಂದೆಯ ಹೆಸರಿಡಲು ಪ್ರಸ್ತಾವನೆ ಸಲ್ಲಿಸಿದ್ದರು. ಅವರ ಅವಧಿ ಮುಗಿಯುತ್ತಾ ಬಂದಾಗ ಕೌನ್ಸಿಲ್ ಸಭೆಯ ಒಪ್ಪಿಗೆಯನ್ನು ಪಡೆದರು.
'ದೊಡ್ಡ ಆಲದಹಳ್ಳಿ ಕೆಂಪೇಗೌಡ ಅವರು ಸಮಾಜ ಸೇವಕರಾಗಿದ್ದರು. ಅವರು ಇಂಜಿನಿಯರಿಂಗ್ ಕಾಲೇಜು ನಿರ್ಮಾಣ ಮಾಡಿದರು. ಗ್ರಾಮೀಣ ಪ್ರದೇಶದಿಂದ ಬಂದ ಬಡ ವಿದ್ಯಾರ್ಥಿಗಳಿಗೆ ಅವರು ಉಚಿತ ಶಿಕ್ಷಣ ನೀಡಿದರು. ಇದರಿಂದಾಗಿ ಜನರ ಬೇಡಿಕೆಯಂತೆ ಹೆಸರಿಡಲು ಪ್ರಸ್ತಾವನೆ ಸಲ್ಲಿಸಿದೆ' ಎಂದು ಸಂಪತ್ ರಾಜ್ ಹೇಳಿದ್ದಾರೆ.
ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಈ ಪ್ರಸ್ತಾವನೆ ವಿರೋಧಿಸಿದ್ದಾರೆ. 'ಸಂಪತ್ ರಾಜ್ ಅವರು ಕೌನ್ಸಿಲ್‌ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸದೇ ಒಪ್ಪಿಗೆ ಪಡೆದಿದ್ದಾರೆ. ಸಾಧನೆ ಮಾಡಿದ ಗಣ್ಯರ ಹೆಸರನ್ನು ಇಡಲಾಗುತ್ತದೆ. ಡಿ. ಕೆ. ಶಿವಕುಮಾರ್ ಅವರನ್ನು ಓಲೈಸಲು ಇಂತಹ ತೀರ್ಮಾನ ಕೈಗೊಳ್ಳಲಾಗಿದೆ' ಎಂದು ಆರೋಪಿಸಿದರು.












Click it and Unblock the Notifications