Bengaluru Rains : ಭಾನುವಾರ 83 ಮಿಲಿ ಮೀಟರ್ ಮಳೆ, 2014ರ ನಂತರದ ದಾಖಲೆ ಇದು
ಬೆಂಗಳೂರು, ಸೆಪ್ಟೆಂಬರ್ 5: ಸ್ವಲ್ಪ ಬಿಡುವು ನೀಡಿದ ನಂತರ ಭಾನುವಾರ ಸಂಜೆ ಬೆಂಗಳೂರಿನಲ್ಲಿ ಭಾರಿ ಮಳೆ ಸುರಿದಿದೆ. ನಗರದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹವಾಮಾನ ತಜ್ಞರ ಪ್ರಕಾರ ಭಾನುವಾರ ನಗರದಲ್ಲಿ 83 ಮಿಲಿ ಮೀಟರ್ ಮಳೆ ಸುರಿದಿದೆ. 2014ರ ನಂತರ ಸೆಪ್ಟೆಂಬರ್ ತಿಂಗಳಲ್ಲಿ ಅತ್ಯಂತ ತೇವವಾದ ದಿನ ದಾಖಲಾಗಿದೆ.
ಭಾನುವಾರ ರಾತ್ರಿ 7:30ರ ಸುಮಾರಿಗೆ ಗುಡುಗು ಸಹಿತ ಮಳೆ ಆರಂಭಗೊಂಡಿದ್ದು, ನಗರದಾದ್ಯಂತ ಬಿರುಗಾಳಿ ಬೀಸಿದೆ. ಹೊರ ವರ್ತುಲ ರಸ್ತೆ (ಒಆರ್‌ಆರ್) ಸೇರಿದಂತೆ ಹಲವು ಪ್ರಮುಖ ರಸ್ತೆಗಳು ಜಲಾವೃತವಾಗಿದ್ದು, ಭಾರಿ ಟ್ರಾಫಿಕ್ ಉಂಟಾಗಿದೆ.
ನಗರದ ಮಾರತ್ತಹಳ್ಳಿ-ಸರ್ಜಾಪುರದ ಆರ್‌ಎಂಝಡ್ ಪರಿಸರದ ಸಮೀಪವಿರುವ ಒಆರ್‌ಆರ್ ಕಳೆದ ವಾರದ ಅತ್ಯಂತ ಭೀಕರ ಪ್ರವಾಹಕ್ಕೆ ಸಾಕ್ಷಿಯಾದ ಕೆಲವೇ ದಿನಗಳಲ್ಲಿ ಮತ್ತೆ ನದಿಯಾಗಿ ಮಾರ್ಪಟ್ಟಿದೆ. ನಗರದ ಹಲವೆಡೆ ಸೋಮವಾರ ಬೆಳಗ್ಗೆಯೂ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ ಇತ್ತು. ಸೋಮವಾರ ಬೆಳಗ್ಗೆ ಔಟರ್ ರಿಂಗ್ ರೋಡ್‌ನ ದೃಶ್ಯಗಳು ಭಾರಿ ಮಳೆಯ ನಂತರ ಇಡೀ ವಿಸ್ತರಣೆಯನ್ನು ತೋರಿಸಿದೆ.

ಟ್ರಾಫಿಕ್ ಪೊಲೀಸರ ಮನವಿ
ಬೆಂಗಳೂರು ಪೊಲೀಸರು ಪ್ರಯಾಣಿಕರಿಗೆ ಔಟರ್ ರಿಂಗ್ ರಸ್ತೆಯಲ್ಲಿ ಪ್ರಯಾಣ ತಪ್ಪಿಸುವಂತೆ ಮನವಿ ಮಾಡಿದ್ದಾರೆ. ಇಕೋ ಸ್ಪೇಸ್ ಬಳಿ ಹೊರ ವರ್ತುಲ ರಸ್ತೆ ಜಲಾವೃತವಾಗಿದೆ. ದೇವರಬೀಸನಹಳ್ಳಿಯಿಂದ ಇಬ್ಲೂರುವರೆಗೆ ಚಲಿಸುವ ರಸ್ತೆಯಲ್ಲಿ ಪ್ರಯಾಣ ವಿಳಂಬವಾಗಲಿದೆ, ಒಂದು ಲೇನ್‌ನಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಇದೆ, ಈ ರಸ್ತೆಯಲ್ಲಿ ಪ್ರಯಾಣ ಮಾಡುವುದನ್ನು ತಪ್ಪಿಸಿ" ಎಂದು ಟ್ರಾಫಿಕ್ ವಿಭಾಗದ ಪೂರ್ವ ಪೊಲೀಸ್ ಉಪ ಆಯುಕ್ತ ಕಲಾ ಕೃಷ್ಣಸ್ವಾಮಿ ಟ್ವೀಟ್ ಮಾಡಿದ್ದಾರೆ.
ಪ್ರಯಾಣಕರು ದಯವಿಟ್ಟು ಗಮನಿಸಿ, ನಗರದ ಬಹಳಷ್ಟು ಸ್ಥಳಗಳಲ್ಲಿ ನೀರು ನಿಂತಿದ್ದು ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಟ್ರಾಫಿಕ್ ಪೊಲೀಸರು ಸಂಚಾರವನ್ನು ಸುಗಮಗೊಳಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ನಾಲ್ಕನೇ ಬಾರಿ ಜಲಾವೃತವಾದ ರೈನ್‌ಬೋ ಡ್ರೈವ್ ಲೇಔಟ್
ಆಗಸ್ಟ್ ತಿಂಗಳಿನಿಂದ ಈವರೆಗೆ ಮಳೆಯಿಂದಾಗಿ ರೈನ್‌ಬೋ ಡ್ರೈವ್ ಲೇಔಟ್ ನಾಲ್ಕನೇ ಬಾರಿ ಜಲಾವೃತವಾಗಿದೆ. ಇಲ್ಲಿನ ನಿವಾಸಿಗಳಿಗೆ ಮಳೆಗಾಲ ಎಂದರೆ ಸಾಕು ಬೆಚ್ಚಿ ಬೀಳುತ್ತಾರೆ ಎನ್ನುವಂತಾಗಿದೆ. ವರದಿಗಳ ಪ್ರಕಾರ, 100 ಕ್ಕೂ ಹೆಚ್ಚು ಮನೆಗಳು ಮುಳುಗಿವೆ ಮತ್ತು ಹಲವಾರು ಅಪಾರ್ಟ್‌ಮೆಂಟ್‌ಗಳ ನೆಲಮಾಳಿಗೆಗಳು ಜಲಾವೃತವಾಗಿವೆ.
ಸರ್ಜಾಪುರ ರಸ್ತೆಯ ಗ್ರೀನ್‌ವುಡ್ ರೀಜೆನ್ಸಿ ನಿವಾಸಿಗಳು ಮಳೆಯಿಂದಾಗಿ ಭಾರಿ ತೊಂದರೆ ಅನುಭವಿಸಿದರು, ಅಪಾರ್ಟ್‌ಮೆಂಟ್‌ನ ನೆಲಮಹಡಿಗೆ ನೀರು ನುಗ್ಗಿದ್ದರಿಂದ ನಡುರಾತ್ರಿಯಲ್ಲಿ ತಮ್ಮ ವಾಹನಗಳನ್ನು ನೆಲಮಾಳಿಗೆಯಿಂದ ಹೊರಗಡೆ ಸಾಗಿಸಬೇಕಾಯಿತು.

ನಗರದಾದ್ಯಂತ ವ್ಯಾಪಕ ಮಳೆ
ವೈಟ್‌ಫೀಲ್ಡ್, ಗೊಟ್ಟಿಗೆರೆ, ಬನ್ನೇರುಘಟ್ಟ ರಸ್ತೆ, ವಿಜಯನಗರ, ರಾಜಾಜಿನಗರ, ಬಸವೇಶ್ವರ ನಗರ, ಯಶವಂತಪುರ, ಪೀಣ್ಯ, ಲಗ್ಗೆರೆ, ನಂದಿನಿ ಲೇಔಟ್, ಮಲ್ಲೇಶ್ವರಂ, ಶೇಷಾದ್ರಿಪುರ, ಹೆಬ್ಬಾಳ, ಸಂಜಯನಗರ, ಆರ್‌ಟಿ ನಗರ, ನಾಗವಾರ, ಹೆಣ್ಣೂರು, ಬಾಣಸವಾಡಿ, ಆರ್‌ಆರ್‌ನಗರ, ಕೆಂಗೇರಿ, ದೀಪಾಂಜಲಿ ನಗರ ಮತ್ತು ಚಾಮರಾಜಪೇಟೆಯಲ್ಲಿ ಭಾರಿ ಮಳೆಯಾಗಿದೆ.
ವೈಟ್‌ಫೀಲ್ಡ್‌ನ ಪ್ರದೇಶದಾದ್ಯಂತ ಭಾನುವಾರ ರಾತ್ರಿ 116 ಮಿಲಿ ಮೀಟರ್ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರ ಕೂಡ ನಗರಕ್ಕೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಅಂಡರ್ ಪಾಸ್‌ಗಳಲ್ಲಿ ನಿಂತ ನೀರು
ಮೆಜೆಸ್ಟಿಕ್, ಓಕಳಿಪುರಂ ಮತ್ತು ಕಸ್ತೂರಿನಗರದ ರೈಲ್ವೆ ಕೆಳಸೇತುವೆಗಳಲ್ಲಿ ಮೂರು ಅಡಿಯಷ್ಟು ನೀರು ತುಂಬಿತ್ತು. ಅವೆನ್ಯೂ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ, ಕೆ.ಜಿ.ರಸ್ತೆ ಮತ್ತು ಶಿವಾಜಿನಗರದಂತಹ ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದವು.
ಜಯನಗರದ ಸೋಮೇಶ್ವರ ನಗರದಲ್ಲಿ ಮರ ಬಿದ್ದಿರುವ ಬಗ್ಗೆ ವರದಿಯಾಗಿದೆ. ಭಾರಿ ಮಳೆಯಿಂದಾಗಿ ಸ್ಥಳದಲ್ಲಿ ನಿಂತಿದ್ದ ಎರಡು ಕಾರುಗಳ ಮೇಲೆ ಮರ ಬಿದ್ದಿದೆ. ಬೆಂಗಳೂರು ದಕ್ಷಿಣದ ಜುನ್ನಸಂದ್ರದಲ್ಲಿ, ಮೊಣಕಾಲು ಆಳದ ನೀರಿನಲ್ಲಿ ಸಂಚರಿಸಲು ಪ್ರಯಾಣಿಕರು ಹರಸಾಹಸ ಪಡುತ್ತಿದ್ದರಿಂದ ರಸ್ತೆಗಳು ಅಕ್ಷರಶಃ ನದಿಗಳಾಗಿ ಮಾರ್ಪಟ್ಟಿವೆ.












Click it and Unblock the Notifications