ಇಂದಿನಿಂದ ಯಶವಂತಪುರ-ವಿಜಯಪುರ ವಿಶೇಷ ರೈಲು, ಹುಬ್ಬಳ್ಳಿಗೆ ಹೋಗಲ್ಲ! ವಾರಾಂತ್ಯದ ಪ್ರಯಾಣಿಕರಿಗೆ ಗುಡ್‌ನ್ಯೂಸ್
ಬೆಂಗಳೂರು: ಉತ್ತರ ಕರ್ನಾಟಕಕ್ಕೆ ಅದೆಷ್ಟು ರೈಲುಗಳನ್ನು ಬಿಟ್ಟರು ಸಾಲದೆಂಬಂತಹ ಸ್ಥಿತಿ ಇದೆ. ಏಕೆಂದರೆ ಉತ್ತರ ಕರ್ನಾಟಕ ಹಾಗೂ ಮುಂಬೈ, ಮಹಾರಾಷ್ಟ್ರ, ಇನ್ನಿತರ ಕಡೆಗಳಿಂದ ಬೆಂಗಳೂರಿಗೆ ಓಡಾಡುವವರ ಪ್ರಮಾಣ ಹೆಚ್ಚಿದೆ. ಅಲ್ಲದೇ ಈ ಭಾಗಗಳಲ್ಲಿ ಹೊಸ ರೈಲು ಮಾರ್ಗಗಳು ಸಿದ್ಧಗೊಳ್ಳುತ್ತಿವೆ. ಇದರ ಮದ್ಯೆ ಬೆಂಗಳೂರಿನ ಯಶವಂತಪುರದಿಂದ ವಿಜಯಪುರಕ್ಕೆ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲು ಕೇಂದ್ರ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ಆದರೆ ಈ ರೈಲು ಹುಬ್ಬಳ್ಳಿ ಪ್ರವೇಶಿಸುವುದಿಲ್ಲ ಎಂಬುದನ್ನು ಪ್ರಯಾಣಿಕರ ಗಮನಿಸಬೇಕು.
ಉತ್ತರ ಕರ್ನಾಟಕಕ್ಕೆ ವೇಗದ ಸಂಪರ್ಕ ಹೆಚ್ಚುವರಿ ಸೇವೆ ಲಭ್ಯವಗುವಂತೆ ಮಾಡಲು ಬಹುದಿನಗಳಿಂದ ನೇರ ಸೇವೆಗೆ ಬೇಡಿಕೆ ಇತ್ತು.ಈ ಹಿಂದೆ ಏಪ್ರಿಲ್ ತಿಂಗಳಲ್ಲಿ ಅವರು ಪತ್ರ ಬರೆದಿದ್ದರು. ಅದರಂತೆ ಯಶವಂತಪುರ-ವಿಜಯಪುರ ವಿಶೇಷ ರೈಲು ಸಂಚಾರ ಆರಂಭಿಸಲು ಅನುಮೋದನೆ ನೀಡಲಾಗಿದೆ. ಈ ಕುರಿತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್ ಅವರು ಮಾಹಿತಿ ತಿಳಿಸಿದ್ದಾರೆ. ಜೊತೆಗೆ ಹುಬ್ಬಳ್ಳೀ-ಗದಗ ಬೈಪಾಸ್ ಮೂಲಕ ವಿಜಯಪುರಕ್ಕೆ ಸಾಗುವ ಈ ರೈಲನ್ನು ಖಾಯಂಗೊಳಿಸುವಂತೆ ಅವರು ಒತ್ತಾಯಿಸಿದ್ದಾರೆ.

ಮೇ 16 ರಿಂದ ಆರಂಭವಾಗಿ ಮುಂದಿನ 7 ವಾರಾಂತ್ಯಗಳಲ್ಲಿ ಒಟ್ಟುಒಂದು ತಿಂಗಳು ಕಾಲ ಈ ವಿಶೇಷ ರೈಲು ಸಂಚರಿಸಲಿದೆ. ವಾರಾಂತ್ಯದಲ್ಲಿ ಬೆಂಗಳೂರಿನಿಂದ ಉತ್ತರ ಕರ್ನಾಟಕದತ್ತ ತೆರಳುವವರಿಗೆ ಗುಡ್‌ನ್ಯೂಸ್ ಸಿಕ್ಕಂತಾಗಿದೆ. ಜೂನ್ 28ರವರೆಗೆ ಯಶವಂತಪುರ-ವಿಜಯಪುರ ವಿಶೇಷ ರೈಲು ಸಂಚಾರ ಆರಂಭವಾಲಿದೆ ಎಂದು ಅವರು ತಿಳಿಸಿದರು.
ಈ ರೈಲು ಹುಬ್ಬಳ್ಳಿಗೆ ಪ್ರವೇಶಿಸಲ್ಲ
ಹುಬ್ಬಳ್ಳಿ ಪ್ರವೇಶವಿಲ್ಲದೆ ಸಂಚರಿಸಲಿರುವ ಈ ವಿಶೇಷ ರೈಲು, ತುಮಕೂರು, ದಾವಣಗೆರೆ ಸೇರಿದಂತೆ ಆಯ್ದ 9 ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಹೊಂದಿರಲಿದೆ. ಇದರಿಂದ ಬೆಂಗಳೂರಿನಿಂದ ವಿಜಯಪುರಕ್ಕೆ ಕೇವಲ 11 ಗಂಟೆಗಳಲ್ಲಿ ತಲುಪಬಹುದಾಗಿದೆ. ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳು ಹಾಗೂ ಕುಟುಂಬಗಳ ಪ್ರಯಾಣ ಮತ್ತಷ್ಟು ಸುಗಮವಾಗಲಿದೆ. ವೇಗದ ಸೇವೆ ಸಹ ದೊರೆಯಲಿದೆ.
ರಾತ್ರಿ 8 ಗಂಟೆಗೆ ಬೆಂಗಳೂರಿನ ಯಶವಂತಪರುದಿಂದ ಹೊರಟು ಬೆಳಿಗ್ಗೆ 6ಕ್ಕೆ ವಿಜಯಪುರ ತಲುಪುವ ಹಾಗೆ ವೇಳಾಪಟ್ಟಿ ನಿಗದಿಪಡಿಸಬೇಕು. ಅದೇ ರೀತಿ ವಿಜಯಪುರ ದಿಂದ ರಾತ್ರಿ 8ಕ್ಕೆ ಬಿಟ್ಟು ಬೆಳಿಗ್ಗೆ 6ಕ್ಕೆ ಬೆಂಗಳೂರು ತಲುಪುವ ಹಾಗೆ ಮಾಡಬೇಕು ಎಂದು ಸಚಿವರು ತಿಳಿಸಿದ್ದರು.
ತುಮಕೂರು, ದಾವಣಗೆರೆ, ವಿಜಯಪುರ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರಯಾಣಿಕರಿಗೆ ಸಹಾಯವಾಗಲಿದೆ. ಹುಬ್ಬಳ್ಳಿ ಜಂಕ್ಷನ್ ಪ್ರವೇಶಿಸಿದಲ್ಲಿ ಮತ್ತಷ್ಟು ಸಮಯ ಹಿಡಿಯಲಿದೆ. ಅಲ್ಲದೇ ಈಗಾಗಲೇ ಹಲವು ರೈಲುಗಳು ಹುಬ್ಬಳ್ಳಿಗೆ ಇವೆ. ಈ ಕಾರಣದಿಂದ ನೈಋತ್ಯ ರೈಲ್ವೆ ಹುಬ್ಬಳ್ಳಿ ಬಿಟ್ಟು ಕಾರ್ಯಾಚರಣೆ ನಡೆಸಲು ಮುಂದಾಗಿದೆ ಎನ್ನಲಾಗಿದೆ.
ಶಾಶ್ವತ ರೈಲು ಸಂಚಾರಕ್ಕೆ ಒತ್ತಾಯ
ಈ ಸೇವೆ ಪ್ರಾಯೋಗಿಕ ಹಂತಕ್ಕೆ ಮಾತ್ರ ಸೀಮಿತವಾಗದೆ, ಬೆಂಗಳೂರು-ವಿಜಯಪುರ ನಡುವಿನ ವೇಗದ ರೈಲು ಸಂಚಾರ ಶಾಶ್ವತ ವ್ಯವಸ್ಥೆಯಾಗಿ ರೂಪುಗೊಳ್ಳಬೇಕು. ಕೇವಲ 10 ಗಂಟೆಗಳಲ್ಲಿ ವಿಜಯಪುರ-ಬೆಂಗಳೂರು ಸಂಪರ್ಕ ಕಲ್ಪಿಸುವ ವೇಗದ ರೈಲು ಸೇವೆ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ನಮ್ಮ ಒತ್ತಾಯ ಮುಂದುವರೆಯಲಿದೆ ಎಂದು ತಿಳಿಸಿದರು.
19 ಬೋಗಿಗಳ ರೈಲು
ಈ ರೈಲು ಒಟ್ಟು 19 ಬೋಗಿಗಳನ್ನು ಹೊಂದಿದ್ದು, ತುಮಕೂರು, ಅರಸೀಕೆರೆ, ದಾವಣಗೆರೆ, ಹಾವೇರಿ, ಗದಗ ಬೈಪಾಸ್, ಬಾದಾಮಿ, ಬಾಗಲಕೋಟೆ, ಆಲಮಟ್ಟಿ ಮತ್ತು ಬಸವನ ಬಾಗೇವಾಡಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ ಎಂದು ಅವರು ತಿಳಿಸಿದ್ದಾರೆ.
ವಿಜಯಪುರ ಮತ್ತು ಬೆಂಗಳೂರು ಮಧ್ಯೆ ಈಗ ರೈಲು ಪ್ರಯಾಣಕ್ಕೆ 15 ಗಂಟೆ ಕಾಲ ಹಿಡಿಯುತ್ತಿದೆ. ಹುಬ್ಬಳ್ಳಿ ಬೈಪಾಸ್ ಮೂಲಕ ರೈಲು ಸೇವೆ ಆರಂಭಿಸಿದರೆ ಇದನ್ನು 10 ಗಂಟೆಗಳಿಗೆ ಇಳಿಸಬಹುದು. ಇದರಿಂದ ವಿಜಯಪುರ ಜಿಲ್ಲೆಯಿಂದ ರಾಜಧಾನಿಗೆ ಬರುವ ಮತ್ತು ಹೋಗುವ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ನಾವು ಗಮನ ಸೆಳೆದಿದ್ದೆವು ಎಂದು ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications