Bengaluru: ಕಂದಾಯ ಇಲಾಖೆಯಿಂದ 4.5 ಲಕ್ಷ ಆಸ್ತಿ ಮಾಲೀಕರಿಗೆ 'ಯೂನಿಕ್ ಆಸ್ತಿ ಕಾರ್ಡ್' ವಿತರಣೆ
ಬೆಂಗಳೂರು, ಮೇ 02: ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿಗೆ ನಿಜವಾದ ಮಾಲೀಕತ್ವನ್ನು ಗುರುತಿಸಲು ಸಹಾಯವಾಗುವ ಯುನಿಕ್ ಭೂಆಸ್ತಿ ಗುರುತಿನ ಸಂಖ್ಯೆಯ 'ನಗರ ಆಸ್ತಿ ಮಾಲೀಕತ್ವ ದಾಖಲೆ (UPOR)'ಕಾರ್ಡ್‌ಗಳನ್ನು ವಿತರಿಸಿದೆ. ಈ ಕಾರ್ಡುಗಳು ಡಿಜಿಟಲ್‌ಗೆ ಒಳಪಟ್ಟ ಜಿಯೋರೆಫರೆನ್ಸ್ ಮಾಡಿದ ಆಸ್ತಿ ಕಾರ್ಡ್‌ಗಳಾಗಿವೆ ಎಂದು ಕಂದಾಯ ಇಲಾಖೆ ತಿಳಿಸಿದೆ.
ಬೆಂಗಳೂರಿನ ನಿವಾಸಿಗಳಿಗೆ ನೀಡಿದ ಈ ಯುಪಿಒಆರ್ ಕಾರ್ಡ್‌ಗಳು ಅವರ ಆಸ್ತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಒಳಗೊಂಡಿರುತ್ತದೆ. ಏಪ್ರಿಲ್ ಮಧ್ಯದ ಭಾಗದವರೆಗೆ 4.5 ಲಕ್ಷ ಮಂದಿಗೆ ಕಾರ್ಡ್ ವಿತರಣೆ ಆಗಿದೆ. ಈ ಯುಪಿಒಆರ್ ಯೋಜನೆಯಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿರುವ ಎಲ್ಲ 25 ಲಕ್ಷ ಆಸ್ತಿಗಳ ಮಾಲೀಕರಿಗೆ ಆಸ್ತಿ ಕಾರ್ಡ್‌ಗಳನ್ನು ವಿತರಿಸುವ ಗುರಿ ಸರ್ಕಾರ ಹೊಂದಿದೆ. ಈ ಯೋಜನೆಯನ್ನು ಸರ್ವೆ ಸೆಟ್ಲ್‌ಮೆಂಟ್ ಮತ್ತು ಭೂ ದಾಖಲಾತಿ ವಿಭಾಗದ (SSLR) ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ.

ಯುಪಿಒಆರ್ ಕಾರ್ಡ್ ವಿತರಣೆ ಯೋಜನೆಯನ್ನು ಕಳೆದ ವರ್ಷ 2022 ರಲ್ಲಿ ಆರಂಭಿಸಲಾಗಿದೆ. ಡ್ರೋನ್ ಸಮೀಕ್ಷೆಯ ಮೂಲಕ ಸೆರೆಹಿಡಿಯಲಾದ ಚಿತ್ರಗಳನ್ನು ಬಳಸಿಕೊಂಡು ಗಡಿಗಳನ್ನು ಗುರುತಿಸಲಾಗಿದೆ. ಈ ಹಿಂದೆ ಇದ್ದ 198 ವಾರ್ಡ್‌ಗಳ ಪೈಕಿ 158 ವಾರ್ಡ್‌ಗಳಲ್ಲಿ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಬೆಂಗಳೂರಲ್ಲಿನ ಬಾಕಿ ಉಳಿದ 40 ವಾರ್ಡ್‌ಗಳ ಸಮೀಕ್ಷೆಯನ್ನು ಮುಂದಿನ ಕೆಲವೇ ತಿಂಗಳುಗಳಲ್ಲಿ ಕೈಗೊಳ್ಳಲಾಗುವುದು. SSLR ಬಿಬಿಎಂಪಿಯಿಂದ ಆಸ್ತಿ ಡೇಟಾವನ್ನು ಸಂಗ್ರಹಿಸಿದ್ದು, ಈಗಾಗಲೇ 15 ಲಕ್ಷ ಆಸ್ತಿಗಳ ಡ್ರೋನ್ ಸಮೀಕ್ಷೆ ಮುಕ್ತಾಯವಾಗಿದೆ ಎಂದು ಈ ಸಂಬಂಧ SSLR ಅಧಿಕಾರಿ ಮಾಹಿತಿ ನೀಡಿದ್ದಾರೆ.
ಸಮೀಕ್ಷೆ-ಕಾರ್ಡ್ ವಿತರಣೆ ಪ್ರಕ್ರಿಯೆ ಹೇಗಿರುತ್ತದೆ
ನಗರದಲ್ಲಿ ಬಿಬಿಎಂಪಿ ಸಹಾಯದಡಿ ಮಾಹಿತಿ ಸಂಗ್ರಹಿಸಿದ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸುವ ಯುಪಿಒಆರ್ ಯೋಜನೆ ನಿರ್ವಹಿಸುವ ತಂಡವು ಡ್ರೋನ್ ಸಮೀಕ್ಷೆ ಮಾಡುತ್ತದೆ. ಬಳಿಕ ಆಸ್ತಿ ಮಾಲೀಕರಿಗೆ ಆಸ್ತಿಯನ್ನು ಅಳತೆ ಮಾಡುವುದರ ಬಗ್ಗೆ ಸರ್ವೇಯರ್ ಭೇಟಿ ನೀಡುವ ಕುರಿತು ನೋಟೀಸ್ ನೀಡಿ ತಿಳಿಸುತ್ತದೆ.

ತದನಂತರ ಮಾಲೀಕರು ತಮ್ಮ ಆಸ್ತಿಯ ಗಡಿಗಳನ್ನು ತೋರಿಸಬೇಕು. ಆಸ್ತಿಗೆ ಸಂಬಂಧಿಸಿದ ಮಾರಾಟ ಪತ್ರ, ತೆರಿಗೆ ಪಾವತಿ ರಸೀದಿ, ಇತರೆ ಪ್ರಮಾಣಪತ್ರ, ಬಿಬಿಎಂಪಿ ಖಾತಾ/ಆರ್‌ಟಿಸಿ ಪ್ರತಿ, ಹಂಚಿಕೆ ಪತ್ರ, ಸ್ವಾಧೀನ ಪ್ರಮಾಣಪತ್ರ, ಆದೇಶ ಪ್ರತಿ, ಅನುಮೋದಿತ ಬಡಾವಣೆಯ ಪ್ಲಾನ್ ನಕಲು ಸೇರಿದಂತೆ ಅಗತ್ಯ ದಾಖಲೆಗಳನ್ನು ತೋರಿಸಬೇಕು. ಈ ವೇಳೆ ಆಸ್ತಿ ಹಾಗೂ ಮಾಲೀಕರ ಫೋಟೋಗಳನ್ನು ಸೆರೆ ಹಿಡಿಯಲಾಗುತ್ತದೆ.
ಈ ಪ್ರಕ್ರಿಯೆ ಬಳಿಕ SSLR ಅಧಿಕಾರಿಗಳು ದಾಖಲಾತಿ ಪರಿಶೀಲನೆ ಮಾಡುತ್ತಾರೆ. ಮೊದಲು ಪ್ರತಿ ಆಸ್ತಿಗೆ ಕರಡು UPOR ಕಾರ್ಡ್ ತಯಾರಿಸಲಾಗುತ್ತದೆ. ಮಾಲೀಕರು ಡ್ರಾಫ್ಟ್ ಅನ್ನು ಪರಿಶೀಲಿಸಿ, ಪೂರಕ ದಾಖಲೆಗಳು ಒದಗಿಸಿದ ಬಳಿಕ ಅಧಿಕಾರಿಗಳು ಏನಾದರೂ ಬದಲಾವಣೆಗಳು ಇದ್ದರೆ ನೋಡುತ್ತಾರೆ. ಇದೆಲ್ಲ ಪರಿಶೀಲನೆ ಬಳಿಕ ಒಂದು ತಿಂಗಳಲ್ಲಿ ಆಸ್ತಿ ಮಾಲೀಕರಿಗೆ ಕಾರ್ಡ್ ನೀಡಲಾಗುತ್ತದೆ.
ಈ ಕಾರ್ಡ್ ಬಳಕೆಯ ಪ್ರಯೋಜನ
'ಯುಪಿಓಆರ್ ಆಸ್ತಿ ಖಾತಾ'ವು ಡಿಜಿಟಲ್ ರೂಪವಾದ 'ಇ-ಖಾತಾದಿಂದ ಭಿನ್ನವಾಗಿದೆ. ಅಧಿಕಾರಿಗಳು ಆಸ್ತಿ ಮೇಲಿನ ತೆರಿಗೆ ಸಂಗ್ರಹಕ್ಕೆ ಮಾತ್ರ ಖಾತೆಯನ್ನು ನಿರ್ವಹಿಸುತ್ತಾರೆ. ಅದು ಆಸ್ತಿಯ ಅಧಿಕೃತ ಮಾಲೀಕತ್ವಕ್ಕೆ ಸಂಬಂಧಿಸಿದ್ದಾಗುವುದಿಲ್ಲ. ಆದರೆ ಯುಪಿಓಆರ್ ಕಾರ್ಡ್ ಜನರು ಆಸ್ತಿಯ ನಿಜವಾದ ಮಾಲೀಕತ್ವವನ್ನು ಗುರುತಿಸುತ್ತದೆ ಎನ್ನಲಾಗಿದೆ.
ಮುಖ್ಯವಾಗಿ ಆಸ್ತಿಯನ್ನು ಮಾರಾಟ ಮಾಡುವ ಮತ್ತು ಖರೀದಿಸುವ ಸಮಯದಲ್ಲಿ ಈ ಕಾರ್ಡ್ ಹೆಚ್ಚು ಪ್ರಯೋಜನಕ್ಕೆ ಬರಲಿದೆ. ಉಪ ನೋಂದಣಾಧಿಕಾರಿ ಕಾರ್ಡ್ ಅನ್ಉ ದೃಢೀಕರಣಕ್ಕಾಗಿ ಕೇಳುತ್ತಾರೆ. ಆಸ್ತಿಯ ಮೇಲೆ ಬ್ಯಾಂಕಿನಿಂದ ಸಾಲ ತೆಗೆದುಕೊಳ್ಳಲು, ಕಟ್ಟಡವನ್ನು ನಿರ್ಮಿಸಲು ಅಥವಾ ನವೀರಕಣ ಅನುಮತಿ ವೇಳೆ ಈ ಕಾರ್ಡ್ ಅನ್ನು ಅಧಿಕಾರಿಗಳ ಮುಂದೆ ಪಸ್ತತುಪರಿಸಬೇಕಿರುತ್ತದೆ. ನ್ಯಾಯಾಲಯದಲ್ಲಿ ವಿಭಜನೆ ಅಥವಾ ಪಿತ್ರಾರ್ಜಿತ ಹಕ್ಕುಗಳಿಗಾಗಿ ಅರ್ಜಿ ಸಲ್ಲಿಸುವಾಗ ಕಾರ್ಡ್ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಸರ್ಕಾರ ತಿಳಿಸಿದೆ.












Click it and Unblock the Notifications