ಬೆಂಗಳೂರು ಗಲಭೆ: ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ
ಬೆಂಗಳೂರು, ಆ. 13: ಬೆಂಗಳೂರಿನ ಡಿ.ಜೆ. ಹಳ್ಳಿ, ಕೆ. ಜಿ ಹಳ್ಳಿಹಾಗೂ ಕಾವಲ್‌ಭೈರಸಂದ್ರದಲ್ಲಿ ಮಂಗಳವಾರ ರಾತ್ರಿ ನಡೆದ ಗಲಭೆ ಹಾಗೂ ಪೊಲೀಸರ ಗೋಲಿಬಾರ್ ಪ್ರಕರಣವನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಮ್ಯಾಜಿಸ್ಟೀರಿಯಲ್ ತನಿಖೆಗೆ ವಹಿಸಿದೆ. ಫೇಸ್‌ಬುಕ್ ಪೊಸ್ಟ್‌ಗೆ ಸಂಬಂಧಿಸಿದಂತೆ ಗಲಭೆ ನಡೆದು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಮಾಡಿದ ಗೋಲಿಬಾರ್‌ನಲ್ಲಿ ಮೂವರು ಮೃತಪಟ್ಟಿದ್ದರು. ನಂತರ ಸುಮಾರು 160ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಮ್ಯಾಜಿಸ್ಟೀರಿಯಲ್ ತನಿಖೆ ನಡೆಸಲು ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಎನ್. ಶಿವಮೂರ್ತಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಮಾಡಿದೆ. ಜೊತೆಗೆ ಮೂರು ತಿಂಗಳೊಳಗೆ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಬೇಕು ಎಂದು ಸೂಚಿಸಲಾಗಿದೆ.

ಬೆಂಗಳೂರು ನಗರ ವ್ಯಾಪ್ತಿಯ ಡಿ.ಜಿ. ಹಳ್ಳಿ, ಕೆ. ಜಿ ಹಳ್ಳಿಯಲ್ಲಿ ಆಗಷ್ಟ್ 11 ರಂದು ನಡೆದ ಅಹಿತಕರ ಘಟನೆಯಲ್ಲಿ ಡಿ.ಜೆ. ಹಳ್ಳಿಯ ಯಾಸೀನ್ ಪಾಷಾ (21), ವಾಜೀದ್ ಖಾನ್ (19) ಹಾಗೂ ಕೆ. ಜಿ. ಹಳ್ಳಿಯ ಶೇಕ್ ಸಿದ್ಧಿಕ್ (25) ಸಾವನ್ನಪ್ಪಿದ್ದವರು. ಗಲಭೆಯಲ್ಲಿ ಮೃತಪಟ್ಟ ಹಾಗೂ ಅವರ ಸಾವಿಗೆ ಕಾರಣಗಳು, ಘಟನಾವಳಿಗಳ ಸರಣಿ ಹಾಗೂ ಸನ್ನಿವೇಶಗಳ ಬಗ್ಗೆ ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಸಲು ಆದೇಶ ಮಾಡಲಾಗಿದೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾರ್ಗಸೂಚಿ ಅನ್ವಯ ಜಿಲ್ಲಾ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಸಬೇಕು. ಅದರಂತೆ ವಿಚಾರಣೆ ನಡೆಸಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ಕೊಟ್ಟಿದ್ದರು.












Click it and Unblock the Notifications