ಬೆಂಗಳೂರಿನ ಈ ಭಾಗದಲ್ಲಿ ಯಾರೂ ಆಸ್ತಿ ಮಾರುತ್ತಿಲ್ಲ
ಸಿಲಿಕಾನ್ ಸಿಟಿ ಬೆಂಗಳೂರು ಈಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಮೊದಲಾದರೆ ಬೆಂಗಳೂರು ಅಂದ್ರೆ ಹತ್ತಾರು ಏರಿಯಾಗಳ ಹೆಸರಷ್ಟೇ ಬಾಯಿಗೆ ಬರುತ್ತಿತ್ತು. ಆದರೆ ಈಗ ದಿನದಿಂದ ದಿನಕ್ಕೆ ಬೆಂಗಳೂರು ಬೃಹತ್ ಆಗಿ ಬೆಳೆಯುತ್ತಿದೆ. ಕಳೆದ ಒಂದು ದಶಕದಲ್ಲೇ ನಗರದ ಸ್ವರೂಪ ಸಂಪೂರ್ಣವಾಗಿ ಬದಲಾಗಿದ್ದು, ಅದರಂತೆ ಇಲ್ಲಿನ ಭೂಮಿಗೂ ಚಿನ್ನದ ಬೆಲೆ ಬಂದಿದೆ.
ಕಳೆದ ಎರಡು ದಶಕಗಳ ಹಿಂದೆ ಬೆಂಗಳೂರಿನಲ್ಲಿ ಭೂಮಿಗೆ ಅಷ್ಟೇನೂ ಡಿಮ್ಯಾಂಡ್ ಇರಲಿಲ್ಲ. ಸಾವಿರಾರು ರೂಪಾಯಿಗೆ ಸೈಟು, ಕೆಲವೇ ಲಕ್ಷಕ್ಕೆ ಎಕರೆಗಟ್ಟಲೆ ಜಮೀನು ಸಿಗುತ್ತಿತ್ತು. ಈಗ ಕೋಟಿಯಿದ್ದರೂ ಬೆಂಗಳೂರಿನಲ್ಲಿ ಆಸ್ತಿ ಮಾಡುವುದು ಕನಸಿನ ಮಾತಾಗಿದೆ. ದಿನಗಳು ಉರುಳಿದಂತೆ ಈಗ ಭೂಮಿಗೆ ಚಿನ್ನದ ಬೆಲೆ ಬಂದು ಏರುತ್ತಲೇ ಇದೆ. ಇದನ್ನು ಅರಿಯದ ಮೂಲ ಬೆಂಗಳೂರಿಗರು ತಮ್ಮ ಆಸ್ತಿಗಳನ್ನು ಕಳೆದುಕೊಂಡು ಕೈಸುಟ್ಟುಕೊಂಡಿದ್ದಾರೆ.

ಆದರೆ ಈಗಿನವರಿಗೆ ಆಸ್ತಿಯ ಮೌಲ್ಯ ಹಾಗೂ ಅದರ ಭವಿಷ್ಯದ ಅರಿವು ಸ್ವಲ್ಪವಾದರೂ ಇದೆ. ಹೀಗಾಗಿ ಕೋಟಿಯಿಟ್ಟರೂ ಆಸ್ತಿ ಮಾರಲ್ಲ ಎಂದು ದೃಢ ನಿರ್ಧಾರಕ್ಕೆ ಬಂದಿದ್ದಾರೆ. ಏಕೆಂದರೆ ಒಂದು ಪುಟ್ಟ ಸೈಟು ಖರೀದಿಯೇ ಈಗ ಕೋಟಿಗಳ ವ್ಯವಹಾರ ನಡೆಸುತ್ತಿದೆ. ಈ ವಿಚಾರ ಮೊದಲೇ ಗೊತ್ತಿದ್ದರೆ ನಾವ್ಯಾರೂ ನಮ್ಮ ಆಸ್ತಿ ಮಾರುತ್ತಿರಲಿಲ್ಲ ಎನ್ನುತ್ತಾರೆ ಆಸ್ತಿ ಕಳೆದುಕೊಂಡವರು.
ಇದೀಗ ಬೆಂಗಳೂರಿನಲ್ಲಿ ನಿವೇಶನ ಖರೀದಿಸುವುದು ತುಂಬಾ ಕಷ್ಟ ಎಂದು ಅರಿತ ಜನ ಬೆಂಗಳೂರಿನಿಂದ ಚೂರು ಹೊರಗಿನ ಪ್ರದೇಶಗಳಲ್ಲಿ ಆಸ್ತಿ ಖರೀದಿಸುತ್ತಿದ್ದಾರೆ. ಏಕೆಂದರೆ ಈ ಭಾಗಗಳೂ ಸಹ ಅಭಿವೃದ್ಧಿಯ ಹಾದಿಯಲ್ಲಿದ್ದು, ಮುಂದೊಂದು ದಿನ ಹಾಕಿರುವ ಬಂಡವಾಳಕ್ಕೆ ದುಪ್ಪಟ್ಟು ಹಣ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೆ ಈಗ ಎಂತಹ ಕಷ್ಟ ಬಂದರೂ ತಮ್ಮ ಆಸ್ತಿಗಳನ್ನು ಮಾರಲು ನಿರಾಕರಿಸುತ್ತಿದ್ದಾರೆ.

ಹಾಗಾಗಿ ರಿಯಲ್ ಎಸ್ಟೇಟ್‌ನವರು, ಬಿಲ್ಡರ್‌ಗಳು ಬಂದು ಎಷ್ಟೇ ಪಟ್ಟು ಹಿಡಿದರೂ ಆಸ್ತಿ ಮಾರಲು ಜನ ಒಪ್ಪುತ್ತಿಲ್ಲ. ಕೆಲವು ಪ್ರದೇಶಗಳಲ್ಲಿ ಸದ್ಯ ಪ್ರತಿ ಚದರ ಅಡಿ ಭೂಮಿಯೇ ಲಕ್ಷಗಟ್ಟಲೆ ಬೆಲೆ ಬಾಳುತ್ತಿದೆ. ಕೋರಮಂಗಲ ಪ್ರದೇಶವು ಬೆಂಗಳೂರಿನಲ್ಲಿರುವ ಅತಿ ದುಬಾರಿ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ ಭೂಮಿ ಬೆಲೆ ಕೂಡ ಅಧಿಕ ಮೌಲ್ಯವನ್ನು ಹೊಂದಿದೆ.
ಇಂದಿರಾನಗರದಲ್ಲಿ ಈಗಿನ ಮಾರುಕಟ್ಟೆ ಮೌಲ್ಯ ಪ್ರತಿ ಚದರ ಅಡಿಗೆ 10,000 ರೂಪಾಯಿಯಿಂದ 20,000 ರೂಪಾಯಿ ಇದೆ. ಲ್ಯಾವೆಲ್ಲೆ ರಸ್ತೆಯಲ್ಲಿ ಪ್ರತಿ ಚದರ ಅಡಿಗೆ 20,000 ರೂಪಾಯಿಯಿಂದ 25,000 ರೂಪಾಯಿ ನಡುವೆ ಇದೆ. ಎಂಜಿ ರಸ್ತೆ ಪ್ರದೇಶದಲ್ಲಿ ಪ್ರತಿ ಚದರ ಅಡಿಗೆ 12,000 ರೂಪಾಯಿಯಿಂದ 30,000 ರೂಪಾಯಿವರೆಗೆ ಭೂಮಿಯ ಬೆಲೆ ಏರಿದೆ.
ಈ ಹಿನ್ನೆಲೆ ಈ ಭಾಗದ ಜನರು ತಮ್ಮ ಆಸ್ತಿಗಳನ್ನು ಮಾರುವ ಉದ್ದೇಶವೇ ಹೊಂದಿಲ್ಲ. ಈಗ ಇಲ್ಲಿ ಆಸ್ತಿಗಳನ್ನು ಉಳಿಸಿಕೊಂಡರೆ, ಮುಂದಿನ ಪೀಳಿಗೆಗೆ ಆಧಾರವಾಗಲಿದೆ ಎಂಬ ದೂರದೃಷ್ಟಿಯನ್ನು ಹೊಂದಿದ್ದಾರೆ. ಮೈತುಂಬಾ ಸಾಲವಿದ್ದರೂ ಕೂಡ ಈ ಪ್ರದೇಶಗಳಲ್ಲಿ ಆಸ್ತಿ ಇದೆಯಲ್ಲ ಎಂಬ ಧೈರ್ಯದಲ್ಲೇ ಇದ್ದಾರೆ ಇಲ್ಲಿನ ನಿವಾಸಿಗಳು. ಅಲ್ಲದೆ ಬಾಗಲೂರು ಪ್ರದೇಶದಲ್ಲಿ ಕೂಡ ನಿವೇಶನಗಳ ಖರೀದಿಗೆ ಜನ ಮುಗಿಬೀಳುತ್ತಿದ್ದಾರೆ. ಐದಾರು ವರ್ಷದ ಹಿಂದೆ ತೀರಾ ಗ್ರಾಮೀಣ ಭಾಗ ಎನ್ನುವಂತಿದ್ದ ಈ ಪ್ರದೇಶವು ಈಗ ನವಬೆಂಗಳೂರಿನಂತೆ ಬದಲಾಗಿದೆ. ಹಾಗಾಗಿ ಇಲ್ಲಿ ಆಸ್ತಿ ಖರೀದಿ ಕೂಡ ಒಂದು ದೊಡ್ಡ ಸಾಧನೆಯೇ ಎಂಬಂತಾಗಿದೆ.












Click it and Unblock the Notifications